ನೀನು ನಿಮ್ಮಕ್ಕ ಅಲ್ಲ ನಮ್ಮಕ್ಕ….
12:45 AM Jan 31, 2024 IST | Samyukta Karnataka
ಪ್ರೀತಿಯ ನಿಮ್ಮಕ್ಕ (ನಿರ್ಮಲಾ) ಅವರಿಗೆ, ನಾಳೆ ಕಳೆದು ಬಿಟ್ಟರೆ ನಾಡಿದ್ದೇ ನೀವು ಸೂಟ್‌ಕೇಸ್ ಹಿಡಿದುಕೊಂಡು ಬಂದು ಅವರಿಗಿಷ್ಟು-ಇವರಿಗಿಷ್ಟು-ಅದಕ್ಕಿಷ್ಟು-ಇದಕ್ಕಿಷ್ಟು ಎಂದು ಹೇಳುತ್ತೀರಿ. ಕಳೆದ ಬಾರಿ ಎಲ್ಲ ಮುಗಿದ ಮೇಲೆ ನಾವು ಏನೋ ಕೇಳಿದ್ದಕ್ಕೆ ಮೊದಲೇ ಹೇಳಬಾರದಿತ್ತೇ ಮೇಕಪ್ ಮರೆಮ್ಮ ಎಂದು ಹೇಳಿದ್ದು ಇನ್ನೂ ಕಿವಿಯಲ್ಲಿ ಗುನುಗುಡುತ್ತಿದೆ. ಅದಕ್ಕೆ ಈಗ ಹೇಳುತ್ತೇನೆ ಕೇಳಿ…..
ನಿಮ್ಮಕ್ಕ ಅವರೇ…ನೀವೂ ಒಬ್ಬ ಹೆಣಮಗಳು. ಪುರಾಣದ ಕಾಲದಿಂದಲೂ ಅವರು ಎಷ್ಟು ಅನುಭವಿಸಿದ್ದಾರೆ ನಿಮಗೇ ಗೊತ್ತಿದೆ. ಆದ್ದರಿಂದ ನಿಮ್ಮಲ್ಲಿ ಅರಿಕೆ ಏನೆಂದರೆ…
- ನಮ್ಮ ಸಂಘದ ಬುಸ್ಯವ್ವಳಿಗೆ ಮಂಡಾಳೊಗ್ಗಣ್ಣಿ ಅಂದರೆ ಬಲುಪ್ರೀತಿ. ಮನೆಯಲ್ಲಿ ಮಾಡಿದ್ದು ಅವರಿಗೆ ಸೇರುವುದಿಲ್ಲ. ಬೇಕು ಅಂತಾದರೆ ಅವರು ಶೇಷಮ್ಮನ ಹೋಟೆಲ್‌ಗೇ ಹೋಗಬೇಕು. ಅಲ್ಲಿ ಬರೀ ಗಂಡಸರೇ ತುಂಬಿರುತ್ತಾರೆ. ಇವಳು ದಿನಾ ಹೋಗಿ ತಿಂದುಬಂದರೆ ನಾಳೆ ಜನರು ಆಕೆಗೆ ಮಂಡಾಳೊಗ್ಗಣ್ಣಿ ಬುಸ್ಯವ್ವ ಅನ್ನುತ್ತಾರೆ. ಅದಕ್ಕಾಗಿ ತಾವು ಪ್ರತ್ಯೇಕವಾಗಿ ಮಹಿಳೆಯರಿಗೆ ಹೋಟೆಲ್ ತೆಗೆಯಲು ಬಜೆಟ್‌ನಲ್ಲಿ ಹಣ ತೆಗೆದಿರಿಸಬೇಕು.
- ಇತ್ತೀಚಿಗೆ ಹೆಣ್ಣು ಮಕ್ಕಳಿಗೆ ಗಂಡು ಹುಡುಗರು ಏನೇನೋ ಅಂದು ಓಡಿಹೋಗುತ್ತಿವೆ. ಅವರು ಏನಾದರೂ ಅಂದಾಗ ಅವರಿಗೆ ಬಾರಿಸಲು ಉಚಿತವಾಗಿ ಬಾರಕೋಲು ನೀಡಬೇಕು.
- ಇದು ಮಾಡರ್ನ್ಯುಗ. ಮೇಕಪ್ ಇಲ್ಲದೇ ಮನೆಯಿಂದ ಹೊರಬೀಳಲು ಆಗುವುದಿಲ್ಲ. ಹಾಗಾಗಿ ಎಲ್ಲರಿಗೂ ಪುಗಸೆಟ್ಟೆ ಮೇಕಪ್ ಸಾಮಾನುಗಳನ್ನು ಕೊಡಬೇಕು.
- ಅನೇಕ ಕುಟುಂಬಗಳಲ್ಲಿ ಗಂಡಂದಿರು ಹೆಂಡತಿಯ ಮಾತೇ ಕೇಳುವುದಿಲ್ಲ. ಅದಕ್ಕಾಗಿ ಕಾನೂನಿಗೆ ತಿದ್ದುಪಡಿ ತಂದು ಗಂಡನು ಹೆಂಡತಿಯ ಮಾತನ್ನು ಕೇಳಬೇಕು ಅನ್ನುವ ಹಾಗೆ ಮಾಡಿ.
- ಗಂಡಸರು ದುಡಿಯುವುದು ಹೆಂಡತಿ ಮಕ್ಕಳಿಗಾಗಿ. ಅವರು ಮನೆಗೆ ಎಷ್ಟು ಹಣ ಕೊಡುತ್ತಾರೋ ಅಷ್ಟೇ ಹಣದಿಂದ ಮನೆ ನಡೆಸಬೇಕು ಹಾಗಾಗಿ ತೀರ ಕಷ್ಟ ಅನುಭವಿಸುವಂತಾಗಿದೆ. ಅದಕ್ಕಾಗಿ ಇನ್ನು ಮುಂದೆ ಗಂಡನ ಪಗಾರವನ್ನು ಹೆಂಡತಿಯ ಕೈ ಸೇರುವ ಹಾಗೆ ಮಾಡಿ ಬಜೆಟ್‌ನಲ್ಲಿ ವ್ಯವಸ್ಥೆ ಮಾಡಬೇಕು.
- ಗಂಡ ಹೆಂಡತಿ ಮಧ್ಯೆ ಜಗಳವಾದರೆ ಹೆಂಡತಿಯ ಕಡೆಯವರು ಗಂಡನ ಮನೆಯ ಕಡೆ ಬಾರದ ಹಾಗೆ ಮಾಡಲು ಅವರಿಗೆ ಸ್ವಲ್ಪ ಹಣ ತೆಗೆದಿರಿಸಿ.
- ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳಿಸುವುದು ಬರೀ ಹೆಣ್ಣುಮಕ್ಕಳಿಗೇನೋ ಎಂಬಂತೆ ಇದೆ. ಅದನ್ನು ಗಂಡಸರಿಗೆ ವರ್ಗಾಯಿಸಿ.
- ಗ್ರಾಮ, ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬರೀ ಹೆಣ್ಣುಮಕ್ಕಳಿಗೆ ಟಿಕೆಟ್ ಕೊಡುವುದಲ್ಲದೇ ಆರಿಸಿ ತರಲು ಹಣ ತೆಗೆದಿರಿಸಬೇಕು. ಇಷ್ಟಾದರೆ ನೀವು ನಿಜಕ್ಕೂ ನಿಮ್ಮಕ್ಕ ಅಲ್ಲ ನಮ್ಮಕ್ಕ…..
ಇಂತಿ ನಿಮ್ಮ
ಮೇಕಪ್ ಮರೆಮ್ಮ….