For the best experience, open
https://m.samyuktakarnataka.in
on your mobile browser.

ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ

10:10 PM Jun 29, 2024 IST | Samyukta Karnataka
ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಸಲ್ಲಿಸಿದ ಸಿಎಂ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ಯದ ಪ್ರಮುಖ ಯೋಜನೆಗಳ ಅನುಮೋದನೆ ಕುರಿತು ಮನವಿ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಹಾಗೂ 400 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಅಣೆಕಟ್ಟು ಯೋಜನೆಯ 9000 ಕೋಟಿ ರೂ.ಗಳ ಡಿಪಿಆರ್ ಗೆ ಕೇಂದ್ರ ಜಲ ಆಯೋಗದಿಂದ ಅನುಮೋದನೆ ಬಾಕಿ ಇದೆ.ಮೇಕೆದಾಟು ಯೋಜನೆಗೆ ಪ್ರಧಾನಿಗಳು ಖುದ್ದಾಗಿ ಆಸಕ್ತಿ ವಹಿಸುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ 2023-2024 ನಲ್ಲಿ ಘೋಷಿಸಿದಂತೆ 5300 ಕೋಟಿ ರೂ.ಗಳ ಬಿಡುಗಡೆ ಹಾಗೂ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ಶೀಘ್ರವಾಗಿ ತೀರುವಳಿ ನೀಡುವಂತೆ ಜಲಶಕ್ತಿ ಸಚಿವಾಲಯ ಮತ್ತು ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ. ಕಿತ್ತೂರು ಕರ್ನಾಟಕ ಭಾಗದ ಜನರ ಬಹುದಿನಗಳ ಕನಸಿನ ಯೋಜನೆಯಾದ ಮಹಾದಾಯಿ ಯೋಜನೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳು
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗೆ 60 ಕಿ.ಮೀ ಸುರಂಗ ಮಾರ್ಗಕ್ಕೆ 3000 ಕೋಟಿ ವೆಚ್ಚವಾಗಲಿದ್ದು, ಯೋಜನೆಯಿಂದ ಹಲವಾರು ಲಾಭಗಳಿವೆ. ಈ ಸುರಂಗ ಮಾರ್ಗ ರಾಷ್ಟ್ರೀಯ ಹೆದ್ದಾರಿ 7 ನ್ನು ರಾ.ಹೆ.4 ಕ್ಕೆ ಸಂಪರ್ಕಿಸುವುದರಿಂದ ಕರ್ನಾಟಕ ಸರ್ಕಾರ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಯೋಗದೊಂದಿಗೆ ಕೈಗೊಳ್ಳಬಹುದಾಗಿದ್ದು, ಕೇಂದ್ರ ಬಜೆಟ್ ಮೂಲಕ ರಾಜ್ಯ ಸರ್ಕಾರ ಹಾಗೂ ಎನ್.ಹೆಚ್.ಎ.ಐ ಗೆ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಸಾರಿಗೆಗೆ ಬೇಡಿಕೆ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್ ಮೆಟ್ರೋ 3 ನೇ ಹಂತದ 44.65 ಕಿಮೀ ಗಲನ್ನು 15611 ಕೋಟಿಗಳ ವೆಚ್ಚದ ಡಿಪಿಆರ್ ನ್ನೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು ಕೇಂದ್ರ ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಆದಷ್ಟು ಶೀಘ್ರವಾಗಿ ಅನುಮೋದನೆ ನೀಡುವಂತೆ ಕೋರಿದ್ದಾರೆ.
73.04 ಕಿ.ಮೀ ಉದ್ದದ ಅಷ್ಟಪಥ ಪೆರಿಫೆರಲ್ ರಿಂಗ್ ರೋಡ್ ನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಅನುಮೋದಿಸಿದೆ. ಕೇಂದ್ರ ಬಜೆಟ್ ನಲ್ಲಿ ಅಗತ್ಯ ಅನುದಾನವನ್ನು ಮೀಸಲಿಡುವಂತೆ ಮುಖ್ಯಮಂತ್ರಿಗಳು ಪತ್ರದಲ್ಲಿ ಕೋರಿದ್ದಾರೆ.
15ನೇ ಹಣಕಾಸು ಆಯೋಗವು 2021-26 ರ ಅವಧಿಗೆ ಕೆರೆಗಳ ಅಭಿವೃದ್ಧಿ ಹಾಗೂ ಪೇರಿಫೆರಲ್ ರಿಂಗ್ ರೋಡ್ ಗಾಗಿ ಶಿಫಾರಸ್ಸು ಮಾಡಿರುವ 6000 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
ಬಿಬಿಎಂಪಿ ವತಿಯಿಂದ ಘನ ತ್ಯಾಜ್ಯ ನಿರ್ವಹಣೆಗಾಗಿ 3200 ಕೋಟಿ ಅಂದಾಜು ಮೊತ್ತದ ಯೋಜನೆ ಕೈಗೊಳ್ಳುತ್ತಿದ್ದು, ಯೋಜನೆಯ ಶೇ. 30% ಅಂದರೆ 960 ಕೋಟಿ ರೂ.ಗಳನ್ನು ಸ್ವಚ್ಛ ಭಾರತ ಅಭಿಯಾನ 2.0ದಡಿ ಕಾರ್ಯಸಾಧ್ಯಾತಾ ಅಂತರ ನಿಧಿ ಒದಗಿಸಲು ಕೋರಲಾಗಿದೆ.
ಕಲ್ಯಾಣ ಕರ್ನಾಟಕದ ಭಾಗದ ಏಳು ಜಿಲ್ಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 3000 ಕೋಟಿ ರೂ.ಗಳ ಅನುದಾನವನ್ನು ಬಜೆಟ್ ನಲ್ಲಿ ಮೀಸಲಿರಿಸಿದ್ದು ಕೇಂದ್ರ ಸರ್ಕಾರವು ತನ್ನ 2024-25 ರ ಬಜೆಟ್ ನಲ್ಲಿ ಅನುರೂಪದ ಅನುದಾನವನ್ನು ಒದಗಿಸಲು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಆಕಾಂಕ್ಷಿ ಜಿಲ್ಲಾ ಕಾರ್ಯಕ್ರಮದಡಿ ಒದಗಿಸುವ ಅನುದಾನವನ್ನು ಹೆಚ್ಚಿಸಲು ಮತ್ತು ಹೊಸ ಕಾರ್ಯಕ್ರಮಗಳನ್ನು ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಅನುಕೂಲವಾಗುವಂತೆ ಧನಸಹಾಯ ನೀಡಲು ಕೋರಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ (AIIMS) ನ್ನೂ ಘೋಷಿಸುವಂತೆ ಮುಖ್ಯಮಂತ್ರಿಗಳು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ.
15ನೇ ಹಣಕಾಸು ಆಯೋಗವು 2020-21 ರಲ್ಲಿ ಶಿಫಾರಸ್ಸು ಮಾಡಿದ್ದ 5495 ಕೋಟಿಗಳ ನಿರ್ದಿಷ್ಟ ಅನುದಾನವನ್ನು ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ದೊಡ್ಡ ಮೊತ್ತದ ಪಾಲು ದೊರಲಿಲ್ಲವಾದ್ದರಿಂದ ಈ ಶಿಫಾರಸ್ಸನ್ನು ಒಪ್ಪಿ ಅನುದಾನವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಕೋರಿದ್ದಾರೆ.