For the best experience, open
https://m.samyuktakarnataka.in
on your mobile browser.

ಪ್ರವಾಸಿ ಸ್ಥಳಗಳಲ್ಲಿ ಭಿಕ್ಷಾಟನೆ ತಡೆ

02:32 AM Jan 30, 2024 IST | Samyukta Karnataka
ಪ್ರವಾಸಿ ಸ್ಥಳಗಳಲ್ಲಿ ಭಿಕ್ಷಾಟನೆ ತಡೆ

ನವದೆಹಲಿ; ದೇಶದಲ್ಲಿ ಧಾರ್ಮಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ಹಿನ್ನೆಲೆ ಇರುವ ೩೦ ನಗರಗಳಲ್ಲಿ ಸಮೀಕ್ಷೆ ನಡೆಸಿ ಅಲ್ಲಿರುವ ಭಿಕ್ಷೆ ಬೇಡುವ ಮಹಿಳೆಯರು ಹಾಗೂ ಮಕ್ಕಳಿಗೆ ಮರುವಸತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಉತ್ತರದಲ್ಲಿ ಅಯೋಧ್ಯೆ, ಪೂರ್ವದಲ್ಲಿ ಗುವಾಹಟಿ, ಪಶ್ಚಿಮದಲ್ಲಿ ತ್ರö್ಯಂಬೆಕೇಶ್ವರ ಹಾಗೂ ದಕ್ಷಿಣದಲ್ಲಿ ಕರ್ನಾಟಕದ ಮೈಸೂರು, ಕೇರಳದ ತಿರುವನಂತಪುರದಂತಹ ಪ್ರಮುಖ ಯಾತ್ರಾ ಸ್ಥಳಗಳು ಈ ನಗರಗಳ ಪಟ್ಟಿಯಲ್ಲಿ ಸೇರಿವೆ.
೨೦೨೬ರೊಳಗೆ ಈ ಪ್ರಮುಖ ಸ್ಥಳಗಳನ್ನು ಭಿಕ್ಷಾಟನೆ ಮುಕ್ತಗೊಳಿಸುವಂತೆ ಮಾಡಲು ಜಿಲ್ಲಾಡಳಿತ ಹಾಗೂ ನಗರಪಾಲಿಕೆಗಳನ್ನು ಬೆಂಬಲಿಸುವುದಕ್ಕೆ ಸಾಮಾಜಿಕ ನ್ಯಾಯ ಹಾಗೂ ಸಶಕ್ತೀಕರಣ ಸಚಿವಾಲಯ ನಿರ್ಧರಿಸಿದೆ. ಮುಂದಿನೆರಡು ವರ್ಷಗಳಲ್ಲಿ ಇನ್ನಷ್ಟು ನಗರಗಳು ಈ ಪಟ್ಟಿಗೆ ಸೇರ್ಪಡೆಯಾಗುವ ಸಂಭವವಿದೆ. ಜೀವನೋಪಾಯ ಹಾಗೂ ಔದ್ಯಮಿಕಶೀಲತೆಯಲ್ಲಿ ತೊಡಗುವಂತೆ ಬಡವ್ಯಕ್ತಿಗಳನ್ನು ಬೆಂಬಲಿಸುವ ಯೋಜನೆಯಡಿ ಈ ಭಿಕ್ಷಾಟನಾ ಮುಕ್ತ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ವಿವರಿಸಿದೆ. ಭಿಕ್ಷಾ ವೃತ್ತಿ ಮುಕ್ತ ಭಾರತ ಎನ್ನುವ ಯೋಜನೆಯ ಗುರಿ ಈಡೇರಿಸುವ ದಿಸೆಯಲ್ಲಿ ಏಕರೂಪದ ಸರ್ವೇ ಹಾಗೂ ಪುನರ್‌ವಸತಿ ಮಾರ್ಗದರ್ಶಿಸೂತ್ರಗಳನ್ನು ಪ್ರಕಟಿಸಲು ಫೆಬ್ರವರಿ ಮಧ್ಯಂತರ ವೇಳೆಗೆ ರಾಷ್ಟ್ರೀಯ ಮಟ್ಟದ ಪೋರ್ಟಲ್ ಹಾಗೂ ಮೊಬೈಲ್ ಆಪ್ ಒಂದನ್ನು ಸಾಮಾಜಿಕ ನ್ಯಾಯ ಸಚಿವಾಲಯ ಹೊರತರಲಿದೆ. ಇದರಲ್ಲಿ ಭಿಕ್ಷಾಟನೆಯಲ್ಲಿ ತೊಡಗುವವರ ಕುರಿತು ನೈಜ ಸ್ವರೂಪದ ಅಂಕಿಅಂಶಗಳನ್ನು ಪ್ರಕಟಿಸಲಾಗುತ್ತದೆ.