ಪತಂಜಲಿ ಕ್ಷಮೆ ಒಪ್ಪದ ಸುಪ್ರೀಂ
ನವದೆಹಲಿ: ಪತಂಜಲಿ ಆಯುರ್ವೇದ ಸಂಸ್ಥೆಯ ತಪ್ಪು ದಾರಿಗೆಳೆಯುವ ಜಾಹೀರಾತಿಗಾಗಿ ಅದರ ಸ್ಥಾಪಕರಾದ ರಾಮದೇವ್ ಹಾಗೂ ಬಾಲಕೃಷ್ಣ ಅವರ ಕ್ಷಮಾಯಾಚನೆಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ.
ನಾವು ಕುರುಡರಲ್ಲ. ನಿಮ್ಮ ಕ್ಷಮೆಯಾಚನೆಯಲ್ಲಿ ಪ್ರಾಮಾಣಿಕತೆ ಇಲ್ಲ ಎಂದು ಆಕ್ಷೇಪಿಸಿದ ನ್ಯಾಯಾಲಯ, ಪತಂಜಲಿ ವಿರುದ್ಧ ದೀರ್ಘಕಾಲದಿಂದ ಕ್ರಮ ಕೈಗೊಳ್ಳದ ಉತ್ತರಾಖಂಡ ಪರವಾನಗಿ ಪ್ರಾಧಿಕಾರವನ್ನೂ ತರಾಟೆಗೆ ತೆಗೆದುಕೊಂಡಿದೆ. ಹಾಗೆಯೇ ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪ್ರತ್ಯುತ್ತರ ಸಮಾಧಾನಕರವಾಗಿಲ್ಲ ಎಂದೂ ಆಕ್ಷೇಪಿಸಿದೆ.
ರಾಮದೇವ್ ಹಾಗೂ ಬಾಲಕೃಷ್ಣ ತಮ್ಮ ಕ್ಷಮೆಯಾಚನೆಯನ್ನು ಮೊದಲು ಮಾಧ್ಯಮಗಳಿಗೆ ರವಾನಿಸಿದ್ದಾರೆ. ಈ ವಿಷಯ ನ್ಯಾಯಾಲಯದ ವಿಚಾರಣೆಯಲ್ಲಿದ್ದರೂ ಅಫಿಡವಿಟ್‌ನ್ನು ಮೊದಲು ನ್ಯಾಯಾಲಯಕ್ಕೆ ಕಳುಹಿಸಬೇಕೆಂಬುದರ ಅರಿವು ಅವರಿಗಿಲ್ಲ. ಮಂಗಳವಾರ ರಾತ್ರಿ ೭.೩೦ರವರೆಗೂ ನಮಗೆ ಅಪ್‌ಲೋಡ್ ಮಾಡಿಲ್ಲ. ಅವರಿಗೆ ಪ್ರಚಾರದಲ್ಲಿ ನಂಬಿಕೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ನ್ಯಾಯಮೂರ್ತಿ ಕೊಹ್ಲಿ ಕಿಡಿಕಾರಿದರು.
ಆಗ ಪತಂಜಲಿ ಸ್ಥಾಪಕರ ಪರ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮಾತನಾಡಿ, ನ್ಯಾಯಾಲಯದ ನೋಂದಣಿ ಅಧಿಕಾರಿ ಜತೆ ಸಂಪರ್ಕ ಸಾಧಿಸಲು ಬಹಳ ವಿಳಂಬವಾಗಿದ್ದರಿಂದ ಈ ಪ್ರಮಾದ ಉಂಟಾಯಿತೆಂದು ಸಮಜಾಯಿಷಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಅಮಾನುಲ್ಲಾ ಮಾತನಾಡಿ, ನೀವು ಅಫಿಡವಿಟ್‌ನಲ್ಲಿ ವಂಚನೆ ಮಾಡಿದ್ದಾರೆ. ಈ ಕರಡು ರಚಿಸಿದರ‍್ಯಾರು? ಇದರಲ್ಲಿರುವ ಶಬ್ದ ಬಳಕೆ ನೋಡಿ ನನಗೆ ಆಶ್ಚರ್ಯವಾಗುತ್ತಿದೆ ಎಂದರು. ಆಗ ಲೋಪವಾಗಿರುವುದು ನಿಜ ಎಂದು ರೋಹಟಗಿ ಒಪ್ಪಿಕೊಂಡರೂ, ಇದು ತೀರಾ ಸಣ್ಣಮಾತು ಎಂದು ನ್ಯಾಯಪೀಠ ಆಕ್ಷೇಪಿಸಿತು.
ನಮ್ಮ ಆದೇಶದ ನಂತರ ಕ್ಷಮೆಯಾಚನೆ ಮಾಡಿದರಷ್ಟೇ ಸಾಲದು. ನ್ಯಾಯಾಲಯದ ಆದೇಶದ ಉಲ್ಲಂಘನೆಯ ಪರಿಣಾಮ ಎದುರಿಸಲೇಬೇಕು ಎಂದು ಖಡಾಖಂಡಿತವಾದ ಮಾತುಗಳನ್ನಾಡಿತು. ಈ ಪ್ರಕರಣದಿಂದ ಸಮಾಜಕ್ಕೆ ಬಹಳ ವಿಸ್ತೃತವಾದ ಸಂದೇಶ ಹೋಗಬೇಕೆಂದೂ ಬಯಸಿತು.