ಪಾಳುಬಿದ್ದ ಉಪ ತಹಸಿಲ್ದಾರ್ ನೂತನ ಕಟ್ಟಡ.
ಆರ್ ಎಸ್ ಹಿರೇಮಠ.
ಕುಳಗೇರಿ ಕ್ರಾಸ್: ನಿರ್ಮಿತಿ ಕೇಂದ್ರದವರಿಂದ ಗ್ರಾಮದಲ್ಲಿ ಸುಮಾರು 18ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಉಪ ತಹಸಿಲ್ದಾರ ನೂತನ ಕಚೇರಿ ಹಲವು ತಿಂಗಳಿಂದ ಖಾಲಿಬಿದ್ದು ನಿರ್ವಹಣೆ ಇಲ್ಲದೆ ಶಿಥಿಲಗೊಳ್ಳುತ್ತಿದೆ. ಜೊತೆಗೆ ದುರ್ಬಳಕೆಯಾಗುತ್ತಿದ್ದು ಸದ್ಯ ಕಿಡಿಗೇಡಿಗಳ ಹಾವಳಿಗೆ ಕಟ್ಟಡ ನಾಶವಾಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣವಾದರೂ ಸೋರುವ ಕಟ್ಟಡದಲ್ಲೇ ಕಾರ್ಯನಿರ್ವಹಿಸುವ ಇಲ್ಲಿಯ ಉಪ ತಹಸಿಲ್ದಾರರಿಗೆ ನೂತನ ಕಟ್ಟಡದಲ್ಲಿ ಕುಳಿತುಕೊಳ್ಳುವ ಭಾಗ್ಯ ಇನ್ನೂ ಕೂಡಿಬಂದಿಲ್ಲ.
ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಲ್ಲಿಂದಿಲ್ಲಿಗೆ…ಇಲ್ಲಿಂದಲ್ಲಿಗೆ… ಅಲೆಯುತ್ತ ಬೇರೆ-ಬೇರೆ ಸರ್ಕಾರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತ ಮುನ್ನಡೆದು ಬಂದ ಉಪ ತಹಸಿಲ್ದಾರ ಕಚೇರಿ ಈಗ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವಂತ ಕಟ್ಟಡ ಹೊಂದದ ಉಪತಹಸಿಲ್ದಾರ ಕಛೇರಿ ಕುರಿತು ಈ ಹಿಂದೆ ನಮ್ಮ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
ಸುದ್ದಿ ನಂತರ ಎಚ್ಚೆತ್ತ ಅಧಿಕಾರಿಗಳು ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಅಂತೆಯೆ 2023-24ರಲ್ಲಿ ನಿರ್ಮಿತಿ ಕೇಂದ್ರದಿಂದ ನೂತನ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾದರು. ಆದರೆ ಕಟ್ಟಡ ಪೂರ್ಣಗೊಳಿಸಿ ಐದಾರು ತಿಂಗಳು ಗತಿಸಿದರೂ ಉಧ್ಘಾಟನೆಯಾಗದೆ ಪಾಳು ಬಿದ್ದು ಸತ್ತ ನಾಯಿಗಳ ದುರ್ವಾಸನೆ ಬೀರುತ್ತಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಂದರವಾದ ಸರ್ಕಾರಿ ಕಟ್ಟಡವಿಗ ಅನಾಥವಾಗಿ ಅನೈತಿಕ ಚಟುವಟಿಕೆಗಳಿಗೆ ಆಶ್ರಯ ತಾಣವಾಗಿದೆ.
ರಾತ್ರಿಹೊತ್ತು ನಿರ್ಜನ ಪ್ರದೇಶದಂತೆ ಭಾಸವಾಗುವ ಈ ಕಟ್ಟಡವು ಕುಡುಕರಿಗೆ ಮೋಜಿನ ತಾಣವಾಗಿದೆ. ಸುಮಾರು ವರ್ಷಗಳ ಹಿಂದೆ ಪಕ್ಕದಲ್ಲಿ ಕಂದಾಯ ಇಲಾಖೆಯ ಎರೆಡು ವಸತಿ ಗೃಹಗಳನ್ನ ನಿರ್ಮಿಸಲಾಗಿದೆ. ಸದ್ಯ ಕಂದಾಯ ನಿರೀಕ್ಷಕರು ಗ್ರಾಮ ಆಡಳಿತಾಧಿಕಾರಿಗಳು ಇರ್ವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವುಗಳು ಸಹ ಶಿಥಿಲಗೊಂಡು ಬಿಳುವ ಹಂತ ತಲುಪಿವೆ.
ನಾನು ಈಗ ತಾನೆ ಬಂದು ಚಾರ್ಜ್ ತೆಗೆದುಗೊಂಡಿದ್ದೆನೆ. ಸರ್ಕಾರಿ ಶಾಲೆಯಲ್ಲಿರುವ ನಮ್ಮ ನಾಡ ಕಚೇರಿಗೆ ಭೇಟಿ ನೀಡಿದ್ದು ನೂತನ ಕಟ್ಟಡವನ್ನು ವಿಕ್ಷಿಸಿದ್ದೆನೆ. ಇನ್ನು 15 ದಿನಗಳಲ್ಲಿ ಉಧ್ಘಾಟನೆ ಮಾಡಿ ನೂತನ ಕಟ್ಟಡಕ್ಕೆ ನಾಡ ಕಚೇರಿ ಸ್ಥಳಾಂತರಿಸಲಾಗುವುದು. ಬಾದಾಮಿ ನೂತನ ತಹಸಿಲ್ದಾರ ಮಧುರಾಜ ಕೂಡಲಗಿ ಹೆಳಿದ್ದಾರೆ.