ಪದಕ ಗೆಲ್ಲಲು ಪರಿಶ್ರಮ, ತರಬೇತಿ ಅತ್ಯಗತ್ಯ
ಮೈಸೂರು: ಕ್ರೀಡಾಪಟುಗಳಲ್ಲಿ ಶ್ರಮ, ಏಕಾಗ್ರತೆ, ಗುರಿ, ಗುಣಮಟ್ಟದ ತರಬೇತಿ ಸಿಕ್ಕಾಗ ಮಾತ್ರ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನ ಚಾಮುಂಡೇಶ್ವರಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ದಸರಾ ವಿಶ್ವಖ್ಯಾತಿ ಪಡೆದಿರುವ ಉತ್ಸವ. ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ದಸರಾ ಉತ್ಸವದ ಅಂಗವಾಗಿ ಸಿಎಂ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡೆಯಲ್ಲಿ ಪದಕ ಗೆಲ್ಲುವುದು ಒಂದು ಭಾಗವಾದರೆ, ಕ್ರೀಡೆಯಲ್ಲಿ ಭಾಗವಹಿಸುವುದೂ ಮುಖ್ಯ. ರಾಜ್ಯದ ವಿವಿಧ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಪದಕ ಗೆಲ್ಲುವ ಪ್ರಯತ್ನ ಬಹಳ ಮುಖ್ಯ ಎಂದರು.
ಯುವಜನತೆ ಕ್ರೀಡೆಯೊಂದಿಗೆ ಓದಿನ ಕಡೆಗೂ ಸೂಕ್ತ ಗಮನ ಹರಿಸಬೇಕು. ಎಲ್ಲ ಕ್ರೀಡಾಪಟುಗಳನ್ನು ಶುಭ ಹಾರೈಸುತ್ತೇನೆ ಎಂದರು.
ಅರಮಾನ್ ಪ್ರೀತ್ ಸಿಂಗ್ ಅವರು ಭಾರತ ಹಾಕಿ ತಂಡದ ನಾಯಕರಾಗಿದ್ದು, ಭಾರತ ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದಾರೆ. ಅರಮಾನ್ ಪ್ರೀತ್ ಸಿಂಗ್ ಅವರು 200ಕ್ಕೂ ಹೆಚ್ಚು ಗೋಲುಗಳನ್ನು ಮಾಡಿರುವ ಕೀರ್ತಿ ಸಲ್ಲುತ್ತದೆ. ಕಳೆದ ಒಲಂಪಿಕ್ಸ್‌ನಲ್ಲಿ ಇವರ ನಾಯಕತ್ವದಲ್ಲಿ ಭಾರತ ಕಂಚಿನ ಪದಕವನ್ನು ಗೆಲ್ಲಲು ಸಾಧ್ಯವಾಯಿತು. ಮುಂದಿನ ಒಲಂಪಿಕ್ಸ್‌ನಲ್ಲಿ ಅವರು ಭಾರತಕ್ಕೆ ಚಿನ್ನದ ಪದಕವನ್ನು ಗೆಲ್ಲುವಂತಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು
ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಅರಮಾನ್ ಪ್ರೀತ್ ಸಿಂಗ್ ಅವರನ್ನು ಇಲ್ಲಿನ ಕ್ರೀಡಾಕೂಟಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಸರ್ಕಾರ ಕ್ರೀಡೆಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.