ನ್ಯಾಯದಾನ ವ್ಯವಸ್ಥೆಯಲ್ಲಿನ ವಿಳಂಬ ತಡೆಗೆ ಸರ್ಕಾರ ಕ್ರಮ
ಬೆಳಗಾವಿ (ಸುವರ್ಣಸೌಧ) : ರಾಜ್ಯದ ನ್ಯಾಯಾಲಯಗಳಲ್ಲಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಹಾಗೂ ನ್ಯಾಯದಾನ ವ್ಯವಸ್ಥೆಯಲ್ಲಿನ ವಿಳಂಬವನ್ನು ತಡೆಗಟ್ಟುವಲ್ಲಿ ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಪರಿಷತ್‌ನಲ್ಲಿ ಸದಸ್ಯ ಭಾರತಿಶೆಟ್ಟಿ ಅವರ ಪರವಾಗಿ ಸದಸ್ಯ ರವಿಕುಮಾರ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ನ್ಯಾಯಾಲಯದ ಪ್ರಕರಣಗಳಲ್ಲಿ ಆಡಳಿತ ಇಲಾಖೆಗಳಿಂದ ಸಕಾಲದಲ್ಲಿ ಆಕ್ಷೇಪಣಾ ಹೇಳಿಕೆಗಳನ್ನು ದಾಖಲಿಸಲು ಅನುವಾಗುವಂತೆ ಮತ್ತು ನ್ಯಾಯಾಲಯ ಹೇಳಿಕೆಗಳನ್ನು ದಾಖಲಿಸಲು ಅನುವಾಗುವಂತೆ ಮತ್ತು ನ್ಯಾಯಾಲಯ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಲು ಕರ್ನಾಟಕ ಸರ್ಕಾರಿ ವ್ಯಾಜ್ಯ ನಿರ್ವಹಣಾ ಅಧಿನಿಯಮ, 2023 ಜಾರಿಗೆ ಬಂದಿರುತ್ತದೆ ಹಾಗೂ ನಿಯಮಗಳನ್ನು ರಚಿಸಿದ್ದು, ಅವುಗಳನ್ನು ಸದ್ಯದಲ್ಲೇ ಜಾರಿಗೆ ತರಲಾಗುತ್ತದೆ.
ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2023 ದಿನಾಂಕ: 04-03-2024 ರಿಂದ ಜಾರಿಗೆ ಬಂದಿರುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸರ್ಕಾರದ ಪರ 2021ನೇ ಸಾಲಿನಲ್ಲಿ 3216, 2022ನೇ ಸಾಲಿನಲ್ಲಿ 2277, 2023ನೇ ಸಾಲಿನಲ್ಲಿ 2213 ಹಾಗೂ ಸರ್ಕಾರದ ವಿರುದ್ಧವಾಗಿ 2021ನೇ ಸಾಲಿನಲ್ಲಿ 20492, 2022ನೇ ಸಾಲಿನಲ್ಲಿ 16853, 2023ನೇ ಸಾಲಿನಲ್ಲಿ 14994 ಪ್ರಕರಣಗಳು ದಾಖಲಾಗಿವೆ ಎಂದು ಅವರು ಸದನಕ್ಕೆ ತಿಳಿಸಿದರು.