ಪಿಸಿಓಡಿ… ಹೆಣ್ಣಿನ ಹಾರ್ಮೋನ್‌ಗಳ ಬದಲಾವಣೆ
ಭೂಮಿತಾಯಿಯ ಓಡಲಿನಲ್ಲಿ ಅದೆಷ್ಟೋ ಸಹಸ್ರ ಜೀವಗಳು ಅದೆಷ್ಟೋ ಸಮಸ್ಯೆಗಳನ್ನು ಎದುರಿಸಿ ಕೊಂಡು ಬದುಕುತ್ತಿವೆ. ಹಾಗೆಯೇ ಭೂಮಿಯೊಂದಿಗೆ ಹೋಲಿಸಿಕೊಳ್ಳುವ ಸ್ತ್ರೀ ಎಂಬ ಜೀವಿಯು ತನ್ನ ಒಡಲಲ್ಲಿ ಎದುರಿಸುವ ಸಮಸ್ಯೆಗಳಲ್ಲಿ ಪಿಸಿಓಡಿ (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್) ಅಥವಾ ಪಿಸಿಓಎಸ್ (ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್) ಕೂಡ ಒಂದು.
ಪಿಸಿಓಡಿ ಎಂದು ಕರೆಯಲ್ಪಡುವ ಈ ಸಮಸ್ಯೆಯು ಹೆಣ್ಣಿನ ಅಂಡಾಶಯದಿಂದ ಪಕ್ವವಲ್ಲದ ಅಥವಾ ಭಾಗಶಃ ಅಭಿವೃದ್ಧಿ ಹೊಂದಿದ ಮೊಟ್ಟೆಗಳ ಅತಿಯಾದ ಉತ್ಪಾದನೆಯಿಂದ ಅದು ನಂತರದಲ್ಲಿ ಅಂಡಾಶಯದ ಚೀಲಗಳಾಗಿ ಬೆಳೆದು ಹೆಚ್ಚಿನ ಪ್ರಮಾಣದ ಆಂಡ್ರೋಜೆನ್‌ಗಳನ್ನು (ಹಾರ್ಮೋನ್‌ಗಳ ಅಸಮತೋಲನ) ಬಿಡುಗಡೆ ಮಾಡುವ ಅಂಡಾಶಯವನ್ನು ವಿಸ್ತರಿಸುತ್ತದೆ,
ಇದರಿಂದ ದೇಹದಲ್ಲಿ ಅಧಿಕ ತೂಕ, ತಲೆ ಕೂದಲು ಉದುರುವಿಕೆ, ಮುಖದಲ್ಲಿ ಮೊಡವೆ ಹೀಗೆ ಹಲವು ತೊಂದರೆಗಳು ಕಂಡುಬರುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಹರೆಯದ ಹೆಣ್ಣು ಮಕ್ಕಳನ್ನು ಬಾಧಿಸಿ ಕಾಡುತ್ತಿರುವ ಎಲ್ಲೆಡೆ ಹೇಳಿಕೊಳ್ಳಲಾಗದ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಸುಮಾರು ೨೫ ರಿಂದ ೪೫ ವಯಸ್ಸಿನ ಸ್ತ್ರೀಯರು ಹೆಚ್ಚಾಗಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಣ್ಣು ತನ್ನ ಕಿಶೋರಾವಸ್ತೆ ದಾಟಿದ ನಂತರ ಯೌವ್ವನದಿಂದ ವೃದ್ಧಾಪ್ಯದವರೆಗೂ ಹಲವಾರು ಬದಲಾವಣೆಗೆ ಒಳಗಾಗುತ್ತಾಳೆ ಜೊತೆಗೆ ಹಾರ್ಮೋನ್‌ಗಳ ವ್ಯತ್ಯಾಸವಾದಲ್ಲಿ ಒಂದರ ಮೇಲೊಂದು ಸಮಸ್ಯೆ ಸುಳಿಗೆ ಅವಳು ಸಿಲುಕುತ್ತಾಳೆ. ಹಾಗಾಗಿ ಹಲವು ರೋಗಲಕ್ಷಣಗಳುಳ್ಳ ಪಿಸಿಓಡಿ/ಪಿಸಿಓಸಿ ವೈದ್ಯ ಲೋಕಕ್ಕೆ ಒಂದು ಸವಾಲಾಗಿದೆ. ಬಂಜೆತನಕ್ಕೆ ಕಾರಣವಾಗಬಲ್ಲ ಈ ಸಮಸ್ಯೆಯಿಂದ ಇತರ ಅನೇಕ ರೋಗಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯಿಲ್ಲ. ಪಿಸಿಓಡಿ ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಆರಂಭಿಕ ಮುಟ್ಟು, ಅನಾರೋಗ್ಯಕರ ಜೀವನಶೈಲಿ ಮತ್ತು ಮಾಲಿನ್ಯ ಇನ್ನೂ ಹಲವಾರು ಕಾರಣಗಳಿಂದ ಪ್ರಾಥಮಿಕವಾಗಿ ಹೆಣ್ಣಿನ ಅಂಡಾಶಯಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಸ್ತ್ರೀ ಅಂಡಾಶಯಗಳ ಲೈಂಗಿಕ ಹಾರ್ಮೋನ್‌ಗಳಾದ ಇಸ್ಟ್ರೋಜೆನ್ ಮತ್ತು ರೆಜಿಸ್ಟರ್ನ್ ಮತ್ತು ಕೆಲವು ಪ್ರಮಾಣದ ಪುರುಷ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರನ್ನು ಉತ್ಪಾದಿಸುತ್ತವೆ. ಇದು ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೆ. ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ ಅಧಿಕ ಒತ್ತಡ, ವ್ಯಾಯಾಮದ ಕೊರತೆ, ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಪಿಸಿಓಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತದೆ. ದೇಹದಲ್ಲಿ ತೂಕ ಹೆಚ್ಚಳ, ಸೊಂಟದ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಬೊಜ್ಜಿನ ಅಂಶ ಶೇಖರಣೆ, ಅನಗತ್ಯವಾಗಿ ಕೂದಲ ಬೆಳವಣಿಗೆ, ಪುರುಷರಂತೆ ತುಟಿಯ ಮೇಲ್ಭಾಗದಲ್ಲಿ ಮೀಸೆಯ ಆಕಾರದಲ್ಲಿ ಕೂದಲು ಕಂಡುಬರುವುದು. ತಲೆ ಕೂದಲು ಉದುರುವುದು, ಅದರಲ್ಲೂ ನೆತ್ತಿಯ ಭಾಗದಲ್ಲಿ ಕೂದಲು ಉದುರಿ ಬೋಳಾಗಿ ಕಾಣಿಸುವುದು, ಮುಖದಲ್ಲಿ ಮೊಡವೆ ಸಮಸ್ಯೆ, ಚಿಂತೆ ಮತ್ತು ಖಿನ್ನತೆಗೆ ಒಳಗಾಗುವುದು, ಹೆಚ್ಚಿನ ರಕ್ತಸ್ರಾವ, ಗರ್ಭ ಧರಿಸಲು ಕಷ್ಟ, ಗರ್ಭಿಣಿಯಾದರೂ ಗರ್ಭಧಾರಣೆಯ ಸಮಯ ತೊಂದರೆಗಳನ್ನು ಅನುಭವಿಸುವುದು ಇವೆಲ್ಲವೂ ಇದರಿಂದ ಮುಕ್ತಿ ಪಡೆಯಲು ಮಹಿಳೆಯರು ತಮ್ಮ ಜೀವನಶೈಲಿಯಲ್ಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದುಕೊಂಡು ವೈದ್ಯರು ನೀಡುವ ಔಷಧಿಗಳನ್ನು ಸೇವನೆ ಮಾಡುವುದರ ಜೊತೆಗೆ ಮನೆ ಮದ್ದುಗಳ ಬಳಕೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ಹಾಗಲಕಾಯಿ ಕೇವಲ ತಿನ್ನಲು ಮಾತ್ರ ಕಹಿ ಇರುತ್ತದೆ ಅಷ್ಟೇ, ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ. ನಿಯಮಿತವಾಗಿ ಹಾಗಲಕಾಯಿ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲುಕೋಸ್ ಮಟ್ಟ ಸರಿಯಾದ ಪ್ರಮಾಣದಲ್ಲಿದ್ದು, ಗರ್ಭಿಣಿಯರ ದೇಹದ ತೂಕ ಕಮ್ಮಿಯಾಗಲು ಸಹಾಯ ಮಾಡುತ್ತದೆ. ಇನ್ನು ಹೆಚ್ಚಿನ ಫೈಬರ್ ಆಹಾರಗಳನ್ನು ಸೇವಿಸಿದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ತೂಕ ನಷ್ಟಕ್ಕೆ ಆಹಾರ ಪಟ್ಟಿಯಲ್ಲಿ ಬ್ರೌನ್ ರೈಸ್, ಗೋಧಿ ಬ್ರೆಡ್, ಧಾನ್ಯಗಳು, ಪಾಲಕ್, ಹೂಕೋಸ್, ಗಡ್ಡೆಕೋಸು ಸೇರಿಸಿ. ಅತಿಯಾದ ಕೆಫಿನ್, ಸಕ್ಕರೆ, ಬೇಕರಿ ತಿಂಡಿ, ಮೈದಾವನ್ನು ಜೊತೆ ಸಂಪೂರ್ಣ ತ್ಯಜಿಸಿ. ಹಿಂದಿನ ಕಾಲದಿಂದಲೂ ನಮ್ಮ ಪೂರ್ವಜರು ಬೆಳ್ಳಿ ಧರಿಸಿದರೆ ದೇಹಕ್ಕೂ ಆರೋಗ್ಯಕ್ಕೂ ತುಂಬಾ ಉತ್ತಮ ಎಂದು ಹೇಳುತ್ತಿದ್ದರು. ಪಿಸಿಓಡಿಯನ್ನು ತಪ್ಪಿಸಲು ಬೆಳ್ಳಿಯನ್ನು ಬಳಸುವುದರಿಂದ ಅರ್ಥಾತ್ ಬೆಳ್ಳಿಯ ಲೋಟದಲ್ಲಿ ನೀರನ್ನು ಕುಡಿಯಲು ಆದ್ಯತೆ ನೀಡಿ, ಜೊತೆಗೆ ಬೆಳ್ಳಿ ಆಭರಣಗಳನ್ನು ಧರಿಸುವುದು ಉತ್ತಮ. ಪಿಸಿಓಡಿಯಿಂದ ಬಳಲುತ್ತಿರುವವರು ದೈನಂದಿನ ಆಹಾರ ಚಾರ್ಟನ್ನು ರಚಿಸಿಕೊಂಡು ಅದೇ ರೀತಿಯಲ್ಲಿ ನಮ್ಮ ದೇಹಕ್ಕೆ ಒಳ್ಳೆಯ ಆಹಾರವನ್ನು ತೆಗೆದುಕೊಳ್ಳುವುದು ಉತ್ತಮ. ಆಹಾರದಲ್ಲಿನ ಸಣ್ಣ ಸಮರ್ಥನೆಯ ಬದಲಾವಣೆಗಳು ಪಿಸಿಓಡಿ ಪ್ರಯಾಣದಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಬಹುದು. ಜೊತೆಗೆ ದೈನಂದಿನ ಜೀವನಶೈಲಿಯಲ್ಲಿ ಯೋಗ, ವ್ಯಾಯಾಮ ಅಗತ್ಯವಾಗಿ ಮಾಡುವುದರಿಂದ ಮನಸ್ಸು, ದೇಹ ಉಲ್ಲಾಸಭರಿತವಾಗಿರುತ್ತದೆ.