For the best experience, open
https://m.samyuktakarnataka.in
on your mobile browser.

ನೀನು ತಡ್ಕಬಕು ಟಿಕೆಟ್ ಹಿಡ್ಕಬಕು…

02:30 AM Mar 29, 2024 IST | Samyukta Karnataka
ನೀನು ತಡ್ಕಬಕು ಟಿಕೆಟ್ ಹಿಡ್ಕಬಕು…

ನನಗೆ ಟಿಕೆಟ್ ಕೊಡಲೇಬೇಕು ಮಾಮೋರೆ ಎಂದು ತಳವಾರ್ಕಂಟಿ ಮಾಮಾ ಅವರಿಗೆ ವಿಪರೀತ ಗಂಟು ಬಿದ್ದಿದ್ದ. ಒಂದುವೇಳೆ ಆತನಿಗೆ ಟಿಕೆಟ್ ಕೊಟ್ಟರೆ ಗೋತಾ ಎಂದೂ ಅವರಿಗೆ ಗೊತ್ತಿತ್ತು. ಈತನ ಕಾಟ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ಪ್ಲಾನ್ ಮಾಡಿದ ಮಾಮೋರು ಆಯಿತಪ್ಪ ನಿನಗೇ ಗ್ಯಾರಂಟಿ ಎಂದು ಹೇಳಿದರು. ಅಂದಿನಿಂದ ತಳವಾರ್ಕಂಟಿ ಖರ‍್ರೇ ಬದಲಾಯಿತು. ಟೈಲರ್ ಆದಪ್ಪನ ಹತ್ತಿರ ಉದ್ರಿಯಾಗಿ ಹೊಲೆಸಿದ ಬಿಳಿ ಜುಬ್ಬಾ..ಪೈಜಾಮಾ ಹಾಕಿಕೊಂಡು ತಲೆಗೆ ಕೊಬ್ಬರಿ ಎಣ್ಣೆ ಹಾಕಿಕೊಂಡು ಮುಖಕ್ಕೆ ಪೌಡರ್ ಹಚ್ಚಿಕೊಂಡು ಹೊರಬೀಳುತ್ತಿದ್ದ. ಯಾರಾದರೂ ಕಂಡರೆ ಸಾಕು ಹೋಗಿ ಎರಡೂ ಕೈ ಮುಗಿದು ಹೇಗಿದ್ದಿರಿ ಎಂದು ಕೇಳುತ್ತಿದ್ದ. ಶೇಷಮ್ಮನ ಹೋಟೆಲ್‌ನಲ್ಲಿ ಪ್ರತಿದಿನ ಬಹಳಷ್ಟು ಮಂದಿಗೆ ಉದ್ರಿಯಾಗಿ ಮಂಡಾಳೊಗ್ಗಣ್ಣಿ ಚಹ ಕುಡಿಸುತ್ತಿದ್ದ. ತಾನು ಬಸ್ಸಿನಲ್ಲಿ ಹೋಗುತ್ತಿದ್ದರೆ ಆ ಬಸ್ಸಿನಲ್ಲಿ ಹೋಗುವ ಗಂಡಸರದ್ದು ಟಿಕೆಟ್ ತಾನೇ ತೆಗೆಸುತ್ತಿದ್ದ. ಎಲ್ಲ ಖರ್ಚಿಗಾಗಿ ಪಂಪಣ್ಣನ ಹತ್ತಿರ ಬಡ್ಡಿ ಸಾಲ ಇಸಿದುಕೊಳ್ಳುತ್ತಿದ್ದ. ಈ ಮಧ್ಯೆ ಮಾಮೋರಿಗೆ ಫೋನ್ ಮಾಡುವುದನ್ನು ಮರೆಯುತ್ತಿರಲಿಲ್ಲ. ಮಾಮೋರೆ ಹತ್ತಿರ ಬಂತು ಅಂದಾಗೊಮ್ಮೆ ಗ್ಯಾರಂಟಿ…ಗ್ಯಾರಂಟಿ ಎಂದು ಅವರು ಎರಡು ಬಾರಿ ಹೇಳುತ್ತಿದ್ದರು. ಇದಕ್ಕೆ ಮತ್ತಷ್ಟು ಖುಷಿಯಾಗುತ್ತಿದ್ದ ಕಂಟಿ ಇನ್ನಷ್ಟು ಖರ್ಚು ಮಾಡುತ್ತಿದ್ದ. ಅಲ್ಲ ಕಂಟಿ ನಾಮಪತ್ರ ಯಾವಾಗ? ಎಂದು ಯಾರಾದರೂ ಕೇಳಿದರೆ ಬಿ ಫಾರ್ಮ್ ಬರುತ್ತಾ ಇದೆ. ಈಗಾಗಲೇ ಆ ಊರು ದಾಟಿರಬಹುದು… ಈ ಊರು ದಾಟಿರಬಹುದು.. ಎಂದು ಹೇಳುತ್ತಿದ್ದ. ಹೆಣ್ಣುಮಕ್ಕಳನ್ನು ಬಸವಣ್ಣದೇವರ ಗುಡಿಗೆ ಕರೆಯಿಸಿ ಅರಿಶಿಣ ಕುಂಕುಮ ಎಂದು ತನ್ನ ಹೆಂಡತಿಯಿಂದ ಏನೇನೋ ಕೊಡಿಸುತ್ತಿದ್ದ. ಬೇರೆ ಪಾರ್ಟಿಯವರು ಭರ್ಜರಿ ಪ್ರಚಾರ ಮಾಡುತ್ತಿದ್ದರು. ಈ ಕಡೆ ಪಂಪಣ್ಣನ ಹತ್ತಿರ ಸಾಲ ಬೆಳೆಯುತ್ತಿತ್ತು. ಶೇಷಮ್ಮ, ಟೈಲರ್ ಆದಿ, ಯಂಗ್ಟಾಚಲ ಮತ್ತಿತರರು ಹಣಕ್ಕಾಗಿ ಗಂಟುಬಿದ್ದಿದ್ದರು. ಗಾಬರಿಯಾದ ಕಂಟಿ ಮತ್ತೆ ಮಾಮೋರಿಗೆ ಕಾಲ್ ಮಾಡಿದಾಗ ಮತ್ತೆ ಆ ಕಡೆಯಿಂದ ಗ್ಯಾರಂಟಿ.. ಗ್ಯಾರಂಟಿ ಎಂದು ಹೇಳಿದರು. ಅಲ್ಲ ಮಾಮೋರೆ ಬರೀ ಗ್ಯಾರಂಟಿ.. ಗ್ಯಾರಂಟಿ ಅಂತಿದೀರಲ್ಲ ಟಿಕೆಟ್ ಕೊಡುತ್ತೀರೋ ಇಲ್ಲವೋ ಅಂದಾಗ ನಾ ಇಲ್ಲ ಅಂತ ಹೇಳಿದ್ದೀನಾ..? ನೀನು ತಡ್ಕಬಕು… ಟಿಕೆಟ್ ಹಿಡ್ಕಬಕು ಅಂತ ಹಾಡು ಹಾಡಿದರು… ಅಂದಿನಿಂದ ತಳವಾರ್ಕಂಟಿ ನಾಪತ್ತೆ.