For the best experience, open
https://m.samyuktakarnataka.in
on your mobile browser.

ಪುಟ್ಯಾ ಹೊಡೆದ ಚಾನ್ಸು…

02:30 AM May 08, 2024 IST | Samyukta Karnataka
ಪುಟ್ಯಾ ಹೊಡೆದ ಚಾನ್ಸು…

ರಷಿಯಾದ ಪುಟ್ಯಾ ಮತ್ತೆ ಅಧ್ಯಕ್ಷನಾಗಿದ್ದಕ್ಕೆ… ಹೊಡೆದೆಲ್ಲಪಾ ಪುಟ್ಯಾ ಚಾನ್ಸು ಅಂತ ಸೋದಿಮಾಮಾ ಫೋನಿನಲ್ಲಿ ಅಭಿನಂದಿಸಿದ್ದಾರೆ. ಅಮೆರಿಕದ ಬುಡ್ಯಾ ಪುಟ್ಯಾನ ಜತೆ ಮಾತುಬಿಟ್ಟಿದ್ದಾನಾದರೂ ಮೂರು ಸಲ ಮಿಸ್‌ಕಾಲ್ ಕೊಟ್ಟು ಸುಮ್ಮನಾಗಿದ್ದಾನಂತೆ. ಇಂಥವೆಲ್ಲ ಸುದ್ದಿ ಕೇಳಿ.. ಕೇಳಿ ನಾನ್ಯಾಕೆ ಪುಟ್ಯಾನನ್ನು ನಮ್ಮ ಚಾನಲ್‌ಗೆ ಮಾತನಾಡಿಸಬಾರದು ಎಂದು ವರದಿಗಾರ್ತಿ ಕಂ ನಿರೂಪಕಿ ಕಿವುನುಮಂತಿ ಹಾಗೂ ಹೀಗೂ ಮಾಡಿ ಪುಟ್ಯಾನ ಅಪಾಯಂಟ್‌ಮೆಂಟ್ ತೆಗೆದುಕೊಂಡಳು. ಮುಂಜಾನೆದ್ದ ಕೂಡಲೇ ಮಸ್ತ್ ರೆಡಿಯಾಗಿ ಪುಟ್ಯಾನ ಮನೆಗೆ ಹೋದಾಗ ಆತ ಇನ್ನೂ ಎದ್ದಿರಲಿಲ್ಲ. ಅಲ್ಲಿನ ಜನರು ಅಲ್ಲಿನ ಸೋಫಾದ ಮೇಲೆ ಕೂಡಿಸಿ ಸಾಹೇಬರು ಮಲಗಿದ್ದಾರೆ. ಅವರು ಎದ್ದ ಮೇಲೆ ಕರೀತಿನಿ ಎಂದು ಹೇಳಿ ಶುಗರ್‌ಲೆಸ್ ಟೀ ಕೊಟ್ಟು ಹೋದರು. ಅಲ್ಲೇ ಟೀಪಾಯ್ ಮೇಲೆ ಹರಡಿದ್ದ ನಿನ್ನೆ-ಮನ್ನೆಯ ಪೇಪರ್‌ಗಳನ್ನು ತಿರುವಿ ಹಾಕುತ್ತಿದ್ದಳು. ಪ್ರತಿಯೊಂದು ಪೇಪರ್‌ನಲ್ಲಿ… ಪುಟ್ಯಾಗೆ ಈ ಬಾರಿ ಚಾನ್ಸ್ ಎಂದು ಬರೆದಿದ್ದರು. ಪುಟ್ಯಾ ಜನರಿಗೆ ನಾಡಿದ ಉಪಕಾರ-ಎದುರಾಳಿ ಬಾಯಲ್ಲಿ ಖಾರ-ಖಾರ ಎಂದು ಮಾರ್ಮಿಕವಾಗಿ ಬರೆದಿದ್ದರು. ಇನ್ನೊಂದು ವಾರಪತ್ರಿಕೆಯಲ್ಲಿ ಮತ್ತೆ ಪುಟ್ಯಾ-ಮುಂದೈತಿ ಚಿಟ್ಯಾ ಎಂದು ಬರೆದಿದ್ದರು. ಎಲ್ಲವನ್ನೂ ಓದುತ್ತ ಕುಳಿತ ಹನುಮಂತಿಗೆ ಪುಟ್ಯಾನಿಗೆ ಕೇಳಲು ಮತ್ತಷ್ಟು ವಿಷಯಗಳು ಸಿಕ್ಕವು. ಸುಮಾರು ಒಂದೂವರೆ ತಾಸಿನ ನಂತರ ಒಬ್ಬಾತ ಬಂದು ಸಾಹೇಬ್ರು ಈಗ ಎದ್ದಿದ್ದಾರೆ ಮಖ ತೊಳೆದುಕೊಂಡು ಬರುತ್ತಾರೆ ಎಂದು ಹೇಳಿ ಹೋದ. ಹನುಮಂತಿ ಮೈಕು-ಕ್ಯಾಮೆರಾ ಸರಿಮಾಡಿಕೊಂಡು ಕೂತಳು. ಅಷ್ಟರಲ್ಲಿ ಪುಟ್ಯಾ ಬಂದ.
ಹನುಮಂತಿ- ನಮಸ್ಕಾರ ಅಭಿನಂದನೆ
ಪುಟ್ಯಾ- ಹಾಂ..ಹೇಳಿ..ಹೇಳಿ
ಹನುಮಂತಿ- ಸಾರ್ ಮತ್ತೆ ಅಧ್ಯಕ್ಷರಾದಿರಿ ಗುಟ್ಟೇನು?
ಪುಟ್ಯಾ- ಆ ಗುಟ್ಟು ಹೇಳುವುದಿಲ್ಲ ಎಲ್ಲರಿಗೂ ಗೊತ್ತಾಗುತ್ತೆ
ಹನುಮಂತಿ- ಓ ಹೌದಾ…ನಮ್ಮ ಸೋದಿಮಾಮೋರುದ್ದು ಏನಾಗಬಹುದು
ಪುಟ್ಯಾ- ಅಯ್ಯೋ ಅದನ್ಯಾಕೆ ಕೇಳ್ತಿಯಮ್ಮ ನಾ ಆಗಲೇ ಹೇಳಿದ್ದೇನೆ
ಹನುಮಂತಿ- ಇರಲಿ ನನ್ನ ಮುಂದೆ ಹೇಳಿ
ಪುಟ್ಯಾ- ಈಗಲ್ಲ ಸ್ವಲ್ಪ ತಡಿ ಹೇಳುತ್ತೇನೆ..
ಹನುಮಂತಿ- ಹೋಗಲಿ ನಿಮ್ಮ ಆರೋಗ್ಯ ಹೇಗಿದೆ?
ಪುಟ್ಯಾ- ಫಸ್ಟ್ಕ್ಲಾಸಾಗಿದೀನಿ… ಹೊಸಗುಡ್ಡದಿಂದ ಹುಣಸೆಹಣ್ಣು-ಇರಪಾಪುರದಿಂದ ಇರಕಲಹಣ್ಣು, ತುಪ್ಪಲಗೇರಿಯಿಂದ ತುಪ್ಪ, ಲಾದುಂಚಿಯಿಂದ ಲೋಳಸರ ಎಲ್ಲವನ್ನೂ ತರಿಸಿ ಚೂರ್ನ ಮಾಡಿಟ್ಟುಕೊಂಡಿದ್ದೇನೆ. ದಿನಾಲು ಅದನ್ನೇ ತಿನ್ನುತ್ತ..ತಾಸಿಗೊಂದು ಸಲ ಪೌಡರ್ ಹಚ್ಚಿಕೊಳ್ಳುತ್ತೇನೆ. ಜನರು ನಿನಗೆ ಇನ್ನು ವಯಸ್ಸೇ ಆಗಿಲ್ಲ ಎಂದು ನನ್ನನ್ನೇ ಆಯ್ಕೆ ಮಾಡುತ್ತಿದ್ದಾರೆ ನೋಡಿ ಎಂದು ಅಲ್ಲಿಯೇ ಇದ್ದ ಪೌಡರ್ ಡಬ್ಬಿ ತೆಗೆದು ಅಂಗೈಗೆ ಹಾಕಿಕೊಂಡು ಮುಖಕ್ಕೆ ಸವರಿಕೊಂಡ ಪುಟ್ಯಾ.