ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಿಶ್ಚಿಂತೆಗಾಗಿ ದೇವರಿಗೆ ಭಾರ ಹಾಕಿ

04:34 AM Aug 05, 2024 IST | Samyukta Karnataka

ಭಗವಂತ ಪ್ರಕೃತಿಯ ಎಲ್ಲರನ್ನು ಸಲುಹುತ್ತಾನೆ. ಇದು ಜಗತ್ತಿನ ಎಲ್ಲ ಧರ್ಮದವರ ನಂಬಿಕೆ. ಅಂತೆಯೇ ಆ ನಂಬಿಕೆಯಿಂದಲೇ ಜೀವನ ನಡೆದಿದೆ.
ಆದರೂ ಕೂಡ ಮನುಷ್ಯ ತನ್ನ ಭವಿಷತ್ತಿಗಾಗಿ ಏನೆಲ್ಲಾ ಕಷ್ಟಪಡುವದು. ಏಗುವದು ನಡೆದೇ ಇದೆ. ಧಾವಂತಗಳು ಇವೆ. ಇನ್ನು ಗಳಿಸಬೇಕು ಎಂಬ ಹಪಹಪಿಗಳು ತಾರಕಕ್ಕೇರಿವೆ. ಆಸೆಗೆ ಮಿತಿಯಿಲ್ಲದೇ ಹೋಗಿದೆ. ವ್ಯವಸ್ಥೆಯಲ್ಲಿ ಆರ್ಥಿಕ ಸದೃಢತೆಯೇ ಎಲ್ಲದರ ಭದ್ರತೆ ಎಂದು ತಿಳಿದುಕೊಂಡಿದ್ದು, ಗೊತ್ತು ಗುರಿಯಿರದೇ ಮನಸ್ಸಿನ ಮೇಲೆ ಒತ್ತಡ ಹಾಕಿಕೊಂಡು ಹೊರಟಿದ್ದು ಎಲ್ಲಿಗೆ ಎಂಬುದನ್ನೇ ಮರೆತಿದ್ದೇವೆ. ಹೀಗಾಗಿ ಅನೇಕ ರೀತಿಯ ಮನೋಕಾಯಿಲೆಯಿಂದ ನರಳುವಂತಾಗಿದೆ.
ಗೀತೆಯಲ್ಲಿ ಕೃಷ್ಣನು ಹೇಳಿರುವ ಪ್ರಕಾರ ಯೋಗಿಯಂತೆ ನನ್ನ ಮೇಲೆ ಎಲ್ಲ ಭಾರವನ್ನು ಹಾಕಿ ಯೋಗಿಯಂತೆ ನಿಶ್ಚಿಂತೆಯಿಂದಿರುವ ನೆಮ್ಮದಿಯ ವಿಷಯವನ್ನು ವಿಷದೀಕರಿಸಿದ್ದಾನೆ.
ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ |
ಮಯ್ಯರ್ಪಿತಮನೋಬುದ್ಧಿರ್ಯೊ ಮದ್ಭಕ್ತಃ ಸ ಮೇ ಪ್ರಿಯಃ ||
ಮನ ಬುದ್ಧಿಗಳೆಲ್ಲವನ್ನು ನನಗೆ ಅರ್ಪಿಸಿ ಸದಾ ಸಂತುಷ್ಟನೂ, ಯೋಗಿಯೂ ಸಂಯಮನೂ ದೃಢನಿಶ್ಚಯವುಳ್ಳವನೂ ಆದ ಭಕ್ತನು ನನಗೆ ತುಂಬ ಪ್ರಿಯನೆಂದು ಇಲ್ಲಿ ಹೇಳುವ ಮೂಲಕ ಕೃಷ್ಣನು ಶಿವಯೋಗಿಯ ಮನಸ್ಥಿತಿಯ ಪ್ರಾಶಸ್ತ್ರವನ್ನು ಪ್ರತಿಪಾದಿಸಿರುವನು.
ಶಿವಯೋಗಿ ಕ್ಷಣಿಕ ಸುಖಗಳಿಗೆ ಈಡಾಗದೇ ತನ್ನ ಅನಂತ ಆನಂದದ ಸುಖವನ್ನು ಅನುಭವಿಸುತ್ತಿದ್ದಾರೆ ಅಂಥವರು ನನಗೆ ಪ್ರಿಯರಾಗುತ್ತಾರೆ ಎಂದು ಹೇಳಿದ್ದಾನೆ. ಆತ್ಮಸುಖಿಯಾಗಬೇಕಾದರೆ ಹೊರಗಿನ ಬಾಹ್ಯ ವಿಷಯಗಳ ಬಗ್ಗೆ ಹೆಚ್ಚು ಅನಾಸಕ್ತನಾಗಿರಬೇಕು. ಪ್ರತಿಷ್ಠೆಯನ್ನು ಕಳಚಿಕೊಂಡು ಸಮರ್ಪಣಾ ಭಾವದಲ್ಲಿರಬೇಕು. ಇದು ಶಿವಯೋಗಿಗೆ ಸಾಧ್ಯವಾಗುತ್ತದೆ. ಆದರೆ ಸಂಸಾರಿಗೆ ಸಂಸಾರಿಕ ಭಾರವನ್ನು ಹೊತ್ತು ತಾನು ದುಃಖಿಯಾಗಿ ಸಂಚರಿಸುತ್ತಲೇ ಇರುತ್ತಾನೆ. ಸಂಸಾರದ ಭಾರ ಜಡ. ಅದನ್ನು ಹೊತ್ತರೆ ಮನುಷ್ಯನಿಗೆ ಮತ್ತಷ್ಟು ತೊಂದರೆ. ಮನೋವ್ಯಾಧಿಗಳಲ್ಲದೇ ದೈಹಿಕ ತೊಂದರೆಗಳು ಬಿಟ್ಟಿದ್ದಲ್ಲ. ಅದನ್ನು ದೇವರ ಮೇಲೆ ಹಾಕಿ ನಿಶ್ಚಿಂತನಾಗಿ ಬದುಕುವದೇ ಸೂಕ್ತ.
ಭಗವಂತನಿಗೆ ನಾವಾರೂ ಭಾರವಾಗಲಾರೆವು. ಸಂಪೂರ್ಣ ಪ್ರಪಂಚದ ವ್ಯವಸ್ಥೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವ ಅವನಿಗೆ ನಾವೊಬ್ಬರು ಭಾರವೆ! ಬಳ್ಳಿಗೆ ಕಾಯಿ ದಿಮ್ಮಿತ್ತೆ, ನಾವು ನಮ್ಮ ತಲೆಯ ಮೇಲಿರಿಸಿಕೊಂಡರೂ ಅದನ್ನು ಅವನೇ ಹೊರುವನು. ಇಳಿಸಿದರೂ ಅವನೇ ಹೊರುವನು. ನಾವು ಹೊತ್ತಾಗ ನಮಗೆ ಅವನಿಗೆ ಇಬ್ಬರಿಗೂ ಭಾರ. ಇಳಿಸಿದಾಗ ನಾವಾದರೂ ನೆಮ್ಮದಿಯಾಗಿರಬಹುದು.
ಇದೂ ಅಲ್ಲದೇ ಭಗವಂತನಲ್ಲಿ ಇಂಥ ಒಂದು ಕಲೆಯಿದೆ. ಅವನು ಎಷ್ಟೇ ಎಲ್ಲರ ಭಾರ ಹೊತ್ತರೂ ಅದು ಅವನಿಗೆ ಭಾರವಾಗುವುದಿಲ್ಲ. ಏಕೆಂದರೆ ಅವನಲ್ಲಿ ಅನಂತ ಶಕ್ತಿಗಳಿವೆ. ಸಂಕಲ್ಪ ಮಾತ್ರದಿಂದಲೇ ಅವೆಲ್ಲ ಕೆಲಸಕ್ಕೆ ತೊಡಗುತ್ತವೆ. ಹಾಗೂ ಅವನು ಏನೆಲ್ಲ ಮಾಡಿದರೂ ನಿರ್ಲಿಪ್ತನಾಗಿದ್ದು, ಪದ್ಮಪತ್ರದಂತೆ ಯಾವುದನ್ನೂ ಅಂಟಿಸಿಕೊಳ್ಳುವುದಿಲ್ಲ. ಅಂತೆಯೇ “ಜನ್ಮ ಕರ್ಮ ಚ ಮೇ ದಿವ್ಯಂ' ನನಗೆ ದಿವ್ಯವಾದ ಜನ್ಮ ಕರ್ಮಗಳು ಎಂದು ಕೃಷ್ಣನು ಗೀತೆಯಲ್ಲಿ ಹೇಳಿರುವುದುಂಟು. ಹೀಗೆ ಎಲ್ಲವನ್ನು ಹೊರುವ ಮತ್ತು ಹೊತ್ತರೂ ಭಾರವಾಗದ ಶಕ್ತಿ ಶಿವನಲ್ಲಿ ನೆಲೆಸಿರುವುದು. ಕಾರಣ ನಾವು ನಮ್ಮೆಲ್ಲ ಭಾರವನ್ನು ಅವನ ಮೇಲಿರಿಸಿ ನಿಶ್ಚಿಂತರಾಗಬಹುದು.

Next Article