ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಿನ್ನೆ ನಾಳೆಗಳನ್ನು ಆಳುವ ಕಾಲ

04:00 AM Aug 02, 2024 IST | Samyukta Karnataka

ಉತ್ತರಕನ್ನಡದ ಶಿರೂರ ಗುಡ್ಡ ಕುಸಿತ, ದೇವರನಾಡು ವಯನಾಡಿನ ಮಹಾಕುಸಿತದಿಂದ ಅನೇಕ ಗ್ರಾಮಗಳು ವಸತಿಗಳು ಅಲ್ಲಿರುವ ಜನ, ಜಾನುವಾರಗಳು ಕೊಚ್ಚಿಹೋಗಿರುವ ಘಟನೆಗಳು ಒಮ್ಮೆಲೇ ಸಂಭವಿಸಿರುವುದಲ್ಲ. ನಾವು ನಮ್ಮ ಸುತ್ತಲಿರುವ ಪರಿಸರದ ನದಿ, ನೀರು, ಗುಡ್ಬೆಟ್ಟಗಳು, ಗಾಳಿ ಬಯಲುಗಳ ಮೇಲೆ ನಿರಂತರವಾಗಿ ಮನಸೋ ಇಚ್ಛೆ ನಾವು ನಿನ್ನೆಗಳಲ್ಲಿ ಹಲ್ಲೆ ಮಾಡಿದ್ದೇವೆ. ಈ ನಿನ್ನೆಗಳ ಹಲ್ಲೆಗಳನ್ನು ಪರಿಸರ ತನ್ನ ಸೇಡನ್ನು ನಾಳೆ ತೀರಿಸಿಕೊಂಡ ಪ್ರತಿಫಲ. ಹಾಗಾಗಿ ಆ ನಿನ್ನೆ ನಾಳೆಗಳನ್ನು ಆಳುವ ಕಾಲ ಬಂದಿದೆ.
ಒಬ್ಬರ ನಾಳೆಯನ್ನು ತಿಳಿಯಬೇಕಾದರೆ ಅವರ ನಿನ್ನೆಯನ್ನು ನೋಡಬಹುದು. ಅಂತೆಯೇ ಇಂದು ಮಾನವ ಈ ಪರಿಸರವನ್ನು ವಿಪರೀತವಾಗಿ ಹಾಳು ಮಾಡುವ ಮೂಲಕ ತಮ್ಮ ನಾಳೆಗಳಿಗೆ ತಾವೇ ಕೊಳ್ಳಿ ಇಟ್ಟುಕೊಂಡಂತಾಗಿದೆ. ಇದು ಮಾನವ ಕುಲಕ್ಕೆ ಕೊಟ್ಟ ಗಂಭೀರ ಎಚ್ಚರಿಕೆ ಎಂದು ತಿಳಿದುಕೊಳ್ಳಬೇಕು.
ಪರಿಸರ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ, ಬಿಗಿಯಾಗಿ ಪಾಲಿಸಿಕೊಂಡು ಬರಬೇಕು. ಉದ್ದುದ್ದ ಉಪದೇಶಗಳಿಂದ, ಶಾಲಾ ಅಂಗಣದಲ್ಲಿ, ತರಗತಿಗಳಲ್ಲಿನ ಮಾತುಗಳಿಗೆ ಸೀಮಿತವಾಗಬಾರದು. ಪರಿಸರ ದಿನಾಚರಣೆಗಳಲ್ಲಿ ಚೀರಿ, ಚೀರಿ ಮಾತನಾಡುವುದರಿಂದ, ಮೇಜು ಕುಟ್ಟುವುದರಿಂದ ಏನೊಂದು ಸಾಧಿಸಲು ಸಾಧ್ಯವಿಲ್ಲ. ನಮಗೆ ದೊರೆತಿರುವ ಅಗಾಧವಾದ ನಿರ್ಮಲ ಪರಿಸರವನ್ನು ಮುಂದಿನ ಪೀಳಿಗೆಗೆ ಹಾಗೆಯೇ ಹಸ್ತಾಂತರಿಸಬೇಕು. ಪರಿಸರವನ್ನು ಉಳಿಸಲು ದೇಶದಲ್ಲಿ ಕಾನೂನುಗಳು ಸಾಕಷ್ಟಿವೆ. ಆದರೆ ಅವೆಲ್ಲ ಗೆದ್ದಿಲು ತಿನ್ನಲು ಬಿಡಬಾರದು.
ಪಶ್ಚಿಮಘಟ್ಟದ ಉತ್ತರ ಕನ್ನಡ ಜಿಲ್ಲೆ ಕರ್ನಾಟಕದ ಸ್ವಿಜರ್‌ಲ್ಯಾಂಡ್ ಎನಿಸಿಕೊಂಡದ್ದು ನೆರೆಯ ಕೇರಳ ಕೂಡ ನಿಸರ್ಗ ಸಂಪತ್ತನ್ನು ಹೊಂದಿರುವ ರಾಜ್ಯ. ಇವುಗಳು ಅಲ್ಲೋಲಕಲ್ಲೋಲವಾಗಿರುವುದರಿಂದ ನಾವು ಪಾಠ ಕಲಿಯಬೇಕು. ಪರಿಸರದಲ್ಲಿ ಜರುಗುತ್ತಿರುವ ಪ್ರತಿಕ್ಷಣ ಅಪರೂಪದ್ದು. ಅಲ್ಲಿರುವ ಧುಮ್ಮುಕ್ಕುವ ನೀರು, ರುದ್ರ ರಮಣೀಯ ದೃಶ್ಯಗಳು, ಪ್ರಕೃತಿಯಲ್ಲಿನ ಜೈವಿಕ ಕೊಂಡಿಗಳನ್ನು, ಜೀವನಾನುಭವಗಳನ್ನು ಒಡೆಯುವುದೆಂದರೆ ಇದೊಂದು ಘೋರ ದುರಂತವಾಗಿದೆ.
ಎಡೆಬಿಡದ ಅಗೆತಗಳು, ನವನಾಗರಿಕತೆಯ ಅಬ್ಬರದಲ್ಲಿ ಭೂಮಿಯ ಸಮತೋಲನ ತಪ್ಪುತ್ತಿದೆ. ನದಿಗಳು ತಮ್ಮ ದಿಕ್ಕನ್ನು ಬದಲಿಸಿಕೊಳ್ಳುತ್ತವೆ. ಇದರಿಂದ ಅಕಲ್ಪಿತ ಅನಾಹುತಗಳಿಗೆ ಕಾರಣವಾಗುತ್ತಿವೆ. ಉಂಡವನಿಗೆ ಹಸಿವೆ ಹೆಚ್ಚಂತೆ. ಹಾಗೆಯೇ ಈ ಪರಿಸರದ ಸೊಬಗುಗಳನ್ನು ಹೆಚ್ಚೆಚ್ಚು ಬಳಸಿಕೊಂಡಂತೆ ಪರಿಸರ ಅವನತಿ ಹೆಚ್ಚು. ಜನತೆ, ಅರಣ್ಯ, ವನ್ಯಜೀವಿ ಸಂಕುಲಗಳು, ನದಿ-ಬೆಟ್ಟಗಳು, ಅವನತಿಗೊಳ್ಳುವ ಮಾರಕವಾಗುವ ಯೋಚನೆಗಳನ್ನು, ಯೋಜನೆಗಳನ್ನು ಹಾಕಿಕೊಳ್ಳದಂತೆ ಎಚ್ಚರವಹಿಸಬೇಕು. ಪರಿಸರ ರಕ್ಷಣೆಗೆ ಪರಿಸರ ಹೋರಾಟಗಳು ಮಾಯವಾಗಿರುವ ಈ ಹೊತ್ತಲ್ಲಿ ಪರಿಸರ ರಕ್ಷಣೆಗಾಗಿ ಸಂಘಟನೆಗಳು ಮುನ್ನೆಲೆಗೆ ಬರಬೇಕು. ರಕ್ಷಣೆಗಾಗಿ ಚಳವಳಿಗಳು ರೂಪುಗೊಳ್ಳಬೇಕು. ಅದು ಇಂದಿನ ಅಗತ್ಯ ಕೂಡಾ. ನಾವು ಇಂದು ಎಚ್ಚರಗೊಳ್ಳದಿದ್ದರೆ ಇತಿಹಾಸದ ಕಸದಬುಟ್ಟಿಗೆ ನಾವು ಸೇರಬೇಕಾಗುತ್ತದೆ.
ಅಭಿವೃದ್ಧಿಯ ಪರಿಕಲ್ಪನೆಯ ಹಿಂದೆ ಇರುವ ಪರಿಸರ ಮಣಿಸುವ, ಪರಿಸರದ ಮೇಲೆ ಪ್ರಭುತ್ವ ಸಾಧಿಸುವ, ಯೋಚನೆಗಳು, ಯೋಜನೆಗಳು ಪರಿಸರದ ಜೊತೆಗಿನ ಸಹಬಾಳ್ವೆ, ಪರಿಸರವನ್ನು ಪ್ರೀತಿಸುವ ತತ್ವಗಳಿಗೆ ವಿರುದ್ಧವಾಗಿವೆ.
ಪರಿಸರದ ಜೊತೆಗೆ ಕೂಡಿ ಬಾಳುವುದನ್ನು ಕಲಿಯಬೇಕು. ಕೂಡಿ ಬಾಳುವುದೆಂದರೆ, ಪೋಷಕ, ವಿಧಾಯಕ ಹಾಗೂ ಕ್ರಿಯಾತ್ಮಕವಾದುದು. ತನ್ಮೂಲಕ ಪರಸ್ಪರ ಪ್ರೇಮ, ಬಂಧುತ್ವ, ಇವು ಜಗತ್ತಿನಲ್ಲಿ ಬೆಳೆಯಲು ಸಾಧ್ಯ. ಇಂತಹ ಆದರ್ಶ ಸಮಾಜ ಭೂ ಲೋಕದ ಸ್ವರ್ಗ.

Next Article