ಪುರುಸೊತ್ತು ಆದಾಗ ಬಂದುಹೋಗು
ಅಲ್ಲಿ ಟ್ರಂಪೇಸಿ ಗೆದ್ದ ಕೂಡಲೇ ಸೋದಿಮಾಮಾ ಕೂಡಲೇ ಕಾಲ್ ಮಾಡಿದರು. ಬಿಜಿ ಬಂತು… ಮತ್ತೆ ಮಾಡಿದಾಗಲೂ ಬಿಜಿ… ಎಷ್ಟು ಸಲ ಮಾಡಿದರೂ ಬಿಜಿ ಬಿಜಿ ಬಿಜಿ.. ಛೇ… ಈಗ ಸಿಕ್ಕಾಪಟ್ಟೆ ಜನರು ಮಾಡುತ್ತಿರುತ್ತಾರೆ… ಇರಲಿ.. ಮಿಸ್ಡ್ಕಾಲ್ ಅಲರ್ಟ್ ನೋಡಿ ವಾಪಸ್ ಮಾಡುತ್ತಾರೆ ಎಂದು ಅಂದುಕೊಂಡು… ಪತ್ರವೇ ಬರೆದುಬಿಡೋಣ ಎಂದು ಬಿಳೆಹಾಳೆ ತೆಗೆದುಕೊಂಡು ಸರಸರನೇ ಬರೆದರು….
ಡಿಯರ್ ಗೆಳೆಯ ಟ್ರಂಪೇಸಿ…
ನೀನು ಗೆಲ್ಲುತ್ತಿ ಎಂದು ನನಗೆ ಗೊತ್ತಿತ್ತು. ಚುನಾವಣೆ ನಡೆದಾಗ ನಾನು ವಾಟ್ಸಾಪ್‌ಗೆ ಮೆಸೇಜ್ ಮಾಡಿದ್ದೆ. ನೀನು ಈವರೆಗೂ ನೋಡಿಲ್ಲ ಅದೆಲ್ಲ ಇರಲಿ ಬಿಡು. ನೀನು ಚುನಾವಣೆಯಲ್ಲಿ ಗೆಲ್ಲಲಿ ಎಂದು ಕರಿಲಕ್ಷಂಪತಿಯ ಹತ್ತಿರ ತಾಯತ ಮಂತ್ರಿಸಿ ಕಳಿಸಿದ್ದೆ. ನೀನು ಬಲರಟ್ಟೆಗೆ ಕಟ್ಟಿಕೊಂಡಿದಿಯ ಎಂಬ ಮೆಸೇಜ್ ಬಂತು. ಆತನ ಯಾವ ತಾಯತವೂ ಹುಸಿಹೋಗಿಲ್ಲ. ನಿನಗೆ ಗೊತ್ತಿದೆಯೋ ಇಲ್ಲವೋ… ಕಮಲಕ್ಕ ನನ್ನ ಕಾಂಟ್ಯಾಕ್ಟ್ ಮಾಡಿ ನೋಡು ಸೋದಿಮಾಮಾ ಕರಿಲಕ್ಷಂಪತಿ ಹತ್ತಿರ ದಾರಮಂತ್ರಿಸಿ ಕಳುಹಿಸು ಅಂದಿದ್ದಳು. ನಾನು ಕಳಿಸಲಿಲ್ಲ ಯಾಕೆ ಗೊತ್ತೆ? ನೀನು ಗೆಲ್ಲುವುದು ನನಗೆ ಬೇಕಾಗಿತ್ತು. ಈಗಂತೂ ಕಮಲಕ್ಕನ್ನು ಸೋಲಿಸಿ ನೀನು ಕುರ್ಚಿಯ ಮೇಲೆ ಕೂತಿದಿಯ. ನಾನು ಗೆದ್ದಿದ್ದೇ ಆದರೆ ನಿನಗೇನು ಬೇಕೋ ಅದನ್ನು ಕೊಡುತ್ತೇನೆ ಎಂದು ಹೇಳಿದ್ದೆ. ಈಗಂತೂ ನನಗೇನೂ ಬೇಡ. ನಿಮ್ಮಲ್ಲಿರುವ ನಮ್ಮವರನ್ನು ಚೆನ್ನಾಗಿ ನೋಡಿಕೋ… ನಮ್ಮವರಿದ್ದ ಕಡೆ ನೀನು ಹೋದಾಗ… ನನ್ನನ್ನು ನೆನಪಿಸಿಕೊಂಡು ನನ್ನ ಬಗ್ಗೆ ಹೇಳು. ಇನ್ನು ಅಲ್ಲಿ ಹೊಸ ಆಫ್‌ಕೋಟುಗಳು ಬಂದಿದ್ದರೆ ಐದಾರು ಕೊಟ್ಟುಕಳುಹಿಸು. ಆ ಚೀನಾದ ಜಿಂಗ್ಯಾ… ರಷಿಯಾದ ಪುಟ್ಯಾ ಅಂಥವರಿಗೆ ನೀನು ಸೊಪ್ಪು ಹಾಕಬೇಡ. ನಿನ್ನ ಜತೆ ನಾನಿದ್ದೀನಿ. ನಾ ಬರಹೇಳಿದಾಗ ನೀನು ಆಗೊಲ್ಲ ಎಂದು ಹೇಳಬೇಡ. ಪುರುಸೊತ್ತು ಮಾಡಿಕೊಂಡು ಬಂದುಹೋಗು. ಇಷ್ಟು ಸಾಕು ಮತ್ತೆ ಮಾತಾಡುತ್ತೇನೆ.
ಇಂತಿ… ಸೋದಿಮಾಮೋರು.