For the best experience, open
https://m.samyuktakarnataka.in
on your mobile browser.

ನೇಹಾ ಹತ್ಯೆ ಪ್ರಕರಣ: ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಐಡಿ ಸಿದ್ಧತೆ

06:02 PM May 12, 2024 IST | Samyukta Karnataka
ನೇಹಾ ಹತ್ಯೆ ಪ್ರಕರಣ  ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿಐಡಿ ಸಿದ್ಧತೆ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ದೋಷಾರೋಪ ಪಟ್ಟಿಯನ್ನು ಶೀಘ್ರದಲ್ಲಿ ಸಲ್ಲಿಸಲು ಸಿದ್ಧತೆ ನಡೆಸಿದೆ.
ಏಪ್ರಿಲ್ ೧೮ರಂದು ಬಿವಿಬಿ ಕಾಲೇಜಿನ ಆವರಣದಲ್ಲಿ ನೇಹಾ ಹಿರೇಮಠ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿ ಆರೋಪಿ ಫಯಾಜ್‌ನನ್ನು ಪೊಲೀಸರು ಬಂಧಿಸಿದರು. ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸಂಘ ಸಂಸ್ಥೆಗಳು ಹೋರಾಟ ನಡೆಸಿದ್ದವು. ಆರೋಪಿಗೆ ಕಠಿಣ ಶಿಕ್ಷೆ ನೀಡಿದರೆ ಸಾಲದು. ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದವು. ಬೀದಿಗಿಳಿದು ಹೋರಾಟ ಮಾಡಿದ್ದವು.
ಸಾರ್ವಜನಿಕ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಚರ್ಚೆ ನೆಡೆದಿತ್ತು. ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರವು ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸಲು ಸಿಐಡಿ ತಂಡವನ್ನು ನೇಮಕ ಮಾಡಿತ್ತು.
ಆರೋಪಿಯನ್ನು ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದ ಸಿಐಡಿ ತಂಡ ಕೊಲೆ ನಡೆದ ಸ್ಥಳ, ಚಾಕು ಖರೀದಿಸಿದ ಸ್ಥಳ, ಕ್ಯಾಂಪಸ್‌ನಲ್ಲಿ ದ್ವಿಚಕ್ರವಾಹನ ನಿಲ್ಲಿಸಿದ್ದ ಸ್ಥಳ ಸೇರಿದಂತೆ ಹಲವು ಕಡೆ ಆರೋಪಿ ಕರೆದೊಯ್ದು ಮಹಜರು ನಡೆಸಿದ್ದರು. ನೇಹಾಳ ಪೋಷಕರ ವಿಚಾರಣೆಯನ್ನೂ ಎಸ್‌ಐಟಿ ನಡೆಸಿತ್ತು. ಹೀಗೆ ಎಲ್ಲ ಆಯಾಮಗಳೊಂದಿಗೆ ತನಿಖೆ ಕೈಗೊಂಡಿದ್ದ ಸಿಐಡಿ ತಂಡವು ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ. ಆರೋಪಿ ಫಯಾಜ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಮೇ ೧೪ಕ್ಕೆ ನ್ಯಾಯಾಂಗ ಬಂಧನ ಅವಧಿ ಮುಗಿಯಲಿದೆ.