ನೀವೊಂದು ವಿಶ್ವಾತ್ಮಕ ಅಲೆ
ಈ ಸೃಷ್ಟಿಯಲ್ಲಿರುವ ಎಲ್ಲವೂ ಕೆಲವು ನಿರ್ದಿಷ್ಟ ಕಂಪನಗಳನ್ನು ಹೊಂದಿವೆ. ಪ್ರತಿಯೊಂದು ಪ್ರಾಣಿಯೂ ವೈಶ್ವಿಕ ಚೈತನ್ಯದೊಡನೆ ಸಂಬಂಧಪಟ್ಟಿದ್ದು, ಭೂಮಿಯ ಮೇಲೆ ಒಂದು ನಿರ್ದಿಷ್ಟ ವೈಶ್ವಿಕ ಕಿರಣವನ್ನು ತರುತ್ತದೆ ಮತ್ತು ಇದು ತನ್ನದೇ ಕಂಪನಗಳನ್ನು ಹೊಂದಿರುತ್ತದೆ.
ವಿವಿಧ ದೇವತೆಗಳನ್ನು ವಿವಿಧ ವಾಹನಗಳ ಮೇಲೆ ಕುಳಿತಿರುವಂತೆ ಚಿತ್ರಿಸಿರುತ್ತಾರೆ. ಆನೆಗಳು ಗಣೇಶನ ಕಂಪನಗಳನ್ನು ಸೆಳೆದರೆ, ಹುಲಿಯು ದೇವಿಯ ಕಂಪನಗಳನ್ನು, ಮತ್ತು ನವಿಲುಗಳು ಭಗವಾನ್ ಸುಬ್ರಹ್ಮಣ್ಯನ ಕಂಪನಗಳನ್ನು ಸೆಳೆಯುತ್ತವೆ. ಒಂದು ಪ್ರಾಣಿಯ ಅಸ್ತಿತ್ವಕ್ಕೆ ಧಕ್ಕೆಯುಂಟಾದರೂ ಭೂಮಿಯಲ್ಲಿ ಏರುಪೇರು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಪೂರ್ವಜರೂ ಸಹ ಇದನ್ನೇ ಹೇಳಿದರು.
ಆದ್ದರಿಂದ ಈ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯನ್ನೂ ಸನ್ಮಾನಿಸಬೇಕು, ಏಕೆಂದರೆ ಭಗವಂತ ಈ ಸೃಷಿಯ ಒಂದೊಂದು ಕಣದಲ್ಲೂ ಇದ್ದಾನೆ. ಇಡೀ ಸೃಷ್ಟಿಯು ಚೈತನ್ಯದಿಂದ, ಜ್ಞಾನದಿಂದ ತುಂಬಿದೆ. ನೀವು ಒಂದು ಕಂಪನ, ತರಂಗಾಂತರವಲ್ಲದೆ ಬೇರೇನೂ ಅಲ್ಲ. ನಿಮ್ಮ ದೇಹವು ಸದಾ ಕಂಪನಗಳನ್ನು ಹೊರಸೂಸುತ್ತಿದೆ. ವಿಶ್ವದಿಂದ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದೀರಿ ಮತ್ತು ಕಳೆದುಕೊಳ್ಳುತ್ತಿದ್ದೀರಿ. ನಿರಂತರವಾಗಿ ಶಕ್ತಿಯ ಆದಾನಪ್ರದಾನವಾಗುತ್ತಲೇ ಇದೆ ಮತ್ತು ನಿಮ್ಮ ದೇಹದ ಪ್ರತಿಯೊಂದು ಕೋಶವೂ ಬದಲಿಸುತ್ತಿದೆ.
ನಿಮ್ಮ ಚೈತನ್ಯವೂ ಒಂದು ತರಂಗಾಂತರವೇ ಮತ್ತು ಅನೇಕ ಸಾಧ್ಯತೆಗಳನ್ನು ತನ್ನಲ್ಲಿ ಹೊತ್ತುಕೊಂಡಿದೆ. ಅದು ಸೂರ್ಯನಂತೆ. ನಿಮ್ಮ ಕಿಟಕಿಯಲ್ಲಿ ಸೂರ್ಯನು ಹೊಳೆದಾಗ, `ಓ! ನಾನು ಸೂರ್ಯನನ್ನು ಸೆರೆಹಿಡಿದಿದ್ದೇನೆ!' ಎನ್ನಲು ಸಾಧ್ಯವಿಲ್ಲ. ಅದೇ ಸೂರ್ಯನು ನಿಮ್ಮ ಪಕ್ಕದ ಮನೆಯವರ ಕಿಟಿಕಿಯಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಹೊಳೆಯುತ್ತಾನೆ. ಆದ್ದರಿಂದ ಸೂರ್ಯನು ಇಲ್ಲೂ ಪೂರ್ಣವಾಗಿದ್ದಾನೆ, ಅಲ್ಲೂ ಪೂರ್ಣವಾಗಿದ್ದಾನೆ.
ನೀವು ಕೇವಲ ಒಂದು ಕಂಪನವಷ್ಟೆ. ದೈಹಿಕವಾಗಿ ಎಲ್ಲೆಲ್ಲೂ ಇರಲು ನಿಮ್ಮಿಂದ ಸಾಧ್ಯವಾಗದಿದ್ದರೂ ಚೈತನ್ಯವಾಗಿ ನೀವು ಹಲವೆಡೆಗಳಲ್ಲಿ ಇರಬಹುದು. ನೀವು ಒಂದು ಹೂವನ್ನು ಸ್ಪರ್ಶಿಸಿದರೆ, ನಿಮ್ಮ ಕಂಪನಗಳು ಆ ಹೂವಿನೊಳಗೂ ಹೋಗುತ್ತವೆ. ಆದ್ದರಿಂದ, ಇಡೀ ವಿಶ್ವವು ಚೈತನ್ಯದ ಕ್ಷೇತ್ರ.
ಕೆಲವರನ್ನು ಭೇಟಿ ಮಾಡಿದಾಗ ಅವರಿಂದ ದೂರ ಉಳಿಯಬೇಕು ಅನಿಸುತ್ತದೆ. ಕೆಲವರನ್ನು ಮತ್ತೆ ಮತ್ತೆ ಭೇಟಿ ಮಾಡಬೇಕೆನಿಸುತ್ತದೆ. ಕೆಲವೊಮ್ಮೆ ಇತರರು ನಿಮ್ಮನ್ನೇಕೆ ಇಷ್ಟಪಡುವುದಿಲ್ಲ ಎಂದು ಆಲೋಚಿಸುತ್ತೀರಿ. ಎಲ್ಲವೂ ಕಂಪನಗಳಿಂದಾಗಿ. ನಮ್ಮ ಅಸ್ತಿತ್ವದಿಂದ ಇತರರೊಡನೆ ಸಂಪರ್ಕಿಸುತ್ತೇವೆ. ಮಾತು ಎರಡನೆಯ ಹಂತದಲ್ಲಿ ಬರುತ್ತದೆ. ಪ್ರಾಣಾಯಾಮ, ಧ್ಯಾನ,
ಸುದರ್ಶನ ಕ್ರಿಯೆಯಿಂದ ನಮ್ಮ ಕಂಪನಗಳನ್ನು ಸಕಾರಾತ್ಮಕವಾಗಿ ಮಾರ್ಪಡಿಸಿಕೊಳ್ಳಬಹುದು.