ನಾಡಹಬ್ಬ-ಸಂಕಟ ವಿಮೋಚನೆಯ ಸಂಕೇತ
ಸತ್ಯಂ ವದಾ ಧರ್ಮಂ ಚರಾ ಎಂಬ ಮಾತಿನ ಅರ್ಥ ಸತ್ಯವನ್ನು ನುಡಿದು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು. ದುಷ್ಟ ನಿಗ್ರಹ ಶಿಷ್ಟರಿಗೆ ರಕ್ಷಣೆ ಕೊಡಲು ಇಂತಹ ಮಾರ್ಗದಲ್ಲಿ ಕ್ರಮಿಸುವುದು ಸಾಮಾಜಿಕವಾಗಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕಾದ ರೀತಿ ಎಂಬುದು ನಂಬಿಕೆಯ ಆಧಾರದ ಮೇರೆಗೆ ರೂಡಿಗೆ ಬಂದಿರುವ ಪದ್ಧತಿ. ಶಾಸನಗಳ ಮೂಲಕ ಮನುಷ್ಯನ ಸ್ವಭಾವಗಳನ್ನು ನಿಯಂತ್ರಿಸುವುದಾಗಲೀ ಇಲ್ಲವೇ ತಿದ್ದುವುದಾಗಲೀ ಹೇಗೆ ಸಾಧ್ಯವಾಗುವುದಿಲ್ಲವೋ ಹಾಗೆಯೇ ನಂಬಿಕೆಯ ಆಧಾರದ ಪದ್ಧತಿಗಳ ಮೂಲಕವೂ ಲೋಕವನ್ನು ಸರಿದಾರಿಗೆ ತರುವುದು ಅಸಾಧ್ಯವೇ. ಇಂತಹ ಸಂದರ್ಭದಲ್ಲಿ ಧರ್ಮ ರಾಜ್ಯ ಸ್ಥಾಪನೆಗಾಗಿ ಅಧಿಕಾರಸ್ಥರು ತ್ರಿಕರಣ ಶುದ್ಧಿಯಿಂದ ನಡೆಯುವ ಮಾರ್ಗವನ್ನು ಎಚ್ಚರಿಕೆ ಗಂಟೆಯಂತಿರುವ ನಿದರ್ಶನಗಳು ಹಾಗೂ ಮಾದರಿಯಂತಿರುವ ಪ್ರಸಂಗಗಳನ್ನು ಆಧರಿಸಿ ಲೋಕನೀತಿಯನ್ನು ರೂಪಿಸಿಕೊಳ್ಳುವ ಪದ್ಧತಿಯೇ ವಾಸ್ತವವಾಗಿ ಪ್ರಜಾತಂತ್ರ. ನೇರವಾಗಿ ಹೇಳಬೇಕೆಂದರೆ ರಾಜಸತ್ತೆಯ ಪ್ರತೀಕವಾದ ದಸರಾ ಹಬ್ಬದ ಅಂಗವಾಗಿ ನಡೆಯುವ ವಿವಿಧ ವಿಧಿ ವಿಧಾನಗಳ ಆಚರಣೆಯಲ್ಲಿ ಎದ್ದು ಕಾಣುವುದು ಪ್ರಜಾಸತ್ತೆಯ ಸಾರವೇ. ಹೀಗಾಗಿಯೇ ಪೌರಾಣಿಕ ಹಿನ್ನೆಲೆಯ ಐತಿಹಾಸಿಕ ದಸರಾ ವರ್ತಮಾನದಲ್ಲಿ ನಾಡಹಬ್ಬವಾಗಿ ರೂಪುಗೊಂಡು ಮೈಮನಗಳ ಪುಳಕಿಸುವ ಒಂದು ವಿಶಿಷ್ಟ ಆಚರಣೆಯಾಗಿ ಲೋಕಕ್ಕೆ ಮಾದರಿ ಎನಿಸಿರುವುದು ಮೈಸೂರು ದಸರಾ ಹಬ್ಬದ ಮಹತ್ವ.
ದಸರಾ ಹಬ್ಬ ಆರಂಭವಾಗುವುದು ಮಹಾನವಮಿ ಅಥವಾ ಮಾರನನವಮಿಯ ಗುಂಗಿನಿಂದಲೇ. ಮನೆ ಮನೆಗೆ ತೆರಳಿ ದೀಪದಿಂದ ದೀಪವನ್ನು ಬೆಳಗಿಸಿಕೊಂಡು ನಾಡಿಗೆ ಹೊಸ ಜ್ಯೋತಿಯನ್ನು ಬೆಳಗಿಸುವ ಆಚರಣೆಯಲ್ಲಿ ಕಂಡುಬರುವುದು ನಿಜವಾದ ಅರ್ಥದ ಸಾಮಾಜಿಕ ನ್ಯಾಯ. ದೀಪ ಹಾಗೂ ಬೆಳಕಿಗೆ ಧರ್ಮ ಕರ್ಮದ ಇಲ್ಲವೇ ಜಾತಿ ವರ್ಗದ ಹಂಗಿಲ್ಲ. ದೀಪಕ್ಕೆ ಬಳಸುವ ಎಣ್ಣೆಯೂ ಅಷ್ಟೆ. ಮನೆಯಿಂದ ಮನೆಗೆ ತೆರಳಿ ದೀಪ ಬೆಳಗಿಸುವ ತರುಣರು ನಿಜವಾದ ಅರ್ಥದಲ್ಲಿ ಸಾಮಾಜಿಕ ಸುಧಾರಣೆಯ ಮುಂಗೋಳಿಗಳು. ಇಂತಹ ವಿಶಿಷ್ಟ ಆಚರಣೆಯಿಂದ ಆರಂಭವಾಗುವ ಈ ಹಬ್ಬ ರಾಜ್ಯ ಕೋಶದಿಂದ ದೂರವಿದ್ದು ವನವಾಸ ಮುಗಿಸಿ ಕಡೆಯ ಅಜ್ಞಾತವಾಸವನ್ನು ಮುಗಿಸುತ್ತಿದ್ದ ಪಾಂಡು ಪುತ್ರ ಅರ್ಜುನನಿಗೆ ಅನಿವಾರ್ಯವಾಗಿ ಶಸ್ತ್ರಾಸ್ತ್ರಗಳನ್ನು ಬಳಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದ ಪ್ರಸಂಗವೇ ಶಿಷ್ಟರಿಗೆ ರಕ್ಷಣೆ ಕೊಟ್ಟು ದುಷ್ಟರಿಗೆ ಶಿಕ್ಷೆ ಕೊಡುವ ಉದ್ದೇಶ. ಬನ್ನಿ ಮರದ ಮೇಲೆ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳನ್ನು ಹೊರ ತೆಗೆದು ಗಾಂಢೀವಿ ಬಿಲ್ಲಿನ ಮೂಲಕ ಪಾಶುಪತಾಸ್ತ್ರವನ್ನು ಅರ್ಜುನ ಪ್ರಯೋಗಿಸಿದ ಪ್ರಸಂಗದ ಹಿಂದಿರುವುದು ನಡೆಯಬಾರದ ಯಾವುದೇ ಕೆಲಸವಾಗಲೀ ಅಥವಾ ಅಂತಹ ಕೃತ್ಯ ಎಸಗುವವರು ಎಲ್ಲಿಯೇ ಅಡಗಿರಲಿ ಅಂತಹವರನ್ನು ಹುಡುಕಿ ಶಿಕ್ಷಿಸುವ ಉದ್ದೇಶದ್ದು. ಬನ್ನಿ ಮುಡಿಯುವ ವಿಧಿಯ ಸಾಂಕೇತಿಕತೆಯಲ್ಲಿ ಇರುವ ಮಹತ್ವದ ಅಂಶವೆಂದರೆ `ಬನ್ನಿ ಮುಡಿದು ಬಂಗಾರದ ಹಾಗೆ ಇರೋಣ' ಎಂಬ ಸಂದೇಶ. ಅಂದರೆ ಸರ್ವೆ ಜನಾ ಸುಖಿನೋಭವಂತು ಎಂಬ ಮಾತಿನ ದೃಷ್ಟಾಂತವೇ ಈ ಬನ್ನಿ ಮುಡಿಯುವ ಶಾಸ್ತ್ರ.
ಆಯುಧ ಪೂಜೆಯ ಮಹತ್ವವೂ ಅಷ್ಟೆ. ಆಗಿನ ಕಾಲದಲ್ಲಿ ಶಸ್ತ್ರಾಸ್ತ್ರಗಳು ಬದುಕಿನ ಅನಿವಾರ್ಯ ಉಪಕರಣಗಳಾಗಿದ್ದವು. ಬೇಟೆಯಿಂದ ಹಿಡಿದು ವೈರಿಗಳ ನಿಗ್ರಹಕ್ಕೆ ಶಸ್ತçಗಳ ಅಗತ್ಯವಿತ್ತು. ನಾಗರಿಕತೆಯ ನಂತರ ಶಸ್ತ್ರಾಸ್ತ್ರಗಳ ಜಾಗದಲ್ಲಿ ಬದುಕಿನ ದಾರಿಯಲ್ಲಿ ಬಳಸುವ ಅನೇಕ ಉಪಕರಣಗಳಾದ ವಾಹನಗಳಿಂದ ಹಿಡಿದು ಅಡುಗೆಯ ಮನೆ ಉಪಕರಣಗಳೂ ಸೇರಿದಂತೆ ಎಲ್ಲ ವಹಿವಾಟಿಗೆ ಸಂಬಂಧಿಸಿದ ಸಲಕರಣೆಗಳಿಗೆ ನೇವೇದ್ಯ ಮಾಡಿ ಪೂಜಿಸಿ ಆರಾಧಿಸುವ ಹಿಂದಿರುವುದು ಸಮಾಜಮುಖಿ ಬದುಕು ಸುಸ್ಥಿರವಾಗುವಂತೆ ಎಚ್ಚರ ವಹಿಸುವ ಅಗತ್ಯದ ಪ್ರತಿಪಾದನೆ.
ಇದಕ್ಕೆ ಪೂರಕವಾಗಿ ನಡೆಯುವ ಸಾಂಸ್ಕೃತಿಕ ವಲಯದ ವಿವಿಧ ಸ್ವರೂಪದ ಕಾರ್ಯಕ್ರಮಗಳು ಸಾಮಾಜಿಕವಾಗಿ ಬೌದ್ಧಿಕತೆಯನ್ನು ಉದ್ದೀಪಿಸುವ ಒಂದು ಪ್ರಯತ್ನ. ಒಲಿದಿರುವ ಕಲೆಯನ್ನು ಅನಾವರಣ ಮಾಡುವ ನಿಟ್ಟಿನಲ್ಲಿ ಕವಿಗೋಷ್ಠಿ, ಸಂಗೀತ ಕಛೇರಿ, ನಾಟ್ಯ ಪ್ರದರ್ಶನ, ದೇವಾಲಯಗಳಿಗೆ ವಿಶೇಷ ಪೂಜೆ ಪುನಸ್ಕಾರಗಳ ಹಿಂದಿರುವುದು ಜ್ಞಾನವೆಂಬುದು ನಿಂತ ನೀರಲ್ಲ. ಅದು ಸಲಿಲ ಗಂಗಾಜಲ. ಇದು ಸಂಜೀವಿನಿ. ಇಂತಹ ಜ್ಞಾನದ ವಿಸ್ತಾರಕ್ಕೆ ಯಾವುದೇ ನಿರ್ಬಂಧ ಹೇರುವುದು ಮನುಷ್ಯ ವಿರೋಧಿ ಎಂಬುದನ್ನು ಅನುಭವದ ಮೂಲಕ ಅರ್ಥವಾಗುವಂತೆ ಮಾಡುವ ಈ ಆಚರಣೆಗಳು ಸಾಮಾಜಿಕ ಸುರಕ್ಷತೆ ಹಾಗೂ ನೆಮ್ಮದಿಯ ವಾತಾವರಣ ಸೃಷ್ಟಿಸುವ ಜೊತೆಗೆ ಹೊಸ ಸಂವಾದಗಳ ಮೂಲಕ ವ್ಯಕ್ತಿಗಳನ್ನು ವ್ಯಕ್ತಿತ್ವಗಳಾಗಿ ರೂಪಿಸುವ ಬೆಳವಣಿಗೆ ನಿಜಕ್ಕೂ ನಮ್ಮ ಕಣ್ಣೆದುರಿಗೆ ನಡೆಯುವ ಒಂದು ಪವಾಡ.
ಇಂತಹ ಪವಿತ್ರವಾದ ನಾಡಹಬ್ಬದಲ್ಲಿ ಎಲ್ಲರೂ ಮುಖ್ಯರೇ. ಅಮುಖ್ಯರೆಂಬ ಪ್ರಸ್ತಾಪವೇ ಇಲ್ಲಿ ಅನಗತ್ಯ. ದಸರಾ ಹಬ್ಬದ ವಿವಿಧ ಆಚರಣೆಗಳಲ್ಲಿ ಕೇಂದ್ರ ಬಿಂದುವಿನಂತೆ ಕಂಡುಬರುವ ಮುಖ್ಯಮಂತ್ರಿಗಳು ಜನತಂತ್ರದ ಮೂಲಕ ಅಧಿಕಾರಕ್ಕೆ ಬಂದಿರುವುದರಿಂದ ಇದೊಂದು ನಾಡಜನರ ಬುದ್ಧಿ ಭಾವಗಳ ಸಾಕ್ಷಾತ್ಕಾರ. ರಾಜಕಾರಣ ಇಂತಹ ಆಚರಣೆಗಳ ಮೂಲಕ ಅಗ್ನಿಪರೀಕ್ಷೆಗೆ ಒಳಗಾಗಿ ಹೊಸ ದಿಕ್ಕು ದೆಸೆಯನ್ನು ಕಂಡುಕೊಳ್ಳುವ ಮುಕ್ತ ಅವಕಾಶಗಳಿವೆ. ಏಕೆಂದರೆ, ಈ ಹಬ್ಬದ ಆಚರಣೆಯ ಹಿಂದಿರುವುದು ಶಾಪಗಳಂತೆ ಕಾಡುವ ಎಲ್ಲಾ ಸಂಕಟಗಳ ವಿಮೋಚನೆ ಪಡೆಯುವ ಒಂದು ಭಗೀರಥ ಯತ್ನ. ಹೀಗಾಗಿಯೇ ಪ್ರಾದೇಶಿಕವಾಗಿ ಮೈಸೂರಿನಲ್ಲಿಯೇ ನಡೆಯುವ ಈ ಹಬ್ಬ ಎಲ್ಲಾ ಗಡಿಗಳನ್ನು ದಾಟಿ ಜನರ ಮೈಮನಗಳ ಹಬ್ಬವಾಗಿ ರೂಪುಗೊಂಡಿರುವ ಹಿಂದಿರುವುದು ಮನುಷ್ಯ ತಾನೊಂದೇ ವಲಂ - ಮನಷ್ಯರೆಲ್ಲಾ ಒಂದೇ ಕುಲದವರು ಎಂಬ ಸಂದೇಶದ ರವಾನೆ.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ದಸರಾ ಆಚರಣೆ ನಂತರ ೧೬೧೦ರಲ್ಲಿ ರಾಜ ಒಡೆಯರ್ ಕಾಲದಲ್ಲಿ ಮೈಸೂರಿನಲ್ಲೂ ಆರಂಭವಾಯಿತು. ಸ್ವತಂತ್ರ ಭಾರತದಲ್ಲಿ ಜನಪ್ರಿಯ ಸರ್ಕಾರಗಳು ಬಂದ ನಂತರ ಅದರ ಸ್ವರೂಪ ಬದಲಾಗಿ ರಾಜರ ಬದಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಸರಾ ಹಬ್ಬದ ಆಚರಣೆ ಶುರುವಾಯಿತು. ಹಾಲಿ ೪೧೪ನೇ ದಸರಾ ಮಹೋತ್ಸವ ಆಚರಿಸಲಾಗುತ್ತಿದೆ.