ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನೀಟ್ ಪೆ ಚರ್ಚಾ ಇಂದಿನ ತುರ್ತು ಅಗತ್ಯ

04:03 AM Jul 01, 2024 IST | Samyukta Karnataka

ಕೆಲವು ತಿಂಗಳಿಂದ ನಾನಾ ರಾಜ್ಯಗಳಲ್ಲಿ ರಾಜ್ಯ ಮಟ್ಟದ ಪರೀಕ್ಷೆಗಳಲ್ಲಿ ಕಂಡು ಬಂದ ಪ್ರಶ್ನೆ ಪತ್ರಿಕೆ ಸೋರುವಿಕೆಯ ಪ್ರಹಸನಗಳು ಇದೀಗ ರಾಷ್ಟ್ರಮಟ್ಟದಲ್ಲಿಯು ಕಾಣಸಿಗುತ್ತಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಹುದೆಂದು ಗ್ರಹಿಸಿ ನೀಟ್ PG (NEET - PG ) ಯುಜಿಸಿ - ನೆಟ್ (UGC - NET ) ಸಿಯಸ್ ಐಆರ್‌ಯುಜಿಸಿ - ನೆಟ್ (CSIR -UGC NET ) ಈ ಪರೀಕ್ಷೆಗಳನ್ನು ಮುಂದೂಡಿದೆ. ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುತ್ತಿದ್ದ ನಾನಾ ಬಗೆಯ ಪರೀಕ್ಷೆಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ರಶ್ನೆ ಪತ್ರಿಕೆಗಳ ಸೋರುವಿಕೆ ಹಾಗೂ ಅಕ್ರಮಗಳು ಯಾವುದೂ ಹೊಸದಲ್ಲ. ಒಂದು ವ್ಯವಸ್ಥೆಯಲ್ಲಿ ಎಷ್ಟೇ ಜಾಗ್ರತೆ ವಹಿಸಿದರೂ ಈ ರೀತಿಯ ಘಟನೆ ನಡೆದೇ ನಡೆಯುತ್ತದೆ. ಆದರೆ ಇಂತಹ ಘಟನೆಗಳು ಪದೇ ಪದೇ ಜರುಗಿದಾಗ ಶ್ರೀಸಾಮಾನ್ಯನ ಸಹನೆಯ ಕಟ್ಟೆ ಒಡೆಯುತ್ತದೆ.
ವೈದ್ಯಕೀಯ ಸೀಟುಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆ ಪ್ರತಿ ಬಾರಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಆದರೆ, ಈ ಬಾರಿ ನೀಟ್ ಪರೀಕ್ಷೆ ನಡೆದ ರೀತಿ ಮತ್ತು ನಂತರದ ಬೆಳವಣಿಗೆಗಳು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (ಓಂಖಿ) ವಿಶ್ವಾರ್ಹತೆಯನ್ನೇ ಪ್ರಶ್ನೆ ಮಾಡುವಂತಿದೆ. ಈಗಾಗಲೇ ಈ ವಿಷಯ ಸುಪ್ರೀಂ ಮೆಟ್ಟಿಲೇರಿರುವುದರಿಂದ ಈ ಗೊಂದಲಕ್ಕೊಂದು ತಾರ್ಕಿಕ ಅಂತ್ಯವಂತೂ ಶತಃಸಿದ್ಧ. ಆದರೆ, ವೈದ್ಯಕೀಯ ಸೀಟುಗಳ ಪ್ರವೇಶಾತಿ ಪ್ರಕ್ರಿಯೆ ಹಾಗೂ ನೀಟ್ ಪರೀಕ್ಷೆ ಏಕೆ ಇಷ್ಟೊಂದು ಕ್ಲಿಷ್ಟಕರ ಹಾಗೂ ಮಕ್ಕಳೇಕೆ ಪೈಪೋಟಿಗೆ ಬಿದ್ದು ಕೋಟಾ, ವಿಶಾಖಪಟ್ಟಣ, ಬೆಂಗಳೂರು, ಮುಂಬೈ ಪುಣೆ ಅಂತಹ ಮಹಾನಗರಗಳಿಗೆ ಕೋಚಿಂಗ್ ಕ್ಲಾಸ್ ಸೇರಲು ಮುಗಿಬೀಳುತ್ತಾರೆಂದು ತಿಳಿದುಕೊಳ್ಳಲು ವೈದ್ಯಕೀಯ ಸೀಟುಗಳ ಲಭ್ಯತೆ ಮತ್ತು ಹಂಚಿಕೆಯನ್ನು ಗಮನಿಸಬೇಕಾಗಿದೆ.
ಇಡೀ ದೇಶದಲ್ಲಿರುವ ವೈದ್ಯಕೀಯ ವಿದ್ಯಾ ಸಂಸ್ಥೆಗಳು ೭೦೪. ಈ ಸಂಸ್ಥೆಗಳಲ್ಲಿರುವ ಸೀಟುಗಳು ೧೦೯೧೭೦ ಅವುಗಳಲ್ಲಿ ಸೆಂಟ್ರಲ್ ಯೂನಿವರ್ಸಿಟಿಯ ೭ ಕಾಲೇಜುಗಳಲ್ಲಿರುವುದು ೧೧೮೦ ಸೀಟಗಳು, ೩೮೨ ಸರ್ಕಾರಿ ಕಾಲೇಜುಗಳಲ್ಲಿರುವುದು ೫೫೨೨೫ ಸೀಟುಗಳು, ಇನ್ನುಳಿದ ಸೀಟುಗಳಲ್ಲಿ ೧೦೨೫೦ ಸೀಟುಗಳಿರುವುದು ೫೧ ಡೀಮ್ಡ್ ಯೂನಿವರ್ಸಿಟಿ ಕಾಲೇಜುಗಳಲ್ಲಿ. ಇನ್ನುಳಿದ ೪೨೫೧೫ ಸೀಟುಗಳಿರುವುದು ೨೬೪ ಖಾಸಗಿ ಕಾಲೇಜುಗಳಲ್ಲಿ. ಅಂದರೆ ಹತ್ತಿರ ಹತ್ತಿರ ಶೇ. ೪೮ ಸೀಟುಗಳಿರುವುದು ಖಾಸಗಿ ಕೃಪಾ ಕಟಾಕ್ಷದಲ್ಲಿ. ಶಿಕ್ಷಣ ತಜ್ಞ ಮಹೇಶ್ವರ್ ಅವರು ಅಂದಾಜಿಸಿದಂತೆ ಐದು ವರುಷಗಳ ಸರಾಸರಿ ಶಿಕ್ಷಣ ಶುಲ್ಕ ಸೆಂಟ್ರಲ್ ಯೂನಿವರ್ಸಿಟಿ ಕಾಲೇಜುಗಳಲ್ಲಿ ಮೂರರಿಂದ ನಾಲ್ಕು ಲಕ್ಷಗಳಷ್ಟಿದೆ, ಅದೇ ರೀತಿ ಸರ್ಕಾರೀ ಕಾಲೇಜುಗಳಲ್ಲಿ ಆರರಿಂದ ಏಳು ಲಕ್ಷ, ಖಾಸಗಿ ಕಾಲೇಜುಗಳಲ್ಲಿ ಎಪ್ಪತ್ತರಿಂದ ಎಂಬತ್ತು ಲಕ್ಷ ಹಾಗೂ ಡೀಮ್ಡ್ ಯೂನಿವರ್ಸಿಟಿಗಳಲ್ಲಿ ಅಂದಾಜು ಒಂದು ಕೋಟಿ ಅಂದರೆ ಸರ್ಕಾರಿ ಕಾಲೇಜುಗಳ ಶುಲ್ಕಕ್ಕೂ ಖಾಸಗಿ ಕಾಲೇಜುಗಳಲ್ಲಿ ನಿಗದಿ ಪಡಿಸಿದ ಶುಲ್ಕಕ್ಕೂ ಆಕಾಶ ಪಾತಾಳದ ಅಂತರ. ಇದೆಲ್ಲವೂ ಅಧಿಕೃತವಾಗಿ ನಿಗದಿಪಡಿಸಿದ ಶುಲ್ಕದ ವಿವರವಷ್ಟೇ. ಇನ್ನು ಬೇರೆ ರೀತಿಯ ಶುಲ್ಕಗಳಿಗೇನೂ ಬರವಿಲ್ಲ. ಅದು ಬಿಲ್ಡಿಂಗ್ ಫಂಡ್ ಎಂದಾಗಿಯೋ ಅಥವಾ ಇನ್ನಾವುದೋ ರೀತಿಯಲ್ಲಿ ಪಡೆಯುವ ಫಂಡ್‌ಗಳ ಲೆಕ್ಕಾಚಾರ ಇರಬಹುದು ಅವೆಲ್ಲವೂ ನಿಮ್ಮ ಊಹೆಗೆ ಬಿಟ್ಟದ್ದು. ಹಾಗಾದರೆ ಸರಿ ಸುಮಾರು ಶೇ. ೪೮ ಸೀಟುಗಳು ಕೇವಲ ಉಳ್ಳವರಿಗಾಗಿ ಮಾತ್ರವೇ? ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಬರುವುದು ನೀಟ್ ಪರೀಕ್ಷೆಯ ಒಟ್ಟಾರೆ ಫಲಿತಾಂಶದಲ್ಲಿ ಅರ್ಹತೆ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಫಲಿತಾಂಶದ ನಂತರದ ಸೀಟ್ ಹಂಚಿಕೆಯ ಪ್ರಕ್ರಿಯೆ . ಹೀಗೆ ಒಟ್ಟಾರೆಯಾಗಿ ಪರೀಕ್ಷಾ ಪದ್ಧತಿ ಹಾಗು ರ‍್ಯಾಂಕ್‌ಗಳನ್ನೂ ಗಮನಿಸಬೇಕು.
ನೀಟ್ ಪರೀಕ್ಷೆ ನಡೆಯುವುದು ೭೨೦ ಅಂಕಗಳಿಗೆ, ಈ ಬಾರಿ ಪರೀಕ್ಷೆ ಬರೆದವರು ಸರಿಸುಮಾರು ೨೩ ಲಕ್ಷ ವಿದ್ಯಾರ್ಥಿಗಳು ವೈದ್ಯಕೀಯ ಕೋರ್ಸ್ಗೆ ಅರ್ಹತೆ ಪಡೆದವರು ಅಂದಾಜು ೧೩ ಲಕ್ಷ ವಿದ್ಯಾರ್ಥಿಗಳು ಇರುವ ಸೀಟ್‌ಗಳು ೧೦೦೦೦೦ ಚಿಲ್ಲರೆ. ಹಾಗಾದರೆ ಆರೋ ಏಳೋ ಲಕ್ಷಕ್ಕೆ ಕಟ್ ಆಫ್ ಬರುವಂತೆ ನಿಲ್ಲಿಸಬಹುದಲ್ಲವೇ? ಆದರೆ ವ್ಯವಸ್ಥೆಯಲ್ಲಿ ಆ ಅವಕಾಶವಿಲ್ಲ ಉದಾಹರಣೆಗೆ ಇಬ್ಬರು ವಿದ್ಯಾರ್ಥಿಗಳಿದ್ದಾರೆಂದು ಇಟ್ಟುಕೊಳ್ಳಿ ಅದು ಯಾವುದೇ ವಿಭಾಗದಲ್ಲಿರಲಿ ಜನರಲ್, ಒಬಿಸಿ ಹೀಗೆ ಯಾವುದೇ ವಿಭಾಗದಲ್ಲಿರಲಿ ಒಬ್ಬ ವಿದ್ಯಾರ್ಥಿ ನಾಲ್ಕು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದಿದ್ದಾನೆ. ಇನ್ನೊಬ್ಬ ಒಂಬತ್ತು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದಿದ್ದಾನೆ ಎಂದಿಟ್ಟುಕೊಳ್ಳಿ. ನಾಲ್ಕು ಲಕ್ಷದಷ್ಟು ರ‍್ಯಾಂಕ್ ಪಡೆದ ವಿದ್ಯಾರ್ಥಿಗೆ ಸರ್ಕಾರಿ ಕಾಲೇಜಂತೂ ಮರೀಚಿಕೆಯೇ ಸರಿ. ಆದ್ದರಿಂದ ಲಕ್ಷಗಟ್ಟಲೆ ಕೋಟಿಗಟ್ಟಲೆ ಹಣ ಹೊಂದಿಸಲು ಸಾಧ್ಯವಾಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಮನಗೊಂಡು ಡಾಕ್ಟರ್ ಆಗುವ ಕನಸನ್ನು ಚಿವುಟಿ ಮುಂದೆ ಸಾಗಬೇಕಾಗುತ್ತದೆ, ಆದರೆ ಅದೇ ಒಂಬತ್ತು ಲಕ್ಷ ಚಿಲ್ಲರೆಯಷ್ಟು ರ‍್ಯಾಂಕ್ ಪಡೆದ ವಿದ್ಯಾರ್ಥಿ ತನ್ನಲ್ಲಿರುವ ಸಂಪತ್ತಿನ ಅನುಕೂಲದಿಂದ ಪ್ರವೇಶ ಗಿಟ್ಟಿಸಿಕೊಳ್ಳಬಹುದು. ಏಕೆಂದರೆ ಒಟ್ಟಾರೆ ವ್ಯವಸ್ಥೆಯಲ್ಲಿ ಅವಕಾಶವಿದೆ. ಅಂದರೆ ಒಬ್ಬ ಕಡು ಬಡವ ಅಥವಾ ಮಧ್ಯಮ ವರ್ಗದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿ ಸೀಟ್ ಗಿಟ್ಟಿಸಿಕೊಳ್ಳಬೇಕಾದರೆ ಟಾಪ್ ೫೦೦೦೦ ರ‍್ಯಾಂಕ್‌ನಲ್ಲಿಯೇ ಬರಬೇಕು. ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕೋಟಾ, ಪುಣೆ, ಡೆಲ್ಲಿ ಕೋಲ್ಕತ್ತಾ ನಗರಗಳ ಕೋಚಿಂಗ್ ಕ್ಲಾಸುಗಳಿಗೆ ತಡಕಾಡುತ್ತಾರೆ. ಒಮ್ಮೆ ಆಗದಿದ್ದರೆ ಮತ್ತೊಮ್ಮೆ, ಮತ್ತೊಮ್ಮೆ ಆಗದಿದ್ದರೆ ಪದೇ ಪದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಒಂದೆಡೆ ವ್ಯವಸ್ಥೆಯೇ ಸಿರಿವಂತರ ಪರವಿದ್ದಾಗ ಶ್ರೀಸಾಮಾನ್ಯ ನಂಬಿ ಬರುವುದು ಸ್ಪರ್ಧಾತ್ಮಕ ಪರೀಕ್ಷೆಗಳತ್ತ. ಏಕೆಂದರೆ ವಿದ್ಯೆ ಯಾರ ಸೊತ್ತ್ತೂ ಅಲ್ಲ. ಇಲ್ಲಿ ಮೋಸವಾಗುವುದಿಲ್ಲ ಎಂದು ಆದರೆ ಇಂತಹ ಪರೀಕ್ಷೆಗಳಲ್ಲೂ ಅಕ್ರಮದ ವಾಸನೆ, ಪೇಪರ್ ಲೀಕ್‌ನಂತಹ ಪ್ರಸಂಗಗಳು ಬಂದಾಗ ಶ್ರೀಸಾಮಾನ್ಯ ಕೈ ಚೆಲ್ಲಿ ಕೂಡುತ್ತಾನೆ. ವ್ಯವಸ್ಥೆ ಮತ್ತೊಮ್ಮೆ ಸಿರಿವಂತರ ಪರವಿರುವುದನ್ನು ಕಂಡು ತನ್ನನ್ನು ತಾನೇ ದೂಷಿಸಿಕೊಳ್ಳುತ್ತಾನೆ. ಏಕೆಂದರೆ ಈ ಅಕ್ರಮ ಪೇಪರ್ ಲೀಕ್‌ನಂತಹ ಕೆಲಸಕ್ಕೆ ಕೈ ಹಾಕಲು ಹಣ ಬೇಕು. ಹೊಟ್ಟೆ ಬಟ್ಟೆಯನ್ನು ಕಟ್ಟಿ ಮಕ್ಕಳ ಆಸೆಗೆ ನೀರೆರೆದ ಪೋಷಕರು ಪೇಪರ್ ಲೀಕ್‌ನಂತಹ ಕೃತ್ಯಕ್ಕೆ ಕನಸಲ್ಲೂ ಯೋಚನೆ ಮಾಡಲಾರರು. ಒಟ್ಟಿನಲ್ಲಿ ಒಬ್ಬ ಅರ್ಹ ವಿದ್ಯಾರ್ಥಿಗೆ ಇದ್ದ ಒಂದೇ ಒಂದು ಆಸರೆಯ ಊರುಗೋಲು `ಸ್ಪರ್ಧಾತ್ಮಕ ಪರೀಕ್ಷೆ' ಆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅಕ್ರಮಗಳೇನಾದರೂ ನಡೆದಿದ್ದೇ ಆದರೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ವೈದ್ಯಕೀಯ ವೃತ್ತಿಗೆ ಪದಾರ್ಪಣೆ ಮಾಡುವ ಇದ್ದ ಒಂದು ಅವಕಾಶವನ್ನು ಪರೀಕ್ಷಾ ಅಕ್ರಮಗಳು ಕಸಿಯುತ್ತಿವೆ ಎಂದಾಯಿತು. ಇದು ಅಷ್ಟಕ್ಕೇ ನಿಲ್ಲುವುದಿಲ್ಲ. ಇಲ್ಲಿ ಅವಕಾಶ ಸಿಗಲಿಲ್ಲವಲ್ಲ ಹೊರ ದೇಶದಲ್ಲಿ ಹೋಗಿ ಅಲ್ಲಿ ವೈದ್ಯನಾಗುವ ಆಸೆಯಿಂದ ಹಲವಾರು ವಿದ್ಯಾರ್ಥಿಗಳು ಪರದೇಶಕ್ಕೆ ಹೋಗಿ ವೈದ್ಯಕೀಯ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ ಅಂತಹ ದೇಶಗಳಲ್ಲಿ ಉಕ್ರೇನ್, ರಷ್ಯಾ, ಫಿಲಿಪ್ಪೀನ್ಸ್, ಚೀನಾ, ಜಾರ್ಜಿಯಾ ಹಾಗೂ ಬಾಂಗ್ಲಾದೇಶ ಅಂತಹ ದೇಶಗಳು ಮುಂಚೂಣಿಯಲ್ಲಿವೆ. ಈ ದೇಶಗಳಲ್ಲಿ ಶುಲ್ಕಗಳು ಕಡಿಮೆಯೂ ಹೌದು, ಒಂದು ಅಂಕಿ ಅಂಶದ ಪ್ರಕಾರ ಭಾರತದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವಷ್ಟೇ ವಿದ್ಯಾರ್ಥಿಗಳು ಭಾರತದ ಹೊರಗೆ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ. ಆದರೆ, ಅಲ್ಲಿಯ ವಿದ್ಯಾಭ್ಯಾಸದ ಗುಣಮಟ್ಟ ನೋಡಿದವರಾರು? ಅಷ್ಟಲ್ಲದೇ ಭಾರತದಲ್ಲಿ ಮೆಡಿಕಲ್ ಕಾಲೇಜುಗಳು ಒಂದಲ್ಲ ಒಂದು ಆಸ್ಪತ್ರೆಗಳಿಗೆ ಸಂಯೋಜಿತಗೊಂಡಿರುತ್ತವೆ. ಅಂದರೆ ಕ್ಲಾಸ್ ರೂಮ್ ವಿದ್ಯಾಭ್ಯಾಸದೊಂದಿಗೆ ಪ್ರಾಕ್ಟಿಕಲ್ ಟ್ರೇನಿಂಗ್ ಹಾಗೂ ಅಭ್ಯಾಸಕ್ಕೂ ಇಲ್ಲಿ ಅಷ್ಟೇ ಮಹತ್ವವಿದೆ ಹಾಗೂ ಇದು ಪಠ್ಯಕ್ರಮದ ಭಾಗವೇ ಆಗಿ ಹೋಗಿದೆ. ಆದರೆ ಹೊರದೇಶಗಳಲ್ಲಿ ಅದರಲ್ಲೂ ಈ ಮೇಲೆ ಸೂಚಿಸಲ್ಪಟ್ಟ ದೇಶಗಳಲ್ಲಂತೂ ಅಷ್ಟಾಗಿ ಆಸ್ಪತ್ರೆಗಳಿಲ್ಲ. ಆದ್ದರಿಂದ ಅಲ್ಲಿ ಕಲಿತವರು ಕ್ಲಾಸ್ ರೂಮ್ ಟ್ರೇನಿಂಗ್ ಮಟ್ಟಕ್ಕೆ ಸೀಮಿತರಾಗಿರುವ ಸಾಧ್ಯತೆಗಳು ಬಹಳಷ್ಟಿವೆ, ಆದ್ದರಿಂದ ಹಾಗೆ ಹೊರ ದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದವರಿಗೆ ಭಾರತದಲ್ಲಿ ಮನ್ನಣೆ ಸಿಗಬೇಕೆಂದರೆ ಭಾರತದ ಎಫ್‌ಎಂಜಿಇ ಈಒಉಇ (ಫಾರಿನ್ ಮೆಡಿಕಲ್ ಗ್ರ‍್ಯಾಜುಯೆಟ್ ಎಕ್ಸಾಮಿನೇಷನ್) ಪರೀಕ್ಷೆಯನ್ನು ಬರೆದು ಪಾಸಾಗಬೇಕು. ಆದರೆ ಈ ಈಒಉಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ಸಂಖ್ಯೆ ಕೇವಲ ಶೇಕಡಾ ೧೫ ರಿಂದ ೨೦ರಷ್ಟು ಮಾತ್ರ. ಅಂದರೆ ಹೊರ ದೇಶಕ್ಕೆ ಹೋಗಿ ವೈದ್ಯಕೀಯ ವಿದ್ಯಾಭ್ಯಾಸ ಹೊಂದಿದರು ಈಒಉಇ ಪರೀಕ್ಷೆಯಲ್ಲಿ ತೇರ್ಗಡೆ ಆಗದ ಹೊರತು ಭಾರತದಲ್ಲಿ ಮೆಡಿಕಲ್ ಪ್ರಾö್ಯಕ್ಟೀಸ್ ಮಾಡುವಂತಿಲ್ಲ. ಅಲ್ಲದೆ ಒಟ್ಟಾರೆಯಾಗಿ ಐದು ವರುಷಗಳ ಕಾಲ ಹೊರ ದೇಶದಲ್ಲಿದ್ದಷ್ಟು ಭಾರತಕ್ಕೆ ವಿದೇಶಿ ವಿನಿಮಯದ ಹೊಡೆತ. ಹೀಗೆ ಒಂದಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಪ್ರತಿಯೊಬ್ಬರೂ ಸಿಲುಕಿದಂತಾಗುತ್ತದೆ. ಆದ್ದರಿಂದ ಈ ಸಮಸ್ಯೆಯ ಮೂಲಕ್ಕೆ ಹೋಗಿಯೇ ಬಗೆಹರಿಸಬೇಕು.
ಈ ಬಗ್ಗೆ ಸದನದ ಹೊರಗೂ ಒಳಗೂ ಚರ್ಚೆಯಂತೂ ಆಗಲೇ ಬೇಕು. ಮೋದಿಜಿ ಪರೀಕ್ಷಾ ಪೇ ಚರ್ಚಾಗೆ ಕೊಟ್ಟಷ್ಟೇ ಮಹತ್ವ ನೀಟ್ ಫೆ ಚರ್ಚಾಗೂ ಕೊಡಲೇಬೇಕು, ಇಲ್ಲವಾದಲ್ಲಿ ಇದು ನಮ್ಮ ಹಣೆಬರಹ. ಉಳ್ಳವರು ಮೆಡಿಕಲ್ ಮಾಡುವರು ನಾನೇನು ಮಾಡಲಿ ಅವರೇ ಕಟ್ಟುವ ಐಷಾರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಅಂಗಲಾಚುವೆನು. ನಾನೊಬ್ಬ ಬಡವ ಹಲುಬುವುದೇ ನನ್ನ ಭಾಗ್ಯ ಎಂದು ಯುವ ಸಮೂಹ ಕೈ ಕಟ್ಟಿ ಕುಳಿತೀತು, ಹಾಗಾಗಬಾರದು ಭರವಸೆ ಹಾಗೂ ಗುರಿಯಿಲ್ಲದ ಯುವ ಸಮೂಹ ದೇಶಕ್ಕೆ ಮಾರಕ.

Next Article