“ಪರೀಕ್ಷಾ ಪೇ ಚರ್ಚಾ”: ಮೋದಿ ಜತೆ ಸಂವಾದ
ನವದೆಹಲಿ: ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿರುವ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ಸಂವಾದ ನಡೆಸುತ್ತಿದ್ದಾರೆ. ಇದು 7ನೇ 'ಪರೀಕ್ಷೆ ಪೇ ಚರ್ಚಾ' ಕಾರ್ಯಕ್ರಮವಾಗಿದೆ.
ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು 'ನಾನು ಪರೀಕ್ಷಾ ಪೇ ಚರ್ಚೆಗಾಗಿ ತುಂಬಾ ಉತ್ಸುಕನಾಗಿದ್ದೇನೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಯ ಒತ್ತಡ ನಿವಾರಿಸುವ ಮಾರ್ಗಗಳ ಕುರಿತು ನಡೆಯುವ ಸಂವಾದವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಪರೀಕ್ಷೆಯ ನಿರಾಸೆಗಳನ್ನು ಅವಕಾಶಗಳ ಕಿಟಿಕಿಗಳಾಗಿ ಪರಿವರ್ತಿಸೋಣ' ಎಂದು ಬರೆದುಕೊಂಡಿದ್ದಾರೆ.
MyGov ಪೋರ್ಟಲ್ ಪ್ರಕಾರ, ಈ ವರ್ಷ 205.62 ಲಕ್ಷ ವಿದ್ಯಾರ್ಥಿಗಳು, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಅಧಿವೇಶನಕ್ಕೆ ನೋಂದಾಯಿಸಿಕೊಂಡಿದ್ದಾರೆ.
ಸಂವಾದದಲ್ಲಿ ರಾಜ್ಯದ ಇಬ್ಬರು ವಿದ್ಯಾರ್ಥಿಗಳು : ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಬಾಲಕರ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಯೋಗೇಂದ್ರ ಪ್ರಸಾದ್ ಹಾಗೂ ಮೈಸೂರು ಜಿಲ್ಲೆ ಎಚ್ ಡಿ ಕೋಟೆಯ ಸೈಂಟ್ ಮೇರೀಸ್ ಕಾನ್ವೆಂಟ್ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಹರ್ಷಿಕಾ ಸಿ. ಆಯ್ಕೆಯಾಗಿದ್ದಾರೆ.
ನಾವು ಚಳಿಯೊಂದಿಗೆ ಜೀವನ ಸಾಗಿಸುವ ಮನಸ್ಥಿತಿ ರೂಢಿಸಿಕೊಂಡರೆ, ಹೆಚ್ಚು ಚಳಿ ಎನಿಸುವುದಿಲ್ಲ. ಪರೀಕ್ಷೆಯೂ ಹಾಗೆಯೇ, ನಾವು ಮೊದಲು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ದೃಢ ನಿಶ್ಚಯ ಮಾಡಿಕೊಳ್ಳಬೇಕು. ನಾವು ಮೊದಲು ಮೆದುಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಮನಸ್ಸನ್ನೂ ಹುರಿಗೊಳಿಸಬೇಕು. ಈ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಪಡೆಯುತ್ತೇನೆ ಎಂದು ನಿಶ್ಚಯ ಮಾಡಿಕೊಳ್ಳಬೇಕು. ಆಗ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು : ಪ್ರಧಾನಿ ನರೇಂದ್ರ ಮೋದಿ