ನಾನೆಂಬ ಭಾವ ದೂರಾಗಿ ದೇಶ ಮೊದಲಾಗಲಿ
ಭಾರತದ ಆತ್ಮಗೌರವ ಮತ್ತು ಶಕ್ತಿಯ ಸಂಕೇತವೇ ಇಲ್ಲಿಯ ಬಹುವಿಧ ಸಂಸ್ಕೃತಿ. ಜಗತ್ತಿನ ಯಾವ ಮೂಲೆಯಲ್ಲಿ ಯಾವುದೇ ರೀತಿಯ ತೊಂದರೆ ಎದುರಾದರೂ ಅದಕ್ಕೆ ಸ್ಪಂದಿಸುವ, ಆರ್ತರನ್ನು ರಕ್ಷಿಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಮೆರೆದಾಡುವ ಗುಣ ಇಲ್ಲಿಯ ಮಣ್ಣಿನ ವಿಶೇಷ. ತನ್ನನ್ನು ಮುರಿದು ತಿನ್ನಲು ಹೊಂಚು ಹಾಕುವ ಹದ್ದುಗಳು ರೆಕ್ಕೆ ಕತ್ತರಿಸಿಕೊಂಡು ಆಪತ್ತಿಗೆ ಸಿಲುಕಿದರೂ ಧಾವಿಸಿ ರಕ್ಷಿಸುವ ಹಿಂದುನೆಲದ ಗತ್ತು, ಗಾಂಭೀರ್ಯಕ್ಕೆ ಎಣೆಯೆಲ್ಲಿ? 'ಪರೋಪಕಾರಾರ್ಥಮಿದಂ ಶರೀರಮ್' ಎಂಬ ಆರ್ಯೋಕ್ತಿಯನ್ನು ಯಥಾವತ್ ಅಳವಡಿಸಿದ ಪೂರ್ವಜರ ಸಿಂಹಸಾಹಸಿಕ ನಡೆ ಇಂದಿಗೂ ಪ್ರೇರಣಾದಾಯಿ. ಅದೇ ರಾಷ್ಟ್ರೀಯ ಚಿಂತನೆಗಳ ಪ್ರಖರ ಆದರ್ಶಗಳ ಬೆಳಕಿನಲ್ಲಿ ಬೆಳೆದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಶ್ಯಾಮಲಾಲ್ ಗುಪ್ತಾ ಸಜ್ಜನಶಕ್ತಿಯ ಮೊತ್ತವಾಗಿ ರೂಪುಗೊಂಡ ಮಹಾತ್ಮರಷ್ಟೇ ಅಲ್ಲ, ಭಾರತೀಯತೆಯ ಕಂಪನ್ನು ಜಗದಗಲ ಪಸರಿಸಿದ ಧೀಮಂತರೂ ಹೌದು.ಇಲ್ಲಿಯ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಿ, ಅದರಿಂದ ತಯಾರಾದ ಉತ್ಪನ್ನಗಳನ್ನು ಹತ್ತಾರು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಿ ಲಾಭ ಪಡೆಯುವ ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆಯುವುದಕ್ಕಾಗಿ ಬಂದವರೇ ಹೊರತು ನ್ಯಾಯಮಾರ್ಗದ ವ್ಯಾಪಾರಕ್ಕಲ್ಲ. ನಮ್ಮ ಊರಿಗೆ ಬೇಕಾದ ವಸ್ತುಗಳನ್ನು ನಾವೇ ತಯಾರಿಸಿ ಅವಶ್ಯಕತೆಯಿದ್ದಲ್ಲಿಗೆ ತಲುಪಿಸುವ ಮಾರ್ಗಕ್ಕೆ ಒಗ್ಗದಿದ್ದರೆ ಮುಂದೊಂದು ದಿನ ತುತ್ತು ಅನ್ನಕ್ಕೂ ವಿದೇಶೀಯರೆದುರು ಕೈಯೊಡ್ಡಬೇಕಾಗಬಹುದು. ನಂಬಿಕೆ, ಆಚಾರ, ಸಂಪ್ರದಾಯ, ವೈಚಾರಿಕ ರೀತಿರಿವಾಜುಗಳನ್ನೆಲ್ಲ ಪಕ್ಕಕ್ಕಿರಿಸಿ ದೇಶವೇ ಮುಖ್ಯವೆಂಬ ಯೋಚನೆಯತ್ತ ಸುಳಿಯದಿದ್ದರೆ ಸ್ವಾತಂತ್ರ‍್ಯ ಕನಸಿನ ಮಾತಾದೀತು' ಎಂಬ ಎಚ್ಚರಿಕೆಯ ಮಾತಿನಿಂದ ದೇಶವಾಸಿಗಳನ್ನು ಬಡಿದೆಚ್ಚರಿಸಿದ ಪ್ರಖರ ದೇಶಭಕ್ತ ಸುರೇಂದ್ರನಾಥ ಬ್ಯಾನರ್ಜಿ,
ಬಂಗಾಳದ ಅನಭಿಷಿಕ್ತ ದೊರೆ'ಯೆಂದೇ ಪ್ರಸಿದ್ಧರು. ಕಲ್ಕತ್ತೆಯ ಬ್ಯಾರಕಪುರದ ಶ್ರೀಮಂತ, ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಸುರೇಂದ್ರನಾಥರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ ಬಳಿಕ ಇಂಡಿಯನ್ ಸಿವಿಲ್ ಸರ್ವಿಸ್ ಪರೀಕ್ಷೆ ಎದುರಿಸಲು ಲಂಡನ್ ತಲುಪಿದರು. ಉನ್ನತ ಅಂಕಗಳೊಂದಿಗೆ ತೇರ್ಗಡೆಹೊಂದಿ ಉದ್ಯೋಗ ಸಂಪಾದಿಸಿ ಕಾನೂನು ಪದವಿ ಅಧ್ಯಯನದತ್ತ ಆಸಕ್ತರಾದರೂ ವರ್ಣಭೇದ ನೀತಿಯ ಅವಮಾನಕರ ಅನುಭವಕ್ಕೊಳಗಾಗಿ ಭಾರತಕ್ಕೆ ಮರಳಿದರು. ಇಂಗ್ಲಿಷ್ ಆಡಳಿತಕ್ಕೆ ತಲೆಬಾಗಿದ್ದರೆ ಸುಲಭದಲ್ಲಿ ನಿವಾರಿಸಬಹುದಾಗಿದ್ದ ಸಣ್ಣ ಕಾನೂನಾತ್ಮಕ ತಡೆಯನ್ನು ಅಲಕ್ಷಿಸಿ, ಒಮ್ಮೆ ಸಲಾಮು ಹೊಡೆಯುವ ಅಭ್ಯಾಸ ಆರಂಭವಾದರೆ ಜೀವನಪೂರ್ತಿ ಬ್ರಿಟಿಷರ ಚಾಕರಿ ಮಾಡಬೇಕಾಗುತ್ತದೆಯೆಂದು ಅಭಿಪ್ರಯಿಸಿ 'ಸರೆಂಡರ್ ನಾಟ್ ಬ್ಯಾನರ್ಜಿ'ಯೆಂದೇ ಪ್ರಸಿದ್ಧರಾದರು. ಭಾರತವನ್ನು ಆಳುವ ಶಕ್ತಿಯಷ್ಟೇ ಅಲ್ಲ, ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಇಂಗ್ಲೆಂಡ್‌ನಲ್ಲಿ ಆಳ್ವಿಕೆ ನಡೆಸುವ ಛಾತಿ ತಮಗಿರುವಾಗ ಕೆಂಪಂಗಿಗಳೆದುರು ತಲೆ ಬಾಗುವುದನ್ನು ಒಪ್ಪದೆ ಸ್ವದೇಶಕ್ಕೆ ಮರಳಿದ ಅವರ ರಾಷ್ಟ್ರನಿಷ್ಠೆ ಅತುಲ್ಯ, ಅದ್ಭುತ.
ಭಾರತೀಯತೆಯ ಪ್ರಸಾರದ ಉದ್ದೇಶದಿಂದ ಶಿಕ್ಷಣಸಂಸ್ಥೆ ಸ್ಥಾಪಿಸಿದ ಬ್ಯಾನರ್ಜಿ, ಸ್ವಾತಂತ್ರ‍್ಯ ಹೋರಾಟ-ಭಾರತದ ಇತಿಹಾಸ-ದೇಸೀ ಆಡಳಿತ-ವಿದೇಶೀ ಆಕ್ರಮಣ ಇತ್ಯಾದಿ ವಿಷಯಗಳ ಕುರಿತು ಆಳವಾಗಿ ಅಧ್ಯಯನಗೈದು ಅನೇಕ ವೇದಿಕೆಗಳ ಮೂಲಕ ದಾಸ್ಯಮುಕ್ತ ರಾಷ್ಟ್ರದ ಅಗತ್ಯತೆಯನ್ನು ಪ್ರತಿಪಾದಿಸಿದರು. ಅಖಿಲ ಭಾರತ ಸ್ತರದ ಪ್ರಥಮ ರಾಜಕೀಯ ಸಂಘಟನೆ ಇಂಡಿಯನ್ ನ್ಯಾಷನಲ್ ಅಸೋಸಿಯೇಶನ್ ಸ್ಥಾಪಿಸಿ ಬ್ರಿಟಿಷರ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ದಬ್ಬಾಳಿಕೆಯನ್ನು ಹಳ್ಳಿ ಹಳ್ಳಿಗೆ ತಲುಪಿಸಿ ಜನಜಾಗೃತಿಗೈದರು. ದ ಬೆಂಗಾಲೀ' ಸಂಪಾದಕರಾಗಿ ನಾಲ್ಕು ದಶಕಗಳ ಕಾಲ ಪತ್ರಿಕೆಯನ್ನು ಮುನ್ನಡೆಸಿ, ಆಡಳಿತದ ವಿರುದ್ಧ ಬರೆದ ಲೇಖನಕ್ಕಾಗಿ ಜೈಲುಸೇರಿದ ಮೊದಲ ಪತ್ರಕರ್ತನೆಂಬ ಖ್ಯಾತಿ ಗಳಿಸಿದರು. ಕಾಂಗ್ರೆಸ್‌ನ ಸಹಸಂಸ್ಥಾಪಕರಾಗಿ, ಎರಡು ಅವಧಿಗೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಸುರೇಂದ್ರರು ಬಂಗಾಳ ವಿಭಜನೆಯ ಸಂಚಿನ ವಿರುದ್ಧ ಸಿಡಿದೆದ್ದ ಮಹಾನಾಯಕ. ಸ್ವದೇಶೀ ಯೋಚನೆ ಹಾಗೂ ಯೋಜನೆಗಳ ದಿಗ್ದರ್ಶಕರಾಗಿ ಅರವತ್ತರ ಹರೆಯದಲ್ಲೂ ನಿರಂತರ ಸಂಚರಿಸಿ ಕೆಂಪಂಗಿಗಳ ಸಾಮ್ರಾಜ್ಯವನ್ನು ನಡುಗಿಸಿದರು. ನೂರಾರು ನಾಯಕರನ್ನು ಬೆಳೆಸಿ, ಸಾವಿರಾರು ಕಾರ್ಯಕರ್ತರಿಗೆ ಗುರಿ ತೋರಿದ ಬ್ಯಾನರ್ಜಿ, ಕಾಂಗ್ರೆಸ್‌ನ ಹೊಂದಾಣಿಕೆ ರಾಜಕಾರಣದಿಂದ ಬೇಸತ್ತು ಹೊರನಡೆದು ಇಂಡಿಯನ್ ನ್ಯಾಷನಲ್ ಲಿಬರಲ್ ಫೆಡರೇಶನ್ ಸ್ಥಾಪಿಸಿದರು. ಆಧುನಿಕ ಸುಂದರ ಕಲ್ಕತ್ತೆಯ ನಿರ್ಮಾತೃಗಳಲ್ಲೊಬ್ಬರಾಗಿ ಕಂಗೊಳಿಸಿ ದೇಸೀ ಚಿಂತನೆಗಳ ವಿಸ್ತಾರಕ್ಕೆ ಶ್ರಮಿಸಿದ ಸುರೇಂದ್ರನಾಥ ಬ್ಯಾನರ್ಜಿಯವರಿಗೆ ದೇಶವಿತ್ತ
ರಾಷ್ಟ್ರಗುರು' ಗೌರವವೇ ಅವರ ಶ್ರದ್ಧಾಪೂರ್ಣ ಜೀವನಕ್ಕೆ ಸಾಕ್ಷಿ.ಲಕ್ಷಾಂತರ ನಾಗರಿಕರ ಬಲಿದಾನ, ತ್ಯಾಗದ ಫಲವಾಗಿ ದೊರೆತ ಸ್ವಾತಂತ್ರ‍್ಯವನ್ನು ವೈಯಕ್ತಿಕ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ಉಪಯೋಗಿಸುವುದು ಅಕ್ಷಮ್ಯ. ದೇಶವನ್ನು ರಾಮರಾಜ್ಯವನ್ನಾಗಿಸುವ ಗಾಂಧೀಜಿ ಸಂಕಲ್ಪವನ್ನು ಮಣ್ಣುಪಾಲಾಗಿಸಿ ತಮ್ಮ ತಮ್ಮ ಹಿತ, ಸುಖವನ್ನಷ್ಟೇ ನೋಡುವ ನಿಲುವು ನಾಡನ್ನು ದುರಂತ ಅಧ್ಯಾಯದತ್ತ ಕೊಂಡೊಯ್ಯುವುದು ನಿಶ್ಚಿತ. ಸುಂದರ ಇತಿಹಾಸದ ದೇಶವೊಂದು ಚುನಾವಣೆಯ ಕಾರಣಕ್ಕಾಗಿ ಹಿಂದುಳಿಯುವುದು ನೋವಿನ ಸಂಗತಿ' ಎಂದು ಮರುಕಪಟ್ಟು ದೇಶವಾಸಿಗಳನ್ನು ಬಡಿದೆಚ್ಚರಿಸಿದ ಸ್ವಾತಂತ್ರ‍್ಯ ಹೋರಾಟಗಾರ, ಅಭಿಜಾತ ಕವಿ ಶ್ಯಾಮಲಾಲ್ ಗುಪ್ತಾ, ಭಾರತದ ಧ್ವಜಗೀತೆಯ ಕರ್ತೃ. ಉತ್ತರಪ್ರದೇಶದ ಕಾನ್ಪುರದಲ್ಲಿ ಜನಿಸಿದ ಶ್ಯಾಮಲಾಲರು ತಮ್ಮ ಶಿಕ್ಷಣದ ತರುವಾಯ ಕೌಟುಂಬಿಕ ಉದ್ಯೋಗದಲ್ಲಿ ತೊಡಗಿಸದೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ನಿರ್ವಹಿಸಿದರು. ಸ್ವಾತಂತ್ರ್ಯಾಂದೋಲನದ ಪ್ರಖರತೆ ಮುಗಿಲು ಮುಟ್ಟಿದ್ದಾಗ ಪರಿಚಿತರಾದ ಗಣೇಶ ಶಂಕರ ವಿದ್ಯಾರ್ಥಿಯವರ ಪ್ರೇರಣೆಯಿಂದ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿದ ಗುಪ್ತಾ, ಮೂರು ದಶಕಗಳ ಕಾಲ ಹಿಂತಿರುಗಿ ನೋಡಲಿಲ್ಲ. ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿ ಫತೇಪುರದ ನಾಯಕತ್ವ ವಹಿಸಿದ ತರುಣ ಶ್ಯಾಮಲಾಲರ ಸಂಘಟನಾ ಸಾಮರ್ಥ್ಯ, ಕುಶಲ ಮಾತುಕತೆ ಕಾಂಗ್ರೆಸ್ ನಾಯಕರ ಗಮನ ಸೆಳೆಯಿತು. ಮೂರು ಬಾರಿ ಜೈಲು ಸೇರಿದರೂ, ಕುಟುಂಬಿಕರ ವಿರೋಧವಿದ್ದರೂ ಬಿಡುಗಡೆಯ ಬಳಿಕ ಮತ್ತೆ ಸಮರಾಂಗಣಕ್ಕೆ ಧುಮುಕಿದ ಗುಪ್ತಾ, ಜಲಿಯನ್‌ವಾಲಾಬಾಗ್ ಹತ್ಯಾಕಾಂಡದ ಪಂಚಮ ವರ್ಷಕ್ಕೆ ನಡೆಸಿದ
ವೀರಪ್ರತಿಜ್ಞಾ' ಕಾರ್ಯಕ್ರಮಕ್ಕಾಗಿ ಬರೆದ ಹಾಡು ವಿಜಯೀ ವಿಶ್ವ ತಿರಂಗಾ ಪ್ಯಾರಾ ಝಂಡಾ ಊಂಚಾ ರಹೇ ಹಮಾರಾ' ಧ್ವಜಗೀತೆಯಾಗಿ ಪ್ರಸಿದ್ಧವಾಗಿದೆ. ಆ ಹಾಡು ಸೃಷ್ಟಿಸಿದ ಭಾವನೆ ಅತುಲ್ಯ. ಸುಮಾರಾಗಿ ಮುಂದಿನ ಅನೇಕ ಸಮಾವೇಶಗಳಲ್ಲಿ ಬಳಕೆಯಾದ ಗೀತೆ ೧೯೪೮ರಲ್ಲಿ ತೆರೆಕಂಡ ಆಜಾದಿ ಕಿ ರಾಹ್ ಪರ್ ಚಲನಚಿತ್ರದಲ್ಲೂ ಮಿಂಚಿತು. ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ, ಚಲೇ ಜಾವ್ ಮೊದಲಾದ ಅನೇಕ ಪ್ರಮುಖ ಹೋರಾಟಗಳಲ್ಲಿ ಎದೆಗುಂದದೆ ಹೋರಾಡಿದ ಗುಪ್ತಾ, ಸ್ವಾತಂತ್ರ್ಯ ಪ್ರಾಪ್ತಿಯವರೆಗೆ ಪಾದರಕ್ಷೆ ಹಾಗೂ ಕೊಡೆಯನ್ನು ಉಪಯೋಗಿಸುವುದಿಲ್ಲವೆಂಬ ಪ್ರತಿಜ್ಞೆಯನ್ನು ಅಕ್ಷರಶಃ ಪಾಲಿಸಿದ ಧ್ಯೇಯಜೀವಿ. ಪಂಜಾಬ್ ಕೇಸರಿ, ಸ್ವತಂತ್ರ ಭಾರತ ಇತ್ಯಾದಿ ಕೃತಿಗಳನ್ನೂ ರಚಿಸಿದ ಶ್ಯಾಮಲಾಲರು, ಬ್ರಿಟಿಷ್ ವಿರೋಧೀ ಲೇಖನಗಳನ್ನು ಪ್ರಕಟಿಸಿ ಭಾರತೀಯರನ್ನು ರಾಮರಾಜ್ಯ ನಿರ್ಮಾಣದತ್ತ ಪ್ರೋತ್ಸಾಹಿಸುವುದಕ್ಕೆಂದೇ
ಸಚಿವ' ಮಾಸಿಕ ಪತ್ರಿಕೆಯನ್ನೂ ಆರಂಭಿಸಿದರು. ಶ್ರೀರಾಮನ ಜೀವನದಿಂದ ಪ್ರಭಾವಿತರಾಗಿದ್ದ ಅವರು ರಾಮಾಯಣ ಮೌಲ್ಯಗಳ ಕುರಿತು ನೀಡುತ್ತಿದ್ದ ಉಪನ್ಯಾಸಗಳು ವಿದ್ವತ್ಪೂರ್ಣವೂ, ಸಮಾಜ ಜಾಗೃತಿಗೆ ಸಹಕಾರಿಯೂ ಆಗಿದ್ದವು. ಹಿಂದು ಸಮಾಜವು ಏಕತೆಯ ಹಾದಿಯಲ್ಲಿ ಸಾಗದಿದ್ದರೆ ದೇಶಕ್ಕಷ್ಟೇ ಅಲ್ಲ, ಸಮಗ್ರ ವಿಶ್ವಕ್ಕೆ ಅದು ದು:ಖದ ಸಂಗತಿಯೆಂದು ಸಾರಿದ ಅವರ ದೂರದೃಷ್ಟಿ ಬಹುವಿಶಿಷ್ಟ. ಸ್ವಾತಂತ್ರ‍್ಯದ ಬಳಿಕ ಸಾಮಾಜಿಕ ಜೀವನದಲ್ಲಿ ತೊಡಗಿಸಿ ವೈಶ್ಯ ಕಾಲೇಜು, ಅನಾಥಾಲಯ, ಬಾಲಿಕಾ ವಿದ್ಯಾಲಯ, ಗಣೇಶ ಸೇವಾಶ್ರಮ, ಗಣೇಶ ವಿದ್ಯಾಪೀಠ ಮೊದಲಾದ ಸಂಸ್ಥೆಗಳನ್ನು ಪ್ರಾರಂಭಿಸಿ ವರದಕ್ಷಿಣೆ, ಬಾಲ್ಯವಿವಾಹ ಪಿಡುಗಿನ ವಿರುದ್ಧ ಹೋರಾಡಿದರು. ಚುನಾವಣೆಗಳನ್ನು ಎದುರಿಸಿ, ಗೆಲುವು ಸಾಧಿಸಿ ಮೆರವಣಿಗೆ ಹೊರಟು ನಾಯಕರಿಗೆ ಉಘೇ ಅನ್ನುವುದಕ್ಕಷ್ಟೇ ಮೀಸಲಾದ ಕಾಂಗ್ರೆಸ್ ಕಾರ್ಯಕರ್ತರ ದುರವಸ್ಥೆ ಹಾಗೂ ನಾಯಕರ ಅಹಂಕಾರಿ ಮನೋಭಾವದಿಂದ ಬೇಸತ್ತ ಗುಪ್ತಾರ ಉಪದೇಶಗಳು ಆಳುವವರಿಗೆ ಅಪಥ್ಯವೇ ಆಯಿತು. ಯಾವ ಸೌಲಭ್ಯಗಳಿಗೂ ಕೈಚಾಚದೆ ಕೊನೆವರೆಗೂ ಅನಾಮಧೇಯ ಜೀವನ ನಡೆಸಿದ ಪದ್ಮಶ್ರೀ ಶ್ಯಾಮಲಾಲ್ ಗುಪ್ತಾ, ಭಾರತದ ಹೆಮ್ಮೆ.
ದೇಶದ ಸುಂದರ ನಾಳೆಗಳಿಗಾಗಿ ತಮ್ಮ ಇಹವನ್ನು ತ್ಯಾಗಗೈದ ಮಹಾನುಭಾವರೀರ್ವರ ಸ್ಮೃತಿದಿನವು ನಾಡಿಗೆ ಹೊಸಶಕ್ತಿಯನ್ನೀಯುವ ಪರ್ವ. ತ್ಯಾಗವನ್ನಾಗಲೀ, ಬಲಿದಾನವನ್ನಾಗಲೀ ವ್ಯವಹಾರವಾಗಿ ಬದಲಾಯಿಸದೆ, ಪ್ರಶಸ್ತಿ - ಉದ್ಯೋಗಗಳಿಗೆ ಮಾನದಂಡವಾಗಿಸದೆ ಋಷಿಜೀವನ ನಡೆಸಿದ ಬ್ಯಾನರ್ಜಿ ಮತ್ತು ಗುಪ್ತರ ಬದುಕು ಆದರ್ಶಪ್ರಾಯ.