ನಾನೂ ಆಕಾಂಕ್ಷಿ ಕೊಡುವವರು ಯಾರು?
ಕೇವಲ ಒಂದೇ ಓಟಿನಿಂದ ಆರಿಸಿಬಂದು ಗ್ರಾಮಪಂಚಾಯ್ತಿಗೆ ಮೆಂಬರ್ ಆಗಿದ್ದ ಅಲೈಕನಕನ ಖರ‍್ರೇ ಬದಲಾಗಿತ್ತು. ಇರುವುದು ಊರಿನಲ್ಲಾದರೂ ರಾಜ್ಯದ, ದೇಶದ ವಿದ್ಯಮಾನಗಳನ್ನು ಮಾತನಾಡುತ್ತಿದ್ದ. ಏನೂ ಕೆಲಸವಿಲ್ಲದಿದ್ದರೂ ಪಂಚಾಯ್ತಿ ಯಲ್ಲಿ ಕುಳಿತು, ಉಳಿದ ಮೆಂಬರ್‌ಗಳಿಗೆ ನಿಮಗೆ ಗೊತ್ತೇನ್ರೀ? ಸೋದಿ ಮಾಮೋರು ಮೊನ್ನೆ ಉಕ್ರೇನ್ ರಷಿಯಾಗೆ ಹೋಗುವ ಮುನ್ನ ನನಗೆ ಕಾಲ್ ಮಾಡಿ… ಅಲ್ಲಿ ಹೋಗಿ ಇಬ್ರಿಗೂ ಕಾಂಪ್ರಮೈಸ್ ಮಾಡಸ್ಲೋ ಹೇಗೆ ಎಂದು ಕೇಳಿದ್ದರು. ಆ ಕಂಗನಾಳಂತೂ ದಿನಾ ಕಾಲ್ ಮಾಡಿ ಹಂಗೆ ಮಾಮಾ… ಹಿಂಗೆ ಮಾಮಾ ಎಂದು ತಲೆ ತಿನ್ನುತ್ತಿದ್ದಾಳೆ. ಅವತ್ತೊಂದಿನ ನಾನು ಫೋನು ಇಟ್ಟು ಎಲ್ಲೋ ಹೋಗಿದ್ದೆ. ನನ್ನ ಹೆಂಡತಿ ಫೋನ್ ತೆಗೆದುಕೊಂಡಾಗ ಆ ಕಡೆಯಿಂದ ಆ ಕಂಗನಾ… ಹಾಯ್ ಮಾಮಾ ಅಂದಳು. ನನ್ನ ಹೆಂಡತಿ ಆಕೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ ಎಂದು ಏನೇನೋ ಹೇಳುತ್ತಿದ್ದ. ಈಗ ಹೊಸ ವಿಷಯವೇನೆಂದರೆ… ದಿನಾಲೂ ಟಿವಿಯಲ್ಲಿ… ಪೇಪರ್‌ನಲ್ಲಿ ನಾನೂ ಆಕಾಂಕ್ಷಿ… ನೀನೂ ಆಕಾಂಕ್ಷಿ… ಅವನೂ ಆಕಾಂಕ್ಷಿ… ಇವನೂ ಆಕಾಂಕ್ಷಿ.. ಹೀಗೆ ಇಂಥವುಗಳನ್ನು ನೋಡಿ ನಾನ್ಯಾಕೆ ಆಕಾಂಕ್ಷಿ ಯಾಕಾಗಬಾರದು? ಎಂದು ಮರುದಿನವೇ ಎಲ್ಲ ಮೀಡಿಯಾದವರನ್ನು ಕರೆಯಿಸಿದ. ಅಂದು ಪೌಡರ್ ಹಚ್ಚಿಕೊಂಡು ಎಲ್ಲರ ಮುಂದೆ ಬಂದು… ನೋಡಿ ಇವರೇ… ಅವರೆಲ್ಲ ಹಾಗೆ ಹೇಳುತ್ತಿದ್ದಾರೆ. ಈಗ ನಾನು ಹೇಳುತ್ತಿದ್ದೇನೆ… ನಾನೂ ಅಕಾಂಕ್ಷಿ ಎಂದು ಹೇಳಿದ. ಅಲ್ಲರೀ ನಿಮಗೆ ಪಕ್ಷವೇ ಇಲ್ಲ ನಾನೂ ಆಕಾಂಕ್ಷಿ ಅಂತಿದೀರಲ್ಲ ಅದ್ಹೇಗೆ ಸಾಧ್ಯ ಅಂದಾಗ… ಇದು ಡೆಮಾಕ್ರಸಿ ಕಣ್ರೀ ನೀವೂ ಆಗಬಹುದು ಎಂದು ಹೇಳಿದ. ಈ ಸುದ್ದಿ ರಾಜಕೀಯ ವಲಯದಲ್ಲಿ ಬಿರುಗಾಳಿಯಂತೆ ಹಬ್ಬಿತು. ಕನಕನೂ ಆಕಾಂಕ್ಷಿಯಂತೆ ಎಂದು ಆಯಾ ಪಕ್ಷದ ಹೈಕಮಾಂಡಿನವರು ಮಾತನಾಡಿಕೊಂಡರು. ಒಂದು ಪಕ್ಷದ ಹೈಕಮಾಂಡ್ ಕನಕನನ್ನು ಭೇಟಿಯಾಗಿ.. ನೀವೂ ಆಕಾಂಕ್ಷಿಯಾ ಅಂದರು. ಅದಕ್ಕೆ ಕನಕ ಹೌದೂ ಸಾರ್ ನಾನೂ ಆಕಾಂಕ್ಷಿ. ಹಾಗಾದರೆ ನಿನ್ನ ಪಕ್ಷ ಯಾವುದು? ಯಾಕೆ ಹಾಗೆ ಸ್ಟೇಟ್‌ಮೆಂಟ್ ಮಾಡಿದೆ ಅಂದಾಗ…ಸಾರ್ ಹಾಗೆ ಹೇಳುವುದಕ್ಕೇನು ಟ್ಯಾಕ್ಸ್ ಕಟ್ಟಬೇಕೆ? ನಿಜ… ನಾನು ತಯಾರಿದ್ದೇನೆ. ಆದರೆ ಕೊಡುವವರು ಯಾರು? ಎಂದು ಹೇಳಿದಾಗ ಹೈಕಮಾಂಡೇಶ ಸುಮ್ಮನಾದ.