For the best experience, open
https://m.samyuktakarnataka.in
on your mobile browser.

ಪ್ರತಿಷ್ಠಿತ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಣೆಗೆ ಗ್ರಹಣ

05:27 AM May 27, 2024 IST | Samyukta Karnataka
ಪ್ರತಿಷ್ಠಿತ ರೀಡರ್ಸ್ ಡೈಜೆಸ್ಟ್ ಪತ್ರಿಕೆ ಪ್ರಕಟಣೆಗೆ ಗ್ರಹಣ

ಶುದ್ಧ ಜ್ಞಾನದ ದಾಸೋಹದಲ್ಲಿ ರೀರ‍್ಸ್ ಡೈಜೆಸ್ಟ್ ಪತ್ರಿಕೆ ಜಗತ್ತಿನಾದ್ಯಂತ ಮೂಡಿಸಿರುವ ಹೆಜ್ಜೆ ಗುರುತುಗಳು ಮಾಧ್ಯಮ ಲೋಕದ ಮಟ್ಟಿಗೆ ವಿವೇಕ ಮತ್ತು ವಿವೇಚನೆಯ ಕೈಮರ. ವ್ಯಕ್ತಿಗತವಾಗಿ ವಿದ್ಯಮಾನಗಳನ್ನು ಕೇಂದ್ರೀಕರಿಸಿ ನೋಡದೆ ಸಾಧನೆಯ ಮೂಲಕ ವ್ಯಕ್ತಿಯನ್ನು ಗುರುತಿಸಿ ಜೊತೆಗೆ ಆತನ ಬದುಕಿನ ಪೂರ್ವಾಪರಗಳನ್ನು ನಿರ್ವಿಕಾರ ಮನೋಭಾವದಿಂದ ಪ್ರತಿಬಿಂಬಿಸುವ ಕೌಶಲ್ಯಕ್ಕೆ ಬೇಕಾದದ್ದು ಖಚಿತ ದೃಷ್ಟಿ ಹಾಗೂ ಹರಿತ ಆಲೋಚನಾ ಪ್ರಕ್ರಿಯೆ. ಇಂತಹ ಆಲೋಚನಾ ಲೋಕದ ಮೂಲಕ ಜಗತ್ತಿನಲ್ಲಿ ಜ್ಞಾನದ ಅಲೆಯನ್ನು ನಿರಂತರವಾಗಿ ಸೃಷ್ಟಿಸುತ್ತಿರುವ ರೀಡರ್ಸ್ ಡೈಜೆಸ್ಟ್ ಇಂಗ್ಲಿಷ್ ಪತ್ರಿಕೆಯ ಯುನೈಟೆಡ್ ಕಿಂಗ್‌ಡಂ ಆವೃತ್ತಿಯ ಪ್ರಕಟಣೆ ಸ್ಥಗಿತಗೊಂಡಿರುವುದು ನಿಜಕ್ಕೂ ಶುಭ ಶಕುನವಂತೂ ಅಲ್ಲ. ಕನ್ನಡದ ರೀಡರ್ಸ್ ಡೈಜೆಸ್ಟ್ ಎಂದೇ ಸುಪ್ರಸಿದ್ಧವಾಗಿರುವ ಕಸ್ತೂರಿ ಮಾಸ ಪತ್ರಿಕೆಯನ್ನು ಸಂಪಾದಕರಾದ ಪಾವೆಂ ಆಚಾರ್ಯ ಅವರ ಕೈಗುಣದಿಂದಾಗಿ ಕನ್ನಡದಲ್ಲಿ ಇಂತಹ ಜ್ಞಾನದ ಸುಗಂಧ ನಿರಾತಂಕವಾಗಿ ಹರಡುತ್ತಿದೆ ಎಂಬುದೇ ಸಮಾಧಾನದ ಸಂಗತಿ.
ದೇಶ ಕಾಲವನ್ನು ಒಗ್ಗೂಡಿಸುವ ದೇಶಗಳ ಗಡಿಯನ್ನು ಮೀರಿ ಭಾಷೆಯ ನಿಬಂಧಗಳನ್ನು ದಾಟಿ ಜ್ಞಾನವನ್ನು ಹರಡುತ್ತಿದ್ದ ಇಂತಹ ದಿವ್ಯ ಪತ್ರಿಕೆ ಸುಶಿಕ್ಷಿತ ನಾಡಾದ ಬ್ರಿಟನ್‌ನಲ್ಲಿಯೇ ಕೊನೆಯುಸಿರು ಎಳೆಯುವಂತಾದದ್ದು ಪರಿಸ್ಥಿತಿಯ ಕ್ರೂರ ವಿಡಂಬನೆ. ಅಮೆರಿಕ, ಫ್ರಾನ್ಸ್, ಬ್ರಿಟನ್ ಮೊದಲಾದ ದೇಶಗಳಲ್ಲಿ ಪ್ರತಿಷ್ಠಿತ ಪತ್ರಿಕೆಗಳು ಪ್ರಕಟಣೆಯನ್ನು ನಿಲ್ಲಿಸಿದ ಬೆನ್ನ ಹಿಂದೆಯೇ ಸೂರ್ಯ ಮುಳುಗದ ನಾಡಿನ ಪರಂಜ್ಯೋತಿಯಂತಿದ್ದ ಡೈಜೆಸ್ಟ್ ಪತ್ರಿಕೆ ಪ್ರಕಟಣೆ ಸ್ಥಗಿತಗೊಂಡಿರುವುದು ಜ್ಞಾನಕ್ಕೆ ಗರ ಬಡಿದಂತಾಗಿದೆ. ಭಾರತದಲ್ಲಿಯೂ ಕೂಡಾ ಮುದ್ರಣ ಮಾಧ್ಯಮಕ್ಕೆ ಇಂತಹುದೇ ಗಂಡಾಂತರ ಎದುರಾಗಿದೆ. ಓದುವುದಕ್ಕಿಂತ ನೋಡುವ ಮಾಧ್ಯಮಗಳ ಕಡೆ ಜನರ ದೃಷ್ಟಿ ಹರಿಯುತ್ತಿರುವುದು ಬಹುಶಃ ಈ ಬೆಳವಣಿಗೆಗೆ ಕಾರಣವಿದ್ದರೂ ಇರಬಹುದು. ಏನೇ ಆದರೂ ಜ್ಞಾನದ ಸೀಮೆಯಲ್ಲಿ ಡೈಜೆಸ್ಟ್ ಇಲ್ಲದೆ ಶೋಕದ ವಾತಾವರಣ ಸೃಷ್ಟಿಯಾಗಿರುವುದಂತೂ ದಿಟ.
ಜಾಗತಿಕವಾಗಿ ಪತ್ರಿಕೆಗಳ ಪ್ರಕಟಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಮೆರಿಕದ ನ್ಯೂಯಾರ್ಕ್ ಟೈಂಸ್ ಪತ್ರಿಕೆಯೇ ಜನರ ಮುಂದೆ ಅಸಹಾಯಕತೆ ಸೂಚಿಸುವ ರೀತಿಯಲ್ಲಿ ಪರಿಸ್ಥಿತಿಯನ್ನು ನಿವೇದಿಸಿಕೊಳ್ಳುತ್ತಿರುವುದು ಈಗಿನ ಬೆಳವಣಿಗೆಯ ದಿಕ್ಸೂಚಿ. ಬ್ರಿಟನ್‌ನ ಇಕಾನಮಿಸ್ಟ್ ಪತ್ರಿಕೆಯ ಸ್ಥಿತಿಯನ್ನಂತೂ ಹೇಳುವಂತೆಯೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಓದುಗರ ಪ್ರಮಾಣದ ಕುಸಿತದ ಜೊತೆಗೆ ವರಮಾನದ ಮೇಲೆ ಬಿದ್ದಿರುವ ಹೊಡೆತ. ರೀಡರ್ಸ್ ಡೈಜೆಸ್ಟ್ಗೂ ಕೂಡಾ ಇದೇ ಸ್ಥಿತಿಯಲ್ಲಿ ಏಗಿ ಕಡೆಗೆ ಬೀಗ ಮುದ್ರೆ ಹಾಕುವಂತಾಗಿದೆ.
ಜಗತ್ತಿನಲ್ಲಿ ಕಣ್ಣುಕೋರೈಸುವ ಇಲ್ಲವೇ ಶಬ್ದಗಳ ಗಾರುಡಿ ವಿದ್ಯೆಯಿಂದ ಓದುಗರಿಗೆ ಬೇರೆಯೇ ಲೋಕಕ್ಕೆ ಒಯ್ಯುವ ಪತ್ರಿಕೆಗಳು ಲೆಕ್ಕವಿಲ್ಲದಷ್ಟು ಇರಬಹುದು. ಪ್ರತಿ ಭಾಷೆಯಲ್ಲಿಯೂ ಮುದ್ರಣ ಕೌಶಲ್ಯದ ಮೂಲಕ ಓದಿಗಿಂತ ನೋಡಿ ಖುಷಿ ಪಡುವ ಪತ್ರಿಕೆಗಳೂ ಇರಬಹುದು. ಆದರೆ, ರೀಡರ್ಸ್ ಡೈಜೆಸ್ಟ್ ಪತ್ರಿಕೆ ಆ ಮಾದರಿಗೆ ಸೇರಿದ್ದಲ್ಲ. ರಂಗು ವಕಾಲತ್ತಾಗಲೀ ಇಲ್ಲವೇ ಬಿಂಕ ಭಿನ್ನಾಣವಾಗಲೀ ಇಲ್ಲದೆ ಅತ್ಯಂತ ಸಹಜವಾಗಿ ಓದುಗರಿಗೆ ಕೈಸೇರುವ ಈ ಪತ್ರಿಕೆಯಲ್ಲಿ ಮನರಂಜನೆಗಿಂತ ಅರಿವಿನ ದಾಹಕ್ಕೆ ಭರ್ಜರಿ ರಸಗವಳ ಸಿಕ್ಕುವುದು ಖಚಿತ. ಈ ಪತ್ರಿಕೆ ಕಾಲಾತೀತ. ಯಾವ ವರ್ಷದ ಅಥವಾ ಯಾವುದೇ ತಿಂಗಳಿನ ಪತ್ರಿಕೆ ಇನ್ನಾವುದೋ ವರ್ಷಕ್ಕೂ ಹೊಸತನವನ್ನು ಹಾಗೂ ಜ್ಞಾನದ ಬಿಸುಪನ್ನು ಉಳಿಸಿಕೊಂಡಿರುವುದರಲ್ಲಿದೆ ಅದರ ಶ್ರೇಷ್ಠತೆ.
ಅಲಂಕಾರಿಕ ಅಥವಾ ರೋಚಕದ ಧಾಟಿಯ ಬರಹದ ಶೈಲಿ ಈ ಪತ್ರಿಕೆಯದ್ದಲ್ಲ. ಸರಳ ಶಬ್ದಗಳ ಮೂಲಕ ನೇರವಾಗಿ ವಿಷಯವನ್ನು ಓದುಗರಿಗೆ ದಾಟಿಸುವುದು ಈ ಬರಹದ ವೈಶಿಷ್ಟö್ಯ. ಈ ಪತ್ರಿಕೆಯ ಸಂಪಾದಕೀಯ ವರ್ಗದವರಲ್ಲಿ ಎದ್ದು ಕಾಣುವ ಸಂಗತಿ ಎಂದರೆ ಸಂಯಮದ ಜೊತೆಗೆ ವಿವೇಚನಾಪೂರ್ಣವಾಗಿ ವಿಷಯಗಳನ್ನು ಸಂಗ್ರಹಿಸಿ ಮುದ್ರಣಕ್ಕೆ ಸಿದ್ಧಮಾಡುವ ರೀತಿ ಮಾಧ್ಯಮ ಲೋಕಕ್ಕೆ ಮಾದರಿ.
ಸಾವಿರ ಶಬ್ದಗಳ ಸುದೀರ್ಘ ಲೇಖನದ ಆಶಯ, ಬರಹದ ಧಾಟಿ, ಬರಹದ ಗುರಿ, ಒಂದಿನಿತು ತಪ್ಪದಂತೆ ಸಂಪಾದಕೀಯ ವರ್ಗ ಲೇಖನವನ್ನು ಸಂಕಲಿಸುವ ವಿಧಾನದಲ್ಲಿದೆ ಬೌದ್ಧಿಕತೆ ಹಾಗೂ ವೃತ್ತಿವಂತಿಕೆಯ ಶ್ರೇಷ್ಠ ಗುಣಮಟ್ಟ. ಸಾವಿರ ಶಬ್ದಗಳ ಲೇಖನವನ್ನು ನಿಮಿಷಗಳಲ್ಲಿ ೫೦೦ ಶಬ್ದಕ್ಕೆ ಇಳಿಸುವ ಪತ್ರಕರ್ತರು ಇರಬಹುದು. ಆದರೆ, ಹೀಗೆ ಮಾಡುವಾಗ ವಿಷಯಕ್ಕೆ ಕತ್ತರಿ ಹಾಗೂ ಬರಹದ ಧಾಟಿಗೆ ಕುತ್ತು ಬರುವ ಅಪಾಯಗಳು ಮುಕ್ತ.
ಮಹಾಕವಿ ಶೇಕ್ಸ್ಪಿಯರ್ ಹಾಗೂ ವರ್ಡ್ಸ್ವರ್ತ್ ಕುರಿತು ಹೇಳುವ ವಿಷಯಗಳಲ್ಲಿ ಹೊಸತನ ಇರುವುದು ಕಷ್ಟ. ಆದರೆ, ಡೈಜೆಸ್ಟ್ ಪತ್ರಿಕೆಯ ಸಂಪಾದಕೀಯ ವರ್ಗ ಇಂತಹ ಲೇಖಕರನ್ನು ಅರೆದು ಕುಡಿದಿರುವವರನ್ನು ಗುರುತಿಸಿ ಇದುವರೆಗೆ ಪ್ರಕಟವಾಗದ ಸಂಗತಿಗಳ ಮೇಲೆ ಖಚಿತ ನೆಲೆಯಲ್ಲಿ ಲೇಖನ ಬರೆಸುವುದು ಪತ್ರಿಕೆ ಲೇಖನಗಳ ಆಯ್ಕೆಯಲ್ಲಿ ವಹಿಸುವ ಮುತುವರ್ಜಿಯ ದಿಕ್ಸೂಚಿ. ಕೃತಿಯಷ್ಟೇ ಕೃತಿಯ ಬಗೆಗಿನ ವಿಮರ್ಶೆಯೂ ಮುಖ್ಯ ಎಂಬುದನ್ನು ಒಪ್ಪಿ ಕಾಲ ಉರುಳಿದರೂ ಇಂತಹ ಲೇಖನಗಳ ಸಂಗತವಾಗುವಂತೆ ಮಾಡುವ ದೃಷ್ಟಿಕೋನದ ಹಿಂದೆ ಇರುವುದು ಅಪರಿಮಿತ ಜ್ಞಾನ ಹಾಗೂ ಕಾಲಾತೀತವಾದ ದೃಷ್ಟಿ. ಯಾವುದೇ ಒಂದು ವಿಷಯಕ್ಕೆ ಪತ್ರಿಕೆ ಸೀಮಿತವಲ್ಲ.
ಆಕಾಶದಿಂದ ಕೆಳಗೆ ಭೂಮಿಯ ಮೇಲಿರುವ ಸಕಲ ಚರಾಚರ ವಸ್ತುಗಳ ಮೇಲೆ ಲೇಖನ ಪ್ರಕಟಿಸಿರುವ ಏಕೈಕ ಪತ್ರಿಕೆ ಎಂದರೆ ಡೈಜೆಸ್ಟ್ ಮಾತ್ರ. ಕನ್ನಡದ ಮಟ್ಟಿಗೆ ಇಂತಹ ಡೈಜೆಸ್ಟ್ ಮಾದರಿಯಲ್ಲಿರುವ ಏಕೈಕ ಪತ್ರಿಕೆ ಎಂದರೆ ಲೋಕ ಶಿಕ್ಷಣ ಧರ್ಮದರ್ಶಿ ಮಂಡಳಿ ಹೆಮ್ಮೆಯ ಪ್ರಕಟಣೆಯಾದ ಕಸ್ತೂರಿ ಮಾಸಿಕ. ೬೦ ವರ್ಷಗಳನ್ನು ದಾಟಿ ಕನ್ನಡ ನಾಡಿನಲ್ಲಿ ಮನೆಮಾತಾಗಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಬೇರೂರಿರುವ ಕಸ್ತೂರಿಯ ಕಂಪಿನಲ್ಲಿದೆ ಕನ್ನಡದ ಜ್ಞಾನ ಮತ್ತು ವಿಜ್ಞಾನ.