ನೀನಾರೆಂದು ನೀನೇ ಸಾಬೀತುಪಡಿಸು
ಅದೊಂದು ಸುಖಿ ಪರಿವಾರ. ಇಬ್ಬರು ಅಣ್ಣ ತಮ್ಮಂದಿರು ಗಿರೀಶ ಮತ್ತು ರವೀಂದ್ರ. ಕಾಲೇಜ್ ಮೆಟ್ಟಲು ಹತ್ತದೆ, ತಮ್ಮ ಹೆಸರಿನಲ್ಲಿ ಇರುವ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆದು, ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಿದ್ದರು. ಪ್ರತಿವರ್ಷ ಹದಿನೈದು ಲಕ್ಷ ರೂಪಾಯಿ ನಿವ್ವಳ ಲಾಭ ಬರುತ್ತಿತ್ತು. ತಂದೆ, ತಾಯಿ ಇತ್ತೀಚೆಗೆ ಮೃತರಾಗಿದ್ದರು. ಸಹೋದರರಿಬ್ಬರಿಗೆ ಲಗ್ನವಾಗಿದ್ದು ಎರಡೆರಡು ಮಕ್ಕಳಾಗಿವೆ. ಇಬ್ಬರು ಸಹೋದರಿಯರು ಸುಮಾ, ದೀಪಾ (ಎಲ್ಲರ ಹೆಸರು ಬದಲಿಸಿದೆ) ಲಗ್ನವಾಗಿ ತಮ್ಮ ಗಂಡನ ಮನೆಯಲ್ಲಿ ನೆಮ್ಮದಿಯಾಗಿದ್ದರು. ತೋಟದಲ್ಲಿ ಆಧುನಿಕ ವಾಸ್ತು ಶೈಲಿಯಂತೆ ಮನೆ ಕಟ್ಟಿಕೊಂಡು, ಮೈದನಿಯುವ ಹಾಗೆ ಕೆಲಸ ಮಾಡಿ, ಕಣ್ಣು ತುಂಬ ನಿದ್ದೆ ಮಾಡಿ ಸುಖರೂಪವಾಗಿ ಬದುಕು ನಡೆಸಿದ್ದಾರೆ.
ಹೀಗಿರುವಾಗ, ಕೋರ್ಟ್ ಬೇಲಿಫ ಬಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಅಣ್ಣ ತಮ್ಮಂದಿರು, ಸಹೋದರಿಯರಿಗೆ ತಿಳಿಸಿ, ಕೋರ್ಟ್ ಸಮನ್ಸ್, ನೋಟಿಸ್ ನೀಡಿ ಸಹಿ ಪಡೆದು ಹೋದನು. ಎಂದೂ ಕೋರ್ಟ್ ಮೆಟ್ಟಲು ಹತ್ತದವರಿಗೆ ಬರಸಿಡಿಲು ಬಡಿದ ಹಾಗಾಯಿತು.
ನಮ್ಮ ಹಳೆಯ ಕಕ್ಷಿದಾರನ ಜೊತೆ ಮನೆ ಕಚೇರಿಗೆ ಬಂದರು. ದಿಗಿಲುಗೊಂಡು ದಿಕ್ಕು ತೋಚದಂತೆ ಕುಳಿತವರಿಗೆ ಮೊದಲು ಸಮಾಧಾನ ನುಡಿ ಹೇಳಿ, ಏನೂ ಭಯಪಡಬೇಡಿರಿ ಎಲ್ಲದಕ್ಕೂ ದಾರಿ ಇದೆ ಎಂದು ಭರವಸೆ ನೀಡಿದೆ. ಕೋರ್ಟ್ನಿಂದ ಬಂದ ಕಾಗದಪತ್ರಗಳನ್ನು ಪರಿಶೀಲಿಸಿದೆ. ಈ ದಾವೆ ಮಾಡಿದ ಅಕ್ಕ ತಂಗಿಯರು ನಿಮಗೇನು ಸಂಬಂಧ ಅನ್ನುವ ಪ್ರಶ್ನೆಗೆ, ನಾವು ಅವರನ್ನು ನೋಡಿಯೇ ಇಲ್ಲ ಯಾರು ಗೊತ್ತಿಲ್ಲ ಅಂತ ಇಬ್ಬರೂ ಒಟ್ಟಿಗೆ ಉತ್ತರಿಸಿದರು. ದಾವೆಯನ್ನು ಸುಮಾ, ದೀಪಾ ಅನ್ನುವ ವಾದಿಯರು/ಸಹೋದರಿಯರು, ಪ್ರತಿವಾದಿಯರು ಗಿರೀಶ, ರವೀಂದ್ರ, ಸುಮಾ, ದೀಪಾ ಮೇಲೆ ಹತ್ತು ಎಕರೆ ಜಮೀನು, ತೋಟದ ಮನೆಗಳಲ್ಲಿ ತಮಗೆ ಜಂಟಿಯಾಗಿ ಅರ್ಧ ಪಾಲು ಇದ್ದು, ಹಿಸ್ಸೆ ವಿಭಜಿಸಿಕೊಡುವಂತೆ ನ್ಯಾಯಾಲಯದಲ್ಲಿ ಹಿಸ್ಸೆ ವಿಭಜಿಸಿ ಪ್ರತ್ಯೇಕ ಸ್ವಾಧೀನ ಕೊಡಿಸುವಂತೆ ದಾವೆ ಮಾಡಿದ್ದರು. ವಿವರಿಸಿ ಹೇಳಿದೆ.ವಾದಿಯರ ಕೇಸಿನಂತೆ, ಚನ್ನಪ್ಪ ಮನೆತನ ಮೂಲ ಪುರುಷ. ಇಂದಿರಾ ಅವನ ಹೆಂಡತಿ. ಇವರಿಗೆ ಶಿವರುದ್ರಪ್ಪ, ಶಂಕ್ರೆಪ್ಪ ಇಬ್ಬರು ಮಕ್ಕಳು. ದಾವೆ ಆಸ್ತಿಗಳು ಚನ್ನಪ್ಪನ ಪಿತ್ರಾರ್ಜಿತ ಸ್ವತ್ತುಗಳು. ಚನ್ನಪ್ಪ ಮೃತನಾದ ನಂತರ ಪ್ರತಿವಾದಿ/ಗಿರೀಶ, ರವೀಂದ್ರ ತಮ್ಮ ಅಜ್ಜ ಚನ್ನಪ್ಪ ತಮ್ಮ ಹೆಸರಿಗೆ ಮೃತ್ಯು ಪತ್ರ ಬರೆದುಕೊಟ್ಟಿರುವುದಾಗಿ ಸುಳ್ಳು ಮೃತ್ಯು ಪತ್ರ ಸೃಷ್ಟಿಸಿಕೊಂಡು ಜಮೀನು ಮತ್ತು ಮನೆ ದಾಖಲಿಸಿಕೊಂಡಿರುವುದಾಗಿ ಆರೋಪಿಸಿ, ಹೆಂಡತಿ ಇಂದಿರಾ ಮೃತಳಾದಳು ನಂತರ ಚನ್ನಪ್ಪ ಮೃತನಾದ. ಅವನಿಗೆ ಶಿವರುದ್ರಪ್ಪ, ಶಂಕ್ರೆಪ್ಪ ಮಕ್ಕಳು ವಾರಸುದಾರರಾಗಿರುತ್ತಾರೆ. ಶಂಕ್ರೆಪ್ಪ ತನ್ನ ಇಬ್ಬರು ಹೆಣ್ಣು ಮಕ್ಕಳು ವಾದಿಯರನ್ನು ಬಿಟ್ಟು ಮೃತನಾಗಿದ್ದಾನೆ. ತಮ್ಮ ತಂದೆಯ ಅರ್ಧ ಹಿಸ್ಸೆ ತಮಗೆ ಸಲ್ಲಬೇಕು ಅನ್ನುವುದು ವಾದಿಯರ ನಿಲುವು.
ಇಷ್ಟು ಪ್ರಕರಣದ ಸಾರಾಂಶವನ್ನು ವಿವರಿಸಿ ಹೇಳಿ, ಅವರ ನಿಲುವು ಏನೆಂದು ನಿರೀಕ್ಷಿಸಿ ಅವರನ್ನು ದಿಟ್ಟಿಸಿದೆ. ಇಬ್ಬರು ಸಹೋದರರು ಒಬ್ಬರಿಗೊಬ್ಬರು ನೋಡಿಕೊಂಡು, ಹಿರಿಯನಾದ ಗಿರೀಶ ವಿವರ ನೀಡಿದ.
ಮನೆತನ ಮೂಲ ಪುರುಷ ಚನ್ನಪ್ಪ. ಅವನಿಗೆ ಒಬ್ಬನೇ ಗಂಡು ಮಗ ಶಿವರುದ್ರಪ್ಪ. ಚನ್ನಪ್ಪನಿಗೆ ಸ್ವಯಾರ್ಜಿತ ಹೊಲ ಮನೆ ಸ್ವತ್ತುಗಳಿದ್ದವು. ಶಿವರುದ್ರಪ್ಪನಿಗೆ ಗಿರೀಶ, ರವೀಂದ್ರ ಇಬ್ಬರು ಗಂಡು ಮಕ್ಕಳು. ಶಿವರುದ್ರಪ್ಪ ತಂದೆಗೆ ತಕ್ಕ ಮಗನಾಗಿರಲಿಲ್ಲ. ನೂರೆಂಟು ಚಟಗಳ ದಾಸನಾಗಿದ್ದ. ಚನ್ನಪ್ಪನಿಗೆ ತನ್ನ ಮರಣ ನಂತರ ಆಸ್ತಿಯನ್ನು ಕಳೆಯುತ್ತಾನೆ ಎಂಬ ಭಯ ಕಾಡುತ್ತಿತ್ತು. ಮೊಮ್ಮಕ್ಕಳು ಮೈನರ್ ಇದ್ದರು. ಚನ್ನಪ್ಪ ತನ್ನ ಮರಣದ ನಂತರ ತನ್ನ ಇಬ್ಬರು ಮೊಮ್ಮಕ್ಕಳಿಗೆ ಸಲ್ಲಬೇಕು ತನ್ನ ಕೊನೆಯ ಇಚ್ಛೆ ಹೊಂದಿದ್ದ. ೧೯೭೭ರಲ್ಲಿ ನೋಂದಾಯಿತ ಮೃತ್ಯು ಪತ್ರವನ್ನು ಅಪ್ರಾಪ್ತ ಗಿರೀಶ, ರವೀಂದ್ರ ಇವರ ಹೆಸರಿಗೆ ಅವರ ತಾಯಿ ಇಂದಿರಾ ಮೈನರ್ ಗಾರ್ಡಿಯನ್ ಎಂದು ಬರೆದಿಟ್ಟನು. ೧೯೮೦ರಲ್ಲಿ ಚನ್ನಪ್ಪ ತನ್ನ ಕೊನೆಯ ವಿಲ್ ಬರೆದಿಟ್ಟು ಮರಣ ಹೊಂದಿದ. ದಾವೆ ಆಸ್ತಿಯ ದಾಖಲೆಗಳಲ್ಲಿ ಚನ್ನಪ್ಪನ ಕೊನೆಯ ಇಚ್ಛೆಯಂತೆ ಮೊಮ್ಮಕ್ಕಳ ಹೆಸರು ತಾಯಿ ಇಂದಿರಾ ಅಜ್ಞಾನ ಪಾಲನ ಕರ್ತೆ ಎಂದು ದಾಖಲಾದವು. ಅಪ್ರಾಪ್ತ ಸಹೋದರರು ಸುಜ್ಞಾನಿಗಳಾದರು. ಮೈನರ್ ಗಾರ್ಡಿಯನ್ ಇಂದಿರಾ ಹೆಸರು ದಾವೆ ಆಸ್ತಿ ದಾಖಲೆಯಲ್ಲಿ ಕಡಿಮೆ ಆಯಿತು. ನಂತರ ಗಿರೀಶ್, ರವೀಂದ್ರರ ತಂದೆ ತಾಯಿ ಮೃತರಾದರು. ಸ ಹೋದರರು ಹೆಗಲಿಗೆ ಹೆಗಲು ಕೊಟ್ಟು, ಅವಿಶ್ರಾಂತ ದುಡಿದು ಭೂಮಿಯನ್ನು ನೀರಾವರಿ ಮಾಡಿ ಫಲವತ್ತಾಗಿ ಮಾಡಿ, ಆದರ್ಶ ರೈತರೆಂದು ಹೆಸರು ಗಳಿಸಿದ್ದಾರೆ. ಇಷ್ಟು ಮಾಹಿತಿ ನೀಡಿ ಅಭಿಪ್ರಾಯಕ್ಕೆ ನನ್ನನ್ನು ನೋಡಿದರು. ಒಳ್ಳೆಯ ಕೇಸು ನಮ್ಮ ಪರ ಇದೆ ಎಂದು ಹೇಳಿದೆ.
ನಿಗದಿತ ದಿನಾಂಕದಂದು, ಕೋರ್ಟಿಗೆ ಪ್ರತಿವಾದಿ ಸಹೋದರ, ಸಹೋದರರನ್ನು ಹಾಜರುಪಡಿಸಿ ಅವರ ಪರವಾಗಿ ವಕಾಲತ್ ಪತ್ರ ಸಲ್ಲಿಸಿದೆ. ವಾದಿಯು ಸಲ್ಲಿಸಿದ ವಾದ ಪತ್ರ/ಪ್ಲೇಯಿಂಟ್ಕ್ಕೆ ಪ್ರತಿಯಾಗಿ ಕೈಫಿಯತ್/ರಿಟನ್ ಸ್ಟೇಟ್ಮೆಂಟ್ ದಾಖಲಿಸಿ, ವಾದಿಯರು ಪ್ರತಿವಾದಿ ಮನೆತನಕ್ಕೆ ಯಾವುದೇ ಸಂಬಂಧ ಇಲ್ಲ. ಮೂಲ ಪುರುಷನಿಗೆ ಒಬ್ಬನೇ ಮಗ ಶಿವರುದ್ರಪ್ಪ, ಅವನಿಗೆ ಪ್ರತಿವಾದಿಗಳು ಮಕ್ಕಳು ಇರುತ್ತಾರೆ. ಚನ್ನಪ್ಪ ತನ್ನ ಗಂಡು ಮೊಮ್ಮಕ್ಕಳಿಗೆ ನೋಂದಾಯಿತ ವಿಲ್ ಬರೆದು ಮೃತನಾಗಿದ್ದಾನೆ. ವಾದಿಯರ ತಂದೆ ಶಿವಶಂಕ್ರೆಪ್ಪ ಚನ್ನಪ್ಪನ ಮಗನಲ್ಲ. ದಾವೆ ಕಾಲಮಿತಿಯಲ್ಲಿ ಸಲ್ಲಿಸಿಲ್ಲ. ಹೀಗೆ ಪ್ರತಿಪಾದಿಸಿದೆ.
ವಾದಿಯರು ಜಂಟಿ ಕುಟುಂಬದ ಸದಸ್ಯರೆ? ದಾವೆ ಆಸ್ತಿಗಳು ಪಿತ್ರಾರ್ಜಿತ ಸ್ವತ್ತುಗಳೆ? ವಾದಿಯರ ತಂದೆ ಶಂಕ್ರೆಪ್ಪ ಚನ್ನಪ್ಪನ ಮಗನು ಅನ್ನುವದನ್ನು ರುಜುವಾತುಪಡಿಸುವರೆ?. ಪ್ರತಿವಾದಿಯರು, ಮೂಲಪುರುಷ ಚನ್ನಪ್ಪ ತನ್ನ ಗಂಡು ಮೊಮ್ಮಕ್ಕಳಿಗೆ ಮೃತ್ಯು ಪತ್ರ ಬರೆದು ಕೊಟ್ಟಿದ್ದಾನೆಯೇ? ಅನ್ನುವದನ್ನು ರುಜುವಾತುಪಡಿಸುವರೆ?. ಹೀಗೆ ನ್ಯಾಯಾಲಯವು ವಾದಿ ಮತ್ತು ಪ್ರತಿವಾದಿಯರು ರುಜುವಾತು ಪಡಿಸಬೇಕಾದ ವಿವಾದ ಅಂಶಗಳನ್ನು ರಚಿಸಿತು. ಸಿವಿಲ್ ವ್ಯಾಜ್ಯದಲ್ಲಿ ಈ ಅಂಶಗಳನ್ನು ಉಭಯ ಪಕ್ಷದವರು ರುಜುವಾತು ಪಡಿಸಬೇಕಾಗುವುದು.
ವಾದಿಯರು ತಮ್ಮ ಹಾಗೂ ತಮ್ಮ ಪರ ಒಬ್ಬ ಸಾಕ್ಷಿದಾರರ ಮುಖ್ಯ ವಿಚಾರಣೆ ಪ್ರಮಾಣ ಪತ್ರ ಹಾಜರುಪಡಿಸಿದರು. ವಾದಿಯರು ತಮ್ಮ ತಂದೆ ಶಂಕ್ರೆಪ್ಪ ಅನ್ನುವನ ಮರಣ ಪ್ರಮಾಣ ಪತ್ರ ಸಲ್ಲಿಸಿದರು. ಕ್ರಾಸ್ ಎಕ್ಸಾಮಿನೇಷನ್ನಲ್ಲಿ, ಆ ಪತ್ರದಲ್ಲಿ ಶಂಕರಪ್ಪ ಎಂದು ಹೆಸರು ಇರುವುದನ್ನು ತೋರಿಸಿದಾಗ ಒಪ್ಪಿಕೊಂಡರು. ಸಾಕ್ಷಿದಾರ ಮೃತ ಚನ್ನಪ್ಪ, ಶಂಕ್ರೆಪ್ಪ ಇವರನ್ನು ನೋಡಿಲ್ಲ ಅನ್ನುವದನ್ನು ಒಪ್ಪಿಕೊಂಡನು. ಪ್ರತಿವಾದಿಯರು, ನೋಂದಾಯಿತ ಮೃತ್ಯು ಪತ್ರ ಬರೆದ ಬಾಂಡ್ ರೈಟರ್, ಸಾಕ್ಷಿದಾರರನ್ನು ಸಾಕ್ಷೀಕರಿಸಿದರು.ಅಂತಿಮ ಹಂತ ಆರ್ಗುಮೆಂಟ್: ವಾದಿ ಪರ ವಕೀಲರು ವಾದಿಸುತ್ತ. ಮರಣ ಪ್ರಮಾಣ ಪತ್ರದಲ್ಲಿ ವಾದಿಯರ ತಂದೆ ಚನ್ನಪ್ಪ ಎಂದು ನಮೂದು ಇದೆ. ಪ್ರತಿ ವಾದಿಯರ ಬರ್ತ ಸರ್ಟಿಫಿಕೇಟ್ದಲ್ಲಿ ತಂದೆ ಹೆಸರು ಶಂಕ್ರೆಪ್ಪ ಇದೆ. ವಾದಿಯರು ಪ್ರತಿವಾದಿ ಜಂಟಿ ಕುಟುಂಬದ ಸದಸ್ಯರು. ದಾವೆ ಆಸ್ತಿ ಪಿತ್ರಾರ್ಜಿತ ಆಸ್ತಿ ಚನ್ನಪ್ಪನಿಗೆ ಮೃತ್ಯು ಪತ್ರ ಬರೆಯುವ ಹಕ್ಕಿಲ್ಲ ಎಂದು ವಾದಿಸಿದರು. ನಾನು ಪ್ರತಿವಾದಿ ಪರ ವಾದಿಸುತ್ತ, ಡೆತ್ ಸರ್ಟಿಫಿಕೇಟ್ದಲ್ಲಿ ಶಂಕರಪ್ಪ ಎಂದು ಹೆಸರಿದ್ದು ಅದು ವಾದಿಯರ ತಂದೆ ಶಂಕ್ರೆಪ್ಪನದು ಅಲ್ಲ. ಕೇವಲ ಬರ್ತ್, ಡೆತ್ ಸರ್ಟಿಫಿಕೇಟ್ ಆಧಾರದಿಂದ ಸಂಬಂಧ ರುಜುವಾತುಪಡಿಸಲಾಗದು. ಸಂಬಂಧ ರುಜುವಾತುಪಡಿಸಲು ವಾದಿಯರು ಸುಸಂಬದ್ಧ ಸಾಕ್ಷಿ ಹಾಜರುಪಡಿಸಲು ವಿಫಲರಾಗಿದ್ದಾರೆ. ೧೯೭೭ರಲ್ಲಿ ರಿಜಿಸ್ಟರ್ ಆಗಿರುವ ವಿಲ್ ಈಗ ಪ್ರಶ್ನಿಸಿದ್ದು ಅದು ಟೈಮ್ ಬಾರ್ ಆಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ದಾವೆ ವಜಾಗೊಳಿಸಲು ವಿನಂತಿಸಿದೆ.
ತೀರ್ಪು: ನ್ಯಾಯಾಲಯ, ಪ್ರತಿವಾದಿ ಪರ ವಾದವನ್ನು ಪುಷ್ಟೀಕರಿಸಿ. ವಾದಿಯರು ಹಿಸ್ಸೆಕೇಳಿದ್ದು, ಪ್ರತಿಸಂಗತಿ, ಸಂಬಂಧ ರುಜುವಾತು ಪಡಿಸಲು ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟು ದಾವೆ ವಜಾಗೊಳಿಸಿ ಆದೇಶಿಸಿತು.
ತನ್ನ ಹಕ್ಕು ನಿರ್ಣಯಿಸಲು ಕೋರಿ ನ್ಯಾಯಾಲಯದ ಕದ ತಟ್ಟುವವನು, ತಾನು ಯಾರೆಂದು ರುಜುವಾತುಪಡಿಸುವ ಜವಾಬ್ದಾರಿ ಅವನದೇ ಆಗಿದೆ.