ಪೌರಕಾರ್ಮಿಕರನ್ನು ಬಿಬಿಎಂಪಿ ಕಾಯಂ ನೌಕರರಾಗಿ ಪರಿಗಣಿಸಲು ನಿರ್ಧಾರ
ಬೆಂಗಳೂರು: ನೇರಪಾವತಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಬಿಬಿಎಂಪಿ ಕಾಯಂ ನೌಕರರಾಗಿ ಪರಿಗಣಿಸಲು ನಿರ್ಧರಿಸಿರುವುದು ಸರ್ಕಾರದ ಮಹತ್ವದ ನಿರ್ಧಾರವಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.
ಬಿಟಿಎಂ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ವತಿಯಿಂದ ನಿರ್ಮಿಸಿರುವ ದ್ವಿತೀಯ ಹಂತದ ನೂತನ ಘನತ್ಯಾಜ್ಯ ವರ್ಗಾವಣೆ ಘಟಕ ಉದ್ಘಾಟಿಸಿ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಸ್ವಚ್ಛ ಬೆಂಗಳೂರು ನಮ್ಮ ಸಂಕಲ್ಪವಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯಲ್ಲಿ ವಿಕೇಂದ್ರೀಕೃತ ಪದ್ಧತಿಯನ್ನು ಜಾರಿಗೊಳಿಸಿ ಸ್ಥಳೀಯ ಮಟ್ಟದಲ್ಲಿಯೇ ಕಸವನ್ನು ಸಂಸ್ಕರಣೆ ಮಾಡುವ ಪ್ರಕ್ರಿಯೆ ಜಾರಿಗೊಳಿಸಿ ಕಸದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಅದಕ್ಕೆ ನಾಗರಿಕರೆಲ್ಲರೂ ಸಂಪೂರ್ಣ ಸಹಕಾರ ನೀಡಬೇಕು. ಘನತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ʼಬ್ರ್ಯಾಂಡ್ ಬೆಂಗಳೂರುʼ ಪರಿಕಲ್ಪನೆಯಡಿ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿ ನಿರ್ಮಾಣ ಮಾಡಲಾಗಿರುವ ರಾಜ್ಯದ ಅತಿದೊಡ್ಡ ಸ್ವಯಂಚಾಲಿತ ತ್ಯಾಜ್ಯ ವಿಂಗಡಣೆ ಘಟಕವು ಬೆಂಗಳೂರಿನ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಜೊತೆಗೆ ಸುಸ್ಥಿರ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಬದ್ಧತೆಯ ಒಂದು ಮೈಲಿಗಲ್ಲಾಗಿದೆ. ನಾಗರಿಕರ ಸಹಭಾಗಿತ್ವದೊಂದಿಗೆ ನಗರವನ್ನು ಸ್ವಚ್ಛ ಮತ್ತು ಹಸಿರಾಗಿಡಲು ನಮ್ಮ ಸರ್ಕಾರದ ಬದ್ಧವಾಗಿದೆ. ನೇರಪಾವತಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಬಿಬಿಎಂಪಿ ಕಾಯಂ ನೌಕರರಾಗಿ ಪರಿಗಣಿಸಲು ನಿರ್ಧರಿಸಿರುವುದು ಸರ್ಕಾರದ ಮಹತ್ವದ ನಿರ್ಧಾರವಾಗಿದೆ. ಇದು ಅವರಿಗೆ ಸೇವಾ ಭದ್ರತೆ ನೀಡುವ ಜೊತೆಗೆ ಬದುಕಿನ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲು ನಾನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.