ಪರೀಕ್ಷಾ ಸುಧಾರಣೆ-ಸ್ವಾಗತಾರ್ಹ ಕ್ರಮ
ಪಠ್ಯ ರಚನೆ ಮತ್ತು ಅಧ್ಯಾಪನ, ಆಡಳಿತ ನಿರ್ವಹಣೆ, ಪರೀಕ್ಷಾ ನಿಯಂತ್ರಣ ಹಾಗೂ ಪೂರಕ ಚಟುವಟಿಕೆಗಳು ಇವು ಒಂದು ಶೈಕ್ಷಣಿಕ ವ್ಯವಸ್ಥೆಯ ಆಧಾರ ಸ್ತಂಭಗಳು. ಗುಣಮಟ್ಟದ ಸ್ವಾವಲಂಬೀ ಜನಜೀವನ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖವಾದುದು. ಅಂತಹ ಒಂದು ಆದರ್ಶವಾದ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಲು ಈ ನಾಲ್ಕು ಸಂಗತಿಗಳು ಸುಸೂತ್ರವಾಗಿ, ಸುಭದ್ರವಾಗಿ ಮತ್ತು ದೋಷರಹಿತವಾಗಿ ಇರಬೇಕು. ಇದರಲ್ಲಿ ಯಾವುದೇ ಒಂದು ಸಂಗತಿ ದುರ್ಬಲವಾದರೂ ಅದು ಅವ್ಯವಸ್ಥೆ, ಅರಾಜಕತೆಗಳನ್ನುಂಟು ಮಾಡುತ್ತದೆ. ಪರೀಕ್ಷಾ ನಿಯಂತ್ರಣವು ಒಂದು ಅತ್ಯಂತ ಮಹತ್ವದ ಕಾರ್ಯವಾಗಿದೆ. ಪರೀಕ್ಷಾಂಗವು ಕಾರ್ಯನಿರ್ವಹಿಸುವ ರೀತಿ, ಅಲ್ಲಿ ಕೆಲಸ ನಿರ್ವಹಿಸುವವರ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಪಕ್ಷಪಾತರಹಿತ ವರ್ತನೆಗಳು ಶಿಕ್ಷಣ ವ್ಯವಸ್ಥೆಯ ವಿಶ್ವಸಾರ್ಹತೆಯನ್ನು ರೂಪಿಸುತ್ತವೆ. ವರುಷವಿಡೀ ಒಳ್ಳೆಯ ಪಾಠ ಮಾಡಿ, ವಿವಿಧ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಡೆಸಿ ಪರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಉಳಿದೆಲ್ಲ ಕೆಲಸಗಳು ವ್ಯರ್ಥವಾಗುತ್ತವೆ. ಆದ್ದರಿಂದ ಒಂದು ಶೈಕ್ಷಣಿಕ ಪ್ರಕ್ರಿಯೆಗೆ ಅಂತಿಮ ಸ್ಪರ್ಶವನ್ನು ಕೊಡುವ ಪರೀಕ್ಷೆಗಳನ್ನು ನಡೆಸುವುದು, ಮೌಲ್ಯಮಾಪನವನ್ನು ಮಾಡುವುದು ಮತ್ತು ಫಲಿತಾಂಶವನ್ನು ಪ್ರಕಟಿಸುವುದು-ಇವುಗಳನ್ನು ಕಳಂಕ ರಹಿತವಾಗಿ, ಸಮಯಕ್ಕೆ ಸರಿಯಾಗಿ ದಕ್ಷತೆಯಿಂದ ಮಾಡಿದಾಗ ಮಾತ್ರ ಶಿಕ್ಷಣದ ನಿಜವಾದ ಉದ್ದೇಶ ಈಡೇರಲು ಸಾಧ್ಯವಾಗುತ್ತದೆ.
ಆದರೆ ೨೦೨೪ರ ಮೇ ೫ರಂದು ನಡೆದ ನೀಟ್ ಮತ್ತು ಜೂನ್ ೧೬ರಂದು ನಡೆದ ಯುಜಿಸಿ ನೆಟ್ ಪರೀಕ್ಷೆಗಳು ನಡೆಯಬೇಕಾದ ರೀತಿಯಲ್ಲಿ ನಡೆಯದೇ ಗೊಂದಲವನ್ನು ಸೃಷ್ಟಿಸಿವೆ. ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಆತಂಕವನ್ನುಂಟು ಮಾಡಿವೆ. ಅನೇಕ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಪರೀಕ್ಷೆಗಳಲ್ಲಿಯೂ ಅವಾಂತರಗಳು ಸಂಭವಿಸಿದ್ದು ಪರೀಕ್ಷಾ ವ್ಯವಸ್ಥೆಯನ್ನು ಯಾರೊಬ್ಬರೂ ಪ್ರಶ್ನಿಸುವಂತಾಗಿದೆ. ಶೈಕ್ಷಣಿಕ ಸಂಸ್ಥೆಗಳ, ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ಸಂಸ್ಥೆಗಳ ಸಾಮರ್ಥ್ಯ, ಅರ್ಹತೆ, ಪಾವಿತ್ರ‍್ಯತೆಗಳ ಬಗ್ಗೆ ಸಂಶಯ ಮೂಡುವಂತಾಗಿದೆ. ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿಗಳ ಹಣದ ವಿನಿಮಯವಾಗಿದೆ. ಹೀಗಾಗಿ ಮಕ್ಕಳ ಭವಿಷ್ಯದ ಮೇಲೆ ಮತ್ತು ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ಕರಾಳ ಛಾಯೆ ಆವರಿಸಿದೆ.
ನೀಟ್ ಪರೀಕ್ಷೆಯಲ್ಲಿ ಕೆಲವು ಕೇಂದ್ರಗಳಲ್ಲಿ ಆದ ಪ್ರಶ್ನೆಪತ್ರಿಕೆ ಸೋರಿಕೆಯು ಎನ್ಟಿಎಯ ಸ್ಥಳೀಯ ವೈಫಲ್ಯವೆಂದೂ, ಅದಾಗ್ಯೂ ಸರ್ವೋಚ್ಚ ನ್ಯಾಯಾಲಯದ ತೀರ್ಪೇ ಅಂತಿಮವೆಂದೂ ಸರ್ಕಾರ ಹೇಳಿದೆ. ವ್ಯವಸ್ಥೆಯಲ್ಲಿನ ಯಾವುದೇ ತರಹದ ಅಕ್ರಮ ಅಥವಾ ಅವ್ಯವಹಾರಗಳನ್ನು ಸರ್ಕಾರ ಸಹಿಸುವುದಿಲ್ಲ. ಇದರ ಸಂಪೂರ್ಣ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ಸ್ವತಃ ಕೇಂದ್ರ ಶಿಕ್ಷಣ ಸಚಿವರು ತಿಳಿಸಿರುತ್ತಾರೆ. ಎನ್ಟಿಎ ಸಂಸ್ಥೆಯ ಕಾರ್ಯವಿಧಾನದ ತನಿಖೆಯನ್ನು ಸರಕಾರ ನಡೆಸಲಿದೆ. ಸಮಸ್ಯೆಯ ಗಂಭೀರತೆಯನ್ನು ಅರಿತ ಕೇಂದ್ರ ಸರಕಾರವು ಎನ್‌ಟಿಎದ ಮುಖ್ಯಸ್ಥರಾದ ಸುಭೋದ್ ಕುಮಾರ ಸಿಂಗ್‌ರನ್ನು ಕಿತ್ತುಹಾಕಿ ಅವರ ಜಾಗದಲ್ಲಿ ಪ್ರದೀಪ ಸಿಂಗ್ ಖರೋಲಾರನ್ನು ನೇಮಿಸಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಈಗ ಎಫ್.ಐ.ಆರ್.ನ್ನು ಕೂಡ ದಾಖಲಿಸಲಾಗಿದೆ. ಈ ಸಂಬಂಧ ಪಟನಾದ ಇಬ್ಬರನ್ನು ಸಿಬಿಐ ಬಂಧಿಸಿದೆ. ಗುಜರಾತ್‌ನಲ್ಲಿ ಪಾಸಾಗಲು ಸಹಾಯ ಕೋರಿದ ಮೂವರನ್ನು ಮತ್ತು ನೀಟ್(ಯುಜಿ) ೨೦೨೪ ಜಿಲ್ಲಾ ಸಂಯೋಜಕರಾಗಿದ್ದ ಝಾರ್ಖಂಡನ ಪ್ರಾಂಶುಪಾಲ ಮತ್ತು ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವೆಲ್ಲ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಪರೀಕ್ಷಾ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಪುನರ್‌ಸ್ಥಾಪಿಸಿ ಭರವಸೆಯನ್ನು ಮೂಡಿಸುವ ಕ್ರಮಗಳಾಗಿವೆ. ದುಷ್ಕತ್ಯಗಳಲ್ಲಿ ತೊಡಗಿದವರನ್ನು ಸರಕಾರ ರಕ್ಷಿಸುತ್ತಿಲ್ಲ ಎನ್ನುವುದರ ಸಂಕೇತಗಳಾಗಿವೆ. ಅಲ್ಲದೇ ಧೂರ್ತರಿಗೆ ಎಚ್ಚರಿಕೆಯ ಸಂದೇಶವಿತ್ತಿವೆ. ರಾಜ್ಯ/ಕೇಂದ್ರ ಸರಕಾರಗಳು ವೈದ್ಯಕೀಯ ಶಿಕ್ಷಣವನ್ನು ಕೊಡಲು ಒಬ್ಬೊಬ್ಬ ವಿದ್ಯಾರ್ಥಿಯ ಮೇಲೆಯೂ ಹತ್ತಾರು ಲಕ್ಷ ರೂಪಾಯಿಗಳ ಖರ್ಚು ಮಾಡುತ್ತಿವೆ. ಆದ್ದರಿಂದ ಈ ಸೀಟುಗಳು ನ್ಯಾಯವಾಗಿ ಅರ್ಹರಾದವರಿಗೆ ಸಿಗಬೇಕು. ಕಳ್ಳ ಮಾರ್ಗಗಳಿಂದ ಅನರ್ಹರು ಸೀಟು ಗಿಟ್ಟಿಸಿಕೊಂಡು ವೈದ್ಯರಾದರೆ ರೋಗಿಗಳ ಪಾಡೇನು?! ಅಪರಾಧಿಗಳು ವಿದ್ಯಾರ್ಥಿ, ಶಿಕ್ಷಕ, ಅಧಿಕಾರಿ ಯಾರೇ ಆಗಿರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
ಪರೀಕ್ಷಾ ಅವ್ಯವಹಾರಗಳನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವ ದುಷ್ಟರ ಕೂಟಗಳು ಅನೇಕ ರಾಜ್ಯಗಳಲ್ಲಿವೆ. ಬಲಾಢ್ಯರ ಮಕ್ಕಳು, ಓದದೇ ಪಾಸಾಗ ಬಯಸುವವರು ಮತ್ತು ಏನಕೇನ ಕಾರಣೇನ ಸೀಟು ಗಿಟ್ಟಸಲೆತ್ನಿಸುವವರು ಒಂದು ಪ್ರಶ್ನೆಪತ್ರಿಕೆಯನ್ನು ಲಕ್ಷಗಟ್ಟಲೆ ರೂಪಾಯಿಗೆ ಕೊಂಡುಕೊಳ್ಳುತ್ತಿರುವಾಗ ಮಾರುವವರು ಇದ್ದೇ ಇರುತ್ತಾರೆ. ೨೪ ವರ್ಷಗಳಿಂದ ದೇಶದ ಯಾವುದೇ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಾಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಮಾರಿ ಹಣ ಮಾಡುವುದನ್ನೇ ಜೀವನೋಪಾಯ ಮಾಡಿಕೊಂಡಿರುವುದಾಗಿ ಬಿಜೇಂದ್ರ ಗುಪ್ತಾ ಎಂಬಾತ ಹೇಳಿಕೊಂಡಿದ್ದಾನೆ. ಹಲವು ಸಲ ಜೈಲಿಗೆ ತಳ್ಳಲ್ಪಟ್ಟಿದ್ದರೂ ಬಿಡುಗಡೆಯಾದ ನಂತರ ಅದೇ ಪ್ರವೃತ್ತಿಯನ್ನು ಮುಂದುವರಿಸಿದ್ದಾನೆ. ನೀಟ್ ಪ್ರಶ್ನೆಪತ್ರಿಕೆಗಳನ್ನು ದೇಶದಾದ್ಯಂತ ೭೦೦ ವಿದ್ಯಾರ್ಥಿಗಳಿಗೆ ತಲುಪಿಸಿ ೨೦೦-೩೦೦ ಕೋಟಿ ರೂ. ಬಾಚಿಕೊಳ್ಳುವ ಗುರಿ ಹೊಂದಿದ್ದಾಗಿ ಹೇಳಿದ್ದಾನೆ. ಮಾರುವವರು ಮತ್ತು ಕೊಂಡುಕೊಳ್ಳುವವರ ಈ ವಿಷಜಾಲವನ್ನು ಭೇದಿಸಬೇಕು. ಇಬ್ಬರನ್ನೂ ಶಿಕ್ಷಿಸಬೇಕು. ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಾಗಲೂ ಇಂಥ ಘಟನೆಗಳು ಘಟಿಸುತ್ತವೆಂದರೆ ವ್ಯವಸ್ಥೆಯಲ್ಲೇ ಏನೋ ದೋಷವಿದೆ. ಅಧಿಕಾರಿಗಳು, ನೌಕರರು, ಪ್ರಶ್ನೆಪತ್ರಿಕೆಯನ್ನು ತಯಾರಿಸಿದವರು, ಸ್ಕೂಟನೀ ಮಾಡಿದವರು, ಮುದ್ರಕರು, ವಿತರಕರ ಸಹಾಯವಿಲ್ಲದೇ ಪ್ರಶ್ನೆಪತ್ರಿಕೆ ಸೋರಿಕೆ ಆಗಲು ಸಾಧ್ಯವಿಲ್ಲ. ಇವರಲ್ಲಿ ಯಾರಾದರೂ ಶಾಮೀಲಾಗಿರಲೇಬೇಕು.
ಸರಕಾರವೇನೋ ತನಿಖೆ ಮಾಡಿಸಬಹುದು. ತಪ್ಪಿತಸ್ಥರನ್ನು ನ್ಯಾಯಾಲಯವು ಶಿಕ್ಷಿಸಬಹುದು. ಸರಕಾರ ಕಠಿಣ ಕಾನೂನುಗಳನ್ನು ರಚಿಸಬಹುದು. ಆದರೆ ವ್ಯವಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿಗಳೇ ಭ್ರಷ್ಟರಾಗಿದ್ದರೆ, ಅಪ್ರಾಮಾಣಿಕರಾಗಿದ್ದರೆ, ಸ್ವಜನ ಪಕ್ಷಪಾತಿಗಳಾಗಿದ್ದರೆ, ಹಣಕ್ಕಾಗಿ ಎಂತಹ ಹೀನ ಕೆಲಸಕ್ಕೂ ಹಿಂಜರಿಯದ ಭಂಡರಾಗಿದ್ದರೆ ಏನು ಪ್ರಯೋಜನ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ? ಆದರೆ ಕೇಂದ್ರ ಸರಕಾರ ಇಂತಹ ವ್ಯವಸ್ಥೆಯನ್ನು ಹೊಡೆದು ಹಾಕಲು ಪರೀಕ್ಷಾ ಸುಧಾರಣಾ ಕಾಯ್ದೆಯೊಂದನ್ನು ೨೦೨೪ರ ಫೆಬ್ರವರಿಯಲ್ಲಿಯೇ ಪಾಸು ಮಾಡಿದೆ. ಜುಲೈ ೧ ರಿಂದ ಅದು ಸಂಪೂರ್ಣವಾಗಿ ಜಾರಿಗೆ ಬರಲಿದೆ. ಅಂದರೆ ಇದು ನೀಟ್ ಹಾಗೂ ನೆಟ್‌ಗಳಲ್ಲಿ ಅಕ್ರಮ ವ್ಯವಹಾರಗಳು ನಡೆದಾಗ ಸಾಂದರ್ಭಿಕವಾಗಿ ಹುಟ್ಟಿದ ಯೋಚನೆ ಅಲ್ಲ. ಅದಕ್ಕೂ ಮೊದಲೇ ಸರಕಾರ ಇಂತಹ ಸಿದ್ಧತೆಯನ್ನು ನಡೆಸಿತ್ತು. ಇದು ಸರಕಾರಕ್ಕೆ ಪರೀಕ್ಷಾ ಅವ್ಯವಹಾರಗಳನ್ನು ತಡೆಯುವಲ್ಲಿ ಇರುವ ನೈಜ ಕಾಳಜಿಯನ್ನು ತೋರಿಸುತ್ತದೆ. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳ ಸೋರಿಕೆ, ಅಧಿಕೃತವಲ್ಲದ ಸಂಪರ್ಕ-ಸಂವಹನಗಳ ಮೂಲಕ ಪರೀಕ್ಷಾರ್ಥಿಗಳಿಗೆ ಸಹಾಯ ಮಾಡುವುದು, ದಾಖಲೆಗಳ ತಿದ್ದುಪಡಿ, ನಕಲಿ ಅಭ್ಯರ್ಥಿ ಪರೀಕ್ಷೆಯನ್ನು ಬರೆಯುವುದು ಇತ್ಯಾದಿಗಳನ್ನು ಕಾನೂನುಬಾಹಿರವೆಂದು ವ್ಯಾಖ್ಯಾನಿಸಲಾಗಿದೆ. ಇಂತಹ ಕಾನೂನಿನನ್ವಯ ಅಪರಾಧಿಗಳಿಗೆ ಜಾಮೀನು ಸಿಗುವುದಿಲ್ಲ. ಡಿವೈಎಸ್ಪಿ/ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಸ್ಥರದ ಅಧಿಕಾರಿಗಳು ತನಿಖೆ ಮಾಡಬಹುದು. ಕೇಂದ್ರೀಯ ತನಿಖಾ ಸಂಸ್ಥೆಗೂ ಒಪ್ಪಿಸಬಹುದು. ಅಪರಾಧ ಸಿದ್ಧವಾದರೆ ೩ ರಿಂದ ೫ ವರ್ಷ ಜೈಲು ಶಿಕ್ಷೆಯಾಗುತ್ತದೆ. ಸಂಘಟಿತ ಅಪರಾಧವಾಗಿದ್ದರೆ ೫-೧೦ ವರ್ಷ ಜೈಲು ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ. ಆದರೆ ಯಾವುದೇ ದುಷ್ಕತ್ಯದಲ್ಲಿ ತೊಡಗಿರದ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳನ್ನು ದಂಡಿಸದಂತೆ ಕಾನೂನಿನಲ್ಲಿ ರಕ್ಷಣೆಯನ್ನು ಕೊಡಲಾಗಿದೆ. ಇದರ ಜೊತೆಗೆ ಪರೀಕ್ಷಾ ಪದ್ಧತಿಯ ಸಮಗ್ರ ಸುಧಾರಣೆ ಮತ್ತು ಬದಲಾವಣೆಗೆ ಸೂಕ್ತ ಸಲಹೆ, ಮಾರ್ಗದರ್ಶನಗಳನ್ನು ನೀಡಲು ಕೇಂದ್ರ ಶಿಕ್ಷಣ ಮಂತ್ರಾಲಯವು ಇಸ್ರೋದ ಮಾಜಿ ಅಧ್ಯಕ್ಷರಾದ ಡಾ. ಕೆ.ರಾಧಾಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಏಳು ಜನ ಶಿಕ್ಷಣವೇತ್ತರ ಸಮಿತಿಯೊಂದನ್ನು ರಚಿಸಿದೆ. ಯುಜಿಸಿ ನೆಟ್ ಪರೀಕ್ಷೆಯಲ್ಲಾದ ಪ್ರಶ್ನೆ ಪತ್ರಿಕೆ ಸೋರಿಕೆ, ನಂತರ ಪರೀಕ್ಷೆ ರದ್ದು, ನೀಟ್ ಪರೀಕ್ಷೆಯಲ್ಲಿ ಅಕ್ರಮಗಳು, ಪರೀಕ್ಷಾ ವ್ಯವಸ್ಥೆಯ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆಗಳನ್ನು ಕುರಿತಂತೆ ಎದ್ದಿರುವ ಪ್ರಶ್ನೆಗಳನ್ನು/ಸಂಶಯಗಳನ್ನು ನಿವಾರಿಸುವ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಈ ಉನ್ನತ ಸಮಿತಿಯನ್ನು ರಚಿಸಿರುವುದು ಸಕಾಲಿಕ ಹಾಗೂ ಸ್ವಾಗತಾರ್ಹ ಕ್ರಮವಾಗಿದೆ. ಸದಸ್ಯರುಗಳೆಲ್ಲ ಪ್ರತಿಷ್ಠಿತ, ವಿಶ್ವಾಸಾರ್ಹ ಶಿಕ್ಷಣ ತಜ್ಞರಾಗಿರುವುದರಿಂದ ಸಮಿತಿಯಿಂದ ಒಂದು ಒಳ್ಳೆಯ ವರದಿಯನ್ನು ನಿರೀಕ್ಷಿಸಬಹುದು. ಸಮಿತಿಗಳು ಅಧ್ಯಯನವನ್ನು ಮಾಡಿ, ತನಿಖೆ ಮಾಡಿ ವರದಿಯನ್ನು ಕೊಡಬಹುದು. ಆದರೆ ಅದರ ಮೇಲೆ ತಕ್ಷಣ ಯೋಗ್ಯವಾದ ಕ್ರಮಕೈಗೊಳ್ಳಬೇಕು. ವರದಿ ಧೂಳು ತಿನ್ನಬಾರದು.
ವಿವಿಧ ಸಾರ್ವಜನಿಕ ಸಂಸ್ಥೆಗಳಾದ ಯುಪಿಎಸ್‌ಸಿ, ಎಸ್‌ಎಸ್‌ಬಿ. ಆರ್‌ಆರ್‌ಬಿ, ಬ್ಯಾಂಕಿಂಗ್ ನೇಮಕಾತಿ ಮತ್ತು ಎನ್ಟಿಎ ನಡೆಸುವ ಪರೀಕ್ಷೆಗಳಲ್ಲಿ ಪರೀಕ್ಷಾ ಅಕ್ರಮಗಳ ತಡೆಗೆ ದೇಶ ವ್ಯಾಪಿ ಜಾರಿಯಾದ ಪ್ರಥಮ ಕಾನೂನು ಇದಾಗಿದೆ. ಕಾಯಿದೆಯನ್ನು ಜಾರಿಗೊಳಿಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರ ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮತ್ತು ಕಾನೂನಿನ ನಿಯಮಗಳ ಅಧಿಸೂಚನೆಯನ್ನು ಕೂಡ ಹೊರಡಿಸಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಒಳಗೊಂಡಂತೆ ಹಲವಾರು ಪರೀಕ್ಷಾ ಸಂಬಂಧಿತ ನಿಯಮ, ಮಾನದಂಡ ಹಾಗೂ ಮಾರ್ಗಸೂಚಿಗಳನ್ನು ರೂಪಿಸುವಂತೆ ಎನ್ಟಿಎಗೆ ನಿರ್ದೇಶನ ನೀಡಿದೆ. ಇದು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ ಮತ್ತು ಪಾರದರ್ಶಕ ನೇಮಕಾತಿ ಪ್ರಕ್ರಿಯೆಗೆ ದಾರಿಮಾಡಿಕೊಡುತ್ತದೆ. ಅಕ್ರಮ ವ್ಯವಹಾರಗಳನ್ನು ತಡೆಗಟ್ಟಿ ಅರ್ಹರಿಗೆ ಸರ್ಕಾರಿ ಉದ್ಯೋಗ ದೊರಕಿಸಿಕೊಡಲು ಅನುವು ಮಾಡಿಕೊಡುತ್ತದೆ. ಕಾಯಿದೆಗಳೇನೋ ಸರಿ. ಆದರೆ ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಪರಾಧಿ ಎಷ್ಟೇ ಬಲಿಷ್ಠನಾಗಿದ್ದರೂ, ಹಣವಂತನಾಗಿದ್ದರೂ, ಅಧಿಕಾರ ಹೊಂದಿದ್ದರೂ ಮುಲಾಜಿಲ್ಲದೇ ಶಿಕ್ಷೆಯನ್ನು ಕಾರ್ಯಗತಗೊಳಿಸಬೇಕು. ಆಗ ಸಾರ್ವಜನಿಕರಿಗೆ ಮತ್ತು ಪರೀಕ್ಷಾರ್ಥಿಗಳಿಗೆ ಪರೀಕ್ಷೆಗಳ ಮೇಲೆ ಒಂದು ವಿಶ್ವಾಸ ಮೂಡುತ್ತದೆ, ಭರವಸೆ ಬರುತ್ತದೆ.
ವ್ಯವಸ್ಥೆಯೊಂದು ನಿಂತ ನೀರಾದರೆ ಅದೇ ಆಚಾತುರ್ಯಗಳು ಪುನಃ ಪುನಃ ನಡೆಯುತ್ತಿರುತ್ತವೆ. ವ್ಯವಸ್ಥೆಯಲ್ಲಿನ ಭ್ರಷ್ಟ ಅಧಿಕಾರಿಗಳು, ವ್ಯವಸ್ಥೆಯ ಹೊರಗಿದ್ದುಕೊಂಡು ಜನರ ದೌರ್ಬಲ್ಯಗಳನ್ನು ಪೋಷಿಸಿ ಹಣಮಾಡುವ ದಂಧೆಕೋರರು ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಹೊಂದಿರುತ್ತಾರೆ. ಅವರನ್ನು ಮೂಲೋತ್ಫಾಟನೆ ಮಾಡದ ಹೊರತು ಯಾವ ಸರಕಾರವಿದ್ದರೂ ಅಷ್ಟೇ. ಆದ್ದರಿಂದ ವ್ಯವಸ್ಥೆ ಮತ್ತು ಮುಖ್ಯವಾಗಿ ಸಮಾಜದ ದೃಷ್ಟಿ ಬದಲಾಗಬೇಕು. ವಿದ್ಯಾರ್ಥಿಗಳು ಮತ್ತವರ ಪಾಲಕರು ಏನಕೇನ ಕಾರಣೇನ ವಾಮೋಪಾಯಗಳಿಂದ ಪಾಸಾಗುವ, ಅಂಕ ಪಡೆಯುವ, ಸೀಟು ಗಿಟ್ಟಿಸುವ ದುರಾಸೆಯನ್ನು ತೊಡೆದು ಹಾಕಬೇಕು. ಅವರಲ್ಲಿ ಪಾಪಪ್ರಜ್ಞೆಯ ಜಾಗೃತಿ ಆಗಬೇಕು. ಪ್ರತಿಯೊಬ್ಬ ಪಾಲುದಾರರು ನಿಷ್ಠೆ, ಪ್ರಾಮಾಣಿಕತೆಗಳಿಂದ ನ್ಯಾಯಕ್ಕೆ ಕಟಿಬದ್ಧರಾಗಿ ಕೆಲಸವನ್ನು ಮಾಡಿದಾಗ ಮಾತ್ರ ಪರೀಕ್ಷೆಗಳಲ್ಲಿ ಒಂದು ಸಮೂಲಾಗ್ರವಾದ ಬದಲಾವಣೆಯನ್ನು ತರಲು ಸಾಧ್ಯವಾಗುತ್ತದೆ. ತನ್ಮೂಲಕ ಶಿಕ್ಷಣದ ಪಾವಿತ್ರ‍್ಯತೆಯನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ಆ ದಿಶೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು.