ನೀನು ಅಲ್ಲ ನಿಮ್ಮಕ್ಕ, ನೀನು ನಿಜ ನಮ್ಮಕ್ಕ
ಅಲ್ಲಿ ನಿಮ್ಮಕ್ಕ ಬಜೆಟ್ ಮಂಡಿಸಿದ ಕೂಡಲೇ ಇಲ್ಲಿ ಪಲ್ಟಿರಾಮಣ್ಣ-ಮೂನ್ಬಾಬಣ್ಣ ಇಬ್ಬರೂ ಕೈ ಕೈ ಹಿಡಿದುಕೊಂಡು…
ಅಕ್ಕಾ..ಅಕ್ಕಾ ನೀನಕ್ಕ, ನಿನ್ನ ಹಾಗೆ ಯಾರಕ್ಕ? ಎಂದು ನಿಮ್ಮಕ್ಕನ ಮೇಲೆ ಹಾಡು ಕಟ್ಟಿ ಹಾಡುವ ಸೌಂಡು ನಾಲ್ಕೂ ದಿಕ್ಕುಗಳಲ್ಲಿ ಅಲೆ-ಅಲೆಯಾಗಿ ತೇಲಿ ಬರುತ್ತಿತ್ತು ಹಾಡು ನಿಲ್ಲಿಸಿದ ಅವರಿಬ್ಬರು… ಆಕೆ ನಿಮ್ಮಕ್ಕ ಅಲ್ಲ ನಿಜವಾಗಿಯೂ ನಮ್ಮ ಅಕ್ಕ. ಅದಿರಲಿ ಅಲ್ಲಪಾ ಪಲ್ಟಿರಾಮಣ್ಣ ಈಗ ಬರೋ ಹಣದಲ್ಲಿ ಏನು ಮಾಡಬೇಕು ಅಂತ ಮಾಡಿದ್ದೀಯ ಎಂದು ಮೂನ್ಚಂದ್ರಣ್ಣ ಕೇಳಿದ ಕೂಡಲೇ ಮೊದಲು ನಮ್ಮ ಮನೆ ಬಹಳ ದಿನಗಳಿಂದ ಸೋರುತ್ತಿದೆ. ಅದನ್ನು ರಿಪೇರಿ ಮಾಡಿಸುತ್ತೇನೆ. ಪಕ್ಕದ ಬುಸ್ಯವ್ವನ ಮನೆಗೆ ಕಂಪೌಂಡ್ ಹಾಕಿಸುತ್ತೇನೆ. ಆಡಿನ ಲಚುಮವ್ವನಿಗೆ ಆಡು ನಿಲ್ಲಿಸುವುದಕ್ಕೆ ಶೆಡ್ ಮಾಡಿಸುತ್ತೇನೆ. ಹಾಳೋಣಿಯನ್ನು ಜೆಸಿಬಿ ಹಚ್ಚಿಸಿ ಸಾಪ್ ಮಾಡಿಸಿ ಅಲ್ಲಿ ಲೇಔಟ್ ಮಾಡಿಸುತ್ತೇನೆ. ಕಡಿಮೆ ಬಿದ್ದರೆ ಅವರನ್ನು ಕೇಳುತ್ತೇನೆ. ಹಣ ಮಿಕ್ಕಿದರೆ ನೀವು ಕೊಟ್ಟಿದ್ದು ಕರೆಕ್ಟಾಯಿತು ಎಂದು ಲೆಕ್ಕ ಕೊಡುತ್ತೇನೆ. ಹೆಚ್ಚು ಕಡಿಮೆ ಅಂದರೆ ಗೊತ್ತೇ ಇದೆಯಲ್ಲ ನನ್ನ ಪಲ್ಟಿ ಕಲೆ ಅಂದಾಗ… ಮೂನ್ಚಂದ್ರಣ್ಣ ಹೌದಾ… ಇದ್ದರೆ ನಿನ್ನ ಹಾಗೆ ಇರಬೇಕು ನೋಡು ಅಂದ. ಅದಿರಲಿ ನೀ ಏನ್ ಮಾಡುತ್ತಿ? ಎಂದು ಪಲ್ಟಿರಾಮ ಕೇಳಿದ. ಅದಕ್ಕೆ ಮೂನ್ಚಂದ್ರಣ್ಣ ಏನಿಲ್ಲ.. ನಮ್ಮ ಬೀಗರ ಊರಿಗೆ ಮೊದಲು ರಸ್ತೆ ಮಾಡಿಸುತ್ತೇನೆ. ಅಲ್ಲದೇ ನಾನು ಸಾಲ ಮಾಡಿಕೊಂಡಿದ್ದೇನೆ. ಅದನ್ನು ತೀರಿಸುತ್ತೇನೆ. ಅಮರಾವತಿ ಎಲ್ಲ ಮನೆಗಳಿಗೆ ಬಣ್ಣ ಹೊಡೆಸುತ್ತೇನೆ. ಕೆಲವೊಂದು ಮನೆಗಳನ್ನು ಕಟ್ಟಿಸಿ ಕೆಲವೊಂದಕ್ಕೆ ನಿಮ್ಮಕ್ಕ ನಿಲಯ ಎಂದು ಹೆಸರು ಇಡುತ್ತೇನೆ. ಇನ್ನೂ ಹಲವು ಮನೆಗಳಿಗೆ ಸೋದಿಮಾಮಾ ಕೃಪಾ ಎಂದು ಬರೆಯಿಸುತ್ತೇನೆ. ಇಷ್ಟೆಲ್ಲ ಆಗಿ ಹಣ ಮಿಕ್ಕಿತೆಂದರೆ…. ಅದರಲ್ಲಿ ಅರ್ಧ ದಾನ-ಧರ್ಮ ಮಾಡಿದ್ದೇನೆ ಎಂದು ಉಳಿದದ್ದು ವಾಪಸ್ ಕೊಡುತ್ತೇನೆ. ಕಡಿಮೆ ಬಿತ್ತೆಂದರೆ ಉಳಿಕಿದ್ದು ಕೊಡಿ ಎಂದು ಇಸಿದುಕೊಂಡು ಬಂದು ನಾನು ನನ್ನ ಕೈಯಿಂದ ಹಾಕಿ ಕಟ್ಟಿಸಿದ್ದೇನೆ ಎಂದು ಜನರಿಗೆ ಹೇಳುತ್ತೇನೆ. ಮದ್ರಾಮಣ್ಣ ಅವರು ಚೊಂಬು ಗಿಂಬು ಅಂತ ಏನೇನೋ ಅನ್ನುತ್ತಿದ್ದಾರೆ ಅನ್ನಲಿ ಅದಕ್ಕೇನೂ ನಾನು ಬೇಡ ಅನ್ನುವುದಿಲ್ಲ. ಅವರು ಇಷ್ಟೆಲ್ಲ ಮಾಡಿದ್ದಾರಲ್ಲ… ಮುಂದಿನ ವಾರ ಇಬ್ಬರೂ ಸೇರಿ ಜೈಂಟ್ ಊಟ ಹಾಕಿಸೋಣ ಓಕೆ ನಾ ಅಂದ. ಅದಕ್ಕೆ ಪಲ್ಟಿರಾಮಣ್ಣ… ನೋಡೋಣ ಬುಡು.. ಈಗಿನಿಂದಲೇ ಅಷ್ಟೊಂದು ರೊಕ್ಕ ಖರ್ಚು ಮಾಡುವುದು ಬೇಡ ಎಂದು ಕಿವಿಮಾತು ಹೇಳಿದರು.