For the best experience, open
https://m.samyuktakarnataka.in
on your mobile browser.

ಮರದ ಅಂಬಾರಿ ತಾಲೀಮು ಶುರು

10:22 PM Sep 18, 2024 IST | Samyukta Karnataka
ಮರದ ಅಂಬಾರಿ ತಾಲೀಮು ಶುರು

ಮೈಸೂರು: ಈ ಬಾರಿಯ ದಸರಾ ವಿಜಯದಶಮಿ ಮೆರವಣಿಗೆ ತಾಲೀಮಿನ ಅಂಗವಾಗಿ ಅಂಬಾರಿ ಆನೆ ಅಭಿಮನ್ಯುವಿಗೆ ಸಂಜೆ ಚಿನ್ನದ ಅಂಬಾರಿ ಪ್ರತಿರೂಪವಾದ ಮರದ ಅಂಬಾರಿ ಹೊರಿಸಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಕರೆದೊಯ್ಯುವ ಪ್ರಕ್ರಿಯೆಗೆ ಸಂಜೆ ಚಾಲನೆ ನೀಡಲಾಯಿತು.
ಇದಕ್ಕಾಗಿ ಮೈಸೂರು ಅರಮನೆ ಮಂಡಳಿ ವಶದಲ್ಲಿದ್ದ ಮರದ ಅಂಬಾರಿಯನ್ನು ತನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿ ವರ್ಗ ಸಂಜೆಯ ತಾಲೀಮಿನ ವೇಳೆ ಅಭಿಮನ್ಯುವಿಗೆ ಅಂಬಾರಿಯೊಟ್ಟಿಗೆ ಸುಮಾರು ೭೫೦ ಕೆ.ಜಿ. ತೂಕ ಹೊರಿಸಿ ಬನ್ನಿಮಂಟಪದವರೆಗೆ ಕರೆದೊಯ್ದರು.
ಅಭಿಮನ್ಯು ಯಾವುದೇ ಪ್ರತಿರೋಧ ತೋರದೆ ಮರದ ಅಂಬಾರಿ ಮತ್ತು ಇತರ ತೂಕ ಹೊತ್ತು ಉಳಿದ ಆನೆಗಳೊಡನೆ ಸುಲಲಿತವಾಗಿ ಹೆಜ್ಜೆ ಹಾಕುತ್ತಾ ಬನ್ನಿಮಂಟಪ ತಲುಪಿತು. ಇದಕ್ಕೂ ಮುನ್ನ ಅರಮನೆ ಆವರಣದಲ್ಲಿ ರಾಜ ವಂಶಸ್ಥರು ವಾಸವಿರುವ ನಿವಾಸದ ಬಳಿಗೆ ಅಭಿಮನ್ಯುವನ್ನು ಕರೆದೊಯ್ದು ಪೂಜೆ ಸಲ್ಲಿಸಲಾಯಿತು.
ಅರಮನೆಯ ಸಿಂಗಾರ ಕಾರ್ಯ: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಗೋಡೆ, ಕೋಟೆಗಳು, ಹಲವು ದ್ವಾರಗಳಿಗೆ ಸುಣ್ಣ ಬಣ್ಣ ಬಳಿಯುವ ಪ್ರಕ್ರಿಯೆ ಭರದಿಂದ ಸಾಗಿದೆ. ಇದರೊಡನೆ ಅರಮನೆ ಕೋಟೆ ಒಳಾವರಣದಲ್ಲಿನ ಎಲ್ಲಾ ಕಟ್ಟಡಗಳಿಂದ ಸುಮಾರು ೧೨ ಸಾವಿರಕ್ಕೂ ಹೆಚ್ಚಿನ ವಿದ್ಯುತ್ ದೀಪಗಳು ಕೆಟ್ಟಿದ್ದು ಇವುಗಳನ್ನು ಬದಲಿಸುವ ಕಾರ್ಯ ಶುರುವಾಗಿದೆ. ಅರಮನೆಯಲ್ಲಿ ಕೋಟೆಯ ಕಟ್ಟಗಳಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಬುರುಡೆ ಬಲ್ಬ್ಗಳನ್ನು ಉರಿಸಲಾಗುವುದು ಎನ್ನುವುದು ಗಮನಾರ್ಹ.