ಪುಟ್ಯಾ ಅಲ್ಲ ಲೊಟ್ಯಾ
ಅಲ್ಲೆಲ್ಲೋ ಸಮುದ್ರದ ನಡುವೆ ಹಡಗಿನಲ್ಲಿನ ರೂಮಿನಲ್ಲಿ ಕನ್ನಡಿಯ ಮುಂದೆ ಕುಳಿತು ಪೌಡರ್ ಹಚ್ಚಿಕೊಳ್ಳುತ್ತಿದ್ದ ರಷಿಯಾದ ಪುಟ್ಯಾ ಅಲಿಯಾಸ್ ಪುಟಿನ್ಗೆ ಭರತ ಖಂಡದ ದಿಕ್ಕಿನಿಂದ ತನ್ನ ಹೆಸರು ಹಿಡಿದು ಕೂಗಿದ ಹಾಗೆ ಆಗಿ ಧಿಡಗ್ಗನೇ ಎದ್ದು ಕುಳಿತು. ಯಾರವರು ನನ್ನ ಹೆಸರನ್ನು ಹಿಡಿದು ಕರೆದವರು ಎಂದು ಒದರಿದ. ಸುತ್ತ ಮುತ್ತ ಯಾರೂ ಇಲ್ಲದ್ದು ನೋಡಿ ಮತ್ತೆ ಕನ್ನಡಿ ಮುಂದೆ ಕುಳಿತು.. ನನ್ನ ಹೆಸರು ಹಿಡಿದು ಒದರಿದವರು ಯಾರಿರಬಹುದು ಎಂದು ಯೋಚಿಸಿ ಕೊನೆಗೆ ನೋಡೋಣ ತಡಿ ಎಂದು ಮೊಬೈಲ್ ತೆಗೆದುಕೊಂಡು ಕರೆ ಮಾಡಿ…ಸೋದಿ ಮಾಮೋರೆ ನೀವೇನಾದರೂ ಕರೆದಿರಾ? ಎಂದು ಕೇಳಿದ. ಅದಕ್ಕೆ ಅವರು ನೋ ವೇ… ನಾನು ಲೆಕ್ಕಾಚಾರದಲ್ಲಿ ಬಿಜಿ ಆಗಿದ್ದೇನೆ ನಾನ್ಯಾಕೆ ನಿನ್ನ ಹೆಸರು ಒದರಲಿ ಎಂದು ಗಂಟಲಿನಿಂದ ಧ್ವನಿ ತೆಗೆದು ಹೇಳಿದಾಗ… ಅದ್ಯಾರೋ ಒದರಿದ ಹಾಗೆ ಆಯಿತು ಎಂದು ಸುಮ್ಮನಾದ ಆದರೂ ತಲೆಯಲ್ಲಿ ಗುಂಗಿ ಹುಳ ಕೊರೆದಂತಾಗಿ… ಯಾರೋ ಒದರಿದ ಹಾಗೆ ಆಯಿತು ಎಂದು ಸೀದಾ ಅಮೆರಿಕದ ಬುಡ್ಡೇಸಾಬನಿಗೆ ಕಾಲ್ ಮಾಡಿ… ಯಾಕೆ ಸಾಹೇಬ್ ನನ್ನನ್ನು ನೆನಪಿಸಿಕೊಂಡಿರಿ ಎಂದು ಕೇಳಿದಾಗ… ಅದೇ ನಿದ್ದೆ ಮಾಡಿ ಎದ್ದಿದ್ದ ಬುಡ್ಡೇಸಾಬ… ನಿನಗೇನು ತಲೆಯಲ್ಲಿ ಹುಳು ಕಡಿತಿದೆಯಾ? ನಾನ್ಯಾಕೆ ನಿನ್ನ ಹೆಸರು ಒದರಲಿ? ಎಂದು ಝಾಡಿಸುವ ಧ್ವನಿಯಲ್ಲಿ ಹೇಳಿದ. ಸಣ್ಣ ಮುಖ ಮಾಡಿಕೊಂಡು ಅಯ್ಯೋ ಅವನೇ ಇರಬೇಕು ಎಂದು ಚೀನಾಗೆ ಕಾಲ್ ಮಾಡಿ… ಹಲೋ ಜಿಂಗಣ್ಣೋರೆ ನೀವೇನಾದರೂ ನನ್ನ ಹೆಸರು ಒದರಿದಿರಾ? ಎಂದು ಕೇಳಿದಾಗ ಅದೇ ಧ್ವನಿಯಲ್ಲಿ ಜಿಂಗ್ಯಾನು ನಾನ್ಯಾಕೆ ನಿನ್ನ ಹೆಸರು ಒದರಲಿ? ನನಗೇನು ಬೇರೆ ಕೆಲಸವಿಲ್ಲವೇ? ನಿನಗೇನು ಬೇರೆ ಕೆಲಸವಿಲ್ಲವೇ ಎಂದು ಹೇಳಿದಾಗ ತಥ್ಥೇರಿ ಎಂದು ಸುಮ್ಮನಾದ. ಎಷ್ಟೋ ದಿನಗಳವರೆಗೆ ಆತನ ತಲೆಯಲ್ಲಿ ತನ್ನ ಹೆಸರನ್ನು ಒದರಿದ್ದಾರೆ ಎಂಬುದು ಹೋಗಲೇ ಇಲ್ಲ. ಎದುರಿಗೆ ಯಾರೇ ಬರಲಿ… ಅವರನ್ನು ನಿಲ್ಲಿಸಿ ನನ್ನ ಹೆಸರಿಡಿದು ಕೂಗಿದಿರಾ? ಎಂದು ಕೇಳುತ್ತಿದ್ದ. ಎಲ್ಲರೂ ನಾನ್ಯಾಕೆ ಒದರಲಿ ಎಂದು ಕೇಳುತ್ತಿದ್ದರು. ಅವತ್ತು ಜ್ಞಾನಿ ಗ್ಯಾನಮ್ಮಳನ್ನು ಭೇಟಿಯಾಗಿ ಯಮ್ಮಾ ಇಂಗಿಂಗೆ ಆಗುತ್ತಿದೆ ಎಂದು ಹೇಳಿದಾಗ ಅವಳು ಯೋಚಿಸಿ.. ನೀನು ಅಲೈ ಕನಕನ ಹತ್ತಿರ ಹೋಗಿ ಭೇಟಿಯಾಗು ಇದ್ಯಾಕೋ ಗಾಳಿ ಅಂತ ಅನಿಸುತ್ತಿದೆ ಅಂದಳು.
ಅಲೈ ಕನಕನನ್ನು ಭೇಟಿಯಾದರೆ ನೀನು ಯಾರಿಗೋ ಏನೋ ಮಾಡಿದ್ದೀಯ. ಅವಳು ನಿನ್ನನ್ನು ಎಡಬಿಡದೇ ಕಾಡುತ್ತಿದ್ದಾಳೆ. ಎಂದು ಹೇಳಿದ. ಹೋಮ ಹವನ ಎಲ್ಲವನ್ನೂ ಮಾಡಿದರೂ ಆತನ ಕಿವಿಯಲ್ಲಿ ಗುಂಯ್ ಗುಡುವುದು ನಿಲ್ಲಲಿಲ್ಲ. ಕೊನೆಗೆ ಮಾನಸಿಕ ವೈದ್ಯ ಡಾ. ತಿರ್ಮೂಲಿ ಲಾದುಂಚಿ ಹತ್ತಿರ ಹೋಗಿ ನೋಡಿ ಸ್ವಾಮಿ ಇಂಗಿಂಗೆ ಆಯಿತು. ಯಾರೂ ಹೇಳುತ್ತಲೇ ಇಲ್ಲ ಅಂದಾಗ… ಆತ ಗಹಗಹಿಸಿ ನಕ್ಕು ಇಷ್ಟೇ ತಾನೆ…? ಇನ್ನು ಮೇಲಿಂದ ನೀನು ನಿನ್ನ ಹೆಸರನ್ನು ಪುಟ್ಯಾ ಬದಲಿಗೆ ಲೊಟ್ಯಾ ಎಂದು ಬದಲಿಸಿಕೋ ಎಂದು ಹೇಳಿ ತನ್ನ ಫೀಸು ಇಸಿದುಕೊಂಡು ಕಳುಹಿಸಿದ.