ಪ್ರಜ್ವಲ್ ಯಾರ ಸಂಪರ್ಕದಲ್ಲೂ ಇಲ್ಲ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಯಾರ ಸಂಪರ್ಕದಲ್ಲೂ ಇಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಆರೋಪ ಕೇಳಿ ಬಂದ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅವರು ಎಲ್ಲಿಗೆ ಹೋದರು? ಏಕೆ ಹೋದರು? ಯಾವಾಗ ಬರುತ್ತಾರೆ? ಎಂಬ ಮಾಹಿತಿ ಯಾರಿಗೂ ಇಲ್ಲ. ಅವರ ಮನೆಯವರಿಗೂ ಸರಿಯಾದ ಮಾಹಿತಿ ಇಲ್ಲವಂತೆ ಎಂದು ಸ್ಪಷ್ಟಪಡಿಸಿದರು.
ಪ್ರಜ್ವಲ್ ಅವರನ್ನು ಪತ್ತೆ ಹಚ್ಚಲು ಸರ್ಕಾರ ಬ್ಲೂ ಕಾರ್ನರ್ ನೋಟೀಸ್ ಕೊಟ್ಟಿದ್ದು ಅವರನ್ನು ಪತ್ತೆ ಹಚ್ಚುವ ಕೆಲಸ ಸರ್ಕಾರ ಮಾಡುತ್ತಿದೆಯಾದರೂ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದರು.
ಸರ್ಕಾರ ಪ್ರಜ್ವಲ್ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಎಸ್ಐಟಿ ತನಿಖೆ ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೇವಣ್ಣ ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿರುವುದು ಸಹಜ. ರಾಜಕೀಯವಾಗಿ ಒಬ್ಬರಿಗೊಬ್ಬರು ಮಾತನಾಡುವಾಗ ಟೀಕೆ, ಟಿಪ್ಪಣಿಗಳು ಸಾಮಾನ್ಯ. ರೇವಣ್ಣ ಅವರು ತಪ್ಪು ಮಾಡದೇ ಶಿಕ್ಷೆ ಅನುಭವಿಸುವಂತಾಯಿತಲ್ಲ ಎಂದು ಅವರ ಮನಸ್ಸಿನಲ್ಲೂ ನೋವಿರಬಹುದು. ಈ ವಿಚಾರ ರಾಜ್ಯದ ಜನತೆಗೂ, ರಾಜಕಾರಣಿಗಳಿಗೂ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರಿಗೂ ಗೊತ್ತಿದೆ. ಎಸ್ಐಟಿ ಮೂಲಕ ರೇವಣ್ಣ ಅವರನ್ನು ಬಂಧಿಸಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ ಎಂದರಲ್ಲದೆ, ತಪ್ಪು ಮಾಡದಿದ್ದರೂ ರೇವಣ್ಣ ಅವರ ಬಂಧನವಾಗಿತ್ತು. ಈ ವಿಚಾರ ದೇವೇಗೌಡರಿಗೆ ಬಹಳ ನೋವುಂಟು ಮಾಡಿದೆ ಎಂದರು.