For the best experience, open
https://m.samyuktakarnataka.in
on your mobile browser.

ನೆನಪಿನಾಳದ ಅಭಿರುಚಿಗಳು…

07:15 AM Nov 13, 2024 IST | Samyukta Karnataka
ನೆನಪಿನಾಳದ ಅಭಿರುಚಿಗಳು…

ಕೆಲವು ವರ್ಷಗಳ ಹಿಂದೆ ಆಪ್ತ ಸಲಹೆಗೆ ಬಂದ ಹುಡುಗಿಯೊಬ್ಬಳ ಸಮಸ್ಯೆ ಬೇರೆ ರೀತಿಯದು. ಅವಳ ಹೆಸರು ಸರಸ್ವತಿ (ಹೆಸರು ಬದಲಾಯಿಸಲಾಗಿದೆ). ಮೂಲತಃ ತಮಿಳುನಾಡಿನವಳು. ಅವಳ ಪೋಷಕರು ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡುತ್ತಿದ್ದಳು. ಬಂದವಳೇ ತನ್ನ ಬಗ್ಗೆ ಹೇಳಲು ಶುರು ಮಾಡಿದಳು.
ಸರ್, ನಾನು ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಯಾಕೋ ಈ ಕಾಲೇಜಿಗೆ ಸೇರಿದ ಮೇಲೆ ನನಗೆ ಓದಿದ್ದು ತಲೆಗೆ ಹತ್ತುತ್ತಿಲ್ಲ, ನನ್ನ ಗೆಳತಿಯರಿಗಿಂತಲೂ ನಾನು ಹೆಚ್ಚು ಪರಿಶ್ರಮಪಡುತ್ತಿದ್ದೇನೆ, ಆದರೆ ಫಲಿತಾಂಶ ಮಾತ್ರ ಅವರಿಗಿಂತಲೂ ಬಹಳ ಕಡಿಮೆಯಿದೆ. ಇದು ನನ್ನ ಪ್ರೇರಣೆಯನ್ನೂ ಕುಗ್ಗುವಂತೆ ಮಾಡಿದೆ. ನಾನೇ ಯೋಚಿಸಿದಾಗ ನನಗೆ ನನ್ನ ನೆನಪಿನ ಶಕ್ತಿ ಕಡಿಮೆಯಾಗಿದೆ ಅಂತ ಅನಿಸುತ್ತೆ. ಪಾಠ ಮಾಡುವಾಗ ಅರ್ಥ ಆಗಿದ್ದರೂ ಏನೂ ನೆನಪಿನಲ್ಲಿ ಉಳಿಯುತ್ತಿಲ್ಲ. ಇದಕ್ಕೆ ಏನಾದರೂ ಪರಿಹಾರ ಸಿಗುತ್ತಾ ಎಂದಳು.
ಅವಳ ಬಳಿ ಕೇಳಬೇಕಾದ, ಆಪ್ತ ಸಮಾಲೋಚನೆಗೆ ಅಗತ್ಯವಾದ ಎಲ್ಲ ಪ್ರಶ್ನೆಗಳನ್ನು ಕೇಳಿಯಾದ ಮೇಲೆ ಅವಳಿಗೆ ಹೀಗಂದೆ:
ನೋಡಮ್ಮ, ನಿನ್ನನ್ನು ಒಟ್ಟು ಗಮನಿಸಿದಾಗ ನಿನಗೆ ನೆನಪಿನ ಶಕ್ತಿಯ ಸಮಸ್ಯೆ ಇಲ್ಲ ಅಂತ ನಾನು ಸ್ಪಷ್ಟವಾಗಿ ಹೇಳಬಲ್ಲೆ. ಏಕೆಂದರೆ ನಿನಗೆ ಚಿಕ್ಕವಳಿಂದ ಈ ಸಮಸ್ಯೆ ಇಲ್ಲ, ಬೇರೆ ಯಾವ ರೀತಿಯಲ್ಲೂ ನಿನ್ನ ಮೆದುಳಿಗೆ ತೊಂದರೆಯಾಗಿಲ್ಲ, ಯಾವ ಇತರ ಮಾನಸಿಕ ರೋಗದ ಲಕ್ಷಣಗಳೂ ಇಲ್ಲ, ದೈಹಿಕವಾಗಿಯೂ ಆರೋಗ್ಯವಾಗಿದ್ದೀಯಾ, ಇಷ್ಟೆಲ್ಲಾ ಚೆನ್ನಾಗಿರುವಾಗ ನೆನಪಿನ ಶಕ್ತಿ ಇದ್ದಕ್ಕಿದ್ದಂತೆ ಕಡಿಮೆಯಾಗುವ ಸಂಭವ ಕಡಿಮೆ ಇರುತ್ತದೆ.
ಇಲ್ಲ ಸರ್, ನನಗೆ ನೆನಪಿನ ಶಕ್ತಿಯ ಸಮಸ್ಯೆಯೇ ಇದೆ ಅಂತ ಅನಿಸುತ್ತೆ. ನಾನು ಬೇರೆಯವರ ತರಹ ಸಮಯವನ್ನು ಸುಮ್ಮನೆ ವ್ಯರ್ಥ ಮಾಡುವುದಿಲ್ಲ. ಪ್ರತಿದಿನವೂ ಓದುತ್ತಿರುತ್ತೇನೆ, ಎಲ್ಲ ಶೈಕ್ಷಣಿಕ ವಿಚಾರಗಳಲ್ಲೂ ಮುಂದೆ ಇದ್ದೇನೆ. ಆದರೆ ಕಳೆದ ವಾರ ಓದಿರುವುದು ಇವತ್ತು ಪ್ರತಿಯೊಂದೂ ಹೊಸತಾಗಿಯೇ ಕಾಣುತ್ತೆ. ಇದು ನನ್ನ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತಿದೆ. ಇದಕ್ಕೆ ಏನಾದರೂ ಪರಿಹಾರ ಕೊಡಲೇಬೇಕು, ನನ್ನಷ್ಟು ಓದುವವರು ಒಂಬತ್ತಕ್ಕಿಂತಲೂ ಹೆಚ್ಚು ಜಿಪಿಎ ತೆಗೆಯುತ್ತಿದ್ದಾರೆ, ನಾನು ಮಾತ್ರ ಇನ್ನೂ ಆರರಲ್ಲೇ ಇದ್ದೇನೆ ಎಂದಳು,
ಹಾಗೆನ್ನುವಾಗ ಅವಳ ಕಣ್ಣಲ್ಲಿ ನೀರು ತುಂಬಿ ಬಂದಿತ್ತು. ಆದರೂ ನಾನು ಕರಗಲಿಲ್ಲ, ನೋಡಮ್ಮ, ನಿನ್ನ ಸ್ಮರಣಶಕ್ತಿಯನ್ನು ಪರೀಕ್ಷೆ ಮಾಡದೆಯೇ ಚೆನ್ನಾಗಿದೆ ಎಂದು ಹೇಳಿದ್ದೇನೆ. ನೀನು ಅದನ್ನು ನಂಬಿ ಮುಂದುವರೆಯಬೇಕು, ಇಷ್ಟನ್ನು ಬಿಟ್ಟು ನಾನು ಏನೂ ಹೇಳಲಾಗುವುದಿಲ್ಲ, ಬಹುಶಃ ನಿನಗೆ ಆಂತರಿಕ ಒತ್ತಡ ಹೆಚ್ಚಿರಬಹುದು. ಆಂತರಿಕ ಒತ್ತಡ, ಕೋಪ ಮತ್ತು ನಕಾರಾತ್ಮಕ ಮನಃಸ್ಥಿತಿಗಳು ನಾವು ಓದಿನ ಮೇಲೆ ಗಮನ ಕೊಡದಂತೆ ಮಾಡುತ್ತವೆ. ಅದನ್ನು ಗುರುತಿಸುವುದು ಒಳ್ಳೆಯದು. ಅದನ್ನು ಬೇಕಾದರೆ ಪರೀಕ್ಷಿಸಿ ಹೇಳಲಾ ಅಂದೆ. ಆಯಿತು ಸರ್, ಆದರೆ ಅದಕ್ಕೂ ಮೊದಲು ನನಗೆ ನನ್ನ ಸ್ಮರಣ ಶಕ್ತಿಯ ಬಗ್ಗೆ ಗೊತ್ತಾಗಬೇಕು, ಇದು ನನ್ನ ಸಮಾಧಾನಕ್ಕಾದರೂ ತಿಳಿದುಕೊಳ್ಳಬೇಕು'' ಎಂದಳು.ಆಯಿತು, ಮುಂದಿನ ವಾರ ಬಾ, ಎಲ್ಲ ಪರೀಕ್ಷೆಯನ್ನು ಮಾಡಿಬಿಡುವಾ'' ಅಂತ ಹೇಳಿ ಅವಳನ್ನು ಕಳುಹಿಸಿದೆ.
ಸರಸ್ವತಿ ಸಮಯ ಪಾಲನೆಯಲ್ಲಿ ಯಾವತ್ತೂ ಮುಂದು. ಹೇಳಿದ ಸಮಯಕ್ಕೆ ಸರಿಯಾಗಿ ಬಂದಳು. ಸ್ಮರಣ ಶಕ್ತಿ, ಆಂತರಿಕ ಒತ್ತಡ, ಆತಂಕ, ಖಿನ್ನತೆ ಎಲ್ಲ ಪರೀಕ್ಷೆಯನ್ನೂ ಮಾಡಿದ ಮೇಲೆ ಅವಳಿಗೆ ಹೀಗಂದೆ. ನೋಡಮ್ಮ ನಿನ್ನ ಸ್ಮರಣ ಶಕ್ತಿಯಲ್ಲಿ ಯಾವ ಸಮಸ್ಯೆಯೂ ಇಲ್ಲ, ಅದು ಅತ್ಯುತ್ತಮವಾಗಿಯೇ ಇದೆ. ಆದರೆ ನಿನ್ನ ಆತಂಕ, ಮತ್ತು ಆಂತರಿಕ ಒತ್ತಡಗಳು ಹೆಚ್ಚಿರುವ ಕಾರಣ ಬಹುಶಃ ನಿನಗೆ ಓದುತ್ತಿದ್ದರೂ ನಿನ್ನ ಗಮನ ಬೇರೆಯಿರುವುದರಿಂದ ಓದಿರುವುದು ತಲೆಯಲ್ಲಿ ಉಳಿಯುತ್ತಿಲ್ಲ, ಅದು ಆತ್ಮಶಕ್ತಿಯನ್ನೂ ಕುಗ್ಗಿಸುತ್ತಿದೆ, ಅದಕ್ಕಾಗಿ ಇಂದಿನಿಂದ ನಿನ್ನ ಆತಂಕ, ಹಿಂಜರಿಕೆ, ಆಂತರಿಕ ಒತ್ತಡಗಳನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸುವಾ, ಎಲ್ಲವೂ ಚೆನ್ನಾಗಿಯೇ ಆಗುತ್ತೆ ಆಮೇಲೆ, ಎಂದು ಹೇಳಿ ಕಳುಹಿಸಿದೆ. ಸರಸ್ವತಿ ಸ್ವಲ್ಪ ಸಂತೋಷವಾಗಿರುವಂತೆ ಕಂಡಳು.
ಇದಾದ ನಂತರದ ನಮ್ಮ ಭೇಟಿಯಲ್ಲಿ ಅವಳ ಮನಸ್ಸನ್ನು ಪ್ರಶಾಂತವಾಗಿಡುವ ಕ್ರಮಗಳನ್ನು ಕಲಿಸಿ, ಸಕಾರಾತ್ಮಕವಾಗಿ ಇರುವ ಬಗೆಗಳನ್ನು ತಿಳಿಸಿ, ಅವಳ ಮತ್ತು ಅವಳ ತಂದೆಯ ನಡುವೆ ಇದ್ದ ಕೆಲವು ಗ್ರಹಿತ ಮನಸ್ತಾಪವನ್ನು ದೂರ ಮಾಡುವತ್ತ, ಅವಳ ಆತ್ಮವಿಶ್ವಾಸವನ್ನು ಹೆಚ್ಚಿಸುವತ್ತ ಗಮನಹರಿಸಲಾಯಿತು.
ಸರಸ್ವತಿಯಲ್ಲಿ ಬದಲಾವಣೆ ಆಗಿದ್ದರೂ ಕಿರು ಪರೀಕ್ಷೆಯಲ್ಲಿ ಅವಳ ಅಂಕ ಗಳಿಕೆಯಲ್ಲಿ ಯಾವ ವ್ಯತ್ಯಾಸವೂ ಆಗಲಿಲ್ಲ, ಪುನಃ ನನ್ನ ಬಳಿಗೆ ಬಂದ ಸರಸ್ವತಿಗೆ ಯಾವ ಭರವಸೆ ನೀಡಿದರೂ ಅವಳು ಖುಷಿಯಿಂದ ಇರಲಿಲ್ಲ. ಯಾಕೋ, ನಾನೇ ಎಲ್ಲಾದರೂ ಅವಳನ್ನು ತಪ್ಪಾಗಿ ಅರ್ಥಮಾಡಿಕೊಂಡೆನಾ ಎಂದು ಯೋಚಿಸುತ್ತಿರುವಾಗ ನನಗೆ ಕಂಡಿದ್ದು ಅವಳ ಆಸಕ್ತಿಯ ಕ್ಷೇತ್ರದ ಬಗ್ಗೆ. ನೆನಪಿನ ಗೊಂದಲಗಳ ನಡುವೆ ನಾನೂ ಅದರತ್ತ ಗಮನಹರಿಸಿರಲಿಲ್ಲ. ಬೇರೆ ಎಲ್ಲವೂ ಸ್ಥಿರವಾಗಿದ್ದರೆ ನೀನು ಎಷ್ಟರಮಟ್ಟಿಗೆ ಇಂಜಿನಿಯರಿಂಗ್, ಅದರಲ್ಲೂ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಮಾಡಬೇಕೆಂದುಕೊಂಡಿದ್ದೀಯಾ ಅಂತ ಕೇಳಿದಾಗ ಸರಸ್ವತಿಯ ಉತ್ತರ, `ನನಗೆ ಈ ವಿಷಯದಲ್ಲಿ ಯಾವ ಆಸಕ್ತಿಯೂ ಇಲ್ಲ' ಅಂದಾಗ ಸುಧಾರಿಸಿಕೊಳ್ಳುವುದು ನನ್ನ ಸರದಿಯಾಗಿತ್ತು.
ಇದು ನಾನು ಊಹಿಸಿರದ್ದು. ನಾನು ಅಲ್ಲಿಯವರೆಗೂ ಅಂದುಕೊಂಡಿದ್ದು ಸರಸ್ವತಿಗೆ ಅವಳು ಓದುತ್ತಿರುವ ಕ್ಷೇತ್ರದಲ್ಲಿ ಆಸಕ್ತಿಯಿದೆ, ಶ್ರದ್ಧೆಯಿಂದ ಓದಿದರೂ ಗಳಿಸುತ್ತಿರುವ ಅಂಕಗಳು ಅವಳ ಓದಿಗೆ ತಕ್ಕ ಹಾಗೆ ಇಲ್ಲ ಅಂತ ಅಂದುಕೊಂಡಿದ್ದು. ಆದರೆ ಸಮಸ್ಯೆ ಇರುವುದು ಅವಳ ಅಭಿರುಚಿಯಲ್ಲಿ. ನಂತರ ಅವಳ ಸಮಗ್ರ ಅಭಿರುಚಿಯ ಕ್ಷೇತ್ರಗಳನ್ನು ಪರೀಕ್ಷಿಸಿದಾಗ ಅತ್ಯಂತ ಕಡಿಮೆ ಅಭಿರುಚಿಯಿರುವುದು ತಾಂತ್ರಿಕ ಕ್ಷೇತ್ರದಲ್ಲಿ ಅಂತ ಗೊತ್ತಾಯಿತು!
ಮುಂದಿನ ಕೆಲವು ಭೇಟಿಗಳಲ್ಲಿ ಇಂಜಿನಿಯರಿಂಗ್ ಆದ ಮೇಲೆಯೂ ಹೇಗೆ ಅವಳು ತನ್ನ ಅಭಿರುಚಿಗೆ ತಕ್ಕದಾದ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ, ತನ್ನನ್ನು ಅಭಿವ್ಯಕ್ತಿಗೊಳಿಸಿಕೊಳ್ಳುವ ಕ್ಷೇತ್ರಗಳಲ್ಲಿ, ತನಗೆ ಆಸಕ್ತಿಯಿರುವ ವಿಷಯಗಳನ್ನು ಹೇಗೆ ಆರಿಸಿಕೊಳ್ಳಬಹುದು ಎನ್ನುವತ್ತ ಗಮನಹರಿಸಲಾಯಿತು. ಹಾಗೆಯೇ ಕೆಲವು ಭೇಟಿಗಳಲ್ಲಿ ಅವಳಿಗೆ ಇದ್ದ ದ್ವಂದ್ವ, ತನ್ನ ಬಗ್ಗೆಯೇ ಇದ್ದ ಗೊಂದಲಗಳನ್ನು ನಿವಾರಿಸಿ, ಅವಳ ಕುಗ್ಗಿದ ಆತ್ಮವಿಶ್ವಾಸವನ್ನು ಹೆಚ್ಚಾಗಿಸುವತ್ತ ಪ್ರಯತ್ನಿಸಿದೆ.
ಹಾಗಾದರೆ ಎಲ್ಲರೂ ತಮ್ಮ ತಮ್ಮ ಅಭಿರುಚಿಗೆ ತಕ್ಕ ಕ್ಷೇತ್ರಗಳಲ್ಲಿಯೇ ಓದುತ್ತಾರಾ, ಅದು ನಿಜಕ್ಕೂ ಸಾಧ್ಯವಾಗುತ್ತಾ ಎನ್ನುವ ಪ್ರಶ್ನೆಗೆ, ನನ್ನ ಉತ್ತರ ಖಂಡಿತವಾಗಿಯೂ ಇಲ್ಲ ಅಂತಲೇ ಹೇಳುವುದು. ಆದರೆ ಕೆಲವು ವ್ಯಕ್ತಿಗಳು ತೀರಾ ಭಿನ್ನವಾದ ಕ್ಷೇತ್ರದಲ್ಲಿ ಓದಲು, ಕೆಲಸ ಮಾಡಲು ಹೊರಟಾಗ ಮಾನಸಿಕ ಒತ್ತಡಗಳು ಹೆಚ್ಚಾಗುವುದು ಸಾಮಾನ್ಯ. ಭಿನ್ನ ಕ್ಷೇತ್ರಗಳಲ್ಲಿ ಕೆಲವರು ಹೊಂದಿಕೊಂಡರೂ ಅವರ ಸಾಧನೆಯ ಮಟ್ಟದಲ್ಲಿ ವ್ಯತ್ಯಾಸವಾಗುತ್ತದೆ. ಅರ್ಜುನ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಗದಾಯುದ್ಧದಲ್ಲಿ ಭೀಮನನ್ನು ಸರಿಗಟ್ಟಲಾರ ಎನ್ನುವುದು ಸೈಕಾಲಜಿ ಎಂಬ ಪದ ಹುಟ್ಟುವುದಕ್ಕೂ ಸಹಸ್ರ ವರ್ಷಗಳ ಮೊದಲು ನಮ್ಮ ಪೂರ್ವಿಕರು ಕಂಡುಕೊಂಡ ಅಭಿರುಚಿಯ ವೈಶಿಷ್ಟ÷್ಯತೆ.