ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ದಾವಣಗೆರೆ: ಭದ್ರಾ ನಾಲೆಗಳಿಗೆ ನೂರು ದಿನ ನೀರು ಹರಿಸುವುದಾಗಿ ನೀಡಿದ್ದ ಸರ್ಕಾರದ ಆದೇಶವನ್ನು ಹಿಂಪಡೆದು ನೀರು ನಿಲುಗಡೆ ಮಾಡಿರುವ ಕ್ರಮ ಖಂಡಿಸಿ ಹಾಗೂ ಕೂಡಲೇ ನೀರು ಹರಿಸಲು ಒತ್ತಾಯಿಸಿ ಭಾರತೀಯ ರೈತ ಒಕ್ಕೂಟದಿಂದ ಸೋಮವಾರ ಕರೆಯಲಾಗಿದ್ದ ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಆ. 10ರಿಂದ ಸತತ ನೂರು ದಿನಗಳ ಕಾಲ ದಾವಣಗೆರೆ ಜಿಲ್ಲೆಯ ಭಾಗದ ರೈತರಿಗೆ ಅನುಕೂಲವಾಗಲು ಭದ್ರಾದಿಂದ ನೀರು ಹರಿಸುವುದಾಗಿ ಸರ್ಕಾರ ಆದೇಶ ನೀಡಿತ್ತು. ಆದರೆ, 40 ದಿನಗಳಿಗೆ ಹಠಾತ್ತನೆ ಆದೇಶ ಹಿಂಪಡೆದು ನೀರು ನಿಲುಗಡೆ ಮಾಡಲಾಯಿತು. ಕಾಡಾ ಸಮಿತಿಯ ಈ ಕ್ರಮ ಖಂಡಿಸಿ ರೈತ ಒಕ್ಕೂಟ ಕಳೆದ ಹತ್ತು ದಿನಗಳಿಂದ ಸತತವಾಗಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿತು. ಸಭೆಗಳನ್ನು ಆಯೋಜಿಸಿ ಸರ್ಕಾರಕ್ಕೆ ಬಂದ್ ಮಾಡುವ ಎಚ್ಚರಿಕೆಯನ್ನೂ ರವಾನಿಸಿತ್ತು. ಇದ್ಯಾವುದಕ್ಕೂ ಜಗ್ಗದ ಸರ್ಕಾರದ ನಡೆ ಖಂಡಿಸಿ ಸೋಮವಾರ ಬಂದ್‌ಗೆ ಕರೆ ನೀಡಿತ್ತು.
ಬಂದ್‌ಗೆ ಖಾಸಗಿ ಬಸ್ ಮಾಲೀಕರು ಬೆಂಬಲ ಸೂಚಿಸಿದ್ದರಿಂದ ಖಾಸಗಿ ಬಸ್, ನಗರ ಸಾರಿಗೆಗಳು ರಸ್ತೆಗೆ ಇಳಿಯಲಿಲ್ಲ. ಖಾಸಗಿ ಶಾಲೆ-ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಕೆಎಸ್‌ಆರ್‌ಟಿಸಿ, ಆಟೋಗಳು ಎಂದಿನಂತೆ ಸಂಚಾರಿಸಿದವು. ಸರ್ಕಾರಿ ಶಾಲೆ, ಕಾಲೇಜುಗಳು ಯಥಾ ಪ್ರಕಾರ ನಡೆದವು.
ಜಿಲ್ಲಾ ಬಿಜೆಪಿ ಹಾಗೂ ರೈತ ಒಕ್ಕೂಟದ ಕಾರ್ಯಕರ್ತರು ಅಲ್ಲಲ್ಲಿ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿರುವುದು ಕಂಡುಬಂತು. ಉಳಿದಂತೆ ಹೋಟೆಲ್, ಕಚೇರಿ ಹಾಗೂ ವಾಹನ ಸಂಚಾರದಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಒಟ್ಟಾರೆ ಬಂದ್‌ಗೆ ದಾವಣಗೆರೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು.