ಪ್ಯಾಲೆಸ್ತೈನ್‌ಗೆ ಜಿಂದಾಬಾದ್ ಕೂಗಿದ ಮುಸ್ಲಿಮರು
ಚಿತ್ರದುರ್ಗ: ಈದ್‌ಮಿಲಾದ್ ಅಂಗವಾಗಿ ಸೋಮವಾರ ನಗರದಲ್ಲಿ ನಡೆದ ಅದ್ದೂರಿ ಮೆರವಣಿಗೆಯಲ್ಲಿ ಕೆಲವು ಮುಸ್ಲಿಮ್ ಯುವಕರು ಪ್ಯಾಲೆಸ್ತೈನ್ ಬಾವುಟ ಹಿಡಿದು ಪ್ಯಾಲೆಸ್ತೈನ್‌ಗೆ ಜಿಂದಾಬಾದ್ ಕೂಗಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಚಿತ್ರದುರ್ಗ ನಗರದ ಗಾಂಧಿವೃತ್ತದಲ್ಲಿ ಮೆರವಣಿಗೆಯಲ್ಲಿ ಜಮಾಯಿಸಿದ್ದ ಸಾವಿರಾರು ಮುಸ್ಲಿಂರ ಪೈಕಿ ಐದಾರು ಯುವಕರು ಪ್ಯಾಲೆಸ್ತೈನ್ ಬಾವುಟ ಹಿಡಿದು ಸಂಭ್ರಮಿಸಿದರು. ಏತನ್ಮಧ್ಯೆ ಪ್ಯಾಲೆಸ್ತೈನ್‌ಗೆ ಜಿಂದಾಬಾದ್ ಎಂದು ಕೂಗಿದಾಗ ಸುತ್ತ ಇದ್ದವರು ಕೇಕೆ ಸಿಳ್ಳೆ ಹೊಡೆದು ಸಂಭ್ರಮಿಸಿದರು. ತಕ್ಷಣ ಎಚ್ಚೆತ್ತುಕೊಂಡ ಡಿವೈಎಸ್ಪಿ ದಿನಕರ್ ಮತ್ತು ಸಿಬ್ಬಂದಿ ಪ್ಯಾಲೆಸ್ತೈನ್ ಬಾವುಟವನ್ನು ಕಸಿದು ಠಾಣೆಗೆ ತೆಗೆದುಕೊಂಡು ಹೋದರು.
ಭಾರತೀಯ ಪ್ರಜೆಯಾಗಿ ಇನ್ನೊಂದು ದೇಶದ ಬಾವುಟ ಹಿಡಿದು ಕುಣಿದಾಡಿರುವುದಲ್ಲದೆ ಪ್ಯಾಲೆಸ್ತೈನ್ ಜಿಂದಾಬಾದ್ ಕೂಗಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಅದು ಪೊಲೀಸ್ ಸರ್ಪಗಾವಲು ಇದ್ದ ವೇಳೆಯಲ್ಲಿ ಇನ್ನೊಂದು ದೇಶಕ್ಕೆ ಜಿಂದಾಬಾದ್ ಕೂಗಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ.
ಯಾರೋ ಐದಾರು ಮಂದಿ ಮಾಡಿರುವ ಈ ಕೃತ್ಯಕ್ಕೆ ಇಡೀ ಸಮಾಜದ ಮೇಲೆ ಕರಿನೆರಳು ಆವರಿಸಿದೆ. ಪ್ಯಾಲೆಸ್ತೈನ್ ಜಿಂದಾಬಾದ್ ಎಂದು ಕೂಗುತ್ತಿದ್ದರೂ ಹಿರಿಯ ಮುಸ್ಲಿಂರು ಇದು ತಪ್ಪು ಎಂದು ಹೇಳುವ ಗೋಜಿಗೆ ಹೋಗದೆ ಇದ್ದಿದ್ದು ನಿಜಕ್ಕೂ ವಿಪರ್ಯಾಸ. ಸಂಭ್ರಮದ ಮೆರವಣಿಗೆಗೆ ಇದು ಕಪ್ಪುಚುಕ್ಕೆಯಾಗಿದೆ. ಈಗಾಗಲೇ ಪೊಲೀಸರು ಪ್ಯಾಲೆಸ್ತೈನ್ ಬಾವುಟವನ್ನು ವಶಪಡಿಸಿಕೊಂಡಿದ್ದಾರೆ. ದೂರು ಅಥವಾ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ಇದರ ಬಗ್ಗೆ ಮಾಹಿತಿಯನ್ನು ನೀಡಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.