For the best experience, open
https://m.samyuktakarnataka.in
on your mobile browser.

ನಿಸರ್ಗ ರಕ್ಷಣೆ… ಒಂದು ಆರಾಧನೆ (ಇಬಾದತ್)

04:46 AM May 03, 2024 IST | Samyukta Karnataka
ನಿಸರ್ಗ ರಕ್ಷಣೆ… ಒಂದು ಆರಾಧನೆ  ಇಬಾದತ್

ಕುರಾನಿನ ಈ ಶ್ಲೋಕವನ್ನು ಸರಿಯಾಗಿ ತಿಳಿದು ಪಾಲಿಸಿದರೆ ಭೂಮಿಯ ಮೇಲೆ (ನೆಲದ ಮೇಲೆ) ಎಷ್ಟು ಎಚ್ಚರದಿಂದ ಕಾಲಿಡಬೇಕೆಂಬ ಪ್ರಜ್ಞೆ ಮೂಡುತ್ತದೆ. ಕುರಾನಿನ ಅಧ್ಯಾಯ ಇಸ್ರಾ (೧೭:೩೭) ಶ್ಲೋಕ ನೋಡಿ. ‘ದುರಹಂಕಾರದಿಂದ ನೆಲದ ಮೇಲೆ ನಡೆದಾಡಬೇಡಿ' ಎಂದು ಎಚ್ಚರಿಸಲಾಗಿದೆ. ನೆಲದ ಮೇಲೆ ನಡೆದಾಡುವುದಾಗಲಿ ಅಷ್ಟೇ ಅಲ್ಲ ಅದರ ಮೇಲಿರುವ ನೈಸರ್ಗಿಕ ಸಂಪತ್ತನ್ನು ನಾಶ ಮಾಡದಂತೆ, ಅದು ಹಾಳಾಗದಂತೆ ನೋಡಿಕೊಳ್ಳಬೇಕೆಂದು ಅಲ್ಲಾಹನು ಕುರಾನಿನ ವಿವಿಧ ಅಧ್ಯಾಯಗಳಲ್ಲಿ ಎಚ್ಚರಿಸಿದ್ದಾನೆ.
ಇತ್ತ ಪ್ರವಾದಿವರ್ಯ ಮೊಹಮ್ಮದ್ ಅವರು ಯಾರಾದರೂ ಒಂದು ಗಿಡ ನೆಟ್ಟು ಬೆಳೆಸಿದರೆ ಅದರ ಫಲವನ್ನು ಇತರರು ತಿನ್ನುತ್ತಿದ್ದರೆ, ಗಿಡ ನೆಟ್ಟಿದವನು ದಾನ ಮಾಡಿದಂತೆ, ದಾನ ಮಾಡಿದಷ್ಟು ಅವನಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಉಪದೇಶಿಸಿರುತ್ತಾರೆ. ಮರಗಳನ್ನು ಬೆಳೆಸಿ ಕಾಡುಗಳು, ಉದ್ಯಾನಗಳನ್ನು ನಿರ್ಮಿಸುವುದನ್ನು ಪ್ರವಾದಿವರ್ಯರು ಪ್ರೋತ್ಸಾಹಿಸುತ್ತಿದ್ದರು.
ಅಂತೆಯೇ ಗಿಡ ಮರಗಳಿಗೆ ವಿನಾ ಕಾರಣ ನಷ್ಟವನ್ನುಂಟು ಮಾಡುವುದನ್ನು ಇಸ್ಲಾಂ ನಿಷೇಧಿಸುತ್ತದೆ. ನೀವು ಅವುಗಳ ಫಲ-ಪುಷ್ಪಗಳನ್ನು ಉಪಯೋಗಿಸಬಹುದೆ ಹೊರತು ಅವುಗಳನ್ನು ನಾಶ ಮಾಡಬಾರದು. ಮಾಲಿನ್ಯಗಳು ಮಾನವ ನಿರ್ಮಿತವಾದವುಗಳು. ನಿಸರ್ಗದಲ್ಲಿ ಮಾಲಿನ್ಯ ಎಂಬುದೇ ಇಲ್ಲ. ಅದು ಮಾಲಿನ್ಯವನ್ನು ಸೃಷ್ಟಿಸುವುದೆ ಇಲ್ಲ.
ಮಾಲಿನ್ಯವೂ ಮನುಷ್ಯನ ದುರಾಸೆಯ ಫಲ.
ಕುರಾನಿನ ವಿವಿಧ ಅಧ್ಯಾಯಗಳ ೨೦೦ ಶ್ಲೋಕಗಳು ಪರಿಸರ ರಕ್ಷಣೆಗಾಗಿ ಮೀಸಲಿಡಲಾಗಿದೆ.
ದೇವರ ಭೂಮಿಯನ್ನು ರಕ್ಷಿಸುವ ಮಹತ್ತರ ಅಮೂಲ್ಯವಾದ ಹೊಣೆ ಮಾನವನದು ಎಂದು ಹೇಳಲಾಗಿದೆ.
ಎಲ್ಲ ಜೀವಿಗಳು (ಮನುಷ್ಯರಷ್ಟೇ ಅಲ್ಲ) ಎಲ್ಲರೂ ಪ್ರಕೃತಿಯ ಫಲ ಪಡೆಯಲು ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ. ನೀರು, ಬೆಂಕಿ, ಗಿಡ, ಸಸ್ಯ, ಬೆಳಕು ಇವುಗಳ ಉಪಯೋಗ ಹಾಗೂ ಅವುಗಳ ರಕ್ಷಣೆ ಎಲ್ಲ ಮಾನವರ (ಜೀವಿಗಳ) ಆದ್ಯ ಕರ್ತವ್ಯವಾಗಿದೆ.
ಕುರಾನಿನ ಅಲ್ ಮೋಮಿನ್ ಅಧ್ಯಾಯದಲ್ಲಿ (೪೦: ೬೪) ಅಲ್ಲಾಹನು ನಿಮ್ಮ ಪಾಲಿಗೆ ಭೂಮಿಯನ್ನು ವಾಸದ ಸ್ಥಾನವನ್ನಾಗಿ ಮಾಡಿ ಆಕಾಶವನ್ನು ಚಪ್ಪರವನ್ನಾಗಿ ಮಾಡಿದ್ದಾನೆ. ನಿಮಗೆ ರೂಪವನ್ನು ನೀಡಿದ್ದಾನೆ ಹಾಗೂ ಅದನ್ನು ಅಂದಗೊಳಿಸಿದ್ದಾನೆ. ನಿರ್ಮಲ ವಸ್ತುಗಳಿಂದ ನಿಮಗೆ ಆಹಾರ ಒದಗಿಸಿದ್ದಾನೆ… ಎಂದು ಹೇಳಲಾಗಿದೆ. ಇವುಗಳನ್ನು ನಾವೇ ನಾಶಪಡಿಸಿದರೆ ಹೇಗೆ?
ಜಲ ಸಂರಕ್ಷಣೆ ಮರ ಸಸ್ಯಗಳ ರಕ್ಷಣೆ ಮಾಡಿ. ಮರಗಳನ್ನು ಕಡಿಯದೆ ನದಿಗಳನ್ನು ಕಲುಷಿತಗೊಳಿಸದೆ ಕೃಷಿ ಮಾಡುತ್ತ ಸಸ್ಯ ಸಂಪತ್ತನ್ನು ಬೆಳೆಸಬೇಕು.
ಇಂತಹವನು ದೇವರಿಗೆ ಸಮೀಪವಾಗುತ್ತಾನೆ ಎಂದು ಕುರಾನ್ ಅಂಬಿಯ ಮುಂತಾದ ಅಧ್ಯಾಯಗಳಲ್ಲಿ ವಿವರಿಸಿದೆ.
ನಾವು ನಿಸರ್ಗದ ಫಲಾನುಭವಿಗಳಾಗಬೇಕಾದರೆ ಅದನ್ನು ಕಾಪಾಡಬೇಕು. ಕುರಾನಿನ ಇನ್ನೊಂದು ಅಧ್ಯಾಯ ಅಲ್ ಅರಫ್(೭:೩೧) `ಊಟ ಮಾಡಿರಿ, ಕುಡಿಯಿರಿ, ಆದರೆ ಮಿತಿಮಿರದಿರಿ' ಎಂದು ಅಲ್ಲಾಹನು ಎಚ್ಚರಿಸಿದ್ದಾನೆ. ನಿಸರ್ಗವು ನಮಗೆ ನೀಡಿರುವ ಫಲ ಉಣ್ಣಲು, ಫಲದಾಯಕವಾಗಲು ಅದರ ಜೊತೆಗೆ ನಮ್ಮ ಬಾಂಧವ್ಯ ಉತ್ತಮವಾಗಿರಬೇಕು. ಅದರ ಸಂರಕ್ಷಣೆ ಒಂದು ಆರಾಧನೆ (ಇಬಾದತ್) ಯಂತೆ ಇರಬೇಕು.