For the best experience, open
https://m.samyuktakarnataka.in
on your mobile browser.

ಪ್ರತಿಕೂಲತೆಯೂ ಅನುಕೂಲವಾಗಬಹುದು

04:15 AM Jun 12, 2024 IST | Samyukta Karnataka
ಪ್ರತಿಕೂಲತೆಯೂ ಅನುಕೂಲವಾಗಬಹುದು

ಮೊನ್ನೆ ನನ್ನ ಸಹೋದ್ಯೋಗಿಯೊಬ್ಬರು ನನ್ನ ಬಳಿ ಕೇಳಿದರು: "ಸರ್, ಇತ್ತೀಚೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಬಡತನದಿಂದ ಬಂದರೂ ಅವರ ಸಾಧನೆ ನೋಡಿದಾಗ ಮನಸ್ಸಿಗೆ ಖುಷಿಯಾಗುತ್ತದೆ. ಆದರೆ ಹವಾನಿಯಂತ್ರಿತ ಮನೆಗಳಲ್ಲಿ ಬೆಳೆದ ನಮ್ಮ ಮಕ್ಕಳು ಏನು ಮಾಡಿದರೂ, ಕೊಟ್ಟರೂ ಓದುವುದಿಲ್ಲ; ಪ್ರತಿದಿನವೂ ಅವರ ಹಿಂದೆಯೇ ಕುಳಿತಿರಬೇಕು, ಇದು ಯಾಕೆ ಹೀಗೆ?" ಅದಕ್ಕೆ ನಾನು, ಸಾಧನೆಗೆ ನಿಮ್ಮ ಸಿರಿವಂತಿಕೆ ಸಹಾಯ ಮಾಡುವುದಿಲ್ಲ, ಅದಕ್ಕೆ ಸಾಧಿಸುವ ಮನಸ್ಸು, ಛಲ ಮತ್ತು ನಿರಂತರ ಪ್ರಯತ್ನವಿರಬೇಕು. ಕೆಲವೊಮ್ಮೆ ನಮ್ಮ ಅತಿಯಾದ ಮುದ್ದು ಅವರಿಗೆ ಸಹಾಯವಾಗದೆ ಅದಕ್ಕೆ ಪ್ರತಿಕೂಲವಾಗಿ ಪರಿಣಮಿಸಲೂಬಹುದು. ಈ ತರಹದ ಸಮಸ್ಯೆಯನ್ನು ಬಳಸಿಕೊಂಡು ನಾವು ಮಾಡಿದ ಒಂದು ಪ್ರಾಯೋಗಿಕ ಪರೀಕ್ಷೆಯ ಬಗ್ಗೆ ಹೇಳುತ್ತೇನೆ ಎಂದೆ.
ಸುಮಾರು ಹತ್ತು ವರ್ಷಗಳ ಮುಂಚೆ ಮಾಡಿದ ಪ್ರಯೋಗವಿದು. ಜೈವಿಕ ತಂತ್ರಜ್ಞಾನ ಇಂಜಿನಿಯರಿಂಗ್‌ನ ಪ್ರೊಫೆಸರ್ ವಾಣಿಶ್ರೀ, ಕಂಪ್ಯೂಟರ್ ಸೈನ್ಸ್ ವಿಭಾಗದ ಡಾ. ಸುಬ್ರಹ್ಮಣಿಯಂ ಮತ್ತು ನಾನು ಸೇರಿ ಮಾಡಿದ ಪ್ರಯೋಗ. ಹದಿನಾರು ಕುಂಡಗಳಲ್ಲಿ, ಮೂರು ಅಡಿ ದೂರವಿರುವ ಹಾಗೆ ನಾಲ್ಕು ಕುಂಡಗಳಿಗೆ ಒಂದು ಗುಂಪಿನಂತೆ, ಯಾದೃಚ್ಛಿಕವಾಗಿ ರಾಗಿ ಕಾಳುಗಳನ್ನು ಹಾಕಿ, ಅವುಗಳ ಫಸಲಿನಲ್ಲಿ ಬರುವ ವ್ಯತ್ಯಾಸಗಳ ಬಗ್ಗೆ ಸಂಶೋಧನೆ ನಡೆಸಿದೆವು. ಮೊದಲ ನಾಲ್ಕು ಕುಂಡಗಳಲ್ಲಿ ಸಕಾರಾತ್ಮಕ ಸಂದೇಶಗಳನ್ನು ಧ್ವನಿಯ ಮೂಲಕ ಕಳಿಸಲು ವ್ಯವಸ್ಥೆಯಾಗಿತ್ತು. ಎರಡನೆಯದರಲ್ಲಿ ಸಕಾರಾತ್ಮಕ ಸಂದೇಶಗಳನ್ನು ಪ್ರತ್ಯಕ್ಷವಾಗಿ ಕಳುಹಿಸುವುದು ಮತ್ತು ಮೂರನೆಯ ಗುಂಪಿಗೆ ಸಕಾರಾತ್ಮಕ ಸಂದೇಶಗಳನ್ನು ದೂರದಿಂದ, ಸಂಕಲ್ಪದ ಮೂಲಕ ಕಳುಹಿಸುವುದು. ಕೊನೆಯ ಗುಂಪಿನ ನಾಲ್ಕು ಕುಂಡಗಳಿಗೆ ಕೇವಲ ನೀರನ್ನು ಮಾತ್ರ ಹಾಕುವುದು ಎಂದು ತೀರ್ಮಾನಿಸಿ ಪರೀಕ್ಷಿಸಲು ಇಚ್ಛಿಸಿದ್ದೆವು. ನಾವು ಅಂದುಕೊಂಡಿದ್ದದು ಮೊದಲ ಮೂರು ಗುಂಪಿನ ಕುಂಡಗಳು ನಾಲ್ಕನೆಯ ಗುಂಪಿನ ಕುಂಡಗಳಿಗಿಂತ ಉತ್ತಮವಾಗಿ ಫಸಲು (ತೆನೆಗಳು) ಕೊಡಬೇಕು ಮತ್ತು ಗಿಡಗಳೂ ಸಹ ದಷ್ಟಪುಷ್ಟವಾಗಿರಬೇಕು ಎಂಬುದಾಗಿತ್ತು.
ನಾವು ಅಂದುಕೊಂಡಂತೆಯೇ ಆಯಿತು. ಎರಡು ವಾರಗಳ ನಂತರ ಸಣ್ಣದಾಗಿ ತೆನೆಗಳು ಬರಲು ಪ್ರಾರಂಭವಾದವು, ತೆನೆಗಳನ್ನು ಅಳತೆ ಮಾಡಿದಾಗ ಕೇವಲ ನೀರನ್ನು ಹಾಕಿದ ಗಿಡದ ತೆನೆಗಳಿಗಿಂತ ಸಕಾರಾತ್ಮಕ ಸಂದೇಶಗಳನ್ನು ಕಳುಹಿಸಿದ ಸಸಿಗಳ ತೆನೆಗಳು ಉತ್ತಮವಾಗಿದ್ದವು. ಪ್ರತಿ ತೆನೆಗಳು ಸದೃಢವಾಗಿ ಮತ್ತು ಉದ್ದವಾಗಿ ಇದ್ದವು. ಆದರೆ ದಿನಕಳೆದಂತೆ ನೀರು ಹಾಕಿದ ತೆನೆಗಳಲ್ಲಿ ಇಳುವರಿ ಉತ್ತಮವಾಗುತ್ತಾ ಹೋಯಿತು. ಇದು ಯಾವ ಮಟ್ಟಿಗೆ ಅಂದರೆ ಸುಮಾರು ಎರಡು ತಿಂಗಳ ನಂತರ ನೀರು ಹಾಕಿದ ತೆನೆಗಳು ಬರಿಗಣ್ಣಿಗೇನೇ ಸದೃಢವಾಗಿ ಕಾಣಲು ಆರಂಭಿಸಿದವು.
ನಾವು ಅಂದುಕೊಂಡಂತೆ ಏನೂ ಆಗುವುದಿಲ್ಲವಲ್ಲ! ಆ ವರ್ಷ ದಸರಾ ಹಬ್ಬದ ಸಮಯದಲ್ಲಿ ನಾಲ್ಕೈದು ರಜಾ ದಿನಗಳಿತ್ತು ಜೊತೆಗೆ ಭೀಕರವಾಗಿ ಗಾಳಿ ಸಹಿತ ಮಳೆ, ಮಳೆಯ ರಾದ್ಧಾಂತ ಎಷ್ಟರಮಟ್ಟಿಗೆಂದರೆ ನಮ್ಮ ಕುಂಡಗಳೇ ಬಿದ್ದು ಹೋಗಿ, ಗಿಡಗಳೆಲ್ಲ ನೆಲಸಮವಾಗಿ, ತೆನೆಗಳನ್ನು ಹುಳುಗಳು ತಿನ್ನಲು ಶುರು ಮಾಡಿದ್ದವು. ಆ ಕೆಸರಲ್ಲಿ ನಮಗೆ ಯಾವ ಅಳತೆಯನ್ನೂ ಮಾಡಲಾಗಲಿಲ್ಲ. ಆದರೆ ಅವೆಲ್ಲ ನಾಶದ ನಡುವೆ ಕೇವಲ ನೀರು ಹಾಕಿದ ಗಿಡಗಳು ಜೀವದಿಂದಿದ್ದವು! ಆ ಮುನಿಸು ಪ್ರಕೃತಿಯ ಎದುರು ಈ ಗಿಡಗಳು ಸ್ವಲ್ಪವಾದರೂ ತಲೆಯೆತ್ತಿ ನಿಲ್ಲಲು ಹವಣಿಸಿದ್ದವು. ನಾವು ವಿಶೇಷವಾಗಿ ಆರೈಕೆ ಮಾಡಿ ಬೆಳೆಸಿದ ಗಿಡಗಳು ಬದುಕಲೂ ಪರದಾಡುತ್ತಿರುವುದನ್ನು ನೋಡಿದಾಗ ನಮಗನ್ನಿಸಿದ್ದು: ನಮಗೆ ಅರ್ಥವಾಗದ ಪ್ರಪಂಚವೊಂದಿದೆ, ಆ ಪ್ರಪಂಚದಲ್ಲಿ ಗಿಡಗಳು ಮಾತನಾಡುವ ಹಾಗಿದ್ದರೆ, `ನಮ್ಮ ನಮ್ಮಲ್ಲೇ ಭೇದ ಮಾಡಿ, ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ನಿಮ್ಮ ಈ ಕೊಳಕು ನಿರ್ಧಾರಗಳಿಗೆ ನಾವು ಎದ್ದು ನಿಂತು ತೋರಿಸುತ್ತೇವೆ, ನಿಮ್ಮ ಮುದ್ದಿಗೆ ಸೆಡ್ಡು ಹೊಡೆದು ನಿಲ್ಲುತ್ತೇವೆ ಎನ್ನುತ್ತಿದ್ದವೇನೋ!' ಕೇವಲ ಸಕಾರಾತ್ಮಕ ಚಿಂತನೆಗಳು, ಸಂದೇಶಗಳು ಜೀವನದ ವಿಷಮ ಸನ್ನಿವೇಶಗಳನ್ನು ಎದುರಿಸಲು ಅಣಿಯಾಗಲಾರವು; ಎಡರು-ತೊಡರುಗಳು, ತೊಂದರೆ-ತಾಪತ್ರಯಗಳು, ಪ್ರತಿಕೂಲ ಸನ್ನಿವೇಶಗಳು ನಮ್ಮ ಬದುಕನ್ನು ಹಸನು ಮಾಡಿ ಹರಸುತ್ತವೆ ಎಂಬುದನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಯಾಗಿತ್ತು! ಇದನ್ನು ಮನೋವಿಜ್ಞಾನದಲ್ಲಿ ಪ್ರತಿಕೂಲತೆಯ ಅನುಕೂಲ ಎನ್ನುತ್ತೇವೆ.
"ತುಂಬಾ ಸಂತೋಷ ಸರ್, ಆದರೆ ಎಲ್ಲರಿಗೂ ಏಕೆ ಆಗುವುದಿಲ್ಲ? ಈ ತರಹದ ಸಾಧನೆಗಳು ಕೆಲವರಿಗೆ ಮಾತ್ರವಾಗಬಲ್ಲುದು. ಇದಕ್ಕೆ ನೀವು ಏನು ಹೇಳುತ್ತೀರಿ" ಎಂದರು. ಅದಕ್ಕೆ ನಾನು, ನಮ್ಮ ಸುಪ್ತ ನಂಬಿಕೆಗಳು, ನಮ್ಮ ಬಗೆಗಿನ ಆಲೋಚನೆಗಳು ಭಿನ್ನವಾಗಿರುತ್ತವೆ, ಪ್ರತಿ ನಂಬಿಕೆಗಳು ನಮ್ಮೊಳಗೆ ರೂಪುಗೊಂಡ ರೀತಿ, ಸನ್ನಿವೇಶಗಳು ಬೇರೆ ಬೇರೆಯಾಗಿರುತ್ತವೆ. ಸಕಾರಾತ್ಮಕ ನಂಬಿಕೆಗಳು ಹೆಚ್ಚಾಗಿ, ಋಣಾತ್ಮಕ ನಂಬಿಕೆಗಳ ಬಲ ಕಡಿಮೆಯಾದಾಗ ನಮ್ಮ ಸಾಧನೆಗಳು ಔನ್ನತ್ಯಕ್ಕೇರುತ್ತವೆ. ಈ ಋಣಾತ್ಮಕ ನಂಬಿಕೆಗಳಿಗೆ ಇನ್ನೊಂದು ಮುಖವಿದೆ, ನಮ್ಮ ಋಣಾತ್ಮಕ ನಂಬಿಕೆಯ ರೂಪದಲ್ಲಿ ನಮ್ಮ ಕಾಲಿಗೆ ನಾವೇ ಕಟ್ಟಿಕೊಂಡ ಹಗ್ಗಗಳು! ಈ ಹಗ್ಗದ ಕಗ್ಗಂಟನ್ನು ಬಿಚ್ಚಿ, ಈ ಹಗ್ಗವು ಸಾಧನೆಯ ಮೆಟ್ಟಿಲಿಗೆ ಕಟ್ಟುವ ಸರಳಾಗಿರಬೇಕೇ ಹೊರತು, ಗಂಟನ್ನು ಬಿಚ್ಚಲಿಕ್ಕಾಗದೆ, ಅದು ನಮ್ಮ ಕೊರಳೊಡ್ಡುವ ಉರುಳಾಗಬಾರದು. ಇದೆಲ್ಲದರ ಜೊತೆಗೆ ನಮಗೆ ಸಿಗುವ ಅವಕಾಶಗಳು, ಪ್ರೋತ್ಸಾಹಗಳು ಸಾಧನೆಗೆ ಇಂಬು ನೀಡುತ್ತವೆ ಎನ್ನುವುದನ್ನೂ ಅಲ್ಲಗಳೆಯಲಾಗದು.