For the best experience, open
https://m.samyuktakarnataka.in
on your mobile browser.

ನಮ್ಮ ಹಣಕಾಸಿನ ಬೆಲ್ಟ್ ಬಿಗಿಗೊಳಿಸುವುದು ಸೂಕ್ತ

03:30 AM Nov 04, 2024 IST | Samyukta Karnataka
ನಮ್ಮ ಹಣಕಾಸಿನ ಬೆಲ್ಟ್ ಬಿಗಿಗೊಳಿಸುವುದು ಸೂಕ್ತ

ಇಂದಿನ ಆರ್ಥಿಕ ಪರಿಸ್ಥಿತಿಯನ್ನು ನೋಡಿದರೆ, ಜಾಗತಿಕ ಬೆಳವಣಿಗೆಗಳನ್ನು ನೋಡಿದರೆ ನಮ್ಮ ಆರ್ಥಿಕ ಪರಿಸ್ಥಿತಿಯ ಬೆಲ್ಟ್ ಈಗಲೇ ಬಿಗಿಗೊಳಿಸುವುದು ಸೂಕ್ತ. ಅಮೆರಿಕದಲ್ಲಿ ಮತ್ತೆ ಟ್ರಂಪ್ ಅಧಿಕಾರಕ್ಕೆ ಬರುವ ಸಂಭವವಿದೆ. ರಷ್ಯಾ-ಉಕ್ರೇನ್ ಯುದ್ಧದಿಂದ ನ್ಯಾಟೋ ದೇಶಗಳ ಮೇಲಾಗುತ್ತಿರುವ ಪರಿಣಾಮ, ಚೀನಾ-ತೈವಾನ್, ಉತ್ತರ ಮತ್ತು ದಕ್ಷಿಣ ಕೊರಿಯಾ ಹಾಟ್ ಸ್ಪಾಟ್ ಆಗುತ್ತಿರುವುದನ್ನು ನೋಡಿದರೆ ಆಹಾರ ವಸ್ತುಗಳ ಸರಬರಾಜು ಮತ್ತು ಕಚ್ಛಾತೈಲದ ಬೆಲೆ ಏರಿಕೆ ಮುಂಬರುವ ದಿನಗಳಲ್ಲಿ ಆರ್ಥಿಕ ಸಮಸ್ಯೆಗೆ ಕಾರಣವಾಗಲಿದೆ.
ಆರ್‌ಬಿಐ ಗರ‍್ನರ್ ರೆಪೊ ದರ ನಿಯಂತ್ರಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಇಂಬುಕೊಡುತ್ತಿದೆ. ಆದರೆ ಹಣದುಬ್ಬರವನ್ನು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಣದುಬ್ಬರ ಏರಿಕೆಯಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುವುದು ನಿಶ್ಚಿತ. ಆರ್‌ಬಿಐ ರೆಪೊದರ ಇಳಿದರೆ ಬ್ಯಾಂಕ್ ನೀಡುವ ಸಾಲದ ಮೇಲಿನ ಬಡ್ಡಿ ದರ ಇಳಿಮುಖಗೊಳ್ಳುತ್ತದೆ. ರೆಪೊ ದರ ಅಧಿಕಗೊಂಡಲ್ಲಿ ಗ್ರಾಹಕರ ಮೇಲಿನ ಸಾಲದ ಬಡ್ಡಿದರವನ್ನು ಎಲ್ಲ ಬ್ಯಾಂಕ್ ಹೆಚ್ಚಿಸಬೇಕಾಗುತ್ತದೆ. ಮಾರ್ಚ್೭, ೨೦೨೦ರಿಂದ ರೆಪೊದರ ಶೇ. ೫.೦ರಿಂದ ಶೇ. ೪ಕ್ಕೆ ಇಳಿದಿತ್ತು. ಕೊರೊನಾ ಬಂದ ಮೇಲೂ ರೆಪೊದರವನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ೨೬ ತಿಂಗಳು ಅದೇ ದರ ಇತ್ತು. ಫೆಬ್ರವರಿ ೨೦೨೩ ರಲ್ಲಿ ರೆಪೊದರ ಶೇ.೬.೫೦ಕ್ಕೆ ಬಂದು ನಿಂತಿತು. ಈ ದರದಲ್ಲಿ ಕಳೆದ ೨೦ ತಿಂಗಳಿನಿಂದ ಸಾಲದ ಬಡ್ಡಿದರವನ್ನು ಕಾಪಾಡಲು ಸಾಧ್ಯವಾಯಿತು. ಮೇ ೨೦೨೨ರಿಂದ ಆರ್‌ಬಿಐ ಗರ‍್ನರ್ ಹಣದುಬ್ಬರ ನಿಯಂತ್ರಿಸಲು ರೆಪೊ ದರದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಬಂದಿದ್ದಾರೆ. ಆದರೂ ಹಣದುಬ್ಬರವನ್ನು ಮೆದುಗೊಳಿಸಲು ಸಾಧ್ಯವಾಗುತ್ತಿಲ್ಲ. ಶೇರುದಾರರನ್ನು ಆರ್‌ಬಿಐ ಗರ‍್ನರ್ ತೃಪ್ತಿಪಡಿಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ಇದ್ದಾಗ ಹಣಕಾಸು ನೀತಿ ನಿಯಂತ್ರಣಕ್ಕೆ ಪ್ರತ್ಯೇಕ ಸಮಿತಿ ರಚಿಸಿತ್ತು. ಅದರಿಂದ ಆರ್‌ಬಿಐ ಗರ‍್ನರ್‌ಗೆ ಸ್ವಲ್ಪ ಜವಾಬ್ದಾರಿ ಕಡಿಮೆಯಾಗಿತ್ತು. ಅಂತಿಮ ನಿರ್ಣಯ ಗರ‍್ನರ್ ತೆಗೆದುಕೊಳ್ಳಬೇಕಿತ್ತು. ಆರ್ಥಿಕ ಅಭಿವೃದ್ಧಿ- ಹಣದುಬ್ಬರ ನಡುವೆ ಸಮತೋಲನ ಕಾಯ್ದುಕೊಂಡು ಹೋಗುವುದು ಕಷ್ಟ.
ಹಣದುಬ್ಬರವನ್ನು ಶೇ.೪ಕ್ಕೆ ತರಲು ರೆಪೊದರ ಅಡ್ಡಿ ಏನಲ್ಲ. ಆಹಾರ ಮತ್ತು ಇಂಧನ ದರಗಳು ಅರ್ಥಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುವುದಂತೂ ನಿಜ. ಸೆಪ್ಟೆಂಬರ್ ೨೦೨೪ ರಲ್ಲಿ ಟೊಮೊಟೊ ದರ ಶೇ.೪೨.೩, ಈರುಳ್ಳಿ ದರ ಶೇ.೬೬.೨, ಆಲೂಗಡ್ಡೆ ಬೆಲೆ ಶೇ.೬೬.೯ ರಷ್ಟು ಅಧಿಕಗೊಂಡಿದೆ. ಗರ‍್ನರ್ ರೆಪೊದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಿಂದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುವುದು ನಿಶ್ಚಿತ. ಹಣದುಬ್ಬರ ಮತ್ತು ಬಡ್ಡಿದರ ನಿಯಂತ್ರಣ ಎರಡೂ ಆರ್‌ಬಿಐ ಮೂಲ ಗುರಿ. ಆರ್ಥಿಕ ಬೆಳವಣಿಗೆ ಶೇ.೭.೫ ಎಂದಾಗ ಗರ‍್ನರ್ ಸಂತಸವಾಗುವುದು ಸಹಜ. ಹಣದುಬ್ಬರ ಶೇ.೪.೫ ಇರಬೇಕು. ಆದರೆ ಶೇ.೫.೪ ಆದಾಗ ಬೇಸರ ಮೂಡುವುದು ಕೂಡ ಸಹಜ. ಅಖಿಲ ಭಾರತ ಹಣದ ಸೂಚ್ಯಂಕ ಶೇ.೯.೨೪ ಆಗಿರುವುದು ಹಾಗೂ ಕೇಂದ್ರ ಹಣಕಾಸು ಇಲಾಖೆ ವರದಿಯಲ್ಲಿ ಕೆಲವು ಅನಿರೀಕ್ಷಿತ ಬೆಳವಣಿಗೆಯನ್ನು ಪ್ರಸ್ತಾಪಿಸಲಾಗಿದೆ. ಇದರಲ್ಲಿ ರಷ್ಯಾ- ಉಕ್ರೇನ್ ಯುದ್ಧ, ಹಲವು ದೇಶಗಳ ನಡುವೆ ಮನಸ್ತಾಪ ಕಾಣಿಸಿಕೊಂಡಿರುವುದು ಇಂಧನ ದರ ಮತ್ತು ಅಗತ್ಯ ಆಹಾರ ವಸ್ತುಗಳ ಪೂರೈಕೆಯಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಬದಲಾವಣೆಗೆ ಕಾರಣವಾಗುತ್ತಿದೆ. ಇಂದಿನ ಪರಿಸರ ಮಾಲಿನ್ಯವೂ ಸಮಸ್ಯೆ ಆಗಲಿದೆ. ಅದರೊಂದಿಗೆ ಹಣದುಬ್ಬರದ ಚಿಂತೆಯೂ ಇದೆ.
ಆಹಾರ ಮತ್ತು ಲೋಹದ ಬೆಲೆಯಲ್ಲಿ ಏರಿಳಿತ ಕಂಡು ಬಂದಿದೆ. ಒಟ್ಟು ೧೦ ರೀತಿಯ ಅಡ್ಡಿ ಆತಂಕಗಳು ಕಂಡು ಬಂದಿದೆ. ಕೇಂದ್ರದ ಮಾಸಿಕ ವರದಿ `ಸಮಾಧಾನಕರ' ಎಂದಿದ್ದರೂ ಬೆಲೆ ಏರಿಕೆ ಬಗ್ಗೆ ಎಚ್ಚರವಹಿಸುವುದು ಅಗತ್ಯ. ಬ್ಯಾಂಕ್‌ಗಳ ವೈಯುಕ್ತಿಕ ಸಾಲ, ಕೃಷಿ, ಕೈಗಾರಿಕೆ, ರೂಪಾಯಿ ಮೌಲ್ಯ ಕುಸಿತ. ವಿದೇಶಿ ನೇರ ಬಂಡವಾಳ ಇಳಿಮುಖ ಇಂದಿನ ಸಮಸ್ಯೆ. ಕೃಷಿ, ಜನಸಾಮಾನ್ಯರ ಬದುಕು, ಹಣದುಬ್ಬರ, ನಿರುದ್ಯೋಗ, ವೇತನ ಸ್ಥಗಿತ, ಅಸಮಾನತೆ, ಜಿಎಸ್‌ಟಿ ಹೊರೆ, ವೈದ್ಯಕೀಯ ಸೇವೆ ದುಬಾರಿ, ಅಧಿಕಾರಿಗಳ ಅಸಡ್ಡೆ, ಸರ್ಕಾರದ ವೆಚ್ಚಕ್ಕೆ ಶ್ರೀಮಂತರಿಗೆ ಲಾಭ ತಂದು ಬಡವರ ಮೇಲೆ ಹೊರೆ ಆಗುತ್ತಿರುವುದು ಇಂದಿನ ಸಮಸ್ಯೆ.