`ಪಿಎ' ಧಿಮಾಕಿಗೆ ಅಮಾಯಕ ಬಲಿ?
ವಿಲಾಸ ಜೋಶಿ
ಬೆಳಗಾವಿ: ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆಯ ಗುಮಾಸ್ತ ರುದ್ರೇಶ ಯಡಣ್ಣವರ ಆತ್ಮಹತ್ಯೆಯ ಹಿಂದಿನ ಸತ್ಯವನ್ನು ಕೆದಕುತ್ತ ಹೋದರೆ ಹಲವು ಭಯಾನಕ ಸಂಗತಿಗಳು ಬೆಳಕಿಗೆ ಬರುತ್ತವೆ.
ರುದ್ರೇಶನ ಆತ್ಮಹತ್ಯೆ ಪ್ರಕರಣವನ್ನು ಇಲ್ಲಿನ ಪೊಲೀಸರೂ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವುದೇ ಒತ್ತಡಕ್ಕೆ ಒಳಗಾಗದ ಪೊಲೀಸರು ನೇರವಾಗಿ ವಾಟ್ಸಾಪ್ ಸಂದೇಶದಲ್ಲಿ ಪ್ರಸ್ತಾಪಿಸಲಾಗಿದ್ದ ಮೂವರ ಹೆಸರನ್ನು ಉಲ್ಲೇಖಿಸಿ ಕೇಸ್ ಹಾಕುವ ಕೆಲಸ ಮಾಡಿದ್ದಾರೆ.
ಸಚಿವೆ ಹೆಬ್ಬಾಳಕರ ಆಪ್ತ ಎಂದು ಹೇಳಿಕೊಳ್ಳುತ್ತಿದ್ದ ಕೆ.ಕೆ. ಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಸೋಮು ದೊಡವಾಡ, ತಹಶೀಲ್ದಾರ ನಾಗರಾಳ ಮತ್ತು ಅಶೋಕ ಕಬ್ಬಲಿಗೇರ್ ಎಂಬುವರ ವಿರುದ್ಧ ಖಡೇಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರುದ್ರೇಶ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಅಂದರೆ, ಕಳೆದ ದಿನ ರಾತ್ರಿ ೭.೪೫ಕ್ಕೆ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳೇ ಇರುವ ವಾಟ್ಸಾಪ್ ಗ್ರೂಪ್‌ನಲ್ಲಿ ತನಗಾಗುತ್ತಿರುವ ಕಿರುಕುಳದ ಬಗ್ಗೆ ಹೇಳಿಕೊಂಡು ತಹಶೀಲ್ದಾರ್ ಬಸವರಾಜ ನಾಗರಾಳ, ಸೋಮು ಮತ್ತು ಅಶೋಕ ಕಬ್ಬಲಿಗೇರ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖ ಮಾಡಿದ್ದಾನೆ. ಇದು ಎಲ್ಲೆಡೆ ವೈರಲ್ ಕೂಡ ಆಗಿತ್ತು, ಆತ ಡೆತ್‌ನೋಟ್ ಬರೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬದಲಾಗಿ ವಾಟ್ಸಾಪ್ ಮೆಸೇಜ್ ಮಾಡಿದ್ದನು. ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಆಪ್ತರೊಂದಿಗೆ ಮಾತನಾಡಿದ್ದನು. ಆಗ ಅವರೂ ಕೂಡ ಬುದ್ಧಿಮಾತು ಹೇಳಿ ಅಂತಹ ಕೃತ್ಯಕ್ಕೆ ಮುಂದಾಗಬೇಡ ಎಂದು ತಿಳಿಹೇಳಿದ್ದರು ಎಂದು ಗೊತ್ತಾಗಿದೆ.
ಹಣದ ವ್ಯವಹಾರ?
ಮೂಲಗಳ ಪ್ರಕಾರ ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳು ಅಲ್ಲಾಡಬೇಕೆಂದರೆ ಕಾಂಚಾಣ ಸದ್ದು ಮಾಡಲೇಬೇಕು ಎನ್ನುವ ಹಾಗಿತ್ತು, ಕಚೇರಿಯವರೇ ಹೇಳುವ ಪ್ರಕಾರ ತಹಶೀಲ್ದಾರ್ ಮತ್ತು ಮೃತ ರುದ್ರೇಶ ನಡುವೆ ಹೊಂದಾಣಿಕೆ ಅಷಕ್ಕಷ್ಟೆ ಇತ್ತಂತೆ, ಇದೆಲ್ಲದರ ಮಧ್ಯೆ ಸಚಿವೆ ಹೆಬ್ಬಾಳಕರ ಹೆಸರು ಹೇಳಿಕೊಂಡು ಬರುತ್ತಿದ್ದ ಸೋಮು ಕಿರುಕುಳವೂ ಹೆಚ್ಚಾಗಿತ್ತು ಎನ್ನುವ ಮಾತಿದೆ.
ನೌಕರರಿಗೆ ಆತ್ಮಹತ್ಯೆ ಭಾಗ್ಯ
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ದಿನ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಸಚಿವೆ ಹೆಬ್ಬಾಳಕರ ಪಿಎ ವಿವಾದ ಬಿಜೆಪಿಗೆ ಹೊಸ ಅಸ್ತ್ರ ನೀಡಿದಂತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಕ್ಷಣವೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ ಆಗ್ರಹಿಸಿದರು.
ಬೆಳಗಾವಿಯಲ್ಲಿ ಈ ಹಿಂದೆ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ನಡೆದಾಗ ಈಶ್ವರಪ್ಪ ರಾಜೀನಾಮೆ ನೀಡಿದ್ದರು. ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸೋಮು ದೊಡವಾಡ ಎಂಬುವರ ಮೇಲೆ ಆರೋಪ ಬಂದಿದೆ. ನೈತಿಕ ಹೊಣೆ ಹೊತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಸರಕಾರಿ ನೌಕರರಿಗೆ ಆತ್ಮಹತ್ಯೆ ಭಾಗ್ಯ ಕೊಟ್ಟಿದೆ. ರೈತರ ಆತ್ಮಹತ್ಯೆ ಜೊತೆಗೆ ಹನ್ನೊಂದು ಜನ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ, ರುದ್ರೇಶನ ಆತ್ಮಹತ್ಯೆ ಕುರಿತು ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಂಡಬೇಕೆಂದು ಆಗ್ರಹಿಸಿದರು.
ಯಾರು ಈ ಸೋಮು?
ರುದ್ರೇಶನ ಸಾವಿಗೆ ಕಾರಣರಾದ ಆರೋಪ ಹೊತ್ತ ಸೋಮು ಯಾರು ಎನ್ನುವುದು ಚರ್ಚೆಯ ವಸ್ತುವಾಗಿದೆ. ಮೂಲತಃ ಕೆ.ಕೆ. ಕೊಪ್ಪ ಗ್ರಾಮ ಪಂಚಾಯತಿ ಸದಸ್ಯರಾಗಿರುವ ಸೋಮು ದೊಡವಾಡ ಎಲ್ಲೆಡೆ ತಾನು ಸಚಿವೆ ಹೆಬ್ಬಾಳಕರ ಪಿಎ ಎಂದು ಹೇಳಿಕೊಂಡಿದ್ದನು. ಅಷ್ಟೇ ಅಲ್ಲ ಅಧಿಕಾರಿಗಳಿಗೂ ಕೂಡ ಸಚಿವೆಯ ಹೆಸರು ಹೇಳಿಕೊಂಡು ಹೆದರಿಸುವ ಕೆಲಸ ಮಾಡುತ್ತಿದ್ದನು ಎಂದು ಗೊತ್ತಾಗಿದೆ. ಹಿರೇಬಾಗೇವಾಡಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಕೂಡ ಈತ ಕೆಲ ಗುತ್ತಿಗೆದಾರರನ್ನು ಹೆದರಿಸುವ ಕೆಲಸ ಮಾಡುತ್ತಿದ್ದನು ಎನ್ನುವ ದೂರು ಕೇಳಿ ಬಂದಿತ್ತು.