ನಮ್ಮಲ್ಲೇ ಮೊದಲು…
ಖಾಸಗಿ ಚಾನಲ್ ವರದಿಗಾರ್ತಿ ಕಿವುಡನುಮಿ ಹತ್ತುಹರದಾರಿ ಗುಂಟ ವರ್ಲ್ಡ್ಫೇಮಸ್ ಆಗಿದ್ದಾಳೆ. ಆಕೆ ನಮ್ಮಲ್ಲೇ ಮೊದಲು ಅನ್ನುವುದಕ್ಕೇ ಲಕ್ಷಾಂತರ ಫ್ಯಾನುಗಳು ಇದ್ದರು. ಕಳೆದ ವರ್ಷ ಯುದ್ಧ ನಡೆದಾಗ ಆ ಯುದ್ಧಭೂಮಿಯಲ್ಲಿ ದುಷ್ಮನ್‌ಗಳು ಹೊಡೆದ ಗುಂಡು ನೆಲಕ್ಕೆ ತಾಗಿ ಆ ನೆಲ ತೂತು ಬಿದ್ದು ಈಗ ಅಲ್ಲಿ ನೀರು ಛಲ್ಲನೇ ಚಿಮ್ಮುತ್ತಿವೆ. ಇದು ನಮ್ಮಲ್ಲೇ ಮೊದಲು. ಲೊಂಡೆನುಮನಿಗೆ ಆಗಿನ ಸರ್ಕಾರದ ಮುಖ್ಯಮಂತ್ರಿಗಳು ಏನಪಾ ಅನ್ಮಂತ ಅಂದಿದ್ದು ಅದು ಯಾರಿಗೂ ಗೊತ್ತಾಗಲಿಲ್ಲ. ಇದು ನಮ್ಮಲ್ಲೇ ಮೊದಲು ಎಂದು ವಿಚಿತ್ರ ಧ್ವನಿಯಲ್ಲಿ ಹೇಳಿದಾಗ… ಟಿವಿ ನೋಡುತ್ತ ಕುಳಿತವರ ಬಾಯಲ್ಲಿ ವಾವ್ ಎಂಬ ಉದ್ಗಾರ ಹೊರಹೊಮ್ಮುತ್ತಿತ್ತು. ಯಾವುದೋ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಅದರಲ್ಲಿ ಬಂದಿದ್ದ ವರದಿಯನ್ನು ಓದುತ್ತ… ವೀಕ್ಷಕರೇ… ಇದು ನಮ್ಮಲ್ಲೇ ಮೊದಲು ಅಂದಾಗ ಲೊಂಡೆನುಮ ಶಬ್ಬಾಷ್ ಅನ್ನುತ್ತಿದ್ದ. ಆಕೆ ತನ್ನ ಕಚೇರಿಯಿಂದ ಮನೆಗೆ ಹೋಗಬೇಕಾದರೆ… ಮನೆಯಿಂದ ಕಚೇರಿಗೆ ಬರಬೇಕಾದರೆ ಹಾದಿ ಹೋಕರೆಲ್ಲ ನಮ್ಮಲ್ಲೇ ಮೊದಲು… ನಮ್ಮಲ್ಲೇ ಮೊದಲು ಎಂದು ಕೂಗಿದಾಗ ಆಕೆ ಮುಗುಳ್ನಕ್ಕು ಜನರತ್ತ ಕೈ ಬೀಸುವುದನ್ನು ರೂಢಿ ಮಾಡಿಕೊಂಡಿದ್ದಳು. ಅವತ್ತು ಚುನಾವಣೆ ನಡೆದು… ಮದ್ರಾಮಣ್ಣ ಕುರ್ಚಿ ಹಿಡಿದಾಗ… ಎಲ್ಲ ಚಾನಲ್‌ಗಳು ಸುದ್ದಿ ಮಾಡಿದವು. ಕಿವುಡನುಮಿ ಮಾತ್ರ ಆಹಾ… ಆಹಾ… ಮದ್ರಾಮಣ್ಣೋರೇ ಕುರ್ಚಿ ಹಿಡಿಯುತ್ತಾರೆ ಎಂದು ಗೊತ್ತಿತ್ತು. ಈಗ ಅವರು ಕುರ್ಚಿ ಹಿಡಿದಿದ್ದಾರೆ ಇದು ನಮ್ಮಲ್ಲೇ ಮೊದಲು ಎಂದು ಹೇಳಿದಾಗ.. ಚಾನಲ್ ಓನರ್ ಹುಚ್ಚುಲುಗ ಸಪ್ಪೆ ಮೋರೆ ಹಾಕಿಕೊಂಡು.. ಔದಾ… ಔದೇನ್ರೋ ಎಂದು ಉಳಿದವರನ್ನು ಕೇಳಿ ಸುಮ್ಮನಾಗಿದ್ದರು. ಈಕೆಗೆ ಆ ಶಬ್ದ ಅನ್ನುವುದನ್ನು ಬಿಡಿಸಬೇಕು ಎಂದು ಅಲೈಕನಕನಿಗೆ ಸುಪಾರಿ ನೀಡಲಾಗಿತ್ತು. ಹೇಗಾದರೂ ಮಾಡಿ ಕಿವುಡನುಮಿಗೆ ಅದನ್ನು ಹೇಳುವುದನ್ನು ಬಿಡಿಸಿಯೇ ತೀರುತ್ತೇನೆ ಎಂದು ಸಜ್ಜಿಹೊಲದ ದುರುಗಮ್ಮನ ಗುಡಿಯ ಮುಂದೆ ನಿಂತು ಆಣೆ ಮಾಡಿಸಿಕೊಂಡಿದ್ದರು. ಹೀಗಾಗಿ ಅಲೈ ಕನಕನಿಗೆ ಇದು ದೊಡ್ಡ ಟಾಸ್ಕ್ ಆಗಿತ್ತು. ಅಂದಿನಿಂದ ಆತ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಲೇ ಇದ್ದ ಆದರೂ ಆಕೆಗೆ ನಮ್ಮಲ್ಲೇ ಮೊದಲು ಅನ್ನುವುದನ್ನು ಬಿಡಿಸುವುದು ಆಗಲೇ ಇಲ್ಲ. ಕೊನೆಗೆ ತಳವಾರ್ಕಂಟಿಯನ್ನು ಕರೆದುಕೊಂಡು ಹೋಗಿ ಶಕ್ತಾಯನುಸಾರ ಪಾನಕ ಕುಡಿಸಿ… ಕಂಟೀ ಏನು ಮಾಡಲಿ ನನಗೆ ಸುಪಾರಿ ಕೊಟ್ಟಿದ್ದಾರೆ. ಆಕೆಗೆ ಆ ಶಬ್ದ ಅನ್ನುವುದನ್ನು ಬಿಡಿಸಲೇಬೇಕು. ಯಾವುದಾದರೂ ಐಡಿಯಾ ಕೊಡು ಅಂದ. ಸ್ವಲ್ಪ ಹೊತ್ತು ಸುಮ್ಮನಿದ್ದ ಕಂಟಿ ಎಲ್ಲ ಪಾನಕವನ್ನು ಗಟಗಟ ಕುಡಿದು ಅದನ್ನು ಕೆಳಗಿಟ್ಟು… ಕಿವಿಯಲ್ಲಿ ಏನೋ ಹೇಳಿದ… ಅಲೈ ಕನಕ ಪ್ರಸನ್ನನಾಗಿ… ಕೂಡಲೇ ತನ್ನ ಮೊಬೈಲ್‌ನಿಂದ ಕಿವುಡನುಮಿಯ ಮೊಬೈಲ್‌ಗೆ ವಾಟ್ಸಾಪ್ ಕಳುಹಿಸಿದ್ದ. ಆಕೆ ಉಳಿದ ಸುದ್ದಿಯನ್ನು ತಡೆ ಹಿಡಿದು…ಅಯ್ಯೋ ಅಯ್ಯೋ ಇದೀಗ ಒಂದು ಸುದ್ದಿ ಬಂದಿದೆ…ಅದೇನೆಂದರೆ…… ಎಂದು ಹೇಳಿ… ನಮ್ಮಲ್ಲೇ ಮೊದಲು… ನಮ್ಮಲ್ಲೇ ಮೊದಲು… ನಮ್ಮಲ್ಲೇ ಮೊದಲು ಎಂದು ಹೇಳಿದಳು. ಅದಾದ ಐದು ನಿಮಿಷದ ನಂತರ ಚಾನಲ್ ಮಾಲಕರು ಕರೆದು ಆಕೆಗೆ ಡಿಸ್‌ಮಿಸ್ ಆರ್ಡರ್ ಕೊಟ್ಟರು. ಹಾಗಾದರೆ ಆಕೆ ಓದಿದ ಸುದ್ದಿ ಯಾವುದು….? ಅದು ಹೇಳುವಂಥದ್ದಲ್ಲ.. ನೋಡುವಂಥದ್ದು..