For the best experience, open
https://m.samyuktakarnataka.in
on your mobile browser.

ನಿನ್ನಂಥ ಐಡಿಯಾಗಾರ ದೇಶದಲ್ಲೇ ಇಲ್ಲ…

02:52 AM Jan 29, 2024 IST | Samyukta Karnataka
ನಿನ್ನಂಥ ಐಡಿಯಾಗಾರ ದೇಶದಲ್ಲೇ ಇಲ್ಲ…

ಅಲ್ಲೆಲ್ಲೋ ಒಬ್ನಾತನ ಹೆಂಡತಿ ತನ್ನನ್ನು ಹನಿಮೂನಿಗೆಂದು ಸಮುದ್ರ ಇರುವ ಊರಿಗೆ ಕರೆದುಕೊಂಡು ಹೋಗು ಎಂದು ಕಟ್ಟಪ್ಪಣೆ ಮಾಡಿದ್ದಕ್ಕೆ ಆಕೆಯ ಗಂಡ ಎಲ್ಲೋ ಕರೆದುಕೊಂಡು ಹೋಗಿ ಇದೇ ಹನಿಮೂನು ಆಕಾಶದಲ್ಲಿ ಆಫ್ ಮೂನು ಎಂದು ಹೇಳಿ ಯಾಮಾರಿಸಿದ ಗಂಡನಿಗೆ ತಿಗಡೇಸಿ ಹ್ಯಾಟ್ಸಾಪ್ ಎಂದು ಮೆಸೇಜ್ ಕಳುಹಿಸಿ…ನಿನ್ನಂತ ಐಡಿಯಾಗಾರ ಇಡೀ ದೇಶದಲ್ಲೇ ಇಲ್ಲ….ನಿನ್ನ ಐಡಿಯಾಕ್ಕೆ ಇಡೀ ದೇಶವೇ ತಲೆದೂಗುತ್ತಿದೆ. ನೀವು ಇದರದ್ದೇ ಕನ್ಸಲ್ಟನ್ಸಿ ಶುರುಮಾಡಿರಿ ನಿಮ್ಮ ಇಂಥ ಐಡಿಯಾಗಳನ್ನು ಸೋದಿ ಮಾಮಾರ ಕಚೇರಿಗೂ ಟ್ಯಾಗ್ ಮಾಡಿ …ನಿಮ್ಮನ್ನು ದೇಶವೇ ಕೊಂಡಾಡಲಿ….ಎಂದು ಹೊಗಳಿ
ನನ್ನ ಹೆಂಡತಿಯೂ ಈಗಲಾದರೂ ಹನಿಮೂನ್‌ಗೆ ಕರೆದುಕೊಂಡು ಹೋಗು ಅಂತ ಗಂಟುಬಿದ್ದಿದ್ದಾಳೆ… ಏನಾದರೂ ಐಡಿಯಾ ಕೊಡು ಗುರುವೇ ಎಂದು ಮೆಸೇಜ್ ಕಳುಹಿಸಿದ ಐದೇ ನಿಮಿಷದಲ್ಲಿ ಆ ಕಡೆಯಿಂದ ಮೆಸೇಜ್ ಬಂತು. ಅದನ್ನು ನೋಡಿದ ತಿಗಡೇಸಿ ಯುರೇಕಾ ಅಂತ ಜೋರಾಗಿ ಕೂಗಿದ. ಆ ಕೂಗು ಕೇಳಿ ಬೆಚ್ಚಿಬಿದ್ದ ಎದುರುಮನೆ ಬುಸ್ಯವ್ವ… ತಿಗಡೇಸಿಗೆ ಹುಚ್ ಹಿಡಿತೋ ಏನೋ ಎಂದು ಅಂದುಕೊಂಡು ಸುಮ್ಮನಾದಳು. ಮರುದಿನದಿಂದ ತಿಗಡೇಸಿ ಪತ್ನಿಯ ವರಾತ ಶುರುವಾಯಿತು. ಮದುವೆಯಾಗಿ ಇಷ್ಟು ವರ್ಷವಾಯಿತು. ಒಂದು ದಿನವೂ ಹನಿಮೂನ್‌ಗೆ ಕರೆದುಕೊಂಡು ಹೋಗಿಲ್ಲ..ನಮ್ ಕಂಟ್ರಂಗಮ್ಮತ್ತಿ ಅವನನ್ನು ಮದುವೆ ಆಗಬೇಡ ಎಂದು ಸಾರಿ.. ಸಾರಿ ಹೇಳಿದ್ದಳು. ಆಕೆಯ ಮಾತು ಮೀರಿ ಮದುವೆಯಾದದ್ದೇ ತಪ್ಪಾಗಿ ಹೋಯಿತು ಎಂದು ಒಟ ಒಟ ಶುರುಮಾಡಿದಳು. ಕಿವಿಮುಚ್ಚಿಕೊಂಡ ತಿಗಡೇಸಿ….ಗುರುವಾರ ಬೆಳಗಾ ಮುಂಜಾನೆ ಹನಿಮೂನ್‌ಗೆ ಹೋಗೋಣ ಎಂದು ಅನೌನ್ಸ್ ಮಾಡಿದ. ಖುಷ್ ಆದ ತಿಗಡೇಸಿ ಪತ್ನಿ..ಎಲ್ಲ ತಯಾರಿ ಮಾಡಿಕೊಂಡಳು. ನಮ್ಮ ಹನಿಮೂನ್ ಪ್ಲೇಸ್ ಎಲ್ಲೆರಿ ಎಂದು ಕೇಳಿದಳು…ಅದಕ್ಕೆ ತಿಗಡೇಸಿ ಅಯ್ಯೋ ಒಂದೇ ಎರಡೇ…? ಲಾದುಂಚಿ…ಇರಪಾಪುರ…ಹೊಸಗುಡ್ಡ..ವರ್ನಖ್ಯಾಡೆ….ಗೌರಿಪುರಕ್ಕೆ ಅಂದ. ಹುಟ್ಟಿದಾಗಿನಿಂದ ಯಾವುದೇ ಊರು ನೋಡಿರದ ತಿಗಡೇಸಿ ಪತ್ನಿ ಭಯಂಕರ ಖುಷಿ ಆದಳು. ಹನಿಮೂನಿಗೆ ಹೋಗುವ ಹಿಂದಿನ ರಾತ್ರಿ ತಿಗಡೇಸಿ..ನಿದ್ದೆ ಗುಳಿಗೆಗಳನ್ನು ಪುಡಿ ಮಾಡಿ ಮಜ್ಜಿಗೆಯಲ್ಲಿ ಬೆರೆಸಿ ಪತ್ನಿಗೆ ಕೊಟ್ಟು ಮಲಗಿಸಿದ ತಿಗಡೇಸಿ ಇನ್ನೂ ಕತ್ತಲಿರುವಾಗಲೇ ಆಕೆಯನ್ನು ಎಬ್ಬಿಸಿ ಚಕ್ಕಡಿಯಲ್ಲಿ ಕರೆದುಕೊಂಡು ಹೊರಟ…ನಿದ್ದೆ ಮಂಪರಿನಲ್ಲಿದ್ದ ತಿಗಡೇಸಿ ಪತ್ನಿಯು…ಇರಪಾಪುರ ಬಂದಿದ್ದೇ ಗೊತ್ತಾಗಲಿಲ್ಲ…ಅಲ್ಲಿ ಹಳ್ಳ ತೋರಿಸಿ ಸಮುದ್ರ ನೋಡು ಅಂದ. ನಿದ್ದೆಗಣ್ಣಿನಲ್ಲಿದ್ದ ಆಕೆ ಎಷ್ಟು ಚೆನಾಗಿದೇರಿ ಅಂದಳು. ಅಲ್ಲಿಂದ ಲಾದುಂಚಿಗೆ ಕರೆದುಕೊಂಡು ಬಂದು ಭೋಗಪ್ಪ ಮಾವನ ತೋಟ ತೋರಿಸಿ ನೋಡಿದು ನ್ಯಾಷನಲ್ ಪಾರ್ಕ್ ಎಂದು ಹೇಳಿದ. ಆಕೆಗೆ ತುಂಬಾ ಖುಷಿ ಆಯಿತು. ಮತ್ತೆ ಹೊಸಗುಡ್ಡ… ವರ್ನಖ್ಯಾಡೆ…. ಎಲ್ಲವನ್ನೂ ತೋರಿಸಿಕೊಂಡು ಎರಡು ದಿನ ಬಿಟ್ಟು ಊರಿಗೆ ಬಂದ. ಈಗ ಹೆಂಡತಿ ಭಯಂಕರ ಖುಷಿಯಲ್ಲಿದ್ದಾಳೆ. ತಿಗಡೇಸಿ… ತನ್ನ ಗುರುವಿಗೆ ದೊಡ್ಡ ಸನ್ಮಾನ ಹಮ್ಮಿಕೊಂಡಿದ್ದಾನೆ.