For the best experience, open
https://m.samyuktakarnataka.in
on your mobile browser.

ನಿಸರ್ಗ ಮುನಿದಾಗ…

05:04 AM Aug 09, 2024 IST | Samyukta Karnataka
ನಿಸರ್ಗ ಮುನಿದಾಗ…

ಪ್ರಕೃತಿಯ ಪ್ರಕೋಪವಾದಾಗ ಆಸ್ತಿ, ಪಾಸ್ತಿ ಜೀವಗಳ ಹಾನಿಯಾದಾಗ ನಾವೆಲ್ಲ ಹೇಳುವುದು ದೇವರ ಶಾಪವಾಗಿದೆ, ಅಧರ್ಮ ಅನೈತಿಕತೆ ಹೆಚ್ಚಾದಾಗ ಇಂತಹ ವಿಪತ್ತು ಬರುತ್ತದೆ. ಇಷ್ಟೇ ಅಲ್ಲ ನಾಶವಾದ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಆಹಾರ ಪದ್ಧತಿಯೇ ಕಾರಣ'.. ಇತ್ಯಾದಿ ಎಂಬುದಾಗಿ ವಿಶ್ಲೇಷಣೆ ನೀಡುತ್ತೇವೆ. ಆದರೆ ನಿಜವಾಗಿಯೂ ಪ್ರಕೃತಿಯ ಪ್ರಕೋಪದ ಇಂತಹ ದುರಂತಗಳು ಏಕೆ ಸಂಭವಿಸುತ್ತವೆ ಎಂಬುದನ್ನು ನೋಡಿದಾಗ, ನಮ್ಮ ಪರಿಸರ ವಿಜ್ಞಾನಿಗಳು ಪ್ರಕೃತಿಯ ಸಂಪನ್ಮೂಲಗಳ ನಾಶವೇ ಇದಕ್ಕೆ ಕಾರಣವೆನ್ನುತ್ತಾರೆ. ಕುರಾನಿನ ಅಧ್ಯಾಯ ಅರಾಫ್ (೭.೮೫) ದಲ್ಲಿ ನಿಸರ್ಗವು ಮಾನವನಿಗೆ ದೇವರ ಕಾಣಿಕೆಯಾಗಿದೆ. ಆದುದರಿಂದ ಅದು ನಾಶವಾಗದಂತೆ ಅದರ ಯಾವುದೇ ಪ್ರದೇಶವನ್ನು ಹಾಳುಮಾಡದಂತೆ ಎಚ್ಚರಿಸಿದೆ. ಇನ್ನೊಂದು ವಚನ (೭.೩)ದಲ್ಲಿ ಮಿತಿ ಮೀರದಂತೆ ಸೃಷ್ಟಿಯಲ್ಲಿ ಇರುವುದನ್ನು ತಿನ್ನಿರಿ, ಕುಡಿಯಿರಿ ಮಿತಿ ಮೀರುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ ಎಂದು ಎಚ್ಚರಿಸುತ್ತ ಸ್ವರ್ಗದ ಸಂಪತ್ತನ್ನು ತೀರಾ ಸಮತೋಲನದಿಂದ ಎಚ್ಚರಿಕೆಯಿಂದ ಬಳಸಿರಿ ಎಂದು ಹೇಳಿದೆ. ನಮಗೆ ದೊರೆತ ನಿಸರ್ಗ ಸಂಪನ್ಮೂಲಗಳನ್ನು ಅನಾವಶ್ಯಕವಾಗಿ ಹಾಳು ಮಾಡುವದೆಂದರೆ ದೇವರು ಹಾಗೂ ಮಾನವರ ಮೇಲೆ ಎಸಗುವ ಪಾಪ ಕಾರ್ಯವಾಗಿದೆ. ನಿಸರ್ಗದ ವಸ್ತುಗಳನ್ನು ಕ್ಷುಲ್ಲಕವಾಗಿ ನೋಡದೆ ಅವುಗಳನ್ನು ಹಿತಮಿತವಾಗಿ ಬಳಸುವುದು ಒಂದು ಸಮಾಜ ಸೇವೆಯೇ ಸರಿ. ಕುರಾನಿನ ಇನ್ನೊಂದು ಅಧ್ಯಾಯ ಅಲ್ ಅರಾಪ (೭.೮೫)ಈ ಭೂಮಿಯನ್ನು ವ್ಯವಸ್ಥಿತ ಸುಂದರವಾದ ಸ್ಥಿತಿಯಲ್ಲಿ ನಿಮಗಾಗಿ ನಿರ್ಮಿಸಲಾಗಿದೆ. ಅದನ್ನು ಕೆಡಿಸಬೇಡಿರಿ, ಮಲಿನಗೊಳಿಸಬೇಡಿರಿ' ಎಂಬ ಸಂದೇಶವನ್ನು ನೀಡುತ್ತ ಇನ್ನೊಂದು ಅಧ್ಯಾಯ ಅಂಕಬೂತ (೩೦:೪೧) ದಲ್ಲಿ ಮನುಷ್ಯನು ತನ್ನ ಲಾಭಕ್ಕಾಗಿ ಭೂಮಿಯನ್ನು ನಾಶ ಮಾಡಿ ದೂಷಿತವನ್ನಾಗಿ ಮಾಡಿದ್ದಾನೆ. ಆದುದರಿಂದ ಅವನು ತನ್ನ ಈ ಕುಕೃತ್ಯಗಳ ಫಲ ಉಣ್ಣಲೇಬೇಕು ಎಂಬ ಎಚ್ಚರಿಕೆ ನೀಡಿದೆ.
ನಿಸರ್ಗದ ಎಲ್ಲ ವಸ್ತುಗಳು ಮನುಷ್ಯನಿಗಾಗಿ ನಿರ್ಮಿತವಾಗಿರುವಾಗ ಅವುಗಳನ್ನು ನಾವು ಹಿತಮಿತವಾಗಿ ಉಪಯೋಗಿಸಬೇಕು. ಅವು ದೀರ್ಘಕಾಲ ಮಾನವ ಜನಾಂಗಕ್ಕಾಗಿ ಇರುವಂತೆ ನೋಡಿಕೊಳ್ಳಬೇಕು. ನಿಸರ್ಗದಲ್ಲಿ ಆಗುವ ಸಮತೋಲನವನ್ನು ಹಾಳು ಮಾಡಬಾರದು. ಮನುಷ್ಯನು ಸ್ವತಂತ್ರ. ಆದರೆ ಆತನ ಸ್ವಾತಂತ್ರ್ಯ ನಿಸರ್ಗವನ್ನು ವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳುವುದರಲ್ಲಿದೆ.