ಶುದ್ಧಬುದ್ಧಿಯಲ್ಲಿ ಬಲವಾದ ವಿಶ್ವಾಸ..
ವಿಶ್ವಾಸವನ್ನು ಬಲಪಡಿಸಿಕೊಳ್ಳಬೇಕೆಂಬ ಆಲೋಚನೆ ಮಾತ್ರದಿಂದಲೇ ವಿಶ್ವಾಸವು ಬಲಿಷ್ಠವಾಗುತ್ತದೆ. ನಿಮ್ಮ ವಿಶ್ವಾಸವು ಬಹಳ ಘನವಾಗಿದೆಯೆಂದುಕೊಂಡು ಮುನ್ನಡೆಯಿರಿ. ನಿಮ್ಮ ಬುದ್ಧಿ ಶುದ್ಧವಾದಾಗ ವಿಶ್ವಾಸವು ತಾನಾಗಿಯೇ ಬಲಿಷ್ಠವಾಗುತ್ತದೆ. ಬುದ್ಧಿಯ ಶುದ್ಧೀಕರಣಕ್ಕಾಗಿ ಶುದ್ಧವಾದ ಆಹಾರವನ್ನೂ ಸೇವಿಸಬೇಕು. ಆದುದರಿಂದ, ನಿಮ್ಮ ಆಹಾರದ ಮೇಲೆ ಗಮನವನ್ನಿಡುವುದು ಮುಖ್ಯ.
ಜಗತ್ತಿನಲ್ಲಿರುವ ಎಲ್ಲ ನಕಾರಾತ್ಮಕ ವಿಷಯಗಳ ಬಗ್ಗೆ ಆಲೋಚಿಸುತ್ತ ಊಟ ಮಾಡಿದರೆ, ಅದು ಬುದ್ಧಿಯ ಮೇಲೂ ಪ್ರಭಾವವನ್ನುಂಟು ಮಾಡುತ್ತದೆ. ಅನೇಕ ಜನರಿಗೆ ಊಟ ಮಾಡುವಾಗ ಮಾತ್ರ ಸಂಭಾಷಣೆ ನಡೆಸಲು ಸಮಯ ಸಿಗುತ್ತದೆ. ಆಹಾರವನ್ನು ತಯಾರಿಸುವಾಗ, ತಿನ್ನುವಾಗ ಖಾಯಿಲೆಗಳ ಬಗ್ಗೆ ಮಾತನಾಡುತ್ತಾರೆ. ಇದು ಬಹಳ ತಪ್ಪು. ಈ ಅಭ್ಯಾಸದಿಂದ ಹೊರಬರಬೇಕು. ನೀವೇನು ತಿನ್ನುತ್ತೀರೊ, ನೀವದೇ ಆಗುತ್ತೀರಿ. ನೀವು ಸೇವಿಸುವ ಆಹಾರ ನಿಮ್ಮ ಬುದ್ಧಿಯನ್ನು ಆಳುತ್ತದೆ. ಅದಲ್ಲದೆ ನಿಮ್ಮ ಮನಸ್ಸು ನಿಮ್ಮ ದೇಹದ ಮೇಲೆ ನೇರವಾದ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದಲೆ ಸಂತೋಷವಾದ ಮನಃಸ್ಥಿತಿಯಿಂದ ಊಟ ಮಾಡಬೇಕು.
ನಾವು ಬಹಳ ಉದ್ರಿಕ್ತರಾದಾಗ ಊಟವನ್ನು ಸರಾಗವಾಗಿ ನಮಗೆ ನುಂಗಲೂ ಸಾಧ್ಯವಾಗುವುದಿಲ್ಲ. ಬಹಳ ಚಡಪಡಿಕೆಯಲ್ಲಿದ್ದರೆ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಆದ್ದರಿಂದ ಅರಿವಿನೊಡನೆ ಆಹಾರವನ್ನು ಸೇವಿಸುವುದು ಮುಖ್ಯ. ಭಕ್ತಿಯಿಂದ ಮನಸ್ಸು ಮತ್ತು ಹೃದಯಗಳೆರಡೂ ಶುದ್ಧವಾಗುತ್ತದೆ. ಇದರಿಂದ ತಾನಾಗಿಯೇ ಶುದ್ಧ ಬುದ್ಧಿ ಮತ್ತು ಘನವಾದ ವಿಶ್ವಾಸವುಂಟಾಗುತ್ತದೆ.
ಭಕ್ತಿಯ ಸ್ವಭಾವವೆಂದರೆ ಮನಸ್ಸಿನಲ್ಲಿ ವಿರಹವನ್ನುಂಟು ಮಾಡುವುದು. ಭಕ್ತಿಯ ಅಭಾವವಾದಂತೆ ಕೆಲವೊಮ್ಮೆ ಮನಸ್ಸಿಗೆ ಭಾಸವಾದಾಗ, ಆ ಭಾವನೆಯಿಂದ ಚಡಪಡಿಕೆ ಉಂಟಾಗುತ್ತದೆ. ಈ ಚಡಪಡಿಕೆಯು ಭಕ್ತಿಯ ಸೂಚಕ. ಈ ರೀತಿಯ ಚಡಪಡಿಕೆಯುಂಟಾದರೆ ನೀವು ಬಹಳ ಅದೃಷ್ಟವಂತರು ಎಂದು ತಿಳಿಯಿರಿ. ಸ್ವಲ್ಪ ಕಾಲದವರೆಗೆ ಮಾತ್ರ ಭಕ್ತಿಯ ಅಭಾವವನ್ನು ಅನುಭವಿಸುತ್ತೀರಷ್ಟೆ. ಭಕ್ತಿಯು ಎಂದಿಗೂ ಸಾಯುವುದಿಲ್ಲ, ಅದು ಕಡಿಮೆಯಾದಂತೆ ಅನಿಸುತ್ತದೆಯಷ್ಟೆ.
ಬಹಳ ಅದೃಷ್ಟವಿದ್ದವರಿಗೆ ಮಾತ್ರ ಈ ಭಾಗ್ಯ ಸಿಗುತ್ತದೆ. ಜಡ ವ್ಯಕ್ತಿಯು ಎಂದಿಗೂ ಭಕ್ತಿಯನ್ನು ಅನುಭವಿಸುವುದಿಲ್ಲ. ಜಡ ವ್ಯಕ್ತಿಯು ಚಿಂತೆಯಿಂದ ತುಂಬಿ ಹೋಗಿರುತ್ತಾರೆ. ಭಕ್ತಿಯಿದೆ ಎಂಬ ಭರವಸೆಯನ್ನಿಟ್ಟುಕೊಂಡು, ಶುದ್ಧ ಬುದ್ಧಿಯಿಂದ, ಘನವಾದ ವಿಶ್ವಾಸದಿಂದ ಮುಂದೆ ಸಾಗಿ.