For the best experience, open
https://m.samyuktakarnataka.in
on your mobile browser.

ಶೀಘ್ರದಲ್ಲೇ ವಿಜಯಪುರದಲ್ಲಿ ಸಾಬೂನು ಉತ್ಪಾದನಾ ಘಟಕ

08:32 PM Jan 11, 2025 IST | Samyukta Karnataka
ಶೀಘ್ರದಲ್ಲೇ ವಿಜಯಪುರದಲ್ಲಿ ಸಾಬೂನು ಉತ್ಪಾದನಾ ಘಟಕ

400ಕ್ಕೂ ಹೆಚ್ಚಿನ ಉದ್ಯೋಗ ಸೃಷ್ಟಿ

ವಿಜಯಪುರ: ಶೀಘ್ರದಲ್ಲೇ KSDL ಸಾಬೂನು ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ರಾಜ್ಯದ ಹೆಮ್ಮೆಯ ಕರ್ನಾಟಕ ಸೋಪ್ಸ್ & ಡಿಟರ್ಜೆಂಟ್ಸ್ KSDL ಸಂಸ್ಥೆ ವತಿಯಿಂದ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿರುವ  'ಮೈಸೂರು ಸ್ಯಾಂಡಲ್ ಸಾಬೂನು ಮೇಳ'ವನ್ನು ಉದ್ಘಾಟಿಸಿ ಮಾತನಾಡಿದ ಅವರು ಶೀಘ್ರದಲ್ಲೇ ವಿಜಯಪುರ-ಇಟ್ಟಂಗಿ ಹಾಳ ರಸ್ತೆಯಲ್ಲಿನ ಸುಮಾರು 10 ಎಕರೆ ಪ್ರದೇಶದಲ್ಲಿ KSDL ಘಟಕ ಸ್ಥಾಪಿಸಲಾಗುವುದು. 400ಕ್ಕೂ ಹೆಚ್ಚಿನ ಜನರಿಗೆ ಉದ್ಯೋಗ ದೊರೆಯಲಿದೆ. ಇದರಿಂದಾಗಿ ಈ ಭಾಗದಲ್ಲಷ್ಟೇ ಅಲ್ಲದೆ, ನೆರೆಯ ಮಹಾರಾಷ್ಟ್ರದ ಜನತೆಗೂ ಗುಣಮಟ್ಟದ ಸಾಬೂನುಗಳು, ಇತರೆ ಉತ್ಪನ್ನಗಳು ಲಭ್ಯವಾಗಲಿದೆ.

ಸಾಮಾನ್ಯ ಕಿರಾಣಿ ಅಂಗಡಿಯಿಂದ ದೂರದ ಲಂಡನ್ ವಿಮಾನ ನಿಲ್ದಾಣದವರೆವಿಗೂ ಎಲ್ಲೆಡೆ KSDL ಉತ್ಪನ್ನಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಇಂತಹ ಮೇಳಗಳು ಸಹಕಾರಿ.

ಕೆಲವೇ ತಿಂಗಳ ಹಿಂದೆ KSDL ನಷ್ಟದ ಕೂಪದಲ್ಲಿತ್ತು. ಅನೇಕ ಅಕ್ರಮಗಳಿಗೆ ಕಾರಣವಾಗಿತ್ತು. ನಮ್ಮ ಸರಕಾರದ ದಿಟ್ಟ ಕ್ರಮಗಳಿಂದಾಗಿ ನಷ್ಟದಲ್ಲಿದ್ದ ಸಂಸ್ಥೆ ದಾಖಲೆಯ ಲಾಭಗಳಿಸಿದೆ. 3 ಶಿಪ್ಟ್ ಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಉತ್ಪಾದನೆ-ಮಾರಾಟ-ಲಾಭಗಳಿಕೆ ಎಲ್ಲವೂ ಅಧಿಕವಾಗಿದೆ. ಹಲವಾರು ನೂತನ ಉತ್ಪನ್ನಗಳನ್ನು ಪರಿಚಯಿಸಿದ್ದೇವೆ. ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಾಗುವುದು. ಮೈಸೂರು ಮಹಾರಾಜರ ಗತವೈಭವ ಮರು ಸ್ಥಾಪನೆಯಾಗಬೇಕು.

ಈ ಮೇಳವು ಇಂದಿನಿಂದ ಜನವರಿ 20ರವರೆಗೆ ಬೆಳಿಗ್ಗೆ 9:30ರಿಂದ ರಾತ್ರಿ 9:30ರವರೆಗೆ ನಡೆಯಲಿದೆ. ಮೈಸೂರು ಸ್ಯಾಂಡಲ್ ಸಾಬೂನು ಸೇರಿದಂತೆ ಸಂಸ್ಥೆಯ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ನಮ್ಮೆಲ್ಲ ಜನತೆ ಸದುಪಯೋಗಪಡಿಸಿಕೊಂಡು, ರಾಜ್ಯದ ಪ್ರಗತಿಗೆ ಕೈ ಜೋಡಿಸಿ ಎಂದು ವಿನಂತಿಸಿದರು.

Tags :