For the best experience, open
https://m.samyuktakarnataka.in
on your mobile browser.

ಭಾರತದಲ್ಲಿ ಖಗೋಳಶಾಸ್ತ್ರಕ್ಕೆ ಸಿಗಲಿ ಒತ್ತು

04:00 AM Jan 11, 2025 IST | Samyukta Karnataka
ಭಾರತದಲ್ಲಿ ಖಗೋಳಶಾಸ್ತ್ರಕ್ಕೆ ಸಿಗಲಿ ಒತ್ತು

ಮಹಾರಾಷ್ಟ್ರದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ, ಕರ್ನಾಟಕದ ಹುಬ್ಬಳ್ಳಿಯಲ್ಲಿ ಆಡಿ, ಓದಿ, ಬೆಳೆದು ಭಾರತದ ಹಾಗೂ ರಾಜ್ಯದ ಕೀರ್ತಿಯನ್ನು ದೂರದ ಅಮೆರಿಕದಲ್ಲಿ ಹರಡಿರುವ ಖಗೋಳಶಾಸ್ತ್ರಜ್ಞ ಡಾ. ಶ್ರೀನಿವಾಸ್ ಕುಲಕರ್ಣಿಯವರಿಗೆ ಈ ವರ್ಷದ ಈಸ್ಟ್ ನೋಬಲ್ ಪ್ರಶಸ್ತಿ ಪುರಸ್ಕಾರ ಲಭಿಸಿದೆ. ಕಳೆದ ೪೬ ವರ್ಷದಿಂದ ಅಮೆರಿಕದಲ್ಲಿ ನೆಲೆಸಿದ್ದರೂ ಅದೇ ಹುಬ್ಬಳ್ಳಿತನ, ಅದೇ ಕನ್ನಡತನವನ್ನು ಉಳಿಸಿಕೊಂಡಿರುವ ಅವರು, ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಅನ್ವೇಷಣೆಗೆ ನೋಬಲ್ ಸರಿಸಮನಾದ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ. ಮಿಲಿಸೆಕೆಂಡ್ ಪಲ್ಸರ್‌ಗಳು, ಗಾಮಾ-ಕಿರಣ ಸ್ಫೋಟಗಳ ಕುರಿತ ಅವರ ಅನ್ವೇಷಣೆ ನಿಜಕ್ಕೂ ಎಂಥವರನ್ನಾದರೂ ಕುತೂಹಲಕ್ಕೆ ತಳ್ಳುತ್ತವೆ. ಡಾ. ಶ್ರೀನಿವಾಸ್ ಕುಲಕರ್ಣಿಯವರು ನಡೆದು ಬಂದ ದಾರಿ, ಡಿಗ್ರಿಯಾದ ಮೇಲೆ ಅಸ್ಟ್ರಾನಮಿ(ಖಗೋಳಶಾಸ್ತ್ರ)ಯಲ್ಲಿ ಹುಟ್ಟಿದ ಆಸಕ್ತಿ ಹಾಗೂ ಒಲವು, ೧೯೭೬ರಲ್ಲಿ ಅವರ ಜೀವನದ ದಿಕ್ಕು ಬದಲಿಸಿದ ಒಂದು ಘಟನೆ.. ಸೇರಿದಂತೆ ಅವರ ಜೀವನದ ಹಲವಾರು ರೋಚಕ ಹಾಗೂ ಸ್ಫೂರ್ತಿದಾಯಕ ಅಂಶಗಳನ್ನು ಸಂಯುಕ್ತ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಬಿಚ್ಚು ಮನದಿಂದ ಹೇಳಿಕೊಂಡಿದ್ದಾರೆ. ದೇಶದಲ್ಲಿ ಖಗೋಳಶಾಸ್ತ್ರದ ಸ್ಥಿತಿಗತಿ ಹಾಗೂ ಆಗಬೇಕಾದ ಕೆಲಸಗಳು, ಈ ಕ್ಷೇತ್ರದ ಅವಕಾಶಗಳ ಬಗ್ಗೆಯೂ ಮಾತನಾಡಿದ್ದಾರೆ. ಅದರ ಸಂಪೂರ್ಣ ಸಾರ ಇಲ್ಲಿದೆ.

ಸಂ.ಕ: ಖಗೋಳಶಾಸ್ತ್ರದಲ್ಲಿ ಮೊದಲಿಂದಲೂ ಆಸಕ್ತಿ ಇತ್ತೇ?

  • ಇಲ್ಲ. ಶಾಲೆಯಲ್ಲಿದ್ದಾಗ ವಿಜ್ಞಾನದಲ್ಲಿ ನನಗೆ ಬಹಳ ಆಸಕ್ತಿ ಇತ್ತು. ಅದರಲ್ಲೂ ಫಿಸಿಕ್ಸ್ ಹಾಗೂ ಗಣಿತದಲ್ಲಿ ಇನ್ನೂ ಸ್ಪಲ್ಪ ಹೆಚ್ಚು ಪ್ರೀತಿ. ಆವಾಗ ಶಾಲಾ ಮಟ್ಟದಲ್ಲಿ ಖಗೋಳಶಾಸ್ತ್ರವನ್ನೇನು ಕಲಿಸುತ್ತಿರಲಿಲ್ಲ. ಈಗಲೂ ಕಲಿಸಲ್ಲ ಅನಿಸುತ್ತೆ. ಎನಿವೇ.. ಈ ಕಾರಣದಿಂದ ಶಾಲಾ ಮಟ್ಟದಲ್ಲಿ ಖಗೋಳಶಾಸ್ತ್ರದ ಕಡೆ ಅಷ್ಟಾಗಿ ವಾಲಲು ನನಗೆ ಸಾಧ್ಯವಾಗಲಿಲ್ಲವೇನೋ. ಆದರೆ ಧಾರವಾಡದ ಕರ್ನಾಟಕ ಯುನಿವರ್ಸಿಟಿಯ ಲೈಬ್ರರಿಯಲ್ಲಿ ಆಗ ಸೈಂಟಿಫಿಕ್ ಅಮೆರಿಕನ್ ಎಂಬ ಮ್ಯಾಗಜೀನ್ ಬರುತ್ತಿತ್ತು. ಅದನ್ನು ಓದಲೆಂದೇ ಹುಬ್ಬಳ್ಳಿಯಿಂದ ಬಸ್ ಹಿಡಿದು ಧಾರವಾಡಕ್ಕೆ ಬರುತ್ತಿದ್ದೆ. ಅದರಲ್ಲಿ ಫಿಸಿಕ್ಸ್, ಬಯೋಲಾಜಿ, ಖಗೋಳಶಾಸ್ತ್ರಕ್ಕೆ ಸಂಬಂಧಪಟ್ಟ ಲೇಖನಗಳಿರ್ತಿದ್ದವು. ಬಹುಶಃ ಅವನ್ನು ಓದುತ್ತ ಓದುತ್ತಲೇ ವಿಜ್ಞಾನದ ಮೇಲಿನ ಪ್ರೀತಿ ಜಾಸ್ತಿಯಾಗಿ, ಖಗೋಳಶಾಸ್ತ್ರದ ಕಡೆಗೂ ಸಣ್ಣದಾಗಿ ಒಲವು ಬೆಳೆಯುತ್ತಾ ಹೋಯಿತು ಅನಿಸುತ್ತೆ. ಸಂ.ಕ: ನಿಮ್ಮ ತಂದೆಯವರ ಆಸೆ ಏನಾಗಿತ್ತು?
  • ನನ್ನ ತಂದೆ ಸರ್ಕಾರಿ ವೈದ್ಯರಾಗಿದ್ದರು. ನಾನೂ ವೈದ್ಯವೃತ್ತಿಗೇ ಬರಬೇಕೆಂಬ ಆಸೆ ಅವರಿಗಿತ್ತು. ಅದು ಸಹಜವೇ ಅನ್ನಿ. ಅವಿನ್ನೂ ನನ್ನ ಶಾಲಾ ದಿನಗಳು. ಹಾಗೇ ಒಮ್ಮೆ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ಗೆ ತಂದೆ ನನ್ನನ್ನು ಕರೆದುಕೊಂಡು ಹೋಗಿದ್ರು. ಆಪರೇಷನ್ ಶುರುವಾಯಿತು. ಚರ್ಮಕ್ಕೆ ಕತ್ತರಿ ಹಾಕಿದ್ದೇ ತಡ ಒಮ್ಮೆಲೇ ರಕ್ತ ಚಮ್ಮಿ ಬಂತು. ಅದನ್ನು ನೋಡಿದ ನಾನು ಅಕ್ಷರಶಃ ಬೆಚ್ಚಿ ಹೋದೆ. ಅದೇ ಕೊನೆ. ಡಾಕ್ಟರ್ ಆಗಬೇಕೆಂದು ಮುಂದೆ ನಾನೆಂದೂ ಅಂದುಕೊಳ್ಳಲೇ ಇಲ್ಲ. ತಂದೆಯೂ ಆ ಬಗ್ಗೆ ಅಷ್ಟಾಗಿ ಒತ್ತಾಯ ಮಾಡಲಿಲ್ಲ, ಒತ್ತಡವನ್ನೂ ಹೇರಲಿಲ್ಲ.

ಸಂಕ: ಡಿಗ್ರಿ ಟೈಮ್‌ಲ್ಲೇ ಖಗೋಳಶಾಸ್ತ್ರದಲ್ಲಿ ಮುಂದುವರಿಯುವುದಾಗಿ ನಿರ್ಧರಿಸಿದ್ರಾ?

  • ನಿಶ್ಚಿತವಾಗಿ ಹೌದೆಂದು ಹೇಳಲಾರೆ. ಇಂಜಿನಿಯರಿಂಗ್-ಫಿಸಿಕ್ಸ್ ಓದಲು ನಾನು ಐಐಟಿ ಡೆಲ್ಲಿಗೆ ಹೋದೆ. ಇಂಜಿನಿಯರಿಂಗ್ ಫಿಸಿಕ್ಸ್ ಅಂದರೆ ಬಿಎಸ್‌ಸಿ, ಎಂಎಸ್‌ಸಿ ಎರಡನ್ನೂ ಸೇರಿ ಮಾಡುವುದು. ಆಗಲೂ ಖಗೋಳಶಾಸ್ತ್ರದ ಲೇಖನಗಳು, ಮ್ಯಾಗಜೀನ್‌ಗಳನ್ನು ಓದುತ್ತಿದೆ. ಆದರೆ ಮುಂದೆ ಅದನ್ನೇ ಶೈಕ್ಷಣಿಕವಾಗಿ ಓದಬೇಕು, ಓದುತ್ತೇನೆ ಎಂಬ ಖಚಿತ ನಿಲುವಾಗಲೀ, ಖಾತ್ರಿಯಾಗಲೀ ಇರಲಿಲ್ಲ. ಈ ಕುರಿತ ಯಾವ ಮಾರ್ಗದರ್ಶನವೂ ನನಗಿರಲಿಲ್ಲ. ಆದರೆ ೧೯೭೬ರಲ್ಲಿ ಖಗೋಳಶಾಸ್ತ್ರವನ್ನು ಆಯ್ಕೆಮಾಡಿಕೊಂಡು ಅದರಲ್ಲೇ ಮುಂದುವರಿಯುವುದಾಗಿ ನಿರ್ಧರಿಸಿದೆ.

ಸಂ.ಕ: ೧೯೭೬ರಲ್ಲಿ ಏನಾಯಿತು?

  • ಆಗ ಒಂದು ಸ್ಕಾಲರ್‌ಶಿಪ್ ಇತ್ತು. ಎನ್‌ಸಿಆರ್‌ಟಿ ಅಂತ ಅದರ ಹೆಸರು. ಆ ಸ್ಕಾಲರ್‌ಶಿಪ್‌ನಿಂದ ವರ್ಷಕ್ಕೊಮ್ಮೆ ಬೇರೆಬೇರೆ `ಸಮ್ಮರ್ ಸ್ಕೂಲ್‌ಗಳಿಗೆ' ಹೋಗುವುದಾಗುತ್ತಿತ್ತು. ೧೯೭೬ರಲ್ಲಿ ಆ ಸಮ್ಮರ್ ಸ್ಕೂಲ್ ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲೇ ಆಯೋಜನೆಯಾಗಿತ್ತು. ಅದು ಭಾರತದ ಮೊದಲ ಆಸ್ಟ್ರೋಫಿಸಿಕ್ಸ್ ಸಮ್ಮರ್ ಸ್ಕೂಲ್. ಅಲ್ಲಿ ಹಲವಾರು ಖಗೋಳಶಾಸ್ತ್ರಜ್ಞರ ಸಂಪರ್ಕಕ್ಕೆ ಬಂದೆ, ಅವರಿಂದ ಸಾಕಷ್ಟು ತಿಳಿದುಕೊಂಡೆ. ಆಗಲೇ ನಿರ್ಧರಿಸಿದೆ, ಮುಂದುವರಿಯುವುದಾದರೆ ಅದು ಖಗಳೋಶಾಸ್ತ್ರದಲ್ಲೇ ಅಂತ.

ಸಂ.ಕ: ಅಮೆರಿಕಕ್ಕೆ ಹೋಗಲು ನಿರ್ಧರಿಸಿದ್ದು ಯಾವಾಗ?
-ಖಗೋಳಶಾಸ್ತ್ರದಲ್ಲೇ ಮುಂದುವರಿಯಬೇಕೆಂದು ತೀರ್ಮಾನವಾದ ಮೇಲೆ, ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟಿನಲ್ಲೇ ಪಿಎಚ್.ಡಿ ಮಾಡಬೇಕೆಂಬ ಆಸೆ ಬಹಳ ಇತ್ತು. ಇದಕ್ಕಾಗಿ ಅಲ್ಲಿನ ಪ್ರೊಫೆಸರ್ ಒಬ್ಬರ ಜತೆ ಮಾತಾಡಿಯೂ ಇದ್ದೆ. ಆದರೆ, ರೆಡಿಯೋ ಅಸ್ಟ್ರಾನಮಿಯಂಥ ಪ್ರಾಯೋಗಿಕ ಖಗೋಳಶಾಸ್ತ್ರದ ಮೇಲೆ ಅಧ್ಯಯನ ಮಾಡುವುದಾದರೆ ಅಮೆರಿಕದ ಬರ್ಕಲಿಗೆ ಹೋಗುವುದು ಸೂಕ್ತ ಎಂದು ಅವರು ಸೂಚಿಸಿದರು. ಅಲ್ಲೀಯವರೆಗೆ ಬರ್ಕಲಿ ಎಂಬ ಒಂದು ಜಾಗ ಇದೆ ಎಂಬುದೂ ನನಗೆ ಗೊತ್ತಿರಲಿಲ್ಲ. ಸಣ್ಣವನಿದ್ದಾಗ ಬರ್ಕಲಿ ಎಂಬ ಸಿಗರೇಟ್ ಕಂಪನಿ ಇತ್ತು. ಆ ಬರ್ಕಲಿ ಅಷ್ಟೇ ನನಗೆ ಗೊತ್ತಿದ್ದದ್ದು. ನಂತರ ಬರ್ಕಲಿ ಯುನಿವರ್ಸಿಟಿಗೆ ಅಪ್ಲಿಕೇಶನ್ ಹಾಕಿದ್ದೂ ಆಯ್ತು, ಅಮೆರಿಕಕ್ಕೆ ಹೋಗಿದ್ದೂ ಆಯ್ತು.

ಸಂ.ಕ: ಅಮೆರಿಕಕ್ಕೆ ಹೋಗ್ತೇನೆಂದಾಗ ಮನೆಯಲ್ಲಿ ಏನಂದರು?

  • ಅಮೆರಿಕ ದೂರದ ದೇಶದ. ಅಲ್ಲಿಗೆ ಹೋಗಿ ಓದುತ್ತೇನೆ ಎಂದಾಗ ಇಲ್ಲೇ ಇದ್ದು ಓದಿದ್ದರೆ ಚೆನ್ನಾಗಿತ್ತು ಎಂದು ತಂದೆಯವರು ಹೇಳಿದ್ದು ಸತ್ಯ. ಆದರೆ ಇಲ್ಲಿಗಿಂತ ಅಲ್ಲಿ ಅವಕಾಶಗಳು ಹೆಚ್ಚು ಸಿಗ್ತವೆ ಎಂದು ಪ್ರೋತ್ಸಾಹಿಸಿ ಕಳಿಸಿಕೊಟ್ಟಿದ್ದೂ ಅವರೇ.

ಸಂ.ಕ: ಪ್ರತಿಷ್ಠಿತ ಶ್ವಾನ್ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಏನು ಹೇಳುತ್ತೀರಿ?

  • ನೋಬಲ್ ಪ್ರಶಸ್ತಿ ಶುರು ಮಾಡಿದಾಗ ಫಿಸಿಕ್ಸ್, ಕೆಮಿಸ್ಟಿç, ಮೆಡಿಸಿನ್ ಹಾಗೂ ಸಾಹಿತ್ಯ ಕ್ಷೇತ್ರಗಳಿಗಷ್ಟೇ ಅದು ಸೀಮಿತವಾಗಿತ್ತು. ನಂತರ ಅರ್ಥಶಾಸ್ತ್ರದಂಥ ಇನ್ನೂ ಕೆಲ ಕ್ಷೇತ್ರಗಳನ್ನ ಸೇರಿಕೊಂಡರು. ಆದರೆ ಇದರಲ್ಲಿ ಜೀವಶಾಸ್ತ್ರ, ಖಗೋಳಶಾಸ್ತ್ರ ಹಾಗೂ ಗಣಿತ ಕ್ಷೇತ್ರಗಳಿಲ್ಲ. ಹಾಗಾಗಿ ನೋಬಲ್ ಒಳಗೊಳ್ಳದ ಈ ಮೂರೂ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಶಾ ಫೌಂಡೇಶನ್‌ನವರು ಈಸ್ಟ್ ನೋಬಲ್ ಪ್ರಶಸ್ತಿನ್ನ ನೀಡುತ್ತಾರೆ. ಹೆಚ್ಚೂ ಕಡಿಮೆ ೨೫ ವರ್ಷಗಳಿಂದ ಈ ಪ್ರಶಸ್ತಿಯನ್ನ ಕೊಡುತ್ತಾ ಬಂದಿದ್ದಾರೆ.

ಸಂ.ಕ: ಈ ಪ್ರಶಸ್ತಿಯ ಮೊತ್ತವೆಷ್ಟು?

  • ೧೨ ಲಕ್ಷ (೧.೨ ಮಿಲಿಯನ್ ಡಾಲರ‍್ಸ್)

ಸಂ.ಕ: ಖಗೋಳಶಾಸ್ತ್ರದಿಂದ ಸಮಾಜಕ್ಕೆ, ಜನರಿಗೆ ಆಗುವ ಪ್ರಯೋಜನಗಳೇನು?

  • ಫಿಸಿಕ್ಸ್ ಬಗ್ಗೆ ಬಹುತೇಕರಿಗೆ ಗೊತ್ತೇ ಇರುತ್ತದೆ. ಆದರೆ ಎಷ್ಟೋ ಕಡೆಗಳಲ್ಲಿ ಫಿಸಿಕ್ಸ್‌ಗೆ ಆಧಾರವಾಗಿರುವ ಖಗೋಳಶಾಸ್ತ್ರದ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಉದಾಹರಣೆಗೆ ಸೂರ್ಯನ ಸುತ್ತ ಭೂಮಿ ಸುತ್ತುವುದು, ಗುರುತ್ವಾಕರ್ಷಣ ಬಲ, ಗ್ರಹಗಳ ಚಲನವಲನ ಸೇರಿದಂತೆ ಇನ್ನೂ ಅನೇಕ ವೈಜ್ಞಾನಿಕ ಅನ್ವೇಷಣೆಗಳ ಹಿಂದೆ ಇರುವುದು ಖಗೋಳಶಾಸ್ತ್ರ. ಈಗ ನಾವು ಬಳಸುವ ಜಿಪಿಎಸ್ ಹಾಗೂ ಸ್ಯಾಟ್‌ಲೈಟ್‌ನಿಂದ ಪಡೆಯುವ ಪ್ರಯೋಜಗಳಿಗೂ ಅಸ್ಟ್ರಾನಮಿಯೇ ಕಾರಣ. ಹಾಗಾಗಿ ಸಮಾಜದ ಬೆಳವಣಿಗೆಯಲ್ಲಿ ಖಗಳೋಶಾಸ್ತ್ರದ ಪಾತ್ರ ಇದ್ದೇ ಇದೆ.

ಸಂ.ಕ: ಖಗೋಳಶಾಸ್ತ್ರದ ಬಗ್ಗೆ ಬಹಳ ಹಿಂದೆಯೇ ಅನ್ವೇಷಣೆಗಳಾಗಿದೆಯೇ ಹೌದಾ?

  • ಗ್ರಹಣ ಆಗು ಹೋಗುಗಳು, ಭೂಮಿ-ಸೂರ್ಯನ ನಡುವಿನ ಅಂತರ ಸೇರಿದಂತೆ ಹಲವು ಆಸಕ್ತಿದಾಯಕ ಲೆಕ್ಕಾಚಾರಗಳು ಇದ್ದದ್ದಂತೂ ಸತ್ಯ. ಆದರೆ ಆ ಬಗ್ಗೆ ಹೆಚ್ಚಿನ ಜ್ಞಾನವಿರಲಿಲ್ಲ. ಖಗೋಳಶಾಸ್ತ್ರದ ಬಗ್ಗೆ ನಮ್ಮ ಹಿಂದಿನವರಿಗೆ ಎಲ್ಲಾ ಗೊತ್ತಿತ್ತು ಅಂತ ಹೇಳುತ್ತಾರೆ. ನನಗೇನು ಹಾಗೆ ಅನಿಸಲ್ಲ. ಅಂದಮಾತ್ರಕ್ಕೆ ಏನೂ ಗೊತ್ತೇ ಇರಲಿಲ್ಲ ಅಂತಲೂ ಹೇಳುತ್ತಿಲ್ಲ. ಕೆಲ ವಿಷಯಗಳ ಬಗ್ಗೆ ಖಂಡಿತ ಗೊತ್ತಿತ್ತು. ಆದರೆ ಸಂಪೂರ್ಣ ಜ್ಞಾನವಿರಲಿಲ್ಲ. ಉದಾಹರಣೆಗೆ, ಮದುವೆಯ ಸಂದರ್ಭದಲ್ಲಿ ಅರುಂಧತಿ ಹಾಗೂ ವಸಿಷ್ಠ ನಕ್ಷತ್ರಗಳನ್ನು ತೋರಿಸುವ ಸಂಪ್ರದಾಯವಿದೆ. ಅರುಂಧತಿ ವಸಿಷ್ಠರಿಗೆ ನಿಷ್ಠಾವಂತೆ ಎಂಬ ಸಂದೇಶವನ್ನು ಈ ಸಂಪ್ರದಾಯದಿಂದ ಸಾರುತ್ತ ಬರಲಾಗಿದೆ. ಆ ಎರಡು ನಕ್ಷತ್ರಗಳಂತೆ ಸದಾ ಒಬ್ಬರಿಗೊಬ್ಬರೂ ನಿಷ್ಠೆ, ಪ್ರಾಮಾಣಿಕತೆಯಿಂದ ವೈವಾಹಿಕ ಜೀನದಲ್ಲಿ ಇರಬೇಕು ಎಂದು ಆ ಮೂಲಕ ಹೇಳಲಾಗುತ್ತದೆ. ಆದರೆ ಈಗಿನ ಸಂಶೋಧನೆ ಹೇಳುತ್ತದೆ, ಅಲ್ಲಿರುವುದು ೨ ನಕ್ಷತ್ರಗಳಲ್ಲ, ೪ ನಕ್ಷತ್ರಗಳು ಅಂತ. ಹಾಗಾಗಿ ಆ ಸಂಪ್ರದಾಯ ಒಂದು ಕತೆಯಷ್ಟೆಯೇ ಹೊರತು ಸತ್ಯವಲ್ಲ.

ಭಾರತದಲ್ಲಿ ಖಗೋಳಶಾಸ್ತ್ರಕ್ಕೆ ಒತ್ತು ಕೊಡಲಾಗಿದೆಯೇ?

  • ೨೦ ವರ್ಷಗಳ ಹಿಂದೆ ಭಾರತದಲ್ಲಿ ಆಯು ಕಾಂತ್(ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ & ಆಸ್ಟ್ರೋಫಿಸಿಕ್ಸ್)ಎಂಬ ಇನ್‌ಸ್ಟಿಟ್ಯೂಷನ್ ಶುರು ಮಾಡಲಾಯ್ತು. ಇದರ ಮುಖ್ಯ ಉದ್ದೇಶ ಏನಿತ್ತು ಅಂದ್ರೆ, ಖಗೋಳಶಾಸ್ತ್ರವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಚಯಿಸುವುದು. ಇದರಿಂದ ಕೊಂಚ ಪರಿಣಾಮ ಉಂಟಾಗಿ ಭಾರತದಲ್ಲೂ ಕೆಲ ಯುನಿವರ್ಸಿಟಿಗಳಲ್ಲಿ ಈಗ ಅಸ್ಟ್ರಾನಮಿ ಸಬ್ಜೆಕ್ಟ್ ಇದೆ. ಆದರೆ ಅಮೆರಿಕದಷ್ಟು ಇಲ್ಲಿ ಖಗೋಳಶಾಸ್ತ್ರ ಬೆಳೆದಿಲ್ಲ. ೪೬ ವರ್ಷಗಳ ಹಿಂದೆ ನಾನು ಅಮೆರಿಕಕ್ಕೆ ಹೋದಾಗ ಅಸ್ಟ್ರಾನಮಿ ಅನ್ನೋದು ಅಲ್ಲೂ ಕೂಡ ಸಣ್ಣ ವಿಷಯವೇ ಆಗಿತ್ತು. ಆದರೆ ಇಂದು ಅಮೆರಿಕದ ಅನೇಕ ಫಿಸಿಕ್ಸ್ ಡಿಪಾರ್ಟ್ಮೆಂಟ್‌ಗಳಲ್ಲಿ ಇರುವ ಬಹುತೇಕರು ಖಗೋಳಶಾಸ್ತ್ರಜ್ಞರು. ಇದನ್ನೆಲ್ಲ ನೋಡಿದಾಗ ಯುರೋಪ್, ಅಮೆರಿಕದಷ್ಟು ಭಾರತದಲ್ಲಿ ಖಗೋಳಶಾಸ್ತ್ರ ಬೆಳೆದಿಲ್ಲ ಅನ್ನೋದು ಗೊತ್ತಾಗುತ್ತೆ. ಆದರೆ ಪ್ರಯತ್ನಗಳಾಗುತ್ತಿವೆ. ಐಐಟಿ ಮುಂಬೈಯಲ್ಲಿ ಅಸ್ಟ್ರಾನಮಿ ವಿಭಾಗ ಇದೆ. ಅಲ್ಲೇ ೬ ಜನ ಖಗೋಳಶಾಸ್ತ್ರಜ್ಞರಿದ್ದಾರೆ. ಮಂಡಿ, ಕಾನ್ಪುರ್‌ನಲ್ಲಿ ಡಿಪಾರ್ಟ್ಮೆಂಟ್‌ಗಳಿವೆ. ಜಮ್ಮುನಲ್ಲೂ ಅಸ್ಟ್ರಾನಮಿ ವಿಭಾಗ ಶುರು ಮಾಡಲಾಗುತ್ತಿದೆ.

ಖಗೋಳಶಾಸ್ತ್ರ ಓದಿದರೆ ಹೊರದೇಶಕ್ಕೇ ಹೋಗಬೇಕಾ?

  • ಸದ್ಯಕ್ಕೆ ಅಸ್ಟ್ರಾನಮಿಯಲ್ಲಿ ಯುರೋಪ್, ಅಮೆರಿಕದಲ್ಲಿ ಹೆಚ್ಚಿನ ಸೌಲಭ್ಯವಿದೆ. ಆದರೆ ಭಾರತದಲ್ಲೂ ಈ ಕ್ಷೇತ್ರ ಬೆಳೆಯುತ್ತಿದೆ ಎನ್ನುವದು ಸತ್ಯ. ಮುಂದಿನ ದಿನಗಳಲ್ಲಿ ಇಲ್ಲೂ ಹೆಚ್ಚಿನ ಅವಕಾಶ ಸಿಗಬಹುದು. ಆಡಳಿತದಲ್ಲಿರುವವರು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಯಾವ ಅನ್ವೇಷಣೆಗೆ ಪುರಸ್ಕಾರ
ಮಿಲಿಸೆಕೆಂಡ್ ಪಲ್ಸರ್‌ಗಳು
ಗಾಮಾ-ಕಿರಣ ಸ್ಫೋಟಗಳ
ಸೂಪರ್‌ನೋವಾ
ಅಸ್ಥಿರ ಖಗೋಳ ವಸ್ತುಗಳ ಕುರಿತ ಸಂಶೋಧನೆ