For the best experience, open
https://m.samyuktakarnataka.in
on your mobile browser.

ಪುರುಷರ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟೂರ್ನಿ: ಭಾರತ ಫೈನಲ್‌ಗೆ

10:21 PM Sep 16, 2024 IST | Samyukta Karnataka
ಪುರುಷರ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ಟೂರ್ನಿ  ಭಾರತ ಫೈನಲ್‌ಗೆ

ಹುಲುನ್‌ಬುಯರ್(ಚೀನಾ): ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡ, ಪುರುಷರ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್ ೨೦೨೪ ಪಂದ್ಯಾವಳಿಯ ಫೈನಲ್ ಪ್ರವೇಶಿಸಿದೆ.
ಸೋಮವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಕೊರಿಯಾ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿ ಅಂತಿಮ ಹಂತ ಕಂಡಿತು.
ಪಂದ್ಯದ ೧೩ನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್, ನೀಡಿದ ಪಾಸನ್ನು ಉತ್ತಮಸಿಂಗ್ ಎದುರಾಳಿ ತಂಡದ ಗೋಲು ಪೆಟ್ಟಿಗೆಯೊಳಗೆ ತಳ್ಳುವ ಮೂಲಕ ಭಾರತಕ್ಕೆ ೧-೦ರ ಮುನ್ನಡೆದರು.
ಎರಡನೇ ಕ್ವಾರ್ಟರ್‌ನ ನಾಲ್ಕನೇ ನಿಮಿಷದಲ್ಲಿ (ಪಂದ್ಯದ ೧೯ ನೇ ನಿಮಿಷ) ನಾಯಕ ಹರ್ಮನ್‌ಪ್ರೀತ್‌ಸಿಂಗ್ ಗೋಲು ಗಳಿಸಿ ಭಾರತದ ಮುನ್ನಡೆಯನ್ನು ೨-೦ಗೆ ಹೆಚ್ಚಿಸಿದರು.
ಎರಡನೇ ಕ್ವಾರ್ಟರ್ ಅವಧಿ ಮುಗಿಯಲು ಕೇವಲ ಮೂರು ಸೆಕೆಂದುಗಳು ಬಾಕಿ ಇದ್ದಾಗ ಕೊರಿಯಾ ಆಟಗಾರರು ಗೋಲು ಗಳಿಸಿದ ಯತ್ನವನ್ನು ಭಾರತದ ಗೋಲು ರಕ್ಷಣ ಸೂರಜ್ ಕಾರ್ಕೇರಾ ವಿಫಲಗೊಳಿಸಿದರು. ವಿರಾಮದ ವೇಳೆಗೆ ಭಾರತ ೨-೦ ರ ಮುನ್ನಡೆ ಸಾಧಿಸಿತ್ತು.
ಮೂರನೇ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಜರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿ ಭಾರತದ ಮುನ್ನಡೆಯನ್ನು ೩-೦ ಗೆ ಹೆಚ್ಚಿಸಿದರು. ಮುಂದೆ ಎರಡು ನಿಮಿಷಗಳ ನಂತರ (ಪಂದ್ಯದ ೩೩ ನೇ ನಿಮಿಷ) ಗೋಲು ಜಿಹುನ್ ಯಾಂಗ್ ಕೊರಿಯಾದ ಗೋಲಿನ ಖಾತೆ ತೆರೆದರು. ಮೂರನೇ ಕ್ವಾರ್ಟರ್‌ನ ಕೊನೆಯ ಕ್ಷಣದಲ್ಲಿ ಭಾರತಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು ೪-೧ ಕ್ಕೆ ಹೆಚ್ಚಿಸಿದರು.
ನಾಲ್ಕನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳ ಆಟಗಾರರು ಗೋಲು ಗಳಿಸಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ. ಪಂದ್ಯವನ್ನು ೪-೧ ರಿಂದ ಗೆದ್ದ ಭಾರತ ಅಂತಿಮ ಹಂತ ಕಂಡಿತು.
ಲೀಗ್ ಹಂತದಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಅಜೇಯ ತಂಡವಾಗಿ ಸೆಮಿಫೈನಲ್ ತಲುಪಿದ್ದ ಹರ್ಮನ್‌ಪ್ರೀತ್ ಸಿಂಗ್, ಉಪಾಂತ್ಯದಲ್ಲಿ ಕೂಡ ಶ್ರೇಷ್ಠ ಪ್ರದರ್ಶನ ಮುಂದುವರಿಸಿ ಕೊರಿಯಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಭಾರತ, ಆತಿಥೇಯ ಚೀನಾ ತಂಡವನ್ನು ಎದುರಿಸಲಿದೆ. ಭಾರತ ದಾಖಲೆ ನಾಲ್ಕು ಬಾರಿ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ೨೦೧೧, ೨೦೧೬, ೨೦೨೩ ರಲ್ಲಿ ಪ್ರಶಸ್ತಿ ಗೆದ್ದ ಭಾರತ, ೨೦೧೮ ರಲ್ಲಿ ಪಾಕಿಸ್ತಾನ ಜೊತೆಗೆ ಪ್ರಶಸ್ತಿ ಹಂಚಿಕೊಂಡಿದೆ.
ಪಾಕಿಸ್ತಾನ ಮೂರು ಬಾರಿ ಪ್ರಶಸ್ತಿ (೨೦೧೨, ೨೦೧೩ ಹಾಗೂ ೨೦೧೮ ರಲ್ಲಿ ಭಾರತ ಜೊತೆಗೆ ಜಂಟಿಯಾಗಿ) ಪಡೆದಿದ್ದು, ದಕ್ಷಿಣ ಕೊರಿಯಾ ತಂಡ ಒಂದು ಬಾರಿ (೨೦೨೧ ರಲ್ಲಿ) ಟ್ರೋಫಿಯನ್ನು ಎತ್ತಿ ಹಿಡಿದಿದೆ.

Tags :