ಪ್ರತಿ ಜಿಲ್ಲೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕೇಂದ್ರ ಸ್ಥಾಪನೆ ಅಗತ್ಯ
ಉತ್ತರ ಕನ್ನಡ(ಯಲ್ಲಾಪುರ): ವಿಶ್ವದಲ್ಲಿಯೇ ಬಲಾಢ್ಯವಾದ ಧರ್ಮವೆಂದರೆ ಅದು ಸನಾತನ ಧರ್ಮ. ಆದರೆ ಇದನ್ನು ಟೀಕಿಸುವ ಮನೋಭಾವದವರನ್ನು ನಾವು ಇಂದು ಎದುರಿಸಬೇಕಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಅಶೋಕ ಹಾರನಹಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ಯಲ್ಲಾಪುರ ಎಪಿಎಂಸಿ ರೈತ ಭವನದಲ್ಲಿ ಆಯೋಜಿಸಿದ್ದ ವಿಪ್ರ ಸಮಾವೇಶವನ್ನು ಗಾಯತ್ರಿ ದೇವಿಗೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ನಮ್ಮ ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರ ಸ್ಥಾಪನೆಯಾಗಬೇಕಾದ ಅಗತ್ಯವಿದೆ. ಆ ಮೂಲಕ ಮುಂದಿನ ಪೀಳಿಗೆಗೂ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಧಾರೆ ಎರೆಯಬೇಕು ಎಂದರು.
ಅಯೋಧ್ಯಾದಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಬಳಿಕ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಬ್ರಾಹ್ಮಣರ ಸಂಘಟನೆ ಮತ್ತು ಭಿನ್ನಾಭಿಪ್ರಾಯಗಳನ್ನು ತುರ್ತು ನಿವಾರಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಪರಸ್ಪರ ಸಾಮರಸ್ಯದೊಂದಿಗೆ ಸಮಾಧಾನದಿಂದ ಬದುಕಬೇಕಾಗಿದೆ. ನಮ್ಮೊಂದಿಗೆ ಹುಟ್ಟಿದ ಒಳ ಪಂಗಡಗಳಿಂದ ಸಂಘಟನೆಗೆ ಧಕ್ಕೆಯಾಗುತ್ತಿದೆ. ಆದರೆ ಅವು ಉಳಿಯುವುದಿಲ್ಲ. ನಾವು ಎಚ್ಚೆತ್ತುಕೊಂಡು ಬೇರೆ ಸಮುದಾಯದವರನ್ನು ಟೀಕಿಸದೆ, ದ್ವೇಷಿಸದೆ ನಮ್ಮ ಬೆಳವಣಿಗೆ ಕುರಿತು ಮಾತ್ರ ಚಿಂತಿಸಬೇಕು. ಸದ್ಯದ ದಿನಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದು ಕೂಡ ಆಘಾತಕಾರಿ ಸಂಗತಿಯಾಗಿದೆ. ಹೀಗಾಗಿ ಕೌನ್ಸೆಲಿಂಗ್ ವಿಭಾಗವನ್ನು ನಮ್ಮ ಸಂಘಟನೆ ಮೂಲಕ ಆರಂಭಿಸುವ ಕುರಿತು ಯೋಚಿಸಿದ್ದೇವೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬ್ರಾಹ್ಮಣ ಬಹುಜನ ಪ್ರಿಯ ಎಂದು ಹೇಳಲಾಗುತ್ತಿತ್ತು, ಈಗ ಅದು ಭೋಜನ ಪ್ರಿಯ ಎಂದು ಹೇಳಲಾಗುತ್ತಿದೆ. ಅದನ್ನೂ ನಾವು ಒಪ್ಪುವ ಮನೋಸ್ಥಿತಿಗೆ ಬಂದಿದ್ದೇವೆ. ವೈಚಾರಿಕವಾಗಿಯೂ ಯೋಚನೆ ಮಾಡದಂತಹ ಸಮುದಾಯವಾಗಿ ಬಿಡುವುದೋ ಎಂದು ಚಿಂತೆಪಡುವಂತಾಗಿದೆ. ಎಲ್ಲರೂ ರಾಜಕೀಯಕ್ಕಾಗಿ, ಮತಗಳ ಕಾರಣಕ್ಕಾಗಿ ಜಾತಿಗಳನ್ನು ಓಲೈಸಲು ಹೋಗುತ್ತಾರೋ, ಅವರೇ ತಮ್ಮ ವೈಯಕ್ತಿಕ ಜೀವನದ ವಿಷಯ ಬಂದಾಗ ಉತ್ತಮರನ್ನೆ ಅರಸಿ ಬರುತ್ತಾರೆ. ಹೀಗಾಗಿ ಅಂತಹ ಉತ್ತಮರ ಶ್ರೇಣಿಯಲ್ಲಿ ನಮ್ಮ ಸಮುದಾಯದ ಜನರು ಬರುವಂತಾಗಬೇಕು ಎಂದರು.
ಅಧ್ಯಕ್ಷತೆಯನ್ನು ಎ.ಕೆ.ಬಿ.ಎಂ.ಎಸ್. ರಾಜ್ಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ವಹಿಸಿದ್ದರು. ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಹವ್ಯಕ ಮಹಾಮಂಡಳದ ಅಧ್ಯಕ್ಷ ಮೋಹನ ಹೆಗಡೆ, ಮಹಾಸಭಾದ ನಿರ್ದೇಶಕ ಹರಿಪ್ರಸಾದ ಪೇರಿಯಪ್ಪು, ಪ್ರಮುಖರಾದ ಶ್ರೀಪಾದ ರಾಯ್ಸದ, ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ಗೋವಿಂದ ಭಟ್ ಅಚವೆ, ಮಂಗಳಮೂರ್ತಿ ಸಭಾಪತಿ, ರಾಘವೇಂದ್ರ ಭಟ್, ಜಿಲ್ಲಾ ಸಂಚಾಲಕಿ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಜಿ.ಎಂ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.