ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ
ಹಾವೇರಿ(ಶಿಗ್ಗಾವಿ): ಉಪ ಚುನಾವಣೆಗೆ ಸರ್ಕಾರ ಇದ್ದಾಗ ಚುನಾವಣೆ ಮಾಡಲು ಸಚಿವರೆಲ್ಲಾ ಬಂದೇ ಬರುತ್ತಾರೆ. ಅದರೆ, ನವೆಂಬರ್ 23ರಂದು ಮತದಾನದ ಡಬ್ಬಿ ಓಪನ್ ಮಾಡಿದಾಗ ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ಅವರಿಗೆ ಗೊತ್ತಾಗುತ್ತದೆ. ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ ಎಂದು ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಖುರ್ಸಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ದಿನ ನಿತ್ಯ 10ರಿಂದ 11 ಹಳ್ಳಿಗಳಿಗೆ ಓಡಾಡಿ ಮತಯಾಚನೆ ಮಾಡುತ್ತಿದ್ದೇನೆ. ಎಷ್ಟು ಸಾಧ್ಯವೋ ಅಷ್ಟು ಓಡಾಡುತ್ತಿದ್ದೇನೆ. ನಮ್ಮ ಎಲ್ಲಾ ಕಾರ್ಯಕರ್ತರು, ಹಿರಿಯರು, ಮತದಾರರ ಮನೆಗಳಿಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದೇನೆ. ಸಮಯ ಬಹಳ ಕಡಿಮೆ ಇದೆ. ನನ್ನ ಪರ ನಮ್ಮ ತಂದೆ, ತಾಯಿ ಕೂಡಾ ಪ್ರಚಾರ ಮಾಡುತ್ತಿದಾರೆ. ಇಡೀ ಫ್ಯಾಮಿಲಿ ಪ್ರಚಾರ ಮಾಡುತ್ತಿದೆ ಎಂದರು.
ಪರ್ಮನೆಂಟ್ ಗ್ಯಾರಂಟಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಶ್ವತ ಗ್ಯಾರೆಂಟಿ ಅಂದರೆ ಈ ಭಾಗಕ್ಕೆ ನೀರು ಕೊಟ್ಟಿದ್ದೇವೆ, ಪ್ರಾವಾಹ ಬಂದಾಗ 5 ಲಕ್ಷ ರೂಪಾಯಿಯ 15,000 ಮನೆಗಳನ್ನು ಜನರಿಗೆ ನೀಡಿದ್ದೇವೆ 5,000 ಉದ್ಯೋಗಾವಕಾಶ ಕೊಟ್ಟಿದ್ದೇವೆ. ಬರುವ ದಿನಗಳಲ್ಲಿ 10,000 ಉದ್ಯೋಗ ಸೃಷ್ಟಿ ಮಾಡುತ್ತೇವೆ. ನೀರು, ಮನೆ, ಉದ್ಯೋಗ ಇವು ನಮ್ಮ ಪರ್ಮನೆಂಟ್ ಗ್ಯಾರಂಟಿ ಈ ಗ್ಯಾರಂಟಿಗಳನ್ನು ಕಸಿದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ಕಾರಡಗಿ ಸೇರಿದಂತೆ ಹಲವು ಕಡೆ ನಾನು ಮತಯಾಚನೆಗೆ ತೆರಳಿದ್ದೆ. ನಮ್ಮ ತಂದೆಯವರು ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಎಲ್ಲಾ ಸಮುದಾಯಗಳ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜಲಜೀವನ ಮಿಷನ್ ಮೂಲಕ ಮನೆ ಮನೆಗಳಿಗೆ ನೀರು ಕೊಟ್ಟಿದ್ದೇವೆ. ಒಂದು ಕೊಡ ನೀರಿಗೆ ತಾಯಂದಿರು ನಾಲ್ಕು ಐದು ಕಿ.ಮೀ ನಡೆಯುತ್ತಿದ್ದರು. ಆದರೆ, ಈಗ ಟ್ಯಾಪ್ ಓಪನ್ ಮಾಡಿದರೆ ನೀರು ಬರುತ್ತದೆ. ಕ್ಷೇತ್ರದಲ್ಲಿ ಎಕ್ಸಪೋರ್ಟ್, ಶಾಹಿ ಕಂಪನಿಗಳು ಗಾರ್ಮೆಂಟ್ಸ್ ಶುರು ಮಾಡಿವೆ. ಟೆಕ್ಸಟೈಲ್ ಪಾರ್ಕ್ ಕೂಡಾ ಶುರುವಾಗಲಿದೆ. ನಾವು ಶಾಶ್ವತ ಪರಿಹಾರ ಕೊಟ್ಟಿದ್ದೇವೆ
ಇದೆಲ್ಲಾ ಹೆಣ್ ಮಕ್ಕಳಿಗೆ ಗೊತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಪರಿಣಾಮ ಏನೂ ಆಗುವುದಿಲ್ಲ ಎಂದು ಹೇಳಿದರು.
ನನ್ನ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿಯವರು, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿಯವರು, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಬಂದಿದ್ದರು. ಎಲ್ಲಾ ನಾಯಕರ ಆಶೀರ್ವಾದ ನನ್ನ ಮೇಲಿದೆ ಎಂದರು.