ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರಜಾಪ್ರಭುತ್ವ: ಕರ್ನಾಟಕ ವಿಶ್ವದಾಖಲೆ

10:36 PM Sep 15, 2024 IST | Samyukta Karnataka

ಬೆಂಗಳೂರು: ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯದ ತತ್ವಗಳನ್ನು ಬೋಧಿಸುವ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿದ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಭಾನುವಾರ ಕರ್ನಾಟಕ ರಾಜ್ಯ ಹೊಸ ವಿಕ್ರಮವನ್ನೇ ಸಾಧಿಸಿತು. ರಾಜ್ಯದುದ್ದಕ್ಕೂ ೨,೫೦೦ ಕಿಮೀ ಉದ್ದದ ಮಾನವ ಸರಪಳಿ ರಚಿಸುವ ಮೂಲಕ ವಿಶ್ವದಾಖಲೆ ಬರೆಯಿತು.
ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಕನ್ನಡಿಗರು ಪರಸ್ಪರ ಕೈಹಿಡಿದು, ಮನಸ್ಸು ಬೆಸೆದು, ಪ್ರಜಾಪ್ರಭುತ್ವದ ತತ್ವಗಳ ಉದ್ದೀಪನಕ್ಕಾಗಿ ಮಾನವ ಸರಪಳಿ ರಚಿಸಿರುವುದು ಜಗತ್ತಿನಲ್ಲೇ ಅತಿದೊಡ್ಡ ಮಾನವ ಚಳುವಳಿಯಾಗಿ ಹೆಸರು ಮಾಡಿತು. ಬೆಂಗಳೂರಿನಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನವ ಸರಪಳಿಗೆ ಕೈ ಜೋಡಿಸಿದರೆ, ಮಾನವ ಸರಪಳಿಯ ರಾಯಭಾರಿ, ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು, ಸಾಮಾಜಿಕ ಸಂಘಟನೆಗಳ ರೂವಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಹಸ್ರಾರು ವಿದ್ಯಾರ್ಥಿಗಳು, ಶಿಕ್ಷಕರು, ರೋಟರಿ ಸದಸ್ಯರು, ಸರ್ಕಾರಿ ನೌಕರರು, ಕಾರ್ಮಿಕರು, ಗೃಹಿಣಿಯರು ಹೀಗೆ ರಾಜ್ಯದ ೩೧ ಜಿಲ್ಲೆಗಳ ಸರಿಸುಮಾರು ೨೫ ಲಕ್ಷ ಜನರು ಭಾನುವಾರ ಬೆಳಗ್ಗೆ ೯ ಗಂಟೆಗೆ ಏಕಕಾಲಕ್ಕೆ ಮಾನವ ಸರಪಳಿಯಲ್ಲಿ ಪಾಲ್ಗೊಂಡು ದಾಖಲೆಗೆ ಕಾರಣೀಭೂತರಾದರು. ಜೊತೆಗೆ ಮಾನವ ಸರಪಳಿ ಮಾರ್ಗದುದ್ದಕ್ಕೂ ೧೦ ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ನಾಂದಿ ಹಾಡಲಾಯಿತು.
ಮಾನವ ಸರಪಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ವಿಶ್ವ ದಾಖಲೆಯ ಪ್ರಮಾಣಪತ್ರಗಳನ್ನು ಕಾರ್ಯಕ್ರಮದ ಸಂಘಟನೆಯ ರೂವಾರಿ ಸಮಾಜ ಕಲ್ಯಾಣ ಇಲಾಖೆ ಅವರವರ ಭಾವಚಿತ್ರಗಳ ಸಹಿತ ವಿತರಿಸಿತು.
ವಿಧಾನಸೌಧದ ಎದುರಿನ ಬೃಹತ್ ಮೆಟ್ಟಿಲುಗಳ ಮೇಲೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ ವಿಚ್ಚಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಂತು ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ ಎಂದು ಕರೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಶಾಸಕರಾದ ಸಲೀಂ ಅಹ್ಮದ್, ಯು.ಬಿ. ವೆಂಕಟೇಶ್, ಪ್ರಕಾಶ್ ರಾಥೋಡ್, ನಸೀರ್ ಅಹ್ಮದ್, ರಾಯಭಾರಿ ಹರೇಕಳ ಹಾಜಬ್ಬ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಯಭಾರಿ ಹರೇಕಳ ಹಾಜಪ್ಪ ಪಾಲ್ಗೊಂಡಿದ್ದರು.

Next Article