ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಾತ್ರರ ಸಂಗಡ ಯಾತ್ರೆಯ ಮಾಡು

04:08 AM Oct 10, 2024 IST | Samyukta Karnataka

ಶ್ರೀ ವಾದಿರಾಜರು ಭಾರತದ ಉದ್ದಗಲಕ್ಕೂ ತೀರ್ಥಯಾತ್ರೆಯನ್ನು ಕೈಗೊಂಡು ತೀರ್ಥಪ್ರಬಂಧ ಎಂಬ ಗ್ರಂಥವನ್ನು ಬರೆದಿದ್ದಾರೆ. ಅದರ ಅನುಸಾರ ತೀಥಕ್ಷೇತ್ರಗಳನ್ನು ಸಂದರ್ಶನ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರಮುಖ ಘಟ್ಟ. ತೀರ್ಥಕ್ಷೇತ್ರಗಳಿಗೆ ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ ಮುದುಕರಾದ ಮೇಲೆ ಹೋಗುವುದು ನಾವು ನೋಡುತ್ತೇವೆ. ಅದು ತಪ್ಪು. ದೇಹದಲ್ಲಿ ಶಕ್ತಿ ಇದ್ದಾಗ, ಸಮಯ ಮಾಡಿಕೊಂಡು ತೀರ್ಥಕ್ಷೇತ್ರ ಮಾಡಿ, ಅಲ್ಲಿ ಮಾಡಬೇಕಾದ ವಿಹಿತ ಕಾರ್ಯಗಳನ್ನು ಮಾಡುವುದು ಶ್ರೇಷ್ಠ.
ಇಂಥ ಪವಿತ್ರ ಕ್ಷೇತ್ರಗಳಿಗೆ "ಪಾತ್ರರ ಸಂಗಡ ಯಾತ್ರೆಯ ಮಾಡು" ಎಂದು ದಾಸರಾಯರು ತಿಳಿಸಿಕೊಟ್ಟಿದ್ದಾರೆ. ಇಲ್ಲಿ ಪಾತ್ರರು ಎಂದರೆ, ಸಮಾನ ಮನಸ್ಕರು. ಎಲ್ಲರಿಗೂ ದೇವರ ಬಗ್ಗೆ, ತೀರ್ಥಕ್ಷೇತ್ರಗಳ ಬಗ್ಗೆ, ಅಲ್ಲಿ ಮಾಡುವ ಕಾರ್ಯಗಳ ಬಗ್ಗೆ ಮಾಹಿತಿಯೂ ಇರಬೇಕು ಹಾಗು ಅವರುಗಳಿಗೆ ಆಸಕ್ತಿಯೂ ಇರಬೇಕು. ತೀರ್ಥಕ್ಷೇತ್ರಕ್ಕೆ ಹೋಗುವಾಗ ಉತ್ತಮ ಪ್ರಯಾಣ ಮುಹೂರ್ತದಲ್ಲಿ ಹೋರಡಬೇಕು. ಜೊತೆಗೆ ತೀರ್ಥಕ್ಷೇತ್ರಗಳಿಗೆ ಹೋಗುವ ಮಾರ್ಗದಲ್ಲಿ, ಭಗವಂತನ ನಿರಂತರ ಧ್ಯಾನ, ಸ್ಮರಣ, ಸಂಕೀರ್ತನೆ ಮಾಡುತ್ತಾ ಯಾತ್ರೆ ಮಾಡಿದರೆ ವಿಶೇಷ ಫಲ.
ಇನ್ನು ತೀರ್ಥಕ್ಷೇತ್ರಗಳಿಗೆ ಅಶ್ವಿಜ ಕಾರ್ತೀಕ ಮಾಸಗಳು ಉತ್ತಮ. ಮಳೆಗಾಲ ಮುಗಿದು, ಭೂಮಿಯಲ್ಲಿ ಬೆಳೆ ಒಂದು ಹಂತಕ್ಕೆ ಬಂದು, ಭುವಿ ಹಸಿರಾದಾಗ, ಕೆರೆ, ನದಿ, ಕಲ್ಯಾಣಿಗಳು ತುಂಬಿದಾಗ. ಜಲಚರ ಪ್ರಾಣಿಗಳು ಸಂತೋಷವಾಗಿ ಇರುವಾಗ ನದಿ, ಮಹಾನದಿಗಳಲ್ಲಿ ತೀರ್ಥಸ್ನಾನ ಮಾಡುವುದರಿಂದ ದೇಹ, ಮನಸ್ಸು ಶುದ್ಧಿಯಾಗಿ ಕೇತ್ರದರ್ಶನದ ಫಲವು ವಿಶೇಷವಾಗಿ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಗ್ರಂಥಗಳು ತಿಳಿಸಿಕೊಟ್ಟಿವೆ.
ದೇಹದಲ್ಲಿ ಶಕ್ತಿ ಇರುವಾಗಲೇ, ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೋಗುವ ಜೊತೆಯಲ್ಲಿ ಆ ಆ ಕ್ಷೇತ್ರಗಳ ಮಹಿಮೆಗಳನ್ನು ತಿಳಿದುಕೊಳ್ಳುತ್ತಾ, ಆ ಆ ಕ್ಷೇತ್ರಗಳಲ್ಲಿ ಮಾಡಬೇಕಾದ ಕ್ಷೇತ್ರವಿಧಿಗಳನ್ನು ಮಾಡುತ್ತಾ, ವೈರಾಗ್ಯ ಹೊಂದಿ, ಧರ್ಮನಿಷ್ಠನಾಗಿ, ಮಿತ ಆಹಾರ ಸೇವಿಸುತ್ತಾ, ಕಾಲ್ನಡಿಗೆಯಲ್ಲಿ ಹೋಗುವುದು ಉತ್ತಮ ಪಕ್ಷ. ಆದಷ್ಟು ತೀರ್ಥಕ್ಷೇತ್ರಗಳ ದರ್ಶನ, ಪುಣ್ಯನದಿಗಳ ಸ್ನಾನದಿಂದ, ಸಜ್ಜನರ ಸಹವಾಸದಿಂದ ದೇವರು ಕಲ್ಪಿಸಿದ ಈ ದೇಹ ಶುದ್ಧಿ ಹೊಂದಿ ಭಗವಂತನಲ್ಲಿ ವಿಶೇಷವಾದ ಪುಣ್ಯ ಸಂಪಾದಿಸಬೇಕು ಎಂದು ನಮ್ಮ ಪುರಾಣಗಳು ತಿಳಿಸಿಕೊಟ್ಟಿವೆ.
ದೇಹಾಲಸ್ಯ ಹೊಂದಿದ ಅಶಕ್ತರು ಕುಳಿತಲ್ಲಿಯೇ ತೀರ್ಥಕ್ಷೇತ್ರಗಳ ನಾಮಸ್ಮರಣ ,ನಾಮ ಸಂಕೀರ್ತನೆ ಮಾತ್ರದಿಂದಲೇ ಪಾಪಗಳು ದೂರವಾಗುತ್ತವೆ ಎಂದು ಋಷಿಮುನಿಗಳು ನಮಗೆ ತಿಳಿಸಿಕೊಟ್ಟಿದ್ದಾರೆ. ತೀರ್ಥಕ್ಷೇತ್ರಗಳಿಗೆ ಹೋಗಲು ಬೇಕಾದ ಆರ್ಥಿಕ ಅಡಚಣೆ ಇರುವವರು, ತಾವಿರುವಲ್ಲಿಯೇ ಬರುವ ಸನ್ಯಾಸಿಗಳ ಸಮಾಗಮಕ್ಕೆ ಹೋದರೆ, ತೀರ್ಥಕ್ಷೇತ್ರ ದರ್ಶನ ಪ್ರಾಪ್ತಿ ಎಂದು ಈ ಪುರಾಣೋಕ್ತಿ ನಮಗೆ ತಿಳಿಸಿಕೊಡುತ್ತದೆ.
ಸಾಧೂನಾಮ್ ದರ್ಶನಂ ಪುಣ್ಯಂ ತೀರ್ಥಭೂತಾಹಿ ಸಾಧವಃ
ತೀರ್ಥಂ ಫಲತಿ ಕಾಲೇನ ಸದ್ಯಃ ಸಾಧುಸಮಾಗಮಃ
ಇದರ ಅರ್ಥ ತೀರ್ಥಕ್ಷೇತ್ರ ದರ್ಶನದಿಂದ ಬರುವ ಫಲ ಸ್ವಲ್ಪ ನಿಧಾನವಾದರೂ, ವಿಶೇಷ ಸಾಧನೆ ಮಾಡಿದ, ಸನ್ಯಾಸಿಗಳ ಅಥವಾ ಸನ್ಯಾಸಿಗಳ ಸಮಾಗಮಕ್ಕೆ ಹೋಗಿ ಅವರ ದರ್ಶನ ಮಾಡಿರೆ ಶೀಘ್ರದಲ್ಲೇ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದ್ದಾರೆ. ಆದುದರಿಂದ ಸರ್ವರೂ ವರ್ಷಕ್ಕೆ ಒಮ್ಮೆಯಾದರೂ ಒಂದು ತೀರ್ಥಕ್ಷೇತ್ರ ದರ್ಶನದ ಪರಿಪಾಠ ಹಾಕಿಕೊಂಡು, ಶ್ರೀ ವಾದಿರಾಜರ ತೀರ್ಥ ಪ್ರಭಂದದ ಗ್ರಂಥದಲ್ಲಿ ತಿಳಿಸಿದಂತೆ ತೀರ್ಥಕ್ಷೇತ್ರ ಸಂದರ್ಶನ ಮಾಡಿದ್ದೆ ಆದರೆ ಅವರ ಜನ್ಮ ಸಾರ್ಥಕ ಗೊಳಿಸಿಕೊಳ್ಳಬಹದು.

Next Article