For the best experience, open
https://m.samyuktakarnataka.in
on your mobile browser.

ಪಿಒಕೆ ಉದ್ವಿಗ್ನ: ಭಾರತಕ್ಕೆ ಇದು ಸುಸಂದರ್ಭವೇ?

03:00 AM Jun 01, 2024 IST | Samyukta Karnataka
ಪಿಒಕೆ ಉದ್ವಿಗ್ನ  ಭಾರತಕ್ಕೆ ಇದು ಸುಸಂದರ್ಭವೇ

ಮೇ ತಿಂಗಳ ಆರಂಭದಿಂದ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ (ಪಿಒಜೆಕೆ, ಸಾಮಾನ್ಯವಾಗಿ ಪಿಒಕೆ) ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಪಾಕಿಸ್ತಾನ ಸರ್ಕಾರದ ನೀತಿಗಳು, ಪಿಒಕೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಅತಿಯಾದ ವಿದ್ಯುತ್ ದರ, ಗೋಧಿಗೆ ಸಬ್ಸಿಡಿ ರದ್ದು, ಅಭಿವೃದ್ಧಿಯ ಕೊರತೆಗಳು ಪಿಒಕೆ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿಯುವಂತೆ ಮಾಡಿದ್ದವು.
ಪಾಕಿಸ್ತಾನ ‘ಆಜಾದ್ ಜಮ್ಮು ಮತ್ತು ಕಾಶ್ಮೀರ’ ಎಂದು ಕರೆಯುವ, ಬಿಬಿಸಿ ಸೇರಿದಂತೆ ಇತರ ಪಾಶ್ಚಾತ್ಯ ಮಾಧ್ಯಮಗಳು ‘ಪಾಕ್ ಆಡಳಿತದ ಕಾಶ್ಮೀರ’ ಎಂದು ಕರೆಯುವ ಪಿಒಕೆಯಲ್ಲಿ ತಲೆದೋರಿರುವ ವ್ಯಾಪಕ ಹಿಂಸಾಚಾರಗಳು ಮತ್ತು ದಂಗೆಗಳು ಸಂಪೂರ್ಣ ಪಾಕಿಸ್ತಾನವನ್ನು ದಂಗುಗೊಳಿಸಿವೆ. ದಂಗೆಗಳು ತಲೆದೋರಿರುವ ವ್ಯಾಪಕ ಪ್ರಮಾಣ ಮತ್ತು ಅದರ ಜೊತೆಗೂಡಿರವ ಹಿಂಸಾಚಾರಗಳು ಪಾಕಿಸ್ತಾನಿ ಆಡಳಿತಗಾರರಿಗೆ ಆಶ್ಚರ್ಯ-ಆಘಾತವನ್ನುಂಟು ಮಾಡಿವೆ.
ಇಸ್ಲಾಮಾಬಾದ್ ಪಿಒಕೆಯಲ್ಲಿನ ಸಂಪರ್ಕವನ್ನು ಮಿತಿಗೊಳಿಸಲು ಪ್ರಯತ್ನಿಸಿ, ಅದಕ್ಕಾಗಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಮಾಧ್ಯಮ ಪ್ರಸಾರವನ್ನು ತಡೆಹಿಡಿದಿದೆ. ಸುದ್ದಿ ವಾಹಿನಿಗಳು ಪಿಒಕೆ ಕುರಿತು ಅತ್ಯಂತ ಕಡಿಮೆ ವರದಿ ಮಾಡುತ್ತಿದ್ದು, ದಿನಪತ್ರಿಕೆಗಳಂತೂ ಈ ಕುರಿತು ಯಾವುದೇ ವರದಿ ಮಾಡಿಲ್ಲ.
ಪಾಕಿಸ್ತಾನ ಸರ್ಕಾರ ಪಿಒಕೆಯ ಮಾಹಿತಿಗಳು ಹೊರ ಹೋಗದಂತೆ ತಡೆಯಲು ಸಾಧ್ಯವಾದಷ್ಟು ಪ್ರಯತ್ನ ನಡೆಸಿದರೂ, ಸ್ಥಳೀಯರು ಮತ್ತು ಅಧಿಕಾರಿಗಳ ನಡುವಿನ ಘರ್ಷಣೆ, ಪಿಒಕೆ ನಾಗರಿಕರು ‘ಸ್ವಾತಂತ್ರ್ಯ’ ಬೇಕೆಂದು ಆಗ್ರಹಿಸುವುದು, ಆಕ್ರೋಶ ಭರಿತ ಭಾಷಣಗಳು, ಪಿಒಕೆಯ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳು ಮತ್ತು ಪಿಒಕೆ ರಾಜಧಾನಿ, ಝೀಲಮ್ ಮತ್ತು ನೀಲಮ್ ನದಿಗಳ ಸಂಗಮ ಸ್ಥಳದಲ್ಲಿರುವ ಮುಜಫರಬಾದ್‌ನಲ್ಲಿ ನಡೆದ ಪ್ರತಿಭಟನೆಗಳ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜಗತ್ತಿನಾದ್ಯಂತ ಹಂಚಲ್ಪಟ್ಟಿವೆ.
ಈಗಾಗಲೇ ಬಲೂಚಿಸ್ತಾನದಲ್ಲಿದ್ದ ಸಮಸ್ಯೆಗಳು, ಪಂಜಾಬಿನ ಪಶ್ತೂನ್ ಪ್ರದೇಶದ ಹೋರಾಟಗಳ ಜೊತೆಗೆ, ಪಿಒಕೆಯಲ್ಲಿನ ಉದ್ವಿಗ್ನತೆ ಪಾಕಿಸ್ತಾನಕ್ಕೆ ಹೊಸ ತಲೆನೋವು ಉಂಟುಮಾಡಿದೆ. ಪಾಕಿಸ್ತಾನ ತನ್ನ ಸುತ್ತಮುತ್ತಲಿನ ದೇಶಗಳ ಜೊತೆಗಿನ ಸಮಸ್ಯೆಗಳ ಜೊತೆಗೆ, ತನ್ನ ಗಡಿಗಳೊಳಗೂ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಪಾಕಿಸ್ತಾನಕ್ಕೆ ತನ್ನ ಆಡಳಿತದಲ್ಲಿ ಜೀವಿಸುತ್ತಿರುವ ಕಾಶ್ಮೀರಿ ಜನರ ಸಮಸ್ಯೆಗಳು ಕಳವಳದ ವಿಚಾರವಾಗುವ ಬದಲಿಗೆ, ಪಿಒಕೆ ಗಲಭೆ ಹೇಗೆ ಕಾಶ್ಮೀರ ವಿಚಾರದಲ್ಲಿ ಭಾರತಕ್ಕೆ ಮೇಲುಗೈ ನೀಡಿದೆ ಎನ್ನುವುದೇ ಆತಂಕ ಉಂಟುಮಾಡಿದೆ.
ಪಿಒಕೆಯಲ್ಲಿ ಸ್ಥಳೀಯ ಜನರು ಪಾಕಿಸ್ತಾನದ ಕಟ್ಟುನಿಟ್ಟಿನ ವಿರುದ್ಧ ಆಕ್ರೋಶಗೊಂಡಿದ್ದು, ಪಾಕಿಸ್ತಾನಿ ಮಿಲಿಟರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಿಂದ ಪಿಒಕೆ ಪ್ರವೇಶಿಸುವ ತಾಣವಾದ ಕೊಹಾಲದಲ್ಲಿ ಪಾಕಿಸ್ತಾನದ ಧ್ವಜವನ್ನು ಸುಟ್ಟುಹಾಕಲಾಗಿದೆ. ಪಿಒಕೆಯಲ್ಲಿ ಆಡಳಿತ ವರ್ಗದವರು ಮತ್ತು ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ಶ್ರೀಮಂತ ಜನರು ಅನುಭವಿಸುತ್ತಿರುವ ಸವಲತ್ತುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಅದರೊಡನೆ, ಸರ್ಕಾರಿ ಅಧಿಕಾರಿಗಳು ೧,೩೦೦ ಸಿಸಿಗಿಂತಲೂ ಹೆಚ್ಚಿನ ಸಾಮರ್ಥ್ಯವುಳ್ಳ ವಾಹನಗಳನ್ನು ಬಳಸುವುದನ್ನು ನಿಷೇಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ನಾಗರಿಕರ ಆಕ್ರೋಶಕ್ಕೆ ಮುಖ್ಯ ಕಾರಣ
ಪಿಒಜೆಕೆ ಎಂದರೆ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶವಾಗಿದೆ. ಕಾಶ್ಮೀರ ತನ್ನದು ಎಂದು ಭಾರತ ಮತ್ತು ಪಾಕಿಸ್ತಾನಗಳೆರಡೂ ಹಕ್ಕು ಮಂಡಿಸುತ್ತಿರುವುದರಿಂದ, ಇದು ವಿವಾದಕ್ಕೊಳಗಾಗಿದ್ದು, ಪಾಕಿಸ್ತಾನದಿಂದ ಕಾಶ್ಮೀರವನ್ನು ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಎಂಬ ಗಡಿ ಪ್ರತ್ಯೇಕಿಸುತ್ತದೆ. ಪಾಕಿಸ್ತಾನ ಎರಡು ಪ್ರಧಾನಿಗಳನ್ನು ಹೊಂದಿದೆ. ಓರ್ವ ಪ್ರಧಾನಿ ಸಂಪೂರ್ಣ ಪಾಕಿಸ್ತಾನದ ಆಡಳಿತ ನಡೆಸಿದರೆ, ಇನ್ನೊಬ್ಬ ಪ್ರಧಾನಿ ಪಿಒಕೆ ಜವಾಬ್ದಾರಿ ಹೊಂದಿರುತ್ತಾರೆ. ಪಿಒಕೆ ಪ್ರಧಾನಿ ಎನ್ನುವುದು ಕೇವಲ ನಾಮಕಾವಸ್ಥೆ ಹುದ್ದೆಯಾಗಿದ್ದು, ಪಾಕ್ ಸರ್ಕಾರದ ಪ್ರಭಾವಕ್ಕೆ ಒಳಪಟ್ಟಿರುತ್ತದೆ.
ಗಿಲ್ಗಿಟ್ - ಬಾಲ್ಟಿಸ್ತಾನ್ (ಪಿಒಜಿಬಿ) ಸೇರಿದಂತೆ, ಪಿಒಕೆಯ ಜನರಲ್ಲಿ ಆಕ್ರೋಶ ಮೂಡಿಸಿರುವ ಪ್ರಮುಖ ಕಾರಣವೆಂದರೆ, ಅಲ್ಲಿನ ನಾಗರಿಕರಿಗೆ ತಮ್ಮ ಪ್ರದೇಶದ ಆಡಳಿತದಲ್ಲಿ ತಮಗೆ ಯಾವುದೇ ನಿಯಂತ್ರಣವಿಲ್ಲ ಎಂಬ ಭಾವನೆಯಾಗಿದೆ. ಆದರೆ, ಪಾಕಿಸ್ತಾನಕ್ಕೆ ಪಿಒಜೆಕೆ ಮತ್ತು ಪಿಒಜಿಬಿ ಎರಡು ಪ್ರದೇಶಗಳ ನಾಗರಿಕರಿಗೆ ಪಾಕಿಸ್ತಾನದ ಸಂಸತ್ತು ಅಥವಾ ಸೆನೇಟ್‌ನಲ್ಲಿ ಪ್ರಾತಿನಿಧ್ಯ ಕೊಡಲು ಪಾಕಿಸ್ತಾನಕ್ಕೆ ಇಚ್ಛೆಯೂ ಇಲ್ಲ, ಕೊಡಲು ಸಾಧ್ಯವೂ ಇಲ್ಲ.
’ಸಂಗೀತ ಕುರ್ಚಿ’ ಆಟದಲ್ಲಿ ನಾಯಕರು
ಹಲವು ವರ್ಷಗಳ ಕಾಲ, ಪಿಒಕೆ ಪ್ರದೇಶದ ನಾಯಕತ್ವ ನಿರಂತರವಾಗಿ ಬದಲಾಗುತ್ತಾ ಬಂದಿತ್ತು. ಒಬ್ಬರಾದ ನಂತರ ಒಬ್ಬರು ಪಿಒಕೆಯ ನಾಯಕರಾಗುತ್ತಿದ್ದರು. ಪಿಒಕೆಯ ಈಗಿನ ನಾಯಕ ಮುಜಫರಾಬಾದ್‌ಗಿಂತ ಹೆಚ್ಚಿನ ಸಮಯವನ್ನು ಇಸ್ಲಾಮಾಬಾದ್‌ನಲ್ಲಿ ಕಳೆಯುತ್ತಿದ್ದು, ಅವರನ್ನು ಜನರು ‘ಗೈರು ಹಾಜರಿ ಮುಖಂಡ’ ಎಂದು ಟೀಕಿಸುತ್ತಿದ್ದಾರೆ.
ಪ್ರಸ್ತುತ ತಲೆದೋರಿರುವ ಉದ್ವಿಗ್ನತೆಗೆ ಇನ್ನೊಂದು ಕಾರಣವೆಂದರೆ, ಪಿಒಕೆ ರಾಜಕೀಯವನ್ನು ನಿಯಂತ್ರಿಸುವಲ್ಲಿ ಮಿಲಿಟರಿಯ ಪಾತ್ರ ಹೆಚ್ಚುತ್ತಿದೆ. ಈ ಕಾರಣದಿಂದ ಪಿಒಕೆಯ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಅಮುಖ್ಯವಾಗಿರುವಂತೆ, ಪರಿಣಾಮಕಾರಿಯಲ್ಲದಂತೆ ಕಂಡುಬರುತ್ತಿವೆ. ಅದರೊಡನೆ, ಹಾದಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಪ್ರಭಾವಿಸುವ ಸಾಮರ್ಥ್ಯವನ್ನಾಗಲಿ, ಅಧಿಕಾರವನ್ನಾಗಲಿ ಪಿಒಕೆಯ ಯಾವುದೇ ರಾಜಕಾರಣಿ ಹೊಂದಿಲ್ಲ. ಪ್ರತಿಭಟನಾ ನಿರತರ ಮುಖಂಡರು ತಮ್ಮನ್ನು ತಾವು ಜಾಯಿಂಟ್ ಅವಾಮಿ ಆ?ಯಕ್ಷನ್ ಕಮಿಟಿ (ಜೆಎಎಸಿ) ಎಂದು ಕರೆದುಕೊಂಡಿದ್ದು, ತಾವೆಲ್ಲರೂ ಒಟ್ಟಾಗಿ ಕರೆಸಿಕೊಂಡ ಜನರ ಮೇಲೂ ಯಾವುದೇ ನಿಯಂತ್ರಣ ಹೊಂದಿಲ್ಲ.
ಪಾಕಿಸ್ತಾನ ತಾನು ಪ್ರತಿ ಬಾರಿ ಪ್ರತಿಭಟನೆಗಳನ್ನು ನಿಭಾಯಿಸುವ ರೀತಿಯಾದ ಪ್ರತಿಭಟನೆಗಳನ್ನು ನಿರ್ಲಕ್ಷಿಸುವ ವಿಧಾನವನ್ನೇ ಈ ಬಾರಿಯೂ ಸಾಧ್ಯವಾದಷ್ಟು ಸುದೀರ್ಘ ಅವಧಿಗೆ ಅನುಸರಿಸಲು ಪ್ರಯತ್ನ ನಡೆಸಿತು. ಆದರೆ ಅಂತಿಮವಾಗಿ ಪಾಕಿಸ್ತಾನಕ್ಕೆ ಪಿಒಕೆಯ ಸಮಸ್ಯೆಗಳನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಎದುರಾದಾಗ, ಪಾಕಿಸ್ತಾನ ತನಗೆ ಪೂರೈಸುವ ಇಚ್ಛೆ ಇಲ್ಲದಿದ್ದರೂ ಒಂದಷ್ಟು ಭರವಸೆಗಳನ್ನು ನೀಡಿತು. ಪ್ರತಿಭಟನೆಗಳು ಕ್ರಮೇಣ ಕಡಿಮೆಯಾದ ಬಳಿಕ, ಪಾಕಿಸ್ತಾನ ತನ್ನ ಭರವಸೆಗಳನ್ನು ಪೂರೈಸುವ ಯಾವ ಪ್ರಯತ್ನವನ್ನೂ ನಡೆಸಲಿಲ್ಲ. ಇನ್ನೊಂದು ಬಾರಿ ಯಾರಾದರೂ ಮರಳಿ ಪ್ರತಿಭಟನೆಗಳನ್ನು ಆರಂಭಿಸಲು ಪ್ರಯತ್ನ ನಡೆಸಿದರೆ, ಪಾಕ್ ಸರ್ಕಾರ ತನ್ನ ಬಲ ಪ್ರಯೋಗಿಸಿ ಅವರನ್ನು ಹೆದರಿಸಿ, ಮೌನವಾಗಿಸಬಹುದು.
ಮುಜಫರಾಬಾದ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಒಂದು ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಸರ್ಕಾರ ಮೇ ೯, ೨೦೨೪ರಂದು ಬಹುತೇಕ ೭೦ ಜನರನ್ನು ಬಂಧಿಸಿತ್ತು. ಇದು ಮತ್ತೆ ಮತ್ತೆ ಪ್ರತಿಭಟನೆಗಳು ನಡೆಯದಂತೆ ತಡೆಯಲು ಸರ್ಕಾರ ಕಂಡುಕೊಂಡ ಪರಿಹಾರೋಪಾಯವಾಗಿತ್ತು. ಆದರೆ ಸರ್ಕಾರದ ಈ ಕ್ರಮ ಜನರು ಇನ್ನೂ ಕೋಪಗೊಳ್ಳುವಂತೆ ಮಾಡಿ, ಉದ್ವಿಗ್ನತೆ ಇನ್ನಷ್ಟು ತೀವ್ರಗೊಳ್ಳುವಂತಾಯಿತು. ಎಲ್‌ಒಸಿ ಸನಿಹದ, ಪಿಒಕೆಯ ಮೀರ್‌ಪುರ್ ವಲಯದ ದಡ್ಯಾಲ್ ಎಂಬಲ್ಲಿ ಚಕಮಕಿಗಳು ನಡೆದವು.
ಆ ಬಳಿಕ, ಸಂಪೂರ್ಣ ಪ್ರದೇಶದಲ್ಲಿ ದಂಗೆಗಳು ಆರಂಭಗೊಂಡು, ಅತ್ಯಂತ ಹಿಂಸಾತ್ಮಕ ರೂಪ ಪಡೆದುಕೊಂಡಿತು. ದಂಗೆ, ಹಿಂಸಾಚಾರಗಳನ್ನು ತಡೆಯುವ ಎಲ್ಲ ಪ್ರಯತ್ನಗಳೂ ವಿಫಲಗೊಂಡವು. ಅರೆ ಮಿಲಿಟರಿ ಪಡೆಗಳನ್ನು ದಂಗೆ ನಿಯಂತ್ರಿಸಲು ಕಳುಹಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಅರೆ ಮಿಲಿಟರಿ ಪಡೆಯ ಯೋಧರು ಗಲಭೆಯ ಸಂದರ್ಭದಲ್ಲಿ ಮೂರರಿಂದ ನಾಲ್ಕು ಪ್ರತಿಭಟನಾ ನಿರತರನ್ನು ಗುಂಡಿಟ್ಟು ಹತ್ಯೆಗೈದರು. ಅವರ ಮೃತ ದೇಹಗಳನ್ನು ರಸ್ತೆಗಳ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಆಕ್ರೋಶಭರಿತರಾಗಿ ಭಾಷಣ ನಡೆಸಿದ ಪ್ರತಿಭಟನಾಕಾರರು ಪ್ರತೀಕಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸತೊಡಗಿದರು.
ಪಿಒಕೆಯ ವಾಸ್ತವ ಆರ್ಥಿಕ ಸಮಸ್ಯೆ
ಪಿಒಕೆಯಲ್ಲಿ ಜನರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು ಅತ್ಯಂತ ವಾಸ್ತವವೂ, ಗಂಭೀರ ಸ್ವರೂಪದವೂ ಆಗಿವೆ. ಪಾಕಿಸ್ತಾನದಲ್ಲಿನ ಆರ್ಥಿಕ ಸಮಸ್ಯೆಯೂ ಪಿಒಕೆಯ ಮೇಲೆ ಪರಿಣಾಮ ಬೀರಿದೆ. ಪಿಒಕೆ ಗೋಧಿ ಮತ್ತು ವಿದ್ಯುತ್ ಶಕ್ತಿಗಾಗಿ ಸರ್ಕಾರದ ಸಬ್ಸಿಡಿಗಳ ಮೇಲೆ ಅಪಾರವಾಗಿ ಅವಲಂಬಿತವಾಗಿದ್ದು, ಇಂತಹ ಅವಶ್ಯಕ ವಸ್ತುಗಳ ಬೆಲೆ ಹೆಚ್ಚುತ್ತಿರುವುದು ಪಿಒಕೆ ನಿವಾಸಿಗಳಿಗೆ ದೊಡ್ಡ ಹೊಡೆತ ನೀಡಿದೆ. ಹಾಗೆಂದು ಪಿಒಕೆ ಪ್ರದೇಶದ ಜನರಿಗೆ ವಿದ್ಯುತ್ ದರ ಪಾಕಿಸ್ತಾನದ ಇತರ ಪ್ರದೇಶಗಳಷ್ಟೇ ಇದೆ. ಆದರೆ, ವಿದ್ಯುತ್ ಶಕ್ತಿ ಪಿಒಕೆಯಲ್ಲಿ ಉತ್ಪಾದನೆಯಾಗುವುದರಿಂದ, ಅದರ ದರ ಪ್ರತಿ ಯುನಿಟ್‌ಗೆ ೩ ಪಾಕಿಸ್ತಾನಿ ರೂಪಾಯಿ ತಗಲುವುದರಿಂದ, ಪಿಒಕೆ ನಾಗರಿಕರಿಗೆ ಅದೇ ಬೆಲೆಗೆ ವಿದ್ಯುತ್ ನೀಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಪಾಕಿಸ್ತಾನ ದೀರ್ಘ ಕಾಲದಿಂದಲೂ ತನ್ನ ನಾಗರಿಕರನ್ನು ನಿಯಂತ್ರಿಸಲು ಬಲ ಪ್ರಯೋಗ ಮತ್ತು ಬೆದರಿಸುವ ವಿಧಾನದ ಮೇಲೆ ಅವಲಂಬಿತವಾಗಿತ್ತು. ಆದರೆ, ಪಿಒಕೆಯಲ್ಲಿನ ಪ್ರತಿಭಟನೆಗಳು ಪಾಕಿಸ್ತಾನ ಸರ್ಕಾರದ ಹಳೆ ಮಾದರಿಯನ್ನು ಅನುಸರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸಾಬೀತುಪಡಿಸಿವೆ. ಪಿಒಕೆ ನಾಗರಿಕರು ಪಾಕ್ ಸೇನೆ ಮತ್ತು ಪೊಲೀಸರೆದುರು ಕಾದಾಟಕ್ಕೆ ನಿಂತಿದ್ದು, ನಾವು ಪಾಕ್ ಸರ್ಕಾರದ ಅಧಿಕಾರಕ್ಕೆ ಸವಾಲು ಹಾಕಲು ಸಮರ್ಥರಿದ್ದೇವೆ ಎಂದು ತೋರಿಸಿದ್ದಾರೆ. ತೆಹ್ರಿಕ್ ಎ ತಾಲಿಬಾನ್ (ಟಿಟಿಪಿ) ಮತ್ತು ಪಶ್ತೂನ್ ನ್ಯಾಷನಲಿಸ್ಟ್ ರೀತಿಯ ಗುಂಪುಗಳು ಪಿಒಕೆ ನಾಗರಿಕರಿಗೆ ಬೆಂಬಲ ವ್ಯಕ್ತಪಡಿಸಿವೆ.
ಹೆಚ್ಚುತ್ತಿರುವ ಕೋಪ, ಹತಾಶೆ
ಪಿಒಕೆ ನಾಗರಿಕರಲ್ಲಿ ಹೆಚ್ಚುತ್ತಿರುವ ಕೋಪ, ಆಕ್ರೋಶ ಮತ್ತು ಹತಾಶೆಗಳಿಂದಾಗಿ ಅವರು ತಮ್ಮ ಮುಂದಿರುವ ಆಯ್ಕೆಗಳನ್ನು ಪರಿಗಣಿಸಲು ಪ್ರಯತ್ನಿಸಬಹುದು ಎನ್ನುವುದು ಪಾಕಿಸ್ತಾನಕ್ಕೆ ಆತಂಕಕಾರಿ ಅಂಶವಾಗಿದೆ. ಅವರು ನಾವು ಇನ್ನೂ ಒದ್ದಾಡುತ್ತಿರುವ ಪಾಕಿಸ್ತಾನದ ನಿಯಂತ್ರಣದಲ್ಲೇ ಇರಬೇಕೇ ಅಥವಾ ಭಾರತಕ್ಕೆ ಸೇರ್ಪಡೆಯಾಗಿ, ಅಲ್ಲಿನ ಬಲವಾದ ಆರ್ಥಿಕತೆಯ ಪ್ರಯೋಜನ ಪಡೆಯಬೇಕೇ ಎಂದು ಆಲೋಚಿಸಲು ಆರಂಭಿಸಿದರೂ ಆಶ್ಚರ್ಯ ಪಡಬೇಕಿಲ್ಲ.
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರ ಬಳಿ ಪಿಒಕೆ ಕುರಿತು ಮತ್ತು ಅದು ಭಾರತಕ್ಕೆ ಮರಳುವ ಸಾಧ್ಯತೆಗಳ ಕುರಿತು ಪ್ರಶ್ನಿಸಲಾಗಿತ್ತು. ಅವರ ಉತ್ತರ ಅತ್ಯಂತ ಆಸಕ್ತಿಕರವಾಗಿತ್ತು.
“ಭಾರತ ೨೦೧೯ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಬದಲಾವಣೆ ತಂದಾಗ ಅದು ಸಾಧ್ಯವಾಗಲಿದೆ ಎಂದು ಯಾರೂ ನಂಬಿರಲಿಲ್ಲ” ಎಂದು ಸಚಿವರು ಹೇಳಿದ್ದರು. ಭಾರತ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ಥಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ಸೂಕ್ತ ಅವಕಾಶ ಲಭಿಸಿದರೆ, ಅಥವಾ ಭಾರತವೇ ಏನಾದರೂ ಅವಕಾಶವನ್ನು ಸೃಷ್ಟಿಸಿದರೆ, ಭಾರತ ಈ ಪ್ರದೇಶಗಳ ಮೇಲೆ ಪಾಕಿಸ್ತಾನದ ನಿಯಂತ್ರಣವನ್ನು ಕೊನೆಗೊಳಿಸಬಹುದು. ಅಷ್ಟಕ್ಕೂ ಭಾರತ ಪಿಒಕೆಯನ್ನು ತನ್ನ ಅವಿಭಾಜ್ಯ ಅಂಗವೆಂದೇ ಪರಿಗಣಿಸಿದೆ.