ನಾ ಬರೆದ ಕಾದಂಬರಿ
ಏನಿಲ್ಲದಿದ್ದರೂ ಜೀವನ ದಲ್ಲಿ ಕಾದಂಬರಿ ಬರೆಯಬೇಕು ಎಂದು ಛಲದಂಕ ಮಲ್ಲನಂತೆ ಇರುವ ತಿರುಕೇಸಿಗೆ ವಿಷಯವೇ ಹೊಳೆಯುತ್ತಿರಲಿಲ್ಲ. ಯಾವತ್ತೂ ನಾನೊಬ್ಬ ಸಾಹಿತಿ, ಆ ಕ್ಷೇತ್ರದಲ್ಲಿ ನಾನೊಬ್ಬನೇ ಎಂದು ಹೇಳುತ್ತಿದ್ದ. ಕೆಲವರು ನಂಬಿದರೆ ಮತ್ತೆ ಕೆಲವರು ಡಬಾಣಿ ಎಂದು ಬಯ್ಯುತ್ತಿದ್ದರು. ಆದರೆ ತಿರುಕೇಸಿ ಮಾತ್ರ ಯಾವುದಕ್ಕೂ ತಲೆಕೆಡೆಸಿಕೊಳ್ಳುತ್ತಿದ್ದ. ಬೇರೆಯವರು ನನ್ನ ಮಾತಿಗೆ ಏನಂತಾರೋ ಎಂಬ ಯೋಚನೆಯನ್ನೂ ಅವನು ಮಾಡುತ್ತಿರಲಿಲ್ಲ. ತಲೆಯಲ್ಲಿ ಎರಡು ಅಕ್ಷರವಿಲ್ಲ ಆದರೂ ಕಾದಂಬರಿ ಬರೆಯುತ್ತಿದ್ದಾನೆ ಎಂದು ಜಿಲಿಬಿಲಿ ಎಲ್ಲವ್ವ, ಮೇಕಪ್ ಮರೆಮ್ಮ ಕಮೆಂಟ್ ಮಾಡುತ್ತಿದ್ದರು. ತಿರುಕೇಸಿ ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ. ಯರ‍್ಯಾರಿಗೋ ಕಾಲ್ ಮಾಡಿ ನಾನು ಕಾದಂಬರಿ ಬರೆಯುತ್ತಿದ್ದೇನೆ ನಿಮ್ಮ ಸಹಕಾರ ಬೇಕು ಎಂದು ಹೇಳುತ್ತಿದ್ದ. ಕಂಪ್ಯೂಟರ್‌ನಲ್ಲಿಟೈಪ್ ಮಾಡಲು ಕುಳಿತರೆ ಐಡಿಯಾ ಬರುವುದಿಲ್ಲ ಎಂದು ಮುದಿಗೋವಿಂದಪ್ಪನ ಅಂಗಡಿಗೆ ಹೋಗಿ ಬಿಳಿಹಾಳೆ ಮತ್ತು ಜೆಲ್‌ಪೆನ್ನು ತೆಗೆದುಕೊಂಡು ಉದ್ರಿ ಹೇಳಿ ಬರುತ್ತಿದ್ದ. ಅವರ ಅಪ್ಪ ಅಮ್ಮ ಇಬ್ಬರೂ ಇವನ ಸಲುವಾಗಿ ಬೇಸತ್ತು ಹೋಗಿದ್ದರು. ಗೆಳೆಯರ ಹತ್ತಿರವೂ ಕಾದಂಬರಿ ಬರೆಯುತ್ತಿದ್ದೇನೆ ಅದು ಇದು ಖರ್ಚಾಗುತ್ತದೆ ಎಂದು ಕೈಗಡ ಇಸಿದುಕೊಂಡು ಬರುತ್ತಿದ್ದ. ಅವರೆಲ್ಲರೂ ಸೇರಿ ನೀನು ಯಾವ ಕಾದಂಬರಿ ಬರೆಯುತ್ತೀಯ ಎಂದು ಕೇಳುತ್ತಿದ್ದರು. ಅದಕ್ಕೆ ವೇಟ್.. ವೇಟ್ ಎಂದು ಹೇಳುತ್ತಿದ್ದ. ದಿನಾಲೂ ಉದ್ರಿ ಚಹ ಕೊಟ್ಟು ಕೊಟ್ಟು ಸಾಕಾಗಿ ಹೊಟೆಲ್ ಶೇಷಮ್ಮಳೂ ಸಹ ತಿರುಕಾ ಯಾವಾಗ ಉದ್ರಿ ತೀರುಸುತ್ತೀಯ ಎಂದು ಕೇಳುತ್ತಿದ್ದಳು. ಎಲ್ಲರ ಎದುರಿಗೆ ಅವಮಾನ ಮಾಡಿದರೂ ತಿರುಕೇಸಿಯ ಮನಸ್ಸಿಗೆ ತಾಗುತ್ತಿರಲಿಲ್ಲ. ಪ್ರಕಾಶಕರ ಹತ್ತಿರ ಹೋಗಿ ನನ್ನ ಕಾದಂಬರಿ ಪ್ರಿಂಟ್ ಮಾಡಿಸಿದರೆ ನಿಮಗೆ ಕೈ ತುಂಬ.. ಚೀಲದ ತುಂಬ ಹಣ ಸಿಗುತ್ತದೆ ಎಂದು ಹೇಳಿ ಅಷ್ಟಿಷ್ಟು ಇಸಿದುಕೊಂಡು ಬರುತ್ತಿದ್ದ. ಹೀಗೆ ಸಿಕ್ಕಸಿಕ್ಕಲ್ಲಿ ಇಸಿದುಕೊಂಡು ಬರುತ್ತಿದ್ದ ತಿರುಕೇಸಿಗೆ ಪಾಠ ಕಲಿಸದಿದ್ದರೆ ಇವನು ಏನೇನೋ ಆಗಿಬಿಡುತ್ತಾನೆ ಎಂದು ಲಾದುಂಚಿರಾಜನು ಐಡಿಯಾ ಮಾಡಿ…. ಕೊನೆಗೆ ಆತನ ಮನವೊಲಿಸಿ ಬೇಗ ಬರೆಯಿರಿ ಎಂದು ಪುಸಲಾಯಿಸಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ. ಎಲ್ಲರ ಕಾಟ ತಾಳಲಾರದೇ ಕೊನೆಗೆ ತಿರುಕೇಸಿ ನಾ ಬರೆದ ಕಾದಂಬರಿ ಎಂದು ಬರೆದ… ಒಳಗಿನ ಪುಟಗಳ ತುಂಬೆಲ್ಲ ಬರೀ ನಾ ಬರೆದ ಕಾದಂಬರಿ ಎಂದೇ ಇತ್ತು.