For the best experience, open
https://m.samyuktakarnataka.in
on your mobile browser.

ನಿರ್ನಿಮಿತ್ತ ವೈರಾಗ್ಯ ಪರಿಪೂರ್ಣ

04:30 AM Oct 01, 2024 IST | Samyukta Karnataka
ನಿರ್ನಿಮಿತ್ತ ವೈರಾಗ್ಯ ಪರಿಪೂರ್ಣ

ಪರಿಪೂರ್ಣ ಜ್ಞಾನಿಗಳಿಗೆ ಪರಿಪೂರ್ಣ ವೈರಾಗ್ಯವಿರುತ್ತದೆ. ಅವರ ಪರಿಪೂರ್ಣ ವೈರಾಗ್ಯದ ವಿಶೇಷವೇನೆಂದರೆ ಅವರಿಗೆ ಈ ಲೋಕದ ಖ್ಯಾತಿ, ಲಾಭ, ಪೂಜೆ ಮುಂತಾದವುಗಳು ಕಿಂಚಿತ್ತೂ ರುಚಿಸುವುದಿಲ್ಲ. ಖ್ಯಾತಿ ಎಂದರೆ ಪ್ರಸಿದ್ಧಿ ಅಥವಾ ಕೀರ್ತಿ. ಲಾಭ ಎಂದರೆ ಹಣವೇ ಮೊದಲಾದ ಸಂಪತ್ತುಗಳ ಸಂಗ್ರಹ. ಪೂಜೆ ಎಂದರೆ ಗೌರವ ಪ್ರಾಪ್ತಿ. ಕೆಲವೊಮ್ಮೆ ಯಾವುದೋ ನಿಮಿತ್ತಕ್ಕೋಸ್ಕರ ಇವುಗಳಲ್ಲಿ ಆಸೆ ಕಡಿಮೆಯಾಗುವುದುಂಟು.
ತನಗೆ ಗೌರವ ಬರಲಿ ಅಥವಾ ತನ್ನ ಗೌರವ ಉಳಿಯಲಿ ಎಂಬ ಕಾರಣಕ್ಕೋಸ್ಕರ ಲಾಭವನ್ನು ತ್ಯಜಿಸುವುದುಂಟು ಅಥವಾ ತಾನು ವಿನಯವಂತನೆಂಬ ಖ್ಯಾತಿ ಬರಲಿ ಎನ್ನುವುದಕ್ಕೋಸ್ಕರ ಗೌರವವನ್ನು ತ್ಯಜಿಸುವುದುಂಟು. ಆದ್ದರಿಂದಲೇ ಕೆಲವರು ನಾಟಕೀಯವಾಗಿ ಬಗ್ಗುವುದನ್ನು ಕಾಣುತ್ತೇವೆ. ಇಂಥವರನ್ನು ಕುರಿತಾಗಿಯೇ ಅತಿವಿನಯಃ ಧೂರ್ತಲಕ್ಷಣಂ' ಎಂಬ ಮಾತು ಹುಟ್ಟಿಕೊಂಡಿದೆ. ಹೀಗೆ ನಿಮಿತ್ತಕ್ಕೋಸ್ಕರ ಬರುವ ವೈರಾಗ್ಯಗಳಿಂದ ಹೆಚ್ಚೇನು ಪ್ರಯೋಜನವಿಲ್ಲ. ಸ್ಮಶಾನ ವೈರಾಗ್ಯ ಮತ್ತು ಪ್ರಸೂತಿ ವೈರಾಗ್ಯಗಳು ಸ್ವಲ್ಪ ಅಂತರದೊಂದಿಗೆ ಇದೇ ಸಾಲಿನಲ್ಲಿ ಸೇರಿಕೊಳ್ಳುತ್ತವೆ. ಏಕೆಂದರೆ ಅವುಗಳೂ ಸನಿಮಿತ್ತ ವೈರಾಗ್ಯಗಳೇ ಆಗಿವೆ. ಆದರೆ ಯಾವುದೇ ನಿಮಿತ್ತವಿಲ್ಲದೆ ಖ್ಯಾತಿ, ಲಾಭ, ಪೂಜೆಗಳಲ್ಲಿ ಸಹಜವಾಗಿ ಆಸೆಯಿಲ್ಲದಿರುವಿಕೆ ಸರಿಯಾದ ವೈರಾಗ್ಯದ ಲಕ್ಷಣ. ಶ್ರೀವೇದವ್ಯಾಸರು ಹೇಳಿದ್ದನ್ನು ಶ್ರೀಶಂಕರಾಚಾರ್ಯರು ಉಲ್ಲೇಖಿಸುತ್ತಾರೆ.ತ್ಯಜ ಧರ್ಮಮಧರ್ಮಂ ಚ ಉಭೇ ಸತ್ಯಾನೃತೇ ತ್ಯಜ | ಉಭೇ ಸತ್ಯಾನೃತೇ ತ್ಯಕ್ತ್ವಾ ಯೇನ ತ್ಯಜಸಿ ತತ್ತ್ಯಜ ||' ಧರ್ಮ, ಅಧರ್ಮ, ಸತ್ಯ, ಅಸತ್ಯಗಳನ್ನು ತ್ಯಜಿಸು. ಅನಂತರ ಯಾವ ನಿಮಿತ್ತದಿಂದ ಇವುಗಳನ್ನು ತ್ಯಜಿಸಿದೆಯೋ, ಆ ನಿಮಿತ್ತವನ್ನೂ ತ್ಯಜಿಸು. ಇದು ಸೂಕ್ಷ್ಮವೂ, ಕಷ್ಟ ಸಾಧ್ಯವೂ ಆದ ವೈರಾಗ್ಯ ಸಾಧನೆ. ಈ ರೀತಿಯಲ್ಲಿ ನಿರ್ನಿಮಿತ್ತವಾಗಿ ಎಲ್ಲಕೀರ್ತಿ ಮೊದಲಾದವುಗಳ ವೈರಾಗ್ಯವುಳ್ಳವನು ಜೀವನ್ಮುಕ್ತನೆಂದು ಕರೆಯಲ್ಪಡುತ್ತಾನೆ.
ಶ್ರೀರಾಮನನ್ನು ಕುರಿತಾಗಿ ಯೋಗವಾಸಿಷ್ಠರಲ್ಲಿ ಹೇಳಿದ ಮಾತು. `ಯಶಃ ಪ್ರಭೃತೀನಾಂ ಯಸ್ಮೈ ಹೇತುನೈವ ವಿನಾ ಪುನಃ | ಭುವಿ ಭೋಗಾ ನ ರೋಚಂತೇ ಸ ಜೀವನ್ಮುಕ್ತ ಉಚ್ಯತೇ ||'. ಶ್ರೀರಾಮನಿಗೆ ಈ ಲಕ್ಷಣ ಇತ್ತು. ಆದ್ದರಿಂದ ಅವನು ಜೀವನ್ಮುಕ್ತ ಎಂಬುದಾಗಿ ವಿಶ್ವಾಮಿತ್ರರು ಹೇಳಿದ ಮಾತಿದು.