ಪುಣ್ಯವಂತರ ಕನಸಿನಲ್ಲಿ ದೇವತೆ…
ನವರಾತ್ರಿ ಒಂಭತ್ತೂ ದಿನವೂ ಕರಿಭಾಗೀರತಿಗೆ ರಾತ್ರಿ ಕನಸು ಬೀಳುತ್ತಿವೆಯಂತೆ. ಕನಸಿನಲ್ಲಿ ಸಾಕ್ಷಾತ್ ದುರ್ಗೆ ಬಂದು ಹಿಂದೆ ಆಗಿರೋದು, ಮುಂದೆ ಆಗುವುದನ್ನು ಹೇಳುತ್ತಾಳಂತೆ. ಮರುದಿನ ಅದೇ ಕಥೆಯನ್ನು ದೇವಿಪುರಾಣದಲ್ಲಿ ಭಾಗೀರತಿ ಎಲ್ಲರ ಮುಂದೆ ಹೇಳುತ್ತಾಳಂತೆ. ಹತ್ತು ಹರದಾರಿಗುಂಟ ಈ ಸುದ್ದಿ ಹಬ್ಬಿ ಭಾಗೀರತಿ ಪುರಾಣ ಕೇಳಲು ಹತ್ತೂರಿನಿಂದ ಜನರು ತಂಡೋಪ ತಂಡವಾಗಿ ಬರುತ್ತಿದ್ದರು. ಮೊದಲ ದಿನ ಪುರಾಣದಲ್ಲಿ ಕರಿಭಾಗೀರತಿ ಪೂಜೆ ಮುಗಿಸಿ ಪುರಾಣ ಹೇಳಲು ಕುಳಿತಳು. ಜನರೆಲ್ಲ ಕೈ ಮುಗಿದು ನಿಂತುಕೊಂಡು ದುರ್ಗೆ ಏನು ಹೇಳಿದ್ದಾಳೆ ಎಂದು ಕಿವಿಗೊಟ್ಟು ಕೇಳುತ್ತಿದ್ದರು. ಪುಣ್ಯವಂತರ ಕನಸಿನಲ್ಲಿ ದೇವತೆ ಬರುತ್ತಾಳೆ ಎಂದು ಪುರಾಣ ಆರಂಭಿಸಿದ ಭಾಗೀರತಿ, ನಿನ್ನೆ ರಾತ್ರಿ ನಾನು ಘಾಡ ನಿದ್ದೆಯಲ್ಲಿದ್ದೆ. ೧೨.೩೦ ಕ್ಕೆ ಸರಿಯಾಗಿ, ಏನೋ ಸಪ್ಪಳವಾಯಿತು. ಕಣ್ಣು ತಿಕ್ಕಿಕೊಂಡು ನೋಡಿದೆ. ಎದುರಿಗೆ ಸಾಕ್ಷಾತ್ ದುರ್ಗಾಮಾತೆ. ನಾಲಿಗೆ ಇಷ್ಟಗಲ ತೆಗೆದಿದ್ದಳು. ನನಗೆ ಒಂದು ಕ್ಷಣ ಹೆದರಿಕೆ ಆದಂತಾಯಿತು. ನಂತರ ಎಲ್ಲೋ ದೂರದಿಂದ ಧ್ವನಿ ಕೇಳುವ ಹಾಗೆ ಕೇಳಿಸಿತು. ಹೇಗಿದ್ದೀ ಮಗಳೇ ಅಂದಾಗ ನಾನು ಅಂಜುತ್ತ ಹಾಂ ಅಂದೆ. ಏನು ನಡೆದಿದೆ ಅಲ್ಲಿ? ನಾನು ಸುಮ್ಮನಿದ್ದೇನೆ ಎಂದು ಎಲ್ಲರೂ ಏನೇನೋ ಮಾಡುತ್ತಿದ್ದಾರೆ.
ಹೇಳುವವರು ಕೇಳುವವರು ಯಾರೂ ಇಲ್ಲ ಅಂದುಕೊಂಡಿದ್ದಾರೆಯೇ? ನಾನು ಮನಸ್ಸು ಮಾಡಿದರೆ ಸೋದಿಮಾಮಾ ಸೇರಿದಂತೆ ದೊಡ್ಡ, ದೊಡ್ಡವರ ಕನಸಿನಲ್ಲಿ ಹೋಗಿ ಏನು ಮಾಡಬೇಕೋ ಅದನ್ನು ಮಾಡಿಸುವೆ. ಮದ್ರಾಮಣ್ಣ, ಸುಮಾರಣ್ಣ, ಅವರಪ್ಪಾರು, ಸಿಟ್ಯೂರಪ್ಪ ಮತ್ತು ಅವರ ಮಗರವರು, ಡೊಣ್ಣಿ ಮೂಗಪ್ಪ, ವಾಳದ ಸೂಡಪ್ಪ ಎಲ್ಲರ ಕನಸಿನಲ್ಲಿ ಹೋಗಿ ಹೀಗೆ ಜಗಳವಾಡಿದರೆ ಮುಂದಿನ ಬಾರಿ ನೀವ್ಯಾರೂ ಆ ಪಾವಟಿಗೆ ಹತ್ತದ ಹಾಗೆ ಮಾಡಿಬಿಡುತ್ತೇನೆ. ಈಗ ನಿನ್ನ ಮೂಲಕ ಅವರಿಗೆ ತಿಳಿಸುತ್ತೇನೆ. ನೀನು ಅಷ್ಟು ಹೇಳು ಕೇಳದಿದ್ದರೆ ಮುಂದೆ ನಮಗಿದೆ-ಅವರಿಗಿದೆ ಎಂದು ದೇವಿ ಹೇಳಿ ಮಾಯವಾದಳು. ನನ್ನ ಮೈ ಬೆವೆತುಹೋಗಿತ್ತು. ಹಾಗೆಯೇ ಎದ್ದು ಫ್ರಿಡ್ಜ್‌ನಲ್ಲಿದ್ದ ಒಂದು ಬಾಟಲ್‌ನಲ್ಲಿದ್ದ ತಣ್ಣೀರನ್ನು ಗಟಗಟನೇ ಕುಡಿದೆ. ಇದು ಇವತ್ತಿನ ದೇವಿ ಪುರಾಣ ಮಂಗಲಂ ಎಂದು ಹೇಳಿ ಅಲ್ಲಿಂದ ಎದ್ದುಹೋದಳು ಕರಿಭಾಗೀರತಿ.